Saturday, May 18, 2024

ಪ್ರಾಯೋಗಿಕ ಆವೃತ್ತಿ

ಮಂಡ್ಯದ ವಿವಿಧ ಸ್ಲಂ ಗಳಿಗೆ ಶಾಸಕರ ಭೇಟಿ : ಸಮಸ್ಯೆಗಳ ಅವಲೋಕನ

ಮಂಡ್ಯ ನಗರದ ವಿವಿಧ ಸ್ಲಂಗಳಿಗೆ ಇಂದು ಶಾಸಕ ರವಿಕುಮಾರ್ ಗಣಿಗ ಅಧಿಕಾರಿಗಳ ತಂಡದೊಂದಿಗೆ ಭೇಟಿ ನೀಡಿ ಅವಲೋಕನ ನಡೆಸಿದರು.

ಇಂದು ಬೆಳಿಗ್ಗೆ 7 ಗಂಟೆಗೆ ಮಂಡ್ಯದ ಕುರುಬರ ಹಾಸ್ಟೆಲ್ ಹಿಂಭಾಗದಲ್ಲಿರುವ ಸ್ಲಂ ಗೆ ಭೇಟಿ ನೀಡಿದ ಅವರು, ಅಲ್ಲಿಯ ಸಮಸ್ಯೆಗಳ ಬಗ್ಗೆ ಮಾಹಿತಿ ಪಡೆದರು. ನಂತರ ಆರ್‌ಟಿಓ ಕಚೇರಿ ಮುಂಭಾಗದಲ್ಲಿರುವ ಕಾಳಪ್ಪ ಬಡಾವಣೆಗೆ ಭೇಟಿ ನೀಡಿ ಅಲ್ಲಿಯ ಜನರಿಂದ ಸಮಸ್ಯೆಗಳ ಬಗ್ಗೆ ಮಾಹಿತಿ ಪಡೆದರು. ಕಾಳಪ್ಪ ಬಡಾವಣೆ ನಗರಸಭೆ ವ್ಯಾಪ್ತಿಯಲ್ಲಿದ್ದು ಶೀಘ್ರ ಹಕ್ಕುಪತ್ರ ನೀಡುವುದಾಗಿ ಭರವಸೆ ನೀಡಿದರು.

ನಂತರ ಗುರುಮಠ ಸ್ಲಂ ಗೆ ತೆರಳಿ ಅಲ್ಲಿಯ ನಿವಾಸಿಗಳಿಂದ ಅಹವಾಲು ಆಲಿಸಿದರು. ನ್ಯೂ ತಮಿಳು ಕಾಲೋನಿಗೆ ಭೇಟಿ ನೀಡಿದರು. ನ್ಯೂ ತಮಿಳ್ ಕಾಲೋನಿ ಸ್ಲಂನಲ್ಲಿ ಸುಮಾರು 30ಕ್ಕೂ ಹೆಚ್ಚು ನಿವೇಶನಗಳನ್ನು ಅಕ್ರಮವಾಗಿ ಖಾತೆ ಮಾಡಲಾಗಿತ್ತು. ನಗರಸಭೆ ಆಯುಕ್ತ ಮಂಜುನಾಥ್ ಅವರು ಅಕ್ರಮ ಖಾತೆಗಳನ್ನು ರದ್ದು ಮಾಡಿ ತಮಿಳು ಕಾಲೋನಿ ಸ್ಲಂ ಜಾಗವನ್ನು ಕೊಳಗೇರಿ ಅಭಿವೃದ್ಧಿ ಮಂಡಳಿಗೆ ಹಸ್ತಾಂತರಿಸುವ ಪತ್ರವನ್ನು ಇದೇ ಸಂದರ್ಭದಲ್ಲಿ ಶಾಸಕರಿಗೆ ನೀಡಿದರು. ನಗರಸಭೆ ಆಯುಕ್ತ ಮಂಜುನಾಥ್ ಅವರ ಕಾರ್ಯವನ್ನು ಶಾಸಕರು, ಕರ್ನಾಟಕ ಜನಶಕ್ತಿಯ ಮುಖಂಡರು ಹಾಗೂ ಅಲ್ಲಿಯ ನಿವಾಸಿಗಳು ಶ್ಲಾಘಿಸಿದರು.

ಶಾಸಕ ಗಣಿಗ ರವಿಕುಮಾರ್ ಆಗಸ್ಟ್ 15ರ ಸ್ವಾತಂತ್ರ್ಯ ದಿನಾಚರಣೆಯಂದು ನ್ಯೂ ತಮಿಳು ಕಾಲೋನಿಯ ಎಲ್ಲಾ ನಿವಾಸಿಗಳಿಗೂ ಜಿಲ್ಲಾ ಉಸ್ತುವಾರಿ ಹಾಗೂ ಕೃಷಿ ಸಚಿವ ಚಲುವರಾಯಸ್ವಾಮಿಯವರ ಹಸ್ತದಿಂದಲೇ ಹಕ್ಕು ಪತ್ರ ವಿತರಿಸುವುದಾಗಿ ಭರವಸೆ ನೀಡಿದರು.

ನಂತರ ಹಾಲಳ್ಳಿ ಸ್ಲಂ ಬೋರ್ಡ್ ಗೆ ಭೇಟಿ ನೀಡಿದ ಶಾಸಕರಿಗೆ ಅಲ್ಲಿಯ ನಿವಾಸಿಗಳು ಮನೆಗಳ ವಿತರಣೆಯಲ್ಲಿ ಆಗಿರುವ ತಾರತಮ್ಯ, ಕುಡಿಯುವ ನೀರಿನ ತೊಂದರೆ ಒಳಚರಂಡಿ ಮತ್ತು ವಿದ್ಯುತ್ ಸಮಸ್ಯೆ ಬಗ್ಗೆ ಅಹವಾಲು ಸಲ್ಲಿಸಿದರು. ಈ ಬಗ್ಗೆ ಸ್ಥಳದಲ್ಲಿದ್ದ ಒಳಚರಂಡಿ ಮಂಡಳಿ ಹಾಗೂ ಚೆಸ್ಕಾಂ ಅಧಿಕಾರಿಗಳ ಜೊತೆ ಚರ್ಚೆ ನಡೆಸಿ ಶೀಘ್ರ ಸಮಸ್ಯೆಗಳನ್ನು ಬಗೆಹರಿಸುವಂತೆ ಸೂಚನೆ ನೀಡಿದರು.ನಂತರ ಎಸ್.ಡಿ. ಜಯರಾಮ್ ಸ್ಲಂ ಹಾಗೂ ಗುತ್ತಲು ಬಡಾವಣೆಯಲ್ಲಿರುವ ಹರಿಜನ ಕಾಲೋನಿಗೆ ಭೇಟಿ ನೀಡಿ ಅಲ್ಲಿಯ ನಿವಾಸಿಗಳಿಂದ ಸಮಸ್ಯೆಗಳ ಬಗ್ಗೆ ಮಾಹಿತಿ ಪಡೆದರು.

ಇಂದು ಮಂಡ್ಯದ ವಿವಿಧ ಶ್ರಮಿಕ ಬಡಾವಣೆಗಳಿಗೆ ಭೇಟಿ ನೀಡಿ ಅಲ್ಲಿರುವ ಸಮಸ್ಯೆಗಳ ಬಗ್ಗೆ ಮಾಹಿತಿ ಪಡೆದಿದ್ದೇನೆ. ಮುಂದಿನ ದಿನಗಳಲ್ಲಿ ಎಲ್ಲಾ ಸ್ಲಂಗಳಿಗೆ ಭೇಟಿ ನೀಡಿ ಸಮಸ್ಯೆಗಳನ್ನು ಆಲಿಸಿ ಪರಿಹರಿಸುತ್ತೇನೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ನಗರಸಭೆ ಆಯುಕ್ತ ಮಂಜುನಾಥ್, ಅಧಿಕಾರಿಗಳಾದ ರವಿಕುಮಾರ್, ನವೀನ್ ಚೆಸ್ಕಾಂ ಎಇಇ ಮಹದೇವ್, ಕರ್ನಾಟಕ ಕೊಳಗೇರಿ ಮಂಡಳಿಯ ಇಇ ಹರೀಶ್, ಎಇಇ ದರ್ಶನ್ ಜೈನ್, ಇಂಜಿನಿಯರ್ ಗಳಾದ ನಾಗೇಂದ್ರ, ಕಾವ್ಯ, ಒಳಚರಂಡಿ ಮಂಡಳಿ ಎಇಇ ಮೇಘನಾ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!