Thursday, September 19, 2024

ಪ್ರಾಯೋಗಿಕ ಆವೃತ್ತಿ

ಜನರಿಗೆ ಸುಳ್ಳಿನ ಕಾರ್ಡ್ ನೀಡಿದ ಕಾಂಗ್ರೆಸ್ : ಸಿ‌.ಟಿ‌.ರವಿ ಟೀಕೆ

ಕಾಂಗ್ರೆಸ್ ಪಕ್ಷ ರಾಜ್ಯದ ಜನರಿಗೆ ಸುಳ್ಳಿನ ಕಾರ್ಡ್ ವಿತರಣೆ ಮಾಡುತ್ತಿದ್ದು,ರಾಜ್ಯದ ಜನ ಕಾಂಗ್ರೆಸ್ ಪಕ್ಷವನ್ನು ತಿರಸ್ಕರಿಸಲಿದ್ದಾರೆಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ‌‌.ಟಿ‌.ರವಿ ವಾಗ್ದಾಳಿ ನಡೆಸಿದರು.

ಶ್ರೀರಂಗಪಟ್ಟಣದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ರಾಜಸ್ಥಾನದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ 24 ಗಂಟೆಯಲ್ಲಿ ರೈತರ ಸಾಲಮನ್ನಾ ಮಾಡುವುದಾಗಿ ರಾಹುಲ್ ಗಾಂಧಿ ಹೇಳಿದ್ರು.
ಸರ್ಕಾರ ಬಂದು 4 ವರ್ಷ ಆಯ್ತು, ಸಾಲ ಅಲ್ಲಾ ಬಡ್ಡಿಯೂ ಮನ್ನಾ ಆಗಿಲ್ಲ. ಕರ್ನಾಟಕದಲ್ಲೂ ಕಾಂಗ್ರೆಸ್ ಸುಳ್ಳಿನ ಕಾರ್ಡ್ ಕೊಡುತ್ತಿದ್ದು, ಜನರು ಅವರಿಗೆ ಪಾಠ ಕಲಿಸಲಿದ್ದಾರೆ ಎಂದರು.

ಕಾಂಗ್ರೆಸ್ ಪಕ್ಷ PFIಗೆ ಬೆಂಬಲ, ಕುಕ್ಕರ್ ಬಾಂಬ್‌ಗೆ ಸಪೋರ್ಟ್, ಶಿವನ ಸ್ಥಳದಲ್ಲಿ ಯೇಸು ಪ್ರತಿಮೆ ಇವರ ಗ್ಯಾರಂಟಿ. ಒಂದು ಕೋಮಿಗೆ ಬೆಂಬಲ ಕೊಡುವುದು ಇವರ ಗ್ಯಾರಂಟಿ. ಭಯೋತ್ಪಾದಕರಿಗೆ ವಿಶ್ವಾಸ ಕೊಡುವುದು ಇವರ ಗ್ಯಾರಂಟಿ ಎಂದು ಲೇವಡಿ ಮಾಡಿದರು.

ಸತ್ಯ ಹೇಳಲಿ ಹೆಚ್.ಡಿ. ಕೆ

ಕೆ.ಆರ್.ಎಸ್ ಡ್ಯಾಂನಲ್ಲಿ ಬಿದ್ದು ಸತ್ತ ವ್ಯಕ್ತಿಗೂ ನನಗೂ ಯಾವ ಸಂಬಂಧ ಎಂದು ಹೆಚ್‌.ಡಿ‌‌.ಕುಮಾರಸ್ವಾಮಿ ಹೇಳಿದ್ದಾರೆ. ಕುಮಾರಸ್ವಾಮಿ ಅವರೇ ಸತ್ಯವನ್ನ ಮುಚ್ಚಿಡುವುದು ಕಾನೂನಿನ ಪ್ರಕಾರ ಅಪರಾಧ. ಸತ್ಯವನ್ನ ಕುಮಾರಸ್ವಾಮಿ ಬಿಚ್ಚಿಡಲಿ. ರಾಜಕೀಯವಾಗಿ ಎದುರಿಸಲಾಗದೆ ಸುಳ್ಳು ಆರೋಪ ಕಲ್ಪಿಸೋಣಾ ಅಂತ ಪ್ರಯತ್ನ ಪಡುತ್ತಿದ್ದಾರೆ ಎಂದು ಟೀಕಿಸಿದರು.

ಗೊಂದಲ ಬೇಡ

ಮಂಡ್ಯ ಉಸ್ತುವಾರಿ ಸಚಿವರ ವಿಚಾರದಲ್ಲಿ ಗೊಂದಲ ಬೇಡ. ಚುನಾವಣೆ ಬಳಿಕ ಮಂಡ್ಯದವರೆ ಬಿಜೆಪಿ ಮೂಲಕ ಮತ್ತೆ ಉಸ್ತುವಾರಿ ಸಚಿವರಾಗ್ತಾರೆ ಎಂದರು‌.

ವಿಜಯಸಂಕಲ್ಪ ಯಾತ್ರೆ ಯಶಸ್ವಿಯಾಗಿ ಸಾಗುತ್ತಿದೆ. ರಾಜ್ಯದ ನಾಲ್ಕು ಕಡೆಗಳಿಂದ ಯಾತ್ರೆ ನಡೆಯುತ್ತಿದ್ದು,
ಡಬಲ್ ಎಂಜಿನ್ ಸರ್ಕಾರದ ರಿಪೋರ್ಟ್ ಕಾರ್ಡ್ ಜನರ ಮುಂದಿಡುತ್ತಿದ್ದೇವೆ. ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ನೆಪ ಹೇಳುತ್ತಿದೆ. ದೇಶದ ಕೆಲವೆಡೆ ಕಾಂಗ್ರೆಸ್ ಆಡಳಿತ ಇದೆ. ಅಲ್ಲೆಲ್ಲಾ ನೀವು ಕರ್ನಾಟಕದಲ್ಲಿ ಕೊಡುತ್ತಿರುವ ಭರವಸೆಗಳನ್ನು ಜಾರಿಗೆ ತನ್ನಿ ಎಂದು ಸವಾಲು ಹಾಕಿದರು.

ಲೋಕಾಯುಕ್ತ ಬಂದ್ ಮಾಡಿಸಿದ್ದು ಸಿದ್ದರಾಮಯ್ಯ ಸರ್ಕಾರ. ಲೋಕಾಯುಕ್ತ ಸಂಸ್ಥೆಯನ್ನು ಹಲ್ಲು ಕಿತ್ತ ಹಾವು ಮಾಡಿ, ಕೋರ್ಟಿಗೆ ಹೋಗುವ ಹಾಗೇ ಮಾಡಿದ್ರು. ಅವರ ಮೇಲಿದ್ದ ದೂರನ್ನ ಮುಚ್ಚಿ ಹಾಕಲು ಲೋಕಾಯುಕ್ತ ರದ್ದು ಮಾಡಿದರು.

ಬಿಜೆಪಿಗೆ 4-5 ಕ್ಷೇತ್ರ

ಮಂಡ್ಯದಲ್ಲಿ ರಾಜಕೀಯ ಪರಿವರ್ತನೆ ಗಾಳಿ ಬೀಸುತ್ತಿದೆ. 7ಕ್ಕೆ7 ಕ್ಷೇತ್ರಗಳಲ್ಲಿ ಬಿಜೆಪಿ ಪ್ರಬಲ ಪೈಪೋಟಿ ನೀಡಲಿದೆ. 7ರಲ್ಲಿ ಕನಿಷ್ಠ 4-5 ಸ್ಥಾನ ಗೆಲ್ಲಲಿದ್ದೇವೆ. ಮಂಡ್ಯ ಹೆಸರು ಹೇಳಿಕೊಂಡು ರಾಜಕಾರಣ ಮಾಡಿದವರು ಅಭಿವೃದ್ಧಿ ಮಾಡಲಿಲ್ಲ. ವಿಶ್ವೇಶ್ವರಯ್ಯ, ನಾಲ್ವಡಿ ಅವರ ಕಾಲದಲ್ಲಿ ಆದ ಅಭಿವೃದ್ಧಿ ಬಿಟ್ಟರೆ ಮಂಡ್ಯ ಅಭಿವೃದ್ಧಿ ಆಗಿರಲಿಲ್ಲ. ಬಿಜೆಪಿ ಮಂಡ್ಯ ಅಭಿವೃದ್ಧಿಗೆ ಬದ್ಧವಾಗಿದೆ. ಕಾಂಗ್ರೆಸ್ ಶ್ರೀರಂಗಪಟ್ಟಣದ ಐತಿಹಾಸಿಕ ವ್ಯವಸ್ಥೆ ಹಾಳು ಮಾಡಿದವರ ಪರವಾಗಿದೆ ನಿಂತಿದೆ. ಶ್ರೀರಂಗಪಟ್ಟಣ, ಮಂಡ್ಯ ಸಾಂಸ್ಕೃತಿಕ ಪುನರುತ್ಥಾನಕ್ಕಾಗಿ ಮಂಡ್ಯ ಜನರು ಆಶೀರ್ವಾದ ಮಾಡಬೇಕು ಎಂದರು.

ಅತಂತ್ರ ಸ್ಥಿತಿಗಾಗಿ ಪೂಜೆ

ಕೆಲವರು ಅತಂತ್ರ ವಿಧಾನಸಭೆ ಬರಲಿ ಎಂದು ಪೂಜೆ ಮಾಡಿಸುತ್ತಿದ್ದಾರೆ ಎಂದು ಹೆಚ್ಡಿಕೆ ಪೂಜೆ ಬಗ್ಗೆ ವ್ಯಂಗ್ಯವಾಡಿದರು. ನಮಗೆ ಪೂರ್ಣ ಬಹುಮತ ಕೊಡಿ ಯಾವುದೇ ಗೊಂದಲ ಇಲ್ಲದೆ ಒಳ್ಳೆ ಆಡಳಿತ ನೀಡುತ್ತೇವೆ ಎಂದರು.

ಟಿಪ್ಪು ಹುಲಿ ಕೊಂದದ್ದು ಯಾರಾದ್ರು ನೋಡಿದ್ದಾರ, ಹಾಗಾದ್ರೆ ಟಿಪ್ಪು ಮೈಸೂರು ಹುಲಿ ಹೇಗೆ ಆಗ್ತಾನೆ. ಮೋಸದಿಂದ, ಸಂಚಿನಿಂದ ನಂಬಿಕೆ ದ್ರೋಹ ಮಾಡಿದ್ದು ಟಿಪ್ಪು. ಟಿಪ್ಪು ಮಾಡಿದ ಮೋಸ ನಾವು ಓದಲೇ ಇಲ್ಲ.
ಉರಿಗೌಡ, ನಂಜೇಗೌಡ ಟಿಪ್ಪು ಕೊಂದದ್ದು ಸ್ವತಂತ್ರ ಪೂರ್ವದಲ್ಲೇ ಉಲ್ಲೇಖ ಆಗಿದೆ. ಆ ಸತ್ಯ ಹೊರಬಂದರೆ ಒಕ್ಕಲಿಗರಲ್ಲಿ ಶೌರ್ಯ ಉಕ್ಕುವ ಭೀತಿ ಕಾಂಗ್ರೆಸ್‌ನವರದ್ದಾಗಿದೆ. ಪಾರ್ಸಿ ಭಾಷೆ ಮೇಲಿನಿಂದ ಉದುರಲಿಲ್ಲ. ಟಿಪ್ಪು ಆ ಭಾಷೆ ಚಾಲ್ತಿಗೆ ತಂದದ್ದು. ಟಿಪ್ಪು ಕನ್ನಡ ದ್ರೋಹಿ ಎಂದರು‌.

ಅಮಿತ್ ಶಾಗೆ ಕಪ್ಪ ಕಾಣಿಕೆ ಸಲ್ಲಿಸಲು ಮಾಡಾಳು ವಿರೂಪಾಕ್ಷ ಹಣ ಸಂಗ್ರಹಿಸಲು ಹೋಗಿ ತಗ್ಲಾಕೊಂಡ್ರು ಎಂಬ ಬಿ.ಕೆ.ಹರಿಪ್ರಸಾದ್ ಆರೋಪ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಸಿ.ಟಿ.ರವಿ, ಹರಿಪ್ರಸಾದ್ ಕಪ್ಪ ಕಾಣಿಕೆ ಕಲೆಕ್ಟ್ ಮಾಡುವ ಕೆಲಸದಲ್ಲಿದ್ರು. ಹಲವು ರಾಜ್ಯಗಳಲ್ಲಿ ಕಪ್ಪ ಕಾಣಿಕೆ ಕಲೆಕ್ಟ್ ಮಾಡಿ ದೆಹಲಿ ನಾಯಕರಿಗೆ ತಲುಪಿಸುತ್ತಿದ್ದರು. ಅದೇ ಮನಸ್ಥಿತಿಯಲ್ಲಿ ಈಗ ಮಾತನಾಡುತ್ತಿದ್ದಾರೆ. ಅವರು ಹೇಳಿಕೆ ಕೊಟ್ಟಿದ್ದು ತಪ್ಪಿಲ್ಲ, ಹರಿಪ್ರಸಾದ್ ತಮ್ಮ ಚಾಕರಿಯ ಅನುಭವದ ಮೇಲೆ ಮಾತಾಡ್ತಿದ್ದಾರೆ ಎಂದು ವ್ಯಂಗ್ಯವಾಡಿದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!