Monday, May 20, 2024

ಪ್ರಾಯೋಗಿಕ ಆವೃತ್ತಿ

ವಿದ್ಯಾರ್ಥಿಗಳು ಇಷ್ಟಪಟ್ಟು ಓದಿದಾಗ ಜೀವನದಲ್ಲಿ ಯಶಸ್ಸುಗಳಿಸಲು ಸಾಧ್ಯ

ವಿದ್ಯಾರ್ಥಿಗಳು ಕಷ್ಟಪಟ್ಟು ಓದುವುದಕ್ಕಿಂತ, ಇಷ್ಟಪಟ್ಟು ಓದಿದಾಗ ಜೀವನದಲ್ಲಿ ಯಶಸ್ಸು ಗಳಿಸಲು ಸಾಧ್ಯ ಎಂದು ಶ್ರೀ ಶಂಭು ಸೇವಾ ಟ್ರಸ್ಟ್ ಅಧ್ಯಕ್ಷರೂ ಆದ ಮನ್ಮುಲ್ ಅಧ್ಯಕ್ಷ ಬಿ.ಆರ್.ರಾಮಚಂದ್ರ ಅಭಿಪ್ರಾಯ ವ್ಯಕ್ತಪಡಿಸಿದರು.

ಮಂಡ್ಯ ತಾಲ್ಲೂಕಿನ ಬಸರಾಳು ಹೋಬಳಿಯ ದೊಡ್ಡಗರುಡನಹಳ್ಳಿ ಗ್ರಾಮ ಪಂಚಾಯಿತಿ ಮತ್ತು ಬೇಬಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಸರ್ಕಾರಿ ಶಾಲಾ ಮಕ್ಕಳಿಗೆ ಶ್ರೀ ಶಂಭು ಸೇವಾ ಟ್ರಸ್ಟ್ ವತಿಯಿಂದ ಉಚಿತವಾಗಿ ಶಾಲಾ ಬ್ಯಾಗ್ ಗಳನ್ನು ವಿತರಿಸಿ ಮಾತನಾಡಿದ ಅವರು, ಎಲ್ಲಾ ಮಕ್ಕಳನ್ನು ಸಮಾನವಾಗಿ ಕಾಣುವ ದೃಷ್ಟಿಯಿಂದ ಬ್ಯಾಗ್ ವಿತರಣೆ ಮಾಡುತ್ತಿದ್ದೇನೆ.ಗ್ರಾಮಸ್ಥರು ಹಾಗೂ ಯುವಜನತೆ ಸಹಕಾರ ನೀಡಿದಲ್ಲಿ ಮುಂದಿನ ದಿನಗಳಲ್ಲಿ ಶಾಲೆಗಳಲ್ಲಿ ಸ್ವಚ್ಛತೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.

ಬಸರಾಳು ಹಾಗೂ ಕೆರಗೋಡು ಹೋಬಳಿಯ ಜನ ನನ್ನನ್ನು ಪ್ರೀತಿಯಿಂದ ಬೆಳೆಸಿದ್ದಾರೆ. ಅವರ ಅಳಿಲು ಸೇವೆ ಮಾಡುವ ಉದ್ದೇಶದಿಂದ ನನ್ನ ದುಡಿಮೆಯಲ್ಲಿ ಒಂದಷ್ಟು ಹಣವನ್ನು ಮೀಸಲಿಟ್ಟು ಸಮಾಜಮುಖಿ ಸೇವಾ ಕಾರ್ಯಗಳನ್ನು ಹಮ್ಮಿಕೊಳ್ಳುವುದಾಗಿ ತಿಳಿಸಿದರು.

ಮೊದಲಿಗೆ ಸರ್ಕಾರಿ ಶಾಲಾ ಮಕ್ಕಳಿಗೆ ಶಾಲಾ ಬ್ಯಾಗ್ ವಿತರಿಸುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಈಗಾಗಲೇ ಬಸರಾಳು,ಕಂಬದಹಳ್ಳಿ,ಮುತ್ತೇಗೆರೆ, ದುದ್ದ ಗ್ರಾ.ಪಂ ವ್ಯಾಪ್ತಿಯ ಸರ್ಕಾರಿ ಶಾಲೆಗಳಿಗೆ ಬ್ಯಾಗ್ ವಿತರಣೆ ಮಾಡಲಾಗಿದೆ ಎಂದರು.

ಮಳೆ ಕಡಿಮೆಯಾದ ನಂತರ ಶಂಭು ಸೇವಾ ಟ್ರಸ್ಟ್ ವತಿಯಿಂದ ಧರ್ಮಸ್ಥಳಕ್ಕೆ ಕರೆದುಕೊಂಡು ಹೋಗುವ ಶಂಭು ಧರ್ಮ ಯಾತ್ರೆಯನ್ನು ಆರಂಭಿಸಲಾಗುವುದು.

ಪ್ರತಿಯೊಂದು ಗ್ರಾಮದಲ್ಲೂ ದಿನಾಂಕ ನಿಗದಿ ಪಡಿಸಿ ಹಂತ ಹಂತವಾಗಿ ಗ್ರಾಮಸ್ಥರನ್ನು ಒಟ್ಟಿಗೆ ಕರೆದುಕೊಂಡು ಧರ್ಮ ಯಾತ್ರೆ ಮಾಡುವ ಮೂಲಕ ಧರ್ಮಸ್ಥಳದ ಮಂಜುನಾಥ ಸ್ವಾಮಿಯ ಆಶೀರ್ವಾದ ಮಾಡಿಸಲಾಗುವುದು. ಅದಕ್ಕೆ ಗ್ರಾಮಸ್ಥರ ಸಹಕಾರ ಅಮೂಲ್ಯವಾಗಿದ್ದು ಮುಂದಿನ ದಿನಗಳಲ್ಲಿ ಶಾಲಾ ಮಕ್ಕಳಿಗೆ ಬ್ಯಾಗ್ ವಿತರಣೆಗೆ ಸಹಕರಿಸಿದಂತೆ ಶಂಭು ಧರ್ಮಯಾತ್ರೆಗೆ ಸಹಕರಿಸಬೇಕು ಎಂದು ಮನವಿ ಮಾಡಿದರು.

ರಾಜಕಾರಣದಲ್ಲಿ ರಾಮಚಂದ್ರು ಬೆಳೆಯಲಿ

ಗ್ರಾಮದ ಮುಖಂಡರಾದ ನಿವೃತ್ತ ಶಿಕ್ಷಕ ಬಸವಯ್ಯ ಮಾತನಾಡಿ, ಗುಡಿಗೇನಹಳ್ಳಿ ಗ್ರಾಮಕ್ಕೆ ರಾಜಕಾರಣಿಗಳು ಬಂದು ಈ ರೀತಿ ಸಮಾಜ ಸೇವೆ ಮಾಡುತ್ತಿರುವುದು ಇದೇ ಮೊದಲನೇಯದು. ರಾಮಚಂದ್ರು ಅವರು ಸರ್ಕಾರಿ ಶಾಲೆಗಳಿಗೆ ಬ್ಯಾಗ್ ವಿತರಣೆ ಮಾಡುತ್ತಿರುವುದು ಶ್ಲಾಘನೀಯ ಕಾರ್ಯಕ್ರಮವಾಗಿದ್ದು, ಇಂತಹ ಕಾರ್ಯಕ್ರಮಗಳಿಂದ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಹಾಜರಾತಿ ಹೆಚ್ಚಾಗುತ್ತದೆ ಎಂದು ಹೇಳಿದರು.

ಇಂತಹ ಸಮಾಜಮುಖಿ ಕಾರ್ಯಕ್ರಮಗಳಲ್ಲಿ ಪದೇ ಪದೇ ತೊಡಗಿಸಿಕೊಂಡಲ್ಲಿ ಅವರ ರಾಜಕಾರಣದ ಏಳಿಗೆಯಾಗುತ್ತದೆ.ಮಂಡ್ಯ ವಿಧಾನಸಭಾ ಕ್ಷೇತ್ರಕ್ಕೆ ರಾಮಚಂದ್ರು ಅಂತಹ ನಾಯಕರ ಅವಶ್ಯಕತೆ ಇತ್ತು. ಮುಂದಿನ ದಿನಗಳಲ್ಲಿ ನಾವು ಸಹ ಅವರಿಗೆ ಸಹಕರಿಸುತ್ತೇವೆ‌.ಅವರು ರಾಜಕಾರಣದಲ್ಲಿ ಎತ್ತರಕ್ಕೆ ಬೆಳೆಯಲಿ ಎಂದು ಆಶಿಸಿದರು.

ಸಮಾಜಮುಖಿ ಸೇವೆಯಲ್ಲಿ ತೊಡಗಿಸಿಕೊಂಡಿರುವ ಮನ್ಮುಲ್ ಅಧ್ಯಕ್ಷ ಬಿ.ಆರ್.ರಾಮಚಂದ್ರ ಅವರು ರಾಜಕಾರಣದಲ್ಲಿ ಉನ್ನತವಾಗಿ ಎತ್ತರಕ್ಕೆ ಬೆಳೆದು ಮುಂದಿನ ದಿನಗಳಲ್ಲಿ ಮಂಡ್ಯ ವಿಧಾನಸಭಾ ಕ್ಷೇತ್ರದಲ್ಲಿ ಶಾಸಕರಾಗಿ ಆಯ್ಕೆಯಾಗುವ ಮೂಲಕ ಬಡ ಜನರು ಹಾಗೂ ನೊಂದ ಜನರ ಸೇವೆಗೆ ಮುಂದಾಗಲಿ ಎಂದು ದೊಡ್ಡ ಗರುಡನಹಳ್ಳಿ ಗ್ರಾಮಸ್ಥರು ಆಶಯ ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ಗುಡಿಗೇನಹಳ್ಳಿ,ಮಾಯಪ್ಪನಹಳ್ಳಿ,ದೊಡ್ಡಗರುಡನಹಳ್ಳಿ,ಬೇಬಿ. ಗುತ್ತಗಾನಹಳ್ಳಿ,ತರಣಿಗೆರೆ, ಬಿದರಕಟ್ಟೆ,ಗೂಳಿಕೊಪ್ಪಲು
ಕಾರೇಕಟ್ಟೆ,ಚಾಕನಹಳ್ಳಿ ಸೇರಿದಂತೆ ಇತರೆ ಸರ್ಕಾರಿ ಶಾಲೆಗಳಿಗೆ ಉಚಿತ ಬ್ಯಾಗ್ ವಿತರಣೆ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಗ್ರಾ.ಪಂ ಪ್ರಭಾರ ಅಧ್ಯಕ್ಷೆ ಜ್ಯೋತಿ, ಸದಸ್ಯ ಶಿವಲಿಂಗಯ್ಯ,ಜೆಡಿಎಸ್ ಮುಖಂಡ ಹಾಗೂ ಪ್ರಥಮ ದರ್ಜೆ ಗುತ್ತಿಗೆದಾರ ಹೆಚ್.ಡಿ.ಬಾಲರಾಜು,ಮುಖಂಡರಾದ ಕೆಂಚನಹಳ್ಳಿ ಪುಟ್ಟಸ್ವಾಮಿ, ಸಿದ್ದೇಗೌಡ, ಡೈರಿ ಅಧ್ಯಕ್ಷರಾದ ಸ್ವಾಮಿ,ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರಾದ ನಾಗರಾಜು, ನಿಂಗೇಗೌಡ,ಬಸವರಾಜು,ಚಂದ್ರ ಶೇಖರ್, ಪಟೇಲ್ ಆನಂದ್ ