Saturday, May 18, 2024

ಪ್ರಾಯೋಗಿಕ ಆವೃತ್ತಿ

ನಿರುದ್ಯೋಗ ಭತ್ಯೆ ನೀಡುವ ”ಯುವನಿಧಿ”ಗೆ ನೋಂದಣಿ ಆರಂಭ| ಅರ್ಜಿ ಸಲ್ಲಿಸುವುದು ಹೇಗೆ…? ಇಲ್ಲಿದೆ ಸಂಪೂರ್ಣ ಮಾಹಿತಿ……

ರಾಜ್ಯ ಸರ್ಕಾರದ ಐದು ಗ್ಯಾರಂಟಿಗಳಲ್ಲಿ ಒಂದಾದ ‘ಯುವನಿಧಿ’ಗೆ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಿದ್ದು, ಅರ್ಹ ನಿರುದ್ಯೋಗಿ ಯುವಜನರು ಅರ್ಜಿ ಸಲ್ಲಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮನವಿ ಮಾಡಿದ್ದಾರೆ.

ಐದು ಗ್ಯಾರಂಟಿಗಳಲ್ಲಿ ಸರ್ಕಾರ ಈಗಾಗಲೇ ಅನ್ನಭಾಗ್ಯ, ಶಕ್ತಿ (ಉಚಿತ ಪ್ರಯಾಣ), ಗೃಹಲಕ್ಷ್ಮಿ ಹಾಗೂ ಗೃಹ ಜ್ಯೋತಿ ಜೋಜನೆಗಳನ್ನು ಜಾರಿ ಮಾಡಿದೆ. ಸರ್ಕಾರ ಅಧಿಕಾರಕ್ಕೆ ಬಂದ ಆರು ತಿಂಗಳ ನಂತರ ಇದೀಗ ಯುವನಿಧಿ ಜಾರಿ ಮೂಲಕ ಪದವಿ ಹಾಗೂ ಡಿಪ್ಲೋಮಾ ಮುಗಿಸಿರುವ ಅರ್ಹ ಯುವಜನರಿಗೆ ನೆರವಾಗಲು ಸರ್ಕಾರ ಮುಂದಾಗಿದೆ.

‘ಪದವೀಧರ ಹಾಗೂ ಡಿಪ್ಲೊಮಾ ಪದವೀಧರ ನಿರುದ್ಯೋಗಿ ಯುವಜನರಿಗೆ ಮಾಸಿಕ ನಿರುದ್ಯೋಗ ಭತ್ಯೆಯ ನೆರವು ನೀಡುವ ನಮ್ಮ ಸರ್ಕಾರದ 5ನೇ ಗ್ಯಾರಂಟಿ ‘ಯುವನಿಧಿ’ ಯೋಜನೆಯ ನೋಂದಣಿ ಪ್ರಕ್ರಿಯೆ ಇಂದಿನಿಂದ ಆರಂಭಗೊಳ್ಳಲಿದೆ. ಆರ್ಥಿಕ ಸಂಕಷ್ಟದ ನಡುವೆ ಕನಸಿನ ಉದ್ಯೋಗದ ಹುಡುಕಾಟದಲ್ಲಿರುವ ನಿರುದ್ಯೋಗಿ ಯುವಜನರು ಯೋಜನೆಗೆ ನೊಂದಾಯಿಸಿಕೊಳ್ಳುವ ಮೂಲಕ ಸದುಪಯೋಗ ಪಡೆಯಬೇಕು ಎಂದು ಮನವಿ ಮಾಡುತ್ತೇನೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮನವಿ ಮಾಡಿದ್ದಾರೆ.

‘ನಿರುದ್ಯೋಗಿ ಪದವೀಧರರ ಶ್ರೇಯೋಭಿವೃದ್ಧಿಗಾಗಿ ನಮ್ಮ ಸರ್ಕಾರ ಘೋಷಿಸಿದ್ದ “ಯುವನಿಧಿ” ಗ್ಯಾರಂಟಿಯ ನೋಂದಣಿ ಪ್ರಕ್ರಿಯೆಗೆ ಇಂದು ಚಾಲನೆ ದೊರೆಯಲಿದ್ದು, ಅರ್ಹ ಫಲಾನುಭವಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕಾಗಿ ವಿನಂತಿ’ ಎಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಟ್ವೀಟ್ ಮಾಡಿದ್ದಾರೆ.

“>

ಅರ್ಜಿ ಸಲ್ಲಿಸುವುದು ಹೇಗೆ?

ಯುವನಿಧಿ ಫಲಾನುಭವಿಗಳು ಆನ್‌ಲೈನ್ ಮೂಲಕ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಆಯ್ಕೆಯಾಗುವ ಫಲಾನುಭವಿಗಳ ಬ್ಯಾಂಕ್ ಖಾತೆಗೆ 2024ರ ಜನವರಿ 12ರಂದು ಹಣ ಜಮಾವಣೆ ಆಗಲಿದೆ.
ಯುವನಿಧಿ ಯೋಜನೆಯನ್ನು ಕೌಶಲ್ಯಾಭಿವೃದ್ದಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆ ವತಿಯಿಂದ ಚಾಲನೆ ನೀಡಲಾಗುತ್ತಿದ್ದು, 2022-23ನೇ ಸಾಲಿನಲ್ಲಿ ಪದವಿ, ಡಿಪ್ಲೋಮಾ ತೇರ್ಗಡೆ ಆಗಿ 6 ತಿಂಗಳಿಂದ ಉದ್ಯೋಗ ಸಿಗದೇ ಇರುವವರಿಗೆ ಮಾತ್ರ ಅರ್ಜಿ ಸಲ್ಲಿಸಲು ಅರ್ಹತೆ ಪಡೆದುಕೊಂಡಿರುತ್ತಾರೆ.

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು https://sevasindhu.karnataka.gov.in ಲಿಂಕ್ ಬಳಸಿ ಸೇವಾಸಿಂಧು ಪೋರ್ಟಲ್, ಬಾಪೂಜಿ ಸೇವಾ ಕೇಂದ್ರ, ಕರ್ನಾಟಕ ಒನ್ ಸೇರಿದಂತೆ ಇತರೆ ಅಧಿಕೃತ ಡಿಜಿಟಲ್ ಸೇವಾ ಕೇಂದ್ರಗಳಲ್ಲಿ ನೋಂದಣಿ ಮಾಡಿಕೊಳ್ಳಬೇಕು. ನೋಂದಣಿ ಮಾಡಿಕೊಳ್ಳಲು ಅಭ್ಯರ್ಥಿಗಳು ಯಾವುದೇ ಶುಲ್ಕವನ್ನು ಭರಿಸಬೇಕಾದ ಅಗತ್ಯ ಇಲ್ಲ ಎಂದು ಸರ್ಕಾರ ಹೇಳಿದೆ.

ಯುವನಿಧಿ ಯೋಜನೆ ಮೂಲಕ ಅರ್ಹ ಪಧವೀಧರ ನಿರುದ್ಯೋಗಿಗಳಿಗೆ ಪ್ರತಿ ತಿಂಗಳು ₹3000 ಹಾಗೂ ಡಿಪ್ಲೊಮ ಉತ್ತೀರ್ಣರಾಗಿರುವ ನಿರುದ್ಯೋಗಿಗಳಿಗೆ ಪ್ರತಿ ತಿಂಗಳು ₹1500 ಸಿಗಲಿದೆ. ಕರ್ನಾಟಕ ರಾಜ್ಯದ ಅಭ್ಯರ್ಥಿಗಳಿಗೆ ಮಾತ್ರ ಈ ಯೋಜನೆ ಅನ್ವಯವಾಗಲಿದ್ದು, ಈ ಯೋಜನೆಯಡಿ ಮುಂದಿನ 2 ವರ್ಷಗಳ ಅವಧಿಗೆ ಮಾತ್ರ ನಿರುದ್ಯೋಗ ಭತ್ಯೆ ನೀಡಲಾಗುತ್ತದೆ. ಭತ್ಯೆ ಪಡೆಯುತ್ತಿರುವಗಲೇ ಯುವಜನರು ಉದ್ಯೋಗಕ್ಕೆ ಸೇರಿಕೊಂಡರೆ ತಕ್ಷಣವೇ ಭತ್ಯೆ ನಿಲ್ಲಿಸಲಾಗುತ್ತದೆ.

ಭತ್ಯೆಯನ್ನು ಡಿಬಿಟಿ ಮೂಲಕ ಒದಗಿಸಲು ಉದ್ದೇಶಿಸಲಾಗಿದ್ದು, ಫಲಾನುಭವಿಗಳು ಸೇವಾ ಸಿಂಧು ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಬೇಕು. ನಿರುದ್ಯೋಗ ಸ್ಥಿತಿಯ ಬಗ್ಗೆ ಸ್ವತಂತ್ರ್ಯ ಪರಿಶೀಲನೆ ಇರಬೇಕು. ಉದ್ಯೋಗ ಪಡೆದ ನಂತರ ತಪ್ಪು ಘೋಷಣೆ ಅಥವಾ ಘೋಷಿಸಲು ವಿಫಲರಾದರೆ ದಂಡ ವಿಧಿಸಲಾಗುತ್ತದೆ ಎಂದು ಸರ್ಕಾರ ಎಚ್ಚರಿಕೆ ನೀಡಿದೆ.

ಉನ್ನತ ವ್ಯಾಸಂಗಕ್ಕೆ ದಾಖಲಾತಿ ಹೊಂದಿ ವಿದ್ಯಾಭ್ಯಾಸ ಮುಂದುವರುಸುವವರಿಗೆ ಯೋಜನೆ ಅನ್ವಯಿಸುವುದಿಲ್ಲ ಹಾಗೂ ವಿದ್ಯಾಭ್ಯಾಸ ಮುಗಿಸಿ ಕಂಪನಿಗಳಲ್ಲಿ ಅಪ್ರೆಂಟಿಸ್ ತರಬೇತಿ ವೇತನ ಪಡೆಯುತ್ತಿರುವವರಿಗೆ ಯುವನಿಧಿ ಅನ್ವಯಿಸುವಿದಿಲ್ಲ. ಸರ್ಕಾರಿ ಹಾಗೂ ಖಾಸಗಿ ವಲಯದಲ್ಲಿ ಉದ್ಯೋಗ ಪಡೆದವರಿಗೂ ಅನ್ವಯ ಆಗುವುದಿಲ್ಲ. ರಾಜ್ಯ ಮತ್ತು ಕೇಂದ್ರದ ವಿವಿಧ ಯೋಜನೆಯಡಿ ಹಾಗೂ ಬ್ಯಾಂಕ್‌ಗಳಲ್ಲಿ ಸಾಲ ಪಡೆದು ಸ್ವಯಂ ಉದ್ಯೋಗ ಹೊಂದಿದವರಿಗೂ ಯೋಜನೆ ಅನ್ವಯ ಆಗುವುದಿಲ್ಲ ಎಂದು ಸರ್ಕಾರ ತಿಳಿಸಿದೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!