Sunday, May 19, 2024

ಪ್ರಾಯೋಗಿಕ ಆವೃತ್ತಿ

ಶ್ರೀನಿಧಿ ಗೋಲ್ಡ್ ಜಗನ್ನಾಥ ಶೆಟ್ಟಿ ಹನಿಟ್ರ್ಯಾಪ್ ಪ್ರಕರಣಕ್ಕೆ ಟ್ವಿಸ್ಟ್

  • ಪೋಲಿಸರು ಸತ್ಯ ಬಯಲು ಮಾಡಲಿ
  • ಕಾಲಿಗೆ ಬಿದ್ದ ಜಗನ್ನಾಥ ಶೆಟ್ಟಿ
  • ಪ್ರೊಫೆಸರ್ ಎಂದು ಬಡಬಡಿಸಿದ ಜಗನ್ನಾಥ ಶೆಟ್ಟಿ 

ಬಿಜೆಪಿ ಮುಖಂಡ,ಶ್ರೀನಿಧಿ ಗೋಲ್ಡ್ ಮಾಲೀಕ ಜಗನ್ನಾಥ್ ಶೆಟ್ಟಿ ಹನಿಟ್ರ್ಯಾಪ್​​ ಪ್ರಕರಣ ಮತ್ತೊಂದು ರೋಚಕ ಟ್ವಿಸ್ಟ್ ಪಡೆದಿದೆ.

ಹನಿಟ್ರ್ಯಾಪ್ ಬಲೆಗೆ ಸಿಲುಕಿಸಿ ನನ್ನನ್ನು ಕಿಡ್ನ್ಯಾಪ್ ಮಾಡಿ ಹೊಡೆದು ಬಡಿದು 50 ಲಕ್ಷ ಕಿತ್ತುಕೊಂಡರು ಎಂದು ಸಲ್ಮಾಬಾನು ಮತ್ತು ಆರು ಮಂದಿ ಮೇಲೆ ದೂರು ನೀಡಿ ಇಪ್ಪತ್ತು ದಿನಗಳ ನಂತರ ಇಡೀ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ.ಈ ಪ್ರಕರಣದಲ್ಲಿ ಅಸಲಿ ಸತ್ಯ ಏನೆಂಬುದನ್ನು ಬಹಿರಂಗ ಪಡಿಸಬೇಕಾದ ಮಂಡ್ಯ ಪೋಲಿಸರು ಸುಮ್ಮನಿರುವುದು ಅನುಮಾನ ಉಂಟು ಮಾಡಿದೆ.

ಜಗನ್ನಾಥ ಶೆಟ್ಟಿ ಹನಿಟ್ರ್ಯಾಪ್ ಹಿಂದೆ ಬೇರೆಯೇ ಕಥೆಯಿದೆ ಎಂದು ಆತ ದೂರು ನೀಡಿದ ದಿನವೇ ಸುಳ್ಳೆಂಬುದು ಪ್ರತಿಯೊಬ್ಬರಿಗೂ ಗೊತ್ತಾಗಿತ್ತು.ಈತನ ವ್ಯಕ್ತಿಗತ ಹಿನ್ನಲೆ ಬಗ್ಗೆ ತಿಳಿದಿದ್ದ ಯಾರಿಗೆ ಆದರೂ ಈತ ಸುಳ್ಳು ಕಥೆ ಹೆಣೆದಿದ್ದಾನೆ ಅಂತೆಯೇ ಅನಿಸೋದು.

ದಕ್ಷಿಣ ಕನ್ನಡ ಜಿಲ್ಲೆ ಬಿಜೆಪಿ ಮುಖಂಡ, ಧಾರ್ಮಿಕ ಪರಿಷತ್ ಸದಸ್ಯ, ಶ್ರೀನಿಧಿ ಗೊಲ್ಡ್ ಮಾಲೀಕ ಜಗನ್ನಾಥ ಶೆಟ್ಟಿ ಮಂಡ್ಯದ ಪಶ್ಚಿಮ ಪೊಲೀಸ್ ಠಾಣೆಗೆ ಕಳೆದ ತಿಂಗಳು ದೂರು ನೀಡಿದ್ದರು. ಜಗನ್ನಾಥ ಶೆಟ್ಟಿ ಮಂಗಳೂರಿಗೆ ತೆರಳಲು ಮಂಡ್ಯದಲ್ಲಿ ಬಸ್​ಗಾಗಿ ಕಾಯುತ್ತಿದ್ದರು. ಈ ವೇಳೆ ನಾಲ್ವರು ಮೈಸೂರಿಗೆ ಡ್ರಾಪ್​ ಕೊಡುವುದಾಗಿ ಕಾರಿನಲ್ಲಿ ಕರೆದೊಯ್ದಿದ್ದರು.

ಅಲ್ಲಿ ದರ್ಶನ್ ಲಾಡ್ಜ್ ಗೆ ಚಿನ್ನ ಪರಿಶೀಲನೆ ಮಾಡಲು ಕರೆದುಕೊಂಡು ಹೋಗಿ ಅಪಹರಿಸಿ, ರೂಮ್​ನಲ್ಲಿ ಯುವತಿ ಜೊತೆ ವಿಡಿಯೋ ಚಿತ್ರೀಕರಿಸಿಕೊಂಡು 4 ಕೋಟಿ ರೂ. ಬೇಡಿಕೆ ಇಟ್ಟಿದ್ದರು. ಅಂತಿಮವಾಗಿ 50 ಲಕ್ಷ ರೂಪಾಯಿ ನೀಡಿ ಬಂದಿದ್ದೆ. ಇಷ್ಟಕ್ಕೆ ಸುಮ್ಮನಾಗದ ಗ್ಯಾಂಗ್ ಮತ್ತೆ ಹಣಕ್ಕೆ ಬೇಡಿಕೆಯಿಟ್ಟಿದ್ದರಿಂದ ದೂರು ನೀಡುತ್ತಿದ್ದೇನೆ ಎಂದು ದೂರು ನೀಡಿದ್ದರು. ಈ ದೂರಿನ ಆಧಾರದ ಮೇಲೆ ಸಮಾಜ ಸೇವೆ, ಮಾನವ ಹಕ್ಕು ಹೋರಾಟ ಅಂತೆಲ್ಲಾ ಗುರುತಿಸಿಕೊಂಡಿದ್ದ ಮಂಡ್ಯದ ಸಲ್ಮಾಭಾನು ಮತ್ತು ತಂಡವನ್ನು ಪಶ್ಚಿಮ ಠಾಣೆ ಪೊಲೀಸರು ಬಂಧಿಸಿ ಜೈಲಿಗೆ ಕಳಿಸಿದ್ದರು.

ಅದಾಗಿ ಇಪ್ಪತ್ತು ದಿನಗಳ ನಂತರ ಬಿಜೆಪಿ ಮುಖಂಡ ಜಗನ್ನಾಥ್ ಶೆಟ್ಟಿ ಹನಿಟ್ರ್ಯಾಪ್ ಪ್ರಕರಣಕ್ಕೆ ಈಗ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಕಂಪ್ಲೇಂಟ್ ಕೊಟ್ಟಿರೋದೆ ಒಂದು, ನಡೆದಿರೋ ಘಟನೆಯೇ ಮತ್ತೊಂದಾಗಿದೆ. ತಾನು ಮಾಡಿದ ತಪ್ಪು ಮುಚ್ಚಿಕೊಳ್ಳಲು ಹನಿಟ್ರ್ಯಾಪ್ ದೂರು ಕೊಟ್ಟಿದ್ದಾರೆ ಎಂದು ಜಗನ್ನಾಥ್ ಶೆಟ್ಟಿ ಮೇಲೆಯೇ ಇದ್ದ ಅನುಮಾನ ಈಗ ನಿಜವಾಗುತ್ತಿದೆ.

ನನ್ನನ್ನು ಕಿಡ್ನಾಪ್ & ಹನಿಟ್ರ್ಯಾಪ್ ಮಾಡಿದ್ದರು ಎಂದು ನಾಲ್ವರ ವಿರುದ್ಧ ಜಗನ್ನಾಥ್ ಶೆಟ್ಟಿ ಘಟನೆ ನಡೆದ ಆರು ತಿಂಗಳ ನಂತರ ಆಗಸ್ಟ್ 19ರಂದು ಮಂಡ್ಯದ ಪಶ್ಚಿಮ ಠಾಣೆಯಲ್ಲಿ ದೂರು ದಾಖಲು ಮಾಡಿದ್ದರು. ದೂರು ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದ ಪೊಲೀಸರು ಪ್ರಕರಣದ ತನಿಖೆ ನಡೆಯುತ್ತಿರುವಾಗಲೇ ಪ್ರಕರಣಕ್ಕೆ ತಿರುವ ನೀಡುವ ಆಡಿಯೋ, ವಿಡಿಯೋ ವೈರಲ್ ಆಗಿದೆ.

ವೈರಲ್ ಆಗಿರುವ ವೀಡಿಯೋ, ಆಡಿಯೋದಲ್ಲಿ ಈತ ಎಂತಹ ಲಂಪಟತನ ಎನ್ನುವುದು ಗೊತ್ತಾಗಿದೆ. ನಾನು ಪ್ರಾಧ್ಯಾಪಕ ಎಂದು ವಿದ್ಯಾರ್ಥಿನಿಗೆ ಪುಸಲಾಯಿಸಿದ್ದ ಚಿನ್ನದ ವ್ಯಾಪಾರಿ ಜಗನ್ನಾಥ್ ಶೆಟ್ಟಿ ಮೈಸೂರಿನ ಲಾಡ್ಜ್ ಗೆ ವಿದ್ಯಾರ್ಥಿನಿ ಕರೆಸಿಕೊಂಡಿದ್ದಾಗ ಆರೋಪಿ ಸಲ್ಮಾಭಾನು ಮತ್ತು ಟೀಂಗೆ ಸಿಕ್ಕಿಬಿದ್ದಿದ್ದಾನೆ.

ಯುವತಿಯನ್ನು ಜಗನಾಥ್ ಶೆಟ್ಟಿ ಲಾಡ್ಜ್ ಗೆ ಕರೆಸಿ ಕೊಂಡಿರುವ ವೇಳೆಯಲ್ಲಿ ಪಂಚೆ, ಬನಿಯನ್ ನಲ್ಲಿದ್ದ ಜಗನ್ನಾಥ್ ಶೆಟ್ಟಿಗೆ ಆರೋಪಿ ಮತ್ತು ತಂಡ ಅವಾಚ್ಯ ಶಬ್ದಗಳಿಂದ ನಿಂದಿಸಿ ನಾಲ್ಕು ಬಾರಿಸಿ, ಎಳೆದಾಡಿ, ಹೆದರಿಸಿರುವ ವೀಡಿಯೋ ಈಗ ವೈರಲ್ ಆಗಿದೆ.

ಈ ವೇಳೆ ತನ್ನದು ತಪ್ಪಾಯ್ತು ತಪ್ಪಾಯ್ತು ಬಿಟ್ಟು ಬಿಡಿ ಎಂದು ಜಗನ್ನಾಥ್ ಶೆಟ್ಟಿ ಆರೋಪಿಗಳ ಕಾಲಿಗೆ ಬೀಳುತ್ತಿರುವ ವಿಡಿಯೋ ಈಗ ವೈರಲ್ ಆಗಿದ್ದು, ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.

ಅಲ್ಲದೆ ಇದನ್ನು ಬಹಿರಂಗ ಮಾಡಿದರೆ ನೇಣುಹಾಕಿಕೊಂಡು ಸತ್ತು ಹೋಗಬೇಕಾಗುತ್ತದೆ ಎಂದೆಲ್ಲಾ ಅಂಗಲಾಚುತ್ತಿರುವ ದೃಶ್ಯಗಳಿವೆ. ಯುವತಿಯ ಚಿಕ್ಕಪ ಎಂದು ಹೇಳಿಕೊಂಡು ಬಂದಿದ್ದ ವ್ಯಕ್ತಿ ಜಗನ್ನಾಥ ಶೆಟ್ಟಿ ಮೇಲೆ ಹಲ್ಲೆ ಮಾಡುವ ಸಂದರ್ಭದಲ್ಲಿ, ಯಾವ ಊರು ಎಂದು ಪ್ರಶ್ನಿಸುವಾಗ ನಾನು ಹುಬ್ಬಳ್ಳಿಯವ, ಪ್ರೊಫೆಸರ್ ಎಂದೆಲ್ಲಾ ಬಡಬಡಿಸುತ್ತಾ ಬಿಟ್ಟು ಬಿಡಿ ಎಂದು ಗೋಗರೆಯುತ್ತಿದ್ದನ್ನು ವಿಡಿಯೋದಲ್ಲಿ ನೋಡಬಹುದು.

ಇದನ್ನೂ ಓದಿ : ಜಗನ್ನಾಥ ಶೆಟ್ಟಿ ಮಾತನಾಡಿರುವ ವೈರಲ್ ಆಡಿಯೋ!

ಅಲ್ಲದೆ ಅದೇ ಲಾಡ್ಜ್ ನಲ್ಲಿದ್ದ ಯುವತಿಯ ಮೇಲೂ ಹಲ್ಲೆ ಮಾಡುವ ಸಂದರ್ಭದಲ್ಲಿ ಹೊಡೆಯಬೇಡಿ ಚಿಕ್ಕಪ್ಪ ಅವರೇ ನನ್ನನ್ನು ಟ್ಯೂಷನ್ ಎಂದು ಕರೆದುಕೊಂಡು ಬಂದರು ಎಂದಾಗ ಅವರ ಚಿಕ್ಕಪ ಎನಿಸಿಕೊಂಡವ ಯುವತಿಯ ತಲೆ ಕೂದಲನ್ನು ಹಿಡಿದು ಎಳೆದಾಡಿ ಹೊಡೆಯುತ್ತಾನೆ.  ಇತ್ತ ಮತ್ತೊಬ್ಬ ಜಗನ್ನಾಥ ಶೆಟ್ಟಿಯ ಮೇಲೆ ಹಲ್ಲೆ ಮಾಡಿ, ಪೆಟ್ರೋಲ್ ತೆಗೆದುಕೊಂಡು ಬಂದು ಸುರಿಯೋ, ಬೆಂಕಿ ಹಚ್ಚೋಣ ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿರುವುದು ವಿಡಿಯೋದಲ್ಲಿ ದಾಖಲಾಗಿದೆ. ಆಗ ಯುವತಿ  ಜಗನ್ನಾಥ ಶೆಟ್ಟಿಗೆ ಹೊಡೆಯಬೇಡಿ, ಅವರಿಗೆ ಏನೂ ಮಾಡಬೇಡಿ ಎಂದು ಅಂಗಲಾಚುವ ದೃಶಗಳಿವೆ.

ತನಿಖೆ ನಡೆಸುತ್ತಿರುವ ಮಂಡ್ಯ ಪೋಲೀಸರು ಜಗನ್ನಾಥ ಶೆಟ್ಟಿಯನ್ನು ಕಸ್ಟಡಿಗೆ ಪಡೆದು ವಿಚಾರಣೆ ನಡೆಸಿ ಸತ್ಯಾಂಶವನ್ನು ಜನರ ಎದುರಿಗಿಡಬೇಕಿದೆ.

ಈ ಪ್ರಕರಣದ ಕುರಿತಾಗಿ ಸಮಗ್ರ ತನಿಖೆ ನಡೆಸಬೇಕೆಂದು ಮಂಡ್ಯ ಜಿಲ್ಲೆಯ ಪ್ರಗತಿಪರ ಸಂಘಟನೆಗಳು ಪೋಲಿಸ್ ವರಿಷ್ಠಾಧಿಕಾರಿ ಕಛೇರಿಯ ಮುಂದೆ ಪ್ರತಿಭಟನೆಯನ್ನು ನಡೆಸಲಾಗಿತ್ತು.

ಮಂಡ್ಯದ ಪೋಲೀಸರು ಹಾಗೆ ಮಾಡ್ತಾರಾ ಎಂಬುದನ್ನು ಮಂಡ್ಯದ ಜನರು ಎದುರು ನೋಡುತ್ತಿದ್ದಾರೆ. ಇದುವರೆಗಿನ ತನಿಖೆ ನೋಡಿದರೆ ಮಂಡ್ಯ ಪೋಲಿಸರು ಆ ದಿಕ್ಕಿನಲ್ಲಿ ತನಿಖೆ ನಡೆಸುತ್ತಾರಾ ಅನ್ನೋದು ಅನುಮಾನ.

ಇದನ್ನೂ ಓದಿ : ಹನಿಟ್ರ್ಯಾಪ್: ಮಂಡ್ಯದ ಚಿನ್ನದ ವ್ಯಾಪಾರಿಯಿಂದ 50 ಲಕ್ಷ ದೋಚಿದ್ರು

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!