Tuesday, April 30, 2024

ಪ್ರಾಯೋಗಿಕ ಆವೃತ್ತಿ

ವಚನಕಾರರ ಶ್ರೇಷ್ಠತೆ ಅಡಗಿರುವುದು ನುಡಿದಂತೆ ನಡೆಯುವುದರಲ್ಲಿ; ಪ್ರೊ.ಲತಾ

ಇಡೀ ಜಗತ್ತಿನಲ್ಲಿ ವೈಚಾರಿಕ, ವೈಜ್ಞಾನಿಕ, ಆಧ್ಯಾತ್ಮಿಕ, ಚಿಂತನೆಗಳು ಮೇಳೈಸಿಕೊಂಡ ಸಮಾಜೋಧಾರ್ಮಿಕ ಕ್ರಾಂತಿ. ಅಮೂಲಾಗ್ರ ಬದಲಾವಣೆಯ ಪ್ರಯತ್ನವೇ ಕ್ರಾಂತಿ. ನುಡಿದವರು ನಡೆದು ತೋರಿಸಬೇಕು, ವಚನಕಾರರ ಶ್ರೇಷ್ಠತೆ ಇರುವುದು ನುಡಿದಂತೆ, ನಡೆದಂತೆ ಬದುಕಿದರು ಎಂಬುದರಲ್ಲಿ, ವಚನ ಎಂದರೆ ಭರವಸೆ ಎಂಬ ಅರ್ಥವಿದೆ, ನಮ್ಮ ಆತ್ಮಸಾಕ್ಷಿಗೆ ನಾವು ಬದ್ಧವಾಗಿ ಅತ್ಯಂತ ಪ್ರಾಮಾಣಿಕವಾಗಿ ಬದುಕುತ್ತಾ ನಮ್ಮೊಳಗೆ ದೇವರನ್ನು ಕಂಡುಕೊಳ್ಳುವುದು ಅಂತರಂಗ ಬಹಿರಂಗ ಒಂದಾದಾಗ ಮಾತ್ರ ಎಂದು ಚಿಂತಕರಾದ ಪ್ರೊ.ಲತಾ ಮೈಸೂರು ಅಭಿಪ್ರಾಯಪಟ್ಟರು.

ಕರ್ನಾಟಕ ಸಂಘ ಮಹಿಳಾ ಘಟಕದ ವತಿಯಿಂದ ಕೆ ವಿ ಶಂಕರಗೌಡ ಶತಮಾನೋತ್ಸವ ಸಭಾಂಗಣದಲ್ಲಿ ಜರುಗಿದ’ ಕಾವ್ಯಾನು ಸಂಧಾನ’ ಎಂಬ ಕಾರ್ಯಕ್ರಮದಲ್ಲಿ ಮಾತನಾಡಿದ  ಅವರು, ದೇಹವನ್ನು ದೇಗುಲ ಮಾಡಿಕೊಂಡು, ಪ್ರಜ್ಞೆಯನ್ನು ಪರಮಾತ್ಮನಾಗಿಸಿಕೊಳ್ಳುವುದು, ಕಾಯಕವನ್ನೇ ಕೈಲಾಸ ಮಾಡಿಕೊಳ್ಳುವುದು, ನಾವು ಇರುವ ಇಹವನ್ನೇ ಪ್ರತಿಕ್ಷಣ ಸ್ವರ್ಗವಾಗಿಸಿಕೊಳ್ಳುವುದೇ ಆಧ್ಯಾತ್ಮ. ನಮ್ಮೊಳಗೆ ಇರುವ ಆತ್ಮ ಚೈತನ್ಯವೇ ಎಲ್ಲರೊಳಗೂ ಇದೆ ಎಂಬುದನ್ನು ಕಂಡುಕೊಂಡರೆ ನಾವು ವರ್ಗಬೇಧ, ಜಾತಿಭೇದ ಮಾಡುವುದಿಲ್ಲ, ವರ್ಣಭೇದ ಮಾಡುವುದಿಲ್ಲ, ಗಂಡು ಹೆಣ್ಣು ಎಂಬ ಭೇದ ಮಾಡಲು ಆಗುವುದಿಲ್ಲ ಎಂದರು.

