Saturday, May 18, 2024

ಪ್ರಾಯೋಗಿಕ ಆವೃತ್ತಿ

ಚುನಾವಣಾ ಪ್ರಚಾರ ಕಾಲದಲ್ಲೇ ಅಂಚೆ ಮತದಾನ : ಆಮಿಷ ಒಡ್ಡಲು ಅವಕಾಶ ಕೊಟ್ಟಂತಾಗುವುದಿಲ್ಲವೇ ?

ಚುನಾವಣಾ ನೀತಿ ಸಂಹಿತೆಯ ಪ್ರಕಾರ ಚುನಾವಣೆಯ ಮತದಾನ ದಿನಕ್ಕಿಂತ 48 ಗಂಟೆಗಳ ಮುನ್ನ ಚುನಾವಣಾ ಪ್ರಚಾರ ಸ್ಥಗಿತಗೊಳಿಸಬೇಕು ಎಂಬ ನಿಯಮವಿದೆ. ಆದರೆ ಪ್ರಸ್ತುತ ನಡೆಯುತ್ತಿರುವ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಭಾರತ ಚುನಾವಣಾ ಆಯೋಗವು ಚುನಾವಣಾ ಪ್ರಚಾರ ನಡೆಯುವ ಸಂದರ್ಭದಲ್ಲೇ ಹಿರಿಯ ನಾಗರೀಕರಿಗೆ ಅಂಚೆ ಮೂಲಕ ಮತದಾನ ಮಾಡಲು ಅವಕಾಶ ಮಾಡಿಕೊಟ್ಟಿರುವುದು ಈಗ ಚರ್ಚೆಗೆ ಗ್ರಾಸವಾಗಿದೆ.

ಈ ಬಗ್ಗೆ ಆಲ್ ಇಂಡಿಯಾ ಲಾಯರ್ಸ್ ಯೂನಿಯನ್ ಮಂಡ್ಯ ಜಿಲ್ಲಾಧ್ಯಕ್ಷ, ನ್ಯಾಯವಾದಿ ಬಿ.ಟಿ.ವಿಶ್ವನಾಥ್ ಅವರು ನುಡಿಕರ್ನಾಟಕ.ಕಾಂ ಗೆ ಪ್ರತಿಕ್ರಿಯಿಸಿ, ವಯೋವೃದ್ಧರು ಮತ್ತು ವಿಕಲಚೇತನರಿಗೆ ಮನೆಯಿಂದಲೇ ಮತದಾನ ಮಾಡುವ ಸೌಲಭ್ಯಕ್ಕೆ ಚುನಾವಣಾ ಆಯೋಗ ಇತ್ತೀಚೆಗೆ ಅವಕಾಶ ಮಾಡಿಕೊಟ್ಟಿದೆ. ಮತದಾನಕ್ಕೂ ಮುನ್ನ ಪ್ರಚಾರ ಸ್ಥಗಿತ ಷರತ್ತನ್ನು ಅಂಚೆ ಮತದಾನಕ್ಕೂ ವಿಸ್ತರಿಸದಿರುವುದು ಹಲವು ಅನುಮಾನಕ್ಕೆಡೆ ಮಾಡಿಕೊಡುಂತಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಅಂಚೆ ಮತದಾನಕ್ಕೆ 48 ಗಂಟೆಗಳ ಮೊದಲು ಪ್ರಚಾರ ಸ್ಥಗಿತ ಷರತ್ತು ಅನ್ವಯವಾಗದಿರುವುದು, ರಾಜಕೀಯ ಪಕ್ಷಗಳಿಗೆ ಆಮಿಷ ಒಡ್ಡಲು ಮುಕ್ತ ಅವಕಾಶ ಕೊಟ್ಟಂತಾಗುವುದಿಲ್ಲವೇ ಎಂಬ ಪ್ರಶ್ನೆಯನ್ನು ಎತ್ತುತ್ತದೆ. ಒಂದೊಂದು ಮತವೂ ನಿರ್ಣಾಯಕವಲ್ಲವೇ? ಮನೆಯಿಂದಲೇ ಮತ ನೀಡುವ ಅವಕಾಶ ಸಾರ್ವಜನಿಕ ಮತದಾನದ ದಿನವೇ ನಿಗದಿಯಾಗುವುದು ಚುನಾವಣಾ ಪಾರದರ್ಶಕತೆಗೆ ಶ್ರೇಯಸ್ಕರ ಎಂದು ಹೇಳಿರುವ ಅವರು, ಈ ನಿಟ್ಟಿನಲ್ಲಿ ಮತದಾರರು ಮತ್ತು ರಾಜಕೀಯ ಪಕ್ಷಗಳು ತುರ್ತಾಗಿ ದನಿಯೆತ್ತ ಬೇಕಿದೆ ಎಂದು ತಿಳಿಸಿದ್ದಾರೆ.

 

ಪ್ರಭಾವ ಬೀರುವುದಿಲ್ಲವೇ 
80 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರೇ ಇವಿಎಂ ಮತದಾನಕ್ಕೂ ಮುನ್ನ ಮನೆಯಿಂದಲೇ ಅಂಚೆ ಮತದಾನ ಮಾಡುವುದು, ಕುಟುಂಬದ ಇತರೆ ಸದಸ್ಯರ ಮೇಲೆ ಪ್ರಭಾವ ಬೀರುವುದಿಲ್ಲವೇ ? ಎಂದು ಈದಿನ.ಕಾಮ್ ಸಂಪಾದಕ ಬಸವರಾಜ ಮೇಗಲಕೇರಿ ಅಭಿಪ್ರಾಯಪಟ್ಟಿದ್ದಾರೆ.

ಅಂಚೆ ಮತದಾನ ನಡೆಯುವ ಸಂದರ್ಭದಲ್ಲೇ ವಿವಿಧ ರಾಜಕೀಯ ಪಕ್ಷಗಳ ನಾಯಕರು, ಸಭೆ, ಸಮಾರಂಭ, ರ್‍ಯಾಲಿ, ರೋಡ್ ಶೋಗಳನ್ನು ನಡೆಸುತ್ತಿರುವುದರಿಂದ ಮತದಾರರ ಮೇಲೆ ಪ್ರಭಾವ ಉಂಟಾಗುವುದಿಲ್ಲವೇ ಎಂಬುದನ್ನು ಗಮನಿಸಬೇಕಾಗಿದೆ.

ಭಾರತ ಚುನಾವಣಾ ಆಯೋಗವು ಕರ್ನಾಟಕ ವಿಧಾನಸಭಾ ಚುನಾವಣೆಯಿಂದಲೇ ಇಂತಹ ಹೊಸ ಪದ್ಧತಿಯನ್ನು ಅಳವಡಿಸಿಕೊಂಡಿದ್ದು, ಇದು ಹಲವು ಚರ್ಚೆಗಳಿಗೆ ಅವಕಾಶ ಮಾಡಿ ಕೊಟ್ಟಿದೆ. ಇದರ ಸಾಧಕ – ಬಾಧಕಗಳ ಬಗ್ಗೆ ಚರ್ಚೆ ನಡೆಸಿ ಚುನಾವಣಾ ಆಯೋಗವು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಅವರು ಮನವಿ ಮಾಡಿದ್ದಾರೆ.

ಅಂಚೆ ಮತದಾನಕ್ಕೆ ಅರ್ಹರಾದವರೆಷ್ಟು ? 
ಕರ್ನಾಟಕ ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಿವೆ. ಇದರಲ್ಲಿ 36 ಎಸ್‌ಸಿ ಮತ್ತು 15 ಎಸ್‌ಟಿಗಳಿಗೆ ಮೀಸಲಾಗಿದೆ. ರಾಜ್ಯದಲ್ಲಿ ಒಟ್ಟು ಮತದಾರರು 5,21,73,579 ಕೋಟಿಗಳಾಗಿದ್ದು, ಇದರಲ್ಲಿ ಪುರುಷರು 2.62 ಕೋಟಿ ಮತ್ತು ಮಹಿಳೆಯರು 2.59 ಕೋಟಿ. ಒಟ್ಟು 80 ವರ್ಷ ಮೇಲ್ಪಟ್ಟ ಮತದಾರರ ಸಂಖ್ಯೆ 12.15 ಲಕ್ಷ. ಇದು 2018 ಕ್ಕಿಂತ ಶೇಕಡಾ 32 ರಷ್ಟು ಹೆಚ್ಚಳವಾಗಿದೆ.

ಮಂಡ್ಯ ಜಿಲ್ಲೆಯಲ್ಲಿ 80 ವರ್ಷ ಮೇಲ್ಪಟ್ಟ 37,439 ಮತದಾರರು, 23,068 ವಿಶೇಷ ಚೇತನ ಮತದಾರರು ಸೇರಿದಂತೆ ಒಟ್ಟು 60,507 ಮತದಾರರಿದ್ದು, ಈ ಪೈಕಿ 56,916 ಮಂದಿಗೆ ನಮೂನೆ 12ಡಿ ವಿತರಿಸಲಾಗಿದೆ.

ಮತ ಹಾಕಿ ಬ್ಯಾಲೆಟ್ ಪೇಪರ್ ಪದರ್ಶಿಸಿದ ಯೋಧ 

ಸಾ.ರಾ. ಬಾಸ್‌ಗೆ ದೇಶ ಕಾಯುವ ಸೈನಿಕನಿಂದ ಮೊದಲ ಮತ ಎಂದು ಮತ ಹಾಕಿರುವ ಬ್ಯಾಲೆಟ್‌ ಪೇಪರನ್ನು ಯೋಧರೊಬ್ಬರು ಪ್ರದರ್ಶನ ಮಾಡಿರುವ ಪೋಟೊ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಆ ಫೋಟೋದೊಂದಿಗೆ, ನಮ್ಮ “ಸಾ.ರಾ. ಬಾಸ್‌”ಗೆ ಮೊದಲ ಮತ. ನಮ್ಮ ದೇಶ ಕಾಯುವ ಸೈನಿಕನಿಂದ ಜೈ ಹಿಂದ್‌ ಎಂಬ ಅಡಿಬರಹವಿದೆ. ಈ ಯೋಧ ಕೆ.ಆರ್.ನಗರದ ಕ್ಷೇತ್ರದ ಮತದಾರ ಎಂಬುದು ಪೋಸ್ಟ್‌ನಿಂದ ತಿಳಿದು ಬಂದಿದೆ. ಕರ್ತವ್ಯದ ಹಿನ್ನಲೆಯಲ್ಲಿ ಹೊರ ರಾಜ್ಯದಿಂದ ಅಂಚೆ ಮತದಾನ ಮಾಡಿದ್ದಾರೆ ಎನ್ನಲಾಗಿದೆ.  ಆದರೆ ಯೋಧ ಯಾರು ಮತ್ತು ಎಲ್ಲಿಂದ ಮತ ಹಾಕಿದ್ದಾರೆ ಎಂಬುದು ಇನ್ನಷ್ಟೆ ತಿಳಿಯಬೇಕಿದೆ.

ಅಂಚೆ ಮತದಾನ ಗೌಪ್ಯವಾಗಿ ನಡೆಯುತ್ತದೆ ಎಂದು ಹೇಳಲಾಗುತ್ತಿದ್ದರು. ಈ ಯೋಧನಂತೆ ಇತರರಿಗೆ ಬ್ಯಾಲೆಟ್ ಪೇಪರ್ ಅನ್ನು ಪ್ರದರ್ಶನವಾಗುವ ಸಾಧ್ಯತೆಗಳನ್ನು ತಳ್ಳಿ ಹಾಕುವಂತಿಲ್ಲ. ಹೀಗಿರುವಾಗ ಗೌಪ್ಯ ಮತದಾನ ಎಂಬುದಕ್ಕೆ ಅರ್ಥವಿರುತ್ತದೆಯೇ ಎಂಬುದನ್ನು ಯೋಚಿಸಬೇಕಾಗಿದೆ. ಒಟ್ಟಾರೆಯಾಗಿ ಈ ಬಾರಿಯ ಚುನಾವಣೆಯಿಂದ ಪ್ರಾರಂಭವಾಗಿರುವ 80 ವರ್ಷ ಮೇಲ್ಪಟ್ಟರು ಹಾಗೂ ವಿಶೇಷ ಚೇತನರಿಗೆ ನೀಡಿರುವ ಅಂಚೆ ಮತದಾನ ಹಲವು ಚರ್ಚೆಗಳನ್ನು ಹುಟ್ಟು ಹಾಕಿದೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!