Saturday, May 18, 2024

ಪ್ರಾಯೋಗಿಕ ಆವೃತ್ತಿ

ಲೈಂಗಿಕ ದೌರ್ಜನ್ಯ ಪ್ರಕರಣ | ಸಂತ್ರಸ್ತೆಯರ ಸಮ್ಮುಖದಲ್ಲಿ ಹೆಚ್.ಡಿ ರೇವಣ್ಣ ಮನೆಯಲ್ಲಿ ಎಸ್‌ಐಟಿ ಮಹಜರು

ಮಾಜಿ ಸಚಿವ, ಹೊಳೆನರಸೀಪುರ ಜೆಡಿಎಸ್ ಶಾಸಕ ಹೆಚ್.ಡಿ ರೇವಣ್ಣ ವಿರುದ್ಧ ದಾಖಲಾಗಿರುವ ಲೈಂಗಿಕ ಕಿರುಕುಳ ಪ್ರಕರಣದ ತನಿಖೆ ಆರಂಭಿಸಿರುವ ಎಸ್‍ಐಟಿ ಅಧಿಕಾರಿಗಳು, ಹೊಳೆನರಸೀಪುರದ ಅವರ ನಿವಾಸದಲ್ಲಿ ಸಂತ್ರಸ್ತೆಯ ಸಮ್ಮುಖದಲ್ಲಿ ಸ್ಥಳ ಮಹಜರು ನಡೆಸಿದರು.

ರೇವಣ್ಣ ವಿರುದ್ಧ ಲೈಂಗಿಕ ಕಿರುಕುಳ ಹಾಗೂ ಸಂತ್ರಸ್ತ ಮಹಿಳೆಯ ಅಪಹರಣ ಆರೋಪದ ಮೇಲೆ ಪ್ರಕರಣ ದಾಖಲಾಗಿದೆ. ಈ ಹಿನ್ನೆಲೆ ರೇವಣ್ಣ ವಿರುದ್ಧ ಆರೋಪಿಸಿರುವ ಮಹಿಳೆಯ ಸಮ್ಮುಖದಲ್ಲಿ, ಅಡುಗೆ ಮನೆ, ಬೆಡ್ ರೂಂ ಹಾಗೂ ಸ್ಟೋರ್‌ ರೂಮ್‌ನಲ್ಲಿ ಮಹಜರು ನಡೆಸಿದ್ದಾರೆ. ಮನೆಯಲ್ಲಿ ಭವಾನಿ ರೇವಣ್ಣ ಇಲ್ಲದ ವೇಳೆ ಈ ಮೂರು ಕಡೆ ದೌರ್ಜನ್ಯ ನಡೆಸಿದ್ದಾರೆ ಎಂದು ಮಹಿಳೆ ಆರೋಪಿಸಿದ್ದರು.

ಡಿವೈಎಸ್‍ಪಿ ಸತ್ಯ ನಾರಾಯಣ್ ಸಿಂಗ್, ಸುಮಾ ರಾಣಿ ನೇತೃತ್ವದಲ್ಲಿ ಮೂರು ವಾಹನಗಳಲ್ಲಿ ಆಗಮಿಸಿರುವ ಎಸ್‍ಐಟಿ ತಂಡ ಪರಿಶೀಲನೆ ನಡೆಸುತ್ತಿದೆ. ಮನೆಯಲ್ಲಿ ಹೆಚ್.ಡಿ ರೇವಣ್ಣ ಹಾಗೂ ಪತ್ನಿ ಭವಾನಿ ರೇವಣ್ಣ ಇದ್ದು, ಮನೆಯ ಬಳಿ ಬಿಗಿ ಭದ್ರತೆ ಕಲ್ಪಿಸಲಾಗಿದೆ.

ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೋಗಳ ಪೆನ್‍ಡ್ರೈವ್ ದೇಶದಲ್ಲಿ ಭಾರೀ ಸದ್ದು ಮಾಡುತ್ತಿದೆ. ವಿಡಿಯೋಗಳು ವೈರಲ್ ಆಗುತ್ತಿದ್ದಂತೆ ಸಂತ್ರಸ್ತೆಯರು ಮಹಿಳಾ ಆಯೋಗದ ಮೊರೆ ಹೋಗಿದ್ದರು. ಈ ಹಿನ್ನೆಲೆಯಲ್ಲಿ ಸರ್ಕಾರ ಪ್ರಕರಣದ ತನಿಖೆಗೆ ಎಸ್‍ಐಟಿ ರಚನೆ ಮಾಡಿತ್ತು. ಇದಾದ ಬೆನ್ನಲ್ಲೇ ಮಾಜಿ ಸಚಿವ ರೇವಣ್ಣ ವಿರುದ್ಧ ಸಹ ಲೈಂಗಿಕ ದೌರ್ಜನ್ಯ ಹಾಗೂ ಸಂತ್ರಸ್ತೆಯ ಅಪಹರಣದ ಆರೋಪದಡಿ ಪ್ರಕರಣ ದಾಖಲಾಗಿತ್ತು.

ಈ ಬಗ್ಗೆ ಎಸ್‍ಐಟಿ ತನಿಖೆ ನಡೆಸುತ್ತಿದೆ. ಪ್ರಜ್ವಲ್ ರೇವಣ್ಣ ವಿದೇಶಕ್ಕೆ ತೆರಳಿದ್ದು, ಅವರಿಗೆ ಲುಕ್‍ಔಟ್ ನೋಟಿಸ್ ಜಾರಿಗೊಳಿಸಲಾಗಿದೆ. ಅಲ್ಲದೇ ರೇವಣ್ಣ ಸಹ ವಿದೇಶಕ್ಕೆ ತೆರಳುವ ಶಂಕೆಯ ಮೇಲೆ ಅವರ ಮೇಲೂ ಲುಕ್‍ಔಟ್ ನೋಟಿಸ್ ಜಾರಿಗೊಳಿಸಲಾಗಿದೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!