ಎಲ್ಲಾ ಜೀವಿಗಳನ್ನು ನನ್ನ ಹಾಗೆಯೇ ಎಂದು ಕಾಣುವ ಸ್ಥಿತಿಯೇ ನಮ್ಮೊಳಗಿನ ಪಕ್ವ ಸ್ಥಿತಿ. 12ನೇ ಶತಮಾನದಲ್ಲಿ ಕಾಶ್ಮೀರದಿಂದ ಕನ್ಯಾಕುಮಾರಿವರೆಗೂ ಇಂತಹದ್ದೇ ತತ್ವವನ್ನು ಇಟ್ಟುಕೊಂಡು ಲಕ್ಷಾಂತರ ಜನ ಕರ್ನಾಟಕದ ಕಲ್ಯಾಣದಲ್ಲಿ ಸೇರಿದರು. ಕಾಶ್ಮೀರದ ರಾಜ ಮೋಳಿಗೆ ಮಾರಾಯ ಎಂಬ ಹೆಸರಿಂದ ಸೌದೆ ಹೊಡೆಯುವ ಕಾಯಕದಲ್ಲಿ ನಿರತನಾದ ಆತನ ತಂಗಿ ಬೋಂತಾದೇವಿ ಕಲ್ಯಾಣಕ್ಕೆ ಬಂದು ಒಂದು ಪ್ರಜ್ಞೆ ಆಗಿ ಕೆಲಸ ಮಾಡಿದರು.

ದೇವರು ಎಂದರೆ ನಂಬಿಕೆ ಅಲ್ಲ ನಡವಳಿಕೆ ಎಂಬುದನ್ನು ಜಗತ್ತಿಗೆ ತೋರಿಸಿಕೊಟ್ಟವರು ವಚನಕಾರರು, ಅಕ್ಕಮಹಾದೇವಿ, ಉರಿಲಿಂಗ ಪೆದ್ದಿಗಳ, ಪುಣ್ಯಸ್ತ್ರೀ ಕಾಳವ್ವೆ, ಅಮ್ಮುಗೆರಾಯಮ್ಮನವರ ವಚನಗಳ ಸಂದೇಶವನ್ನು ಪ್ರಸ್ತುತಪಡಿಸಿದರು.

ಕುರಿ, ಕೋಳಿ, ಕಿರಿ ಮೀನು ತಿಂಬವರಿಗೆಲ್ಲ ಕುಲಜರೆಂಬರು, ಶಿವಗೆ ಪಂಚಾಮೃತವ ಕರೆವ ಪಶುವತಿಂಬ ಮಾದಿಗ ಕೀಳು ಜಾತಿಯೆಂಬರು, ಅವರೆಂತು ಕೀಳು ಜಾತಿಯಾದರೂ? ಜಾತಿಗಳು ನೀವೇಕೆ ಕೀಳಾಗಿರೋ?
ಎಂದು ಕಾಳವ್ವೆ ಎತ್ತುವ ಪ್ರಶ್ನೆ ಜಾತಿ ವ್ಯವಸ್ಥೆಯನ್ನು ಬುಡಮೇಲು ಮಾಡುತ್ತದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನುರಾಜೇಶ್ವರಿಯವರು ವಹಿಸಿ ಕಾವ್ಯಾನು ಸಂಧಾನ ಕಾರ್ಯಕ್ರಮ ಮಹತ್ವಪೂರ್ಣವಾಗಿದೆ ನಿರಂತರವಾಗಿ ನಡೆಯಲಿ ಎಂದು ಆಶಿಸಿದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಮೈಸೂರಿನ ಹಿಂದುಳಿದ ವರ್ಗಗಳ ಇಲಾಖೆಯ ಅಧೀಕ್ಷಕರಾದ ರಮ್ಯಾ, ಮನುಷ್ಯತ್ವದ ಮರುಸ್ಥಾಪನೆಯ ಆಶಯವನ್ನು ಹೊಂದಿರುವ ಕಾವ್ಯಾನು ಸಂಧಾನ ಅರ್ಥಪೂರ್ಣವಾಗಿದೆ, ವರ್ತಮಾನಕ್ಕೆ ಅಗತ್ಯವಾಗಿದೆ ಎಂದರು.

ಕಾರ್ಯಕ್ರಮದ ಸಂಚಾಲಕರಾದ ಡಾ ಎಂ ಎಸ್ ಅನಿತ ಮಂಗಲ, ಡಾ.ದೇವಿಕಾ ಎನ್ಎಸ್, ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಂವಾದದಲ್ಲಿ ಪ್ರೊ.ಶ್ರೀದೇವಿ, ಪ್ರೊ.ಎಸ್ ಬಿ ಶಂಕರ್ ಗೌಡ, ಉಪನ್ಯಾಸಕರಾದ ವೆಂಕಟೇಶ್, ಚಂದ್ರಕಲಾ ಭಾಗವಹಿಸಿದ್ದರು. ಸಂಗೀತ ಶಾಲೆಯ ವಿದ್ಯಾರ್ಥಿಗಳು ವಚನ ಗಾಯನ ಪ್ರಸ್ತುತಪಡಿಸಿದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!