ಮಂಡ್ಯ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವೆಂಕಟರಮಣೇಗೌಡ (ಸ್ಟಾರ್ ಚಂದ್ರು) ಅವರು ತೆರೆದ ಚುನಾವಣಾ ಪ್ರಚಾರ ವಾಹನದಲ್ಲಿ ಕೆ.ಆರ್.ಪೇಟೆ ತಾಲೂಕಿನಾದ್ಯಂತ ಮತ ಪ್ರಚಾರ ಮಾಡಿದರು.
ವಿಠಲಾಪುರ, ಸೋಮನಹಳ್ಳಿ, ಆಲಂಬಾಡಿಕಾವಲು, ಅಕ್ಕಿಹೆಬ್ಬಾಳು, ಬೀರುವಳ್ಳಿ, ಮಂದಗೆರೆಗೆ, ದಬ್ಬೆಘಟ್ಟ, ಹಿರಿಕಳಲೆ, ಹೊಸಹೊಳಲು ಹಾಗೂ ಕೆ.ಆರ್.ಪೇಟೆ ಪಟ್ಟಣದಲ್ಲಿ ರೋಡ್ ಶೋ ನಡೆಸಿದರು. ಈ ವೇಳೆ ಶಾಲು ಹಾಕಿ ಪೇಟ ತೊಡಿಸಿ ವೆಂಕಟರಮಣೇಗೌಡ ಅವರನ್ನು ಸನ್ಮಾನಿಸಿದರು.
ರೋಡ್ ಶೋ ಸಮಯದಲ್ಲಿ ಬಿರುಬಿಸಲನ್ನು ಲೆಕ್ಕಿಸದ ಗ್ರಾಮಸ್ಥರು ರಸ್ತೆ ಮಧ್ಯದಲ್ಲೇ ಜಮಾಯಿಸಿದ್ದರು. ಅಭ್ಯರ್ಥಿ ಗ್ರಾಮಕ್ಕೆ ಆಗಮಿಸುತ್ತಿದ್ದಂತೆ ಪಟಾಕಿ ಸಿಡಿಸಿ ಸ್ವಾಗತಿಸಿದರೆ ಮತ್ತೆ ಕೆಲವುಕಡೆ ಡೋಲು ಬಡಿದು ಸ್ವಾಗತಿಸಿದರು.
ಜಿಲ್ಲೆಯ ಮಣ್ಣಿನ ಮಗ
ವೆಂಕಟರಮಣೇಗೌಡ (ಸ್ಟಾರ್ ಚಂದ್ರು) ಅವರು ಗ್ರಾಮಗಳಿಗೆ ತೆರಳಿದ ಸಂದರ್ಭದಲ್ಲಿ ಮಾತನಾಡಿ, ನಾನು ಈ ಜಿಲ್ಲೆಯ ಮಣ್ಣಿನ ಮಗ. ಕಾಂಗ್ರೆಸ್ ಪಕ್ಷದಿಂದ ಚುನಾವಣೆಗೆ ಇಳಿದಿದ್ದೇನೆ. ಜಿಲ್ಲೆಯ ರೈತನ ಮಗನನ್ನು ಬೆಂಬಲಿಸಿ ಆಶೀರ್ವದಿಸಬೇಕೆಂದು ಮತದಾರರಲ್ಲಿ ಮನವಿ ಮಾಡಿದರು.
ಜಿಲ್ಲೆಯ ಅಭಿವೃದ್ಧಿಯೇ ನನ್ನ ಗುರಿ. ಲೋಕಸಭೆಯಲ್ಲಿ ನಿಮ್ಮೆಲ್ಲರ ದನಿಯಾಗಿ, ಅನ್ನದಾತನ ಬೆನ್ನಿಗೆ ನಿಂತು ಕೆಲಸ ಮಾಡುತ್ತೇನೆ. ನನಗೊಂದು ಅವಕಾಶ ಕೊಟ್ಟು ಆಶೀರ್ವದಿಸಿ ಎಂದು ಮತಯಾಚಿಸಿದರು.
ಕಾಂಗ್ರೆಸ್ ಬಡವರ ಪರ. ದೀನದಲಿತರ ಉದ್ಧಾರಕ್ಕಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಜಿಲ್ಲಾ ಉಸ್ತುವಾರಿ ಸಚಿವರಾದ ಚಲುವರಾಯಸ್ವಾಮಿ ಅವರು ಜಿಲ್ಲೆಯ ಅಭಿವೃದ್ಧಿಗೆ ಸಾಕಷ್ಟು ಶ್ರಮಿಸುತ್ತಿದ್ದಾರೆ. ಅವರ ಕೈ ಬಲಪಡಿಸಲು, ಜಿಲ್ಲೆಯ ಅಭಿವೃದ್ಧಿಗಾಗಿ ನನ್ನನ್ನು ಬೆಂಬಲಿಸಿ ಎಂದರು.
ಅಭಿವೃದ್ಧಿ ಕಾಮಗಾರಿಗಳಿಗೆ ಶರವೇಗ
ವಿಧಾನಪರಿಷತ್ ಸದಸ್ಯರಾದ ದಿನೇಶ್ ಗೂಳಿಗೌಡ ಮಾತನಾಡಿ, ನುಡಿದಂತೆ ನಡೆಯುವ ಪಕ್ಷ ಕಾಂಗ್ರೆಸ್. ದೇಶದ ಅಭಿವೃದ್ಧಿ ಕಾಂಗ್ರೆಸ್ ನಿಂದ ಮಾತ್ರ ಸಾಧ್ಯ. ಕಳೆದ ಹತ್ತು ತಿಂಗಳಲ್ಲಿ ಜಿಲ್ಲೆಯಲ್ಲಿ ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳೇ ಇದಕ್ಕೆ ಸಾಕ್ಷಿ. ಐದು ವರ್ಷದಿಂದ ಕುಂಠಿತವಾಗಿದ್ದ ಅಭಿವೃದ್ಧಿ ಕಾಮಗಾರಿಗಳು ಈಗ ಶರವೇಗದಲ್ಲಿ ಸಾಗುತ್ತಿವೆ ಎಂದರು.
ಜಿಲ್ಲೆಯಲ್ಲಿ ಹೊಸದಾಗಿ ಸಕ್ಕರೆ ಕಾರ್ಖಾನೆ ಆರಂಭ, ಕೃಷಿ ವಿಶ್ವವಿದ್ಯಾಲಯ ಸ್ಥಾಪನೆ, ನಾಲೆಗಳ ಅಭಿವೃದ್ಧಿಗೆ ಕಾವೇರಿ ನೀರಾವರಿ ನಿಗಮದಿಂದ 2 ಸಾವಿರ ಕೋಟಿ ರೂ. ಬಿಡುಗಡೆ ಆಗಿದೆ. ರಸ್ತೆ ಅಭಿವೃದ್ಧಿ, ಶಾಲೆ, ಕಾಲೇಜು ಕಟ್ಟಡಗಳ ದುರಸ್ತಿ, ಸಮುದಾಯಭವನಗಳ ನಿರ್ಮಾಣ ಮಾಡಲಾಗುತ್ತಿದೆ ಎಂದರು.
ಜಿಲ್ಲೆಯಲ್ಲಿ ಆಗುತ್ತಿರುವ ಅಭಿವೃದ್ಧಿ ಕಾರ್ಯಗಳಿಂದ ಕಾಂಗ್ರೆಸ್ ಪ್ರವರ್ಧಮಾನಕ್ಕೆ ಬರುತ್ತಿರುವುದನ್ನು ಕೆಲವರಿಗೆ ಸಹಿಸಲು ಆಗಿತ್ತಿಲ್ಲ. ಅವರು ಅಧಿಕಾರದಲ್ಲಿದ್ದಾಗ ಅಭಿವೃದ್ಧಿ ಮಾಡಲಿಲ್ಲ. ನಾವು ಅಭಿವೃದ್ಧಿ ಮಾಡಿದರೂ ಅವರು ಸಹಿಸುತ್ತಿಲ್ಲ. ಮತದಾರರು ಅಪಪ್ರಚಾರಕ್ಕೆ ಕಿವಿಗೊಡದೆ ಕಾಂಗ್ರೆಸ್ ಕೈ ಬಲಪಡಿಸಬೇಕು ಎಂದು ಮನವಿ ಮಾಡಿದರು.
ಪ್ರತಿ ಮನೆಗೆ 5 ಸಾವಿರ ಬರುತ್ತಿದೆ
ಮಾಜಿ ಶಾಸಕರಾದ ಕೆ.ಬಿ.ಚಂದ್ರಶೇಖರ್ ಮಾತನಾಡಿ, ಪಂಚ ಗ್ಯಾರಂಟಿ ಜಾರಿಯಿಂದ ಇಂದು ಪ್ರತಿ ಮನೆಗೆ 5 ಸಾವಿರ ಬರುತ್ತಿದೆ. ಕಾಂಗ್ರೆಸ್ ಸರ್ಕಾರ ಕೊಟ್ಟ ಮಾತಿನಂತೆ ನಡೆದಿದೆ. ಮೋದಿ ಸರ್ಕಾರ ಏನು ಮಾಡಿದೆ? ರಾಜ್ಯದಲ್ಲಿ ಜೆಡಿಎಸ್ ಎಲ್ಲಿದೆ? ಈ ಚುನಾವಣೆಯಲ್ಲಿ ಜಿಲ್ಲೆಯವರೇ ಆದ ಸ್ಟಾರ್ ಚಂದ್ರು ಅವರನ್ನು ಗೆಲ್ಲಿಸಬೇಕು ಎಂದರು.
ಮಂಡ್ಯ ಜಿಲ್ಲಾಧ್ಯಕ್ಷರಾದ ಸಿ.ಡಿ.ಗಂಗಾಧರ್, ಮುಖಂಡರಾದ ಬಿ.ಎಲ್.ದೇವರಾಜ್, ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿಶ್ವನಾಥ್ ಸೇರಿದಂತೆ ತಾಲೂಕಿನ ಹಲವು ಕಾಂಗ್ರೆಸ್ ಮುಖಂಡರು ಚುನಾವಣಾ ಪ್ರಚಾರ ನಡೆಸಿದರು.