Saturday, May 18, 2024

ಪ್ರಾಯೋಗಿಕ ಆವೃತ್ತಿ

ಮಂಡ್ಯ| ಹೆಚ್.ಡಿ.ಕುಮಾರಸ್ವಾಮಿಗೆ ಶಸ್ತ್ರಚಿಕಿತ್ಸೆ; ಜೆಡಿಎಸ್ ಕಾರ್ಯಕರ್ತರಿಂದ ವಿಶೇಷ ಪೂಜೆ

ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದು, ಅವರ ಆರೋಗ್ಯ ವೃದ್ದಿಗೆ ಪ್ರಾರ್ಥಿಸಿ ಮಂಡ್ಯ ಜಿಲ್ಲೆಯ ವಿವಿಧ ದೇವಾಲಯಗಳಲ್ಲಿ ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರು ವಿಶೇಷ ಪೂಜೆ ಸಲ್ಲಿಸಿದರು.

ಜಿಲ್ಲೆ ಕೇಂದ್ರ ಮಂಡ್ಯದ ವಿದ್ಯಾನಗರದ ಗಣಪತಿ ದೇವಾಲಯದಲ್ಲಿ ಜೆಡಿಎಸ್ ಪಕ್ಷದ ಮುಖಂಡರಾದ ಬಿ.ಆರ್.ರಾಮಚಂದ್ರು ಹಾಗೂ ಜಿಲ್ಲಾ ಹಾಲು ಒಕ್ಕೂಟದ ಉಪಾಧ್ಯಕ್ಷ ರಘುನಂದನ್ ನೇತೃತ್ವದಲ್ಲಿ ಪೂಜೆ ಸಲ್ಲಿಸಿ ಕುಮಾರಸ್ವಾಮಿ ಅವರು ಶೀಘ್ರ ಚೇತರಿಕೆ ಕಂಡು, ಸಾಮಾನ್ಯ ಜನರ ಸೇವೆಗೆ ಮರಳಿ ಎಂದು ಪ್ರಾರ್ಥಿಸಲಾಯಿತು.

ಈ ಸಂದರ್ಭದಲ್ಲಿ ಬಿ.ಆರ್.ರಾಮಚಂದ್ರು ಮಾತನಾಡಿ, ಕುಮಾರಣ್ಣನವರ ಆರೋಗ್ಯ ಚೇತರಿಕೆಗಾಗಿ ಬೆಳಗ್ಗಿನಿಂದಲೇ ಮೃತ್ಯುಂಜಯ ಹೋಮ ನಡೆಸಿ, ವಿಶೇಷ ಪೂಜೆ ಸಲ್ಲಿಸಲಾಗುತ್ತಿದೆ. ಅವರು ಬೇಗ ಗುಣಮುಖರಾಗಿ ಬರಲಿ ಎಂದು ಹೇಳಿದರು. ಈ ವೇಳೆ ಮುಖಂಡರಾದ ಸಿದ್ದರಾಮೇಗೌಡ, ನಾಗಪ್ಪ, ನಗರಸಭಾ ಸದಸ್ಯ ನಾಗೇಶ್, ನಗರಸಭೆ ಮಾಜಿ ಸದಸ್ಯರಾದ ಕೆ.ಸಿ.ನಾಗಮ್ಮ, ಪದ್ಮಾವತಿ ಮತ್ತಿತರರಿದ್ದರು.

ಪಾಂಡವಪುರ ಪಟ್ಟಣದ ಸಮೀಪವಿರುವ ಪಿಎಸ್’ಎಸ್’ಕೆ ಕಾರ್ಖಾನೆ ಮುಂಭಾಗ ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ನೇತೃತ್ವದಲ್ಲಿ ವಿಶ್ವ ವಿಖ್ಯಾತ ವೈರಮುಡಿಗೆ ಪೂಜೆ ಸಲ್ಲಿಸಿ, ಹೃದಯ ಶಸ್ತ್ರ ಚಿಕಿತ್ಸೆಗೊಳಗಾಗಿರುವ ಹೆಚ್.ಡಿ.ಕುಮಾರಸ್ವಾಮಿ ಅವರು ಶೀಘ್ರ ಗುಣಮುಖವಾಗಲೆಂದು ಮತ್ತು ನಾಡಿನ ಬರಗಾಲದ ಬೇಗುದಿ ನಿವಾರಣೆಯಾಗಿ ಉತ್ತಮ ಮಳೆ, ಬೆಳೆಯಾಗಲೆಂದು ಪ್ರಾರ್ಥಿಸಿ ಪೂಜೆ ಸಲ್ಲಿಸಲಾಯಿತು.

ಶ್ರೀರಂಗಪಟ್ಟಣ ತಾಲ್ಲೂಕಿನ ರಾಂಪುರ ಗ್ರಾಮದ ಶ್ರೀರಾಮೇಶ್ವರ ಹಾಗೂ ಶ್ರೀ ಆಂಜನೇಯಸ್ವಾಮಿ ದೇವಾಲಯದಲ್ಲಿ ಮಾಜಿ ಶಾಸಕ ರವೀಂದ್ರ ಶ್ರೀಕಂಠಯ್ಯ ನೇತೃತ್ವದಲ್ಲಿ ಪೂಜೆ ಸಲ್ಲಿಸಿ ಕುಮಾರಸ್ವಾಮಿ ಅವರು ಶೀಘ್ರ ಗುಣಮುಖರಾಗುವಂತೆ ಪ್ರಾರ್ಥಿಸಲಾಯಿತು. ತಾಲ್ಲೂಕು ಜನತಾದಳದ ಅಧ್ಯಕ್ಷ ದಶರಥ ಮತ್ತಿತರರು ಭಾಗವಹಿಸಿದ್ದರು.

ಮದ್ದೂರು ಪಟ್ಟಣದ ಶ್ರೀ ಉಗ್ರ ನರಸಿಂಹಸ್ವಾಮಿ ದೇವಸ್ಥಾನದಲ್ಲಿ ಮಾಜಿ ಸಚಿವ ಡಿ.ಸಿ.ತಮ್ಮಣ್ಣ ನೇತೃತ್ವದಲ್ಲಿ ವಿಶೇಷ ಪೂಜೆ ಸಲ್ಲಿಸಿ ಕುಮಾರಸ್ವಾಮಿ ಅವರ ಆಯುರಾರೋಗ್ಯಕ್ಕೆ ಪ್ರಾರ್ಥಿಸಲಾಯಿತು.

ಕೆ.ಆರ್.ಪೇಟೆ ಪಟ್ಟಣದ ಶಾಸಕ ಹೆಚ್.ಟಿ ಮಂಜು ನೇತೃತ್ವದಲ್ಲಿ ಪಟ್ಟಣದ ಆಂಜನೇಯ ಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ ಹೃದಯ ಚಿಕಿತ್ಸೆಗೊಳಗಾಗಿರುವ ಹೆಚ್.ಡಿ.ಕುಮಾರಸ್ವಾಮಿ ಅವರು ಗುಣಮುಖರಾಗಲಿ ಎಂದು ಪ್ರಾರ್ಥಿಸಲಾಯಿತು.

ನಾಗಮಂಗಲ ಪಟ್ಟಣದ ಟಿ.ಬಿ.ವೃತ್ತದಲ್ಲಿರುವ ವಿನಾಯಕ ದೇವಾಲಯದಲ್ಲಿ ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಡಿ.ಟಿ.ಶ್ರೀನಿವಾಸ್ ನೇತೃತ್ವದಲ್ಲಿ ಕುಮಾರಸ್ವಾಮಿ ಅವರ ಆರೋಗ್ಯ ಚೇತರಿಕೆಗಾಗಿ ವಿಶೇಷ ಪೂಜೆ ಸಲ್ಲಿಸಲಾಯಿತು.

ಮಳವಳ್ಳಿ ಪಟ್ಟಣದ ಗಂಗಾಧರೇಶ್ವರ ದೇವಾಲಯದಲ್ಲಿ ಮಾಜಿ ಶಾಸಕ ಕೆ.ಅನ್ನದಾನಿ ಮತ್ತು ಜಿಲ್ಲಾ ಯುವ ಘಟಕದ ಅಧ್ಯಕ್ಷ ಕಂಸಾಗರ ರವಿ ನೇತೃತ್ವದಲ್ಲಿ ಪೂಜೆ ಸಲ್ಲಿಸಿ, ಕುಮಾರಸ್ವಾಮಿಯವರು ಆರೋಗ್ಯವಂತರಾಗಿ ಹೊರ ಬರಲಿ ಎಂದು ಪ್ರಾರ್ಥಿಸಲಾಯಿತು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!