Saturday, May 18, 2024

ಪ್ರಾಯೋಗಿಕ ಆವೃತ್ತಿ

ಶಿಕ್ಷಣದ ಸಾರ್ವತ್ರಿಕರಣಕ್ಕೆ ಸರ್ಕಾರ ಒತ್ತು ನೀಡಬೇಕು: ಪ್ರೊ. ಬಿ.ಕೆ ಚಂದ್ರಶೇಖರ್

ಶಿಕ್ಷಣದ ಖಾಸಗಿಕರಣಕ್ಕೆ ಬದಲಾಗಿ ಅದರ ಸಾರ್ವತ್ರಿಕರಣಕ್ಕೆ ಸರ್ಕಾರ ಒತ್ತು ನೀಡಬೇಕು ಎಂದು ಮಾಜಿ ಸಚಿವ ಪ್ರೊ. ಬಿ.ಕೆ. ಚಂದ್ರಶೇಖರ್ ತಿಳಿಸಿದರು.

ಕರ್ನಾಟಕ ಸಂಘದ ವತಿಯಿಂದ ಕೆ.ವಿ. ಶಂಕರಗೌಡ ಶತಮಾನೋತ್ಸವ ಭವನದಲ್ಲಿ ನಡೆದ ಪ್ರಥಮ ವರ್ಷದ ಎಸ್.ಎಂ. ಲಿಂಗಪ್ಪ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಎಚ್‌.ಟಿ ಕೃಷ್ಣೇಗೌಡರಿಗೆ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು.

‘ಕೇಂದ್ರ ಸರ್ಕಾರ ಶಿಕ್ಷಣದ ಖಾಸಗಿಕರಣಕ್ಕೆ ಪ್ರೋತ್ಸಾಹ ನೀಡುತ್ತಿದೆ. ಅಂತಹ ಶಿಕ್ಷಣ ಸಂಸ್ಥೆಗಳಲ್ಲಿ ಸಾಮಾನ್ಯರು ಶಿಕ್ಷಣ ಪಡೆಯಲು ಸಾಧ್ಯವಿಲ್ಲ. ಆದ್ದರಿಂದ ಸಾರ್ವತ್ರಿಕ ಶಿಕ್ಷಣಕ್ಕೆ ಸಾರ್ವಜನಿಕರು ಒತ್ತಾಯಿಸಬೇಕು’ ಎಂದರು.

ರಾಜಕಾರಣಿಗಳಿಗೆ ರಾಜಕೀಯದ ನಿಲುವು, ಸಿದ್ಧಾಂತ ಗಟ್ಟಿ ಇರಬೇಕು, ಮಾತಿನ ಮಾಲಿನ್ಯ ಇರಬಾರದು. ರಾಜಕಾರಣದಲ್ಲಿ ನಾಟಕೀಯ ಇರಬಾರದು. ಸಿಂಗಾರಿಗೌಡ, ಜವರಪ್ಪಗೌಡ, ಕೆವಿಎಸ್ ಸೌಜನ್ಯದಿಂದ ಸಾರ್ವಜನಿಕ ಜೀವನದಲ್ಲಿ ಭಾಗವಹಿಸಿದ್ದರು. ಎಲ್ಲಾ ಧರ್ಮದವರು ಒಟ್ಟಿಗೆ ಬಾಳುತ್ತಿದ್ದರು. ಈಗಿನ ರಾಜಕೀಯದಲ್ಲಿ ಇದು ಸಾಧ್ಯವಾಗುತ್ತಿಲ್ಲವೇಕೆ? ದೃಷ್ಟಿ ಬೇರೆ ಕಡೆ ತಿರುಗಿಸಲು ಏನೇನೋ ಮಾತನಾಡುತ್ತಾರೆ. ಮಾತಿಗೆ ಬೆಲೆ ಇರಬೇಕು. ತಪ್ಪುಗಳನ್ನು ಒಪ್ಪುವ ದೊಡ್ಡತನ ರಾಜಕಾರಣಿಗಳಿಗಿಲ್ಲ ಎಂದು ವಿಷಾದಿಸಿದರು.

ಲಿಂಗಪ್ಪನವರು ಹಾಗೂ ವಿಚಾರವಾದಿ ಎಚ್. ನರಸಿಂಹಯ್ಯನವರ ಜೀವನ ಒಂದೇ ರೀತಿ ಇತ್ತು. ಈ ಕಾಲದಲ್ಲಿ ಇದನ್ನು ನಿರೀಕ್ಷೆ ಮಾಡಲಾಗದು, ನಮಗೆ ನಾವೇ ಬದಲಾಗಬೇಕು ಎಂದರು.

ನಿವೃತ್ತ ಪ್ರಾಂಶಪಾಲರಾದ ಚಂದ್ರಮೋಹನ್ ಎಸ್.ಎಂ.ಲಿಂಗಪ್ಪನವರ ಬಗ್ಗೆ ಮಾತನಾಡಿ, ಲಿಂಗಪ್ಪನವರು ಶೀಲವಂತ ರಾಜಕಾರಣಿಯಾಗಿದ್ದರು. ಪುಣೆಯಲ್ಲಿ ಕಾನೂನು ಓದಿದ್ದರಿಂದ ಪುನಾಲಿಂಗಪ್ಪ ಎಂದು ಕರೆಯುತ್ತಿದ್ದರು. ಸಮಾಜಮುಖಿ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದರು. ಮೂರು ಸಲ ಶಾಸಕರಾಗಿದ್ದರೂ ಏನನ್ನೂ ಬಯಸಲಿಲ್ಲ. ಸಾರ್ವಜನಿಕ ಆಸ್ತಿ ಯಾವುದು ಬೇಡ ಎನ್ನುವ ಮಾತನಾಡಿದರು. ಧೀಮಂತ ರಾಜಕಾರಣಿಯಾಗಿ ಪಂಚತತ್ವಗಳಾದ ಶಿಕ್ಷಣ, ರೈತರಿಗೆ ಮೂಲ ಸೌಲಭ್ಯ, ಸಹಕಾರ ಜೀವನ, ಭ್ರಷ್ಟ ರಾಜಕಾರಣ, ಕುಟುಂಬದಲ್ಲಿ ರಾಜಕಾರಣ ಇರಬಾರದು ಎಂಬ ಉದ್ದೇಶ ಹೊಂದಿದ್ದರು’ ಎಂದು ತಿಳಿಸಿದರು.

ನಾಗಮಂಗಲ ಪ್ರಮುಖ ಸಹಕಾರಿ ಎಚ್‌.ಟಿ. ಕೃಷ್ಣೇಗೌಡ ಅವರಿಗೆ ಪ್ರಥಮ ವರ್ಷದ ಎಸ್.ಎಮ್. ಲಿಂಗಪ್ಪ ಪ್ರಶಸ್ತಿಯನ್ನು ₹ 25,000 ನಗದು ಹಾಗೂ ಪ್ರಶಸ್ತಿ ಫಲಕದೊಂದಿಗೆ ನೀಡಿ ಗೌರವಿಸಲಾಯಿತು. ನಾಗಮಂಗಲ ನಿವೃತ್ತ ಪ್ರಾಂಶುಪಾಲ ಬಿ.ಕೆ. ಲೋಕೇಶ್ ರವರು ಅಭಿನಂದನಾ ನುಡಿಗಳನ್ನಾಡಿದರು.

ಮಾಜಿ ಸಚಿವ ಎಂ.ಎಸ್. ಆತ್ಮಾನಂದ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ಸಂಘದ ಅಧ್ಯಕ್ಷ ಬಿ. ಜಯಪ್ರಕಾಶಗೌಡ, ಕಾರ್ಯದರ್ಶಿ ಹರೀಶ್ ಕುಮಾರ್, ಸಂಘದ ನಿರ್ದೇಶಕ ಜಯರಾಮ್ ಕೋಣನಹಳ್ಳಿ, ಉಪನ್ಯಾಸಕಿ ಅನಿತಾ, ಕಿರಣ್ ಕುಮಾರ್, ಜಯಲಕ್ಷ್ಮಿ, ರಘುನಂದನ್, ಮಂಜುಳಾ ಉದಯಶಂಕರ್, ಪುಟ್ಟಲಕ್ಷ್ಮಮ್ಮ, ಅಂಬರೀಶ್, ಕಾಂತಾಮಣಿ ಎಸ್., ಲಿಂಗಪ್ಪ ಇದ್ದರು

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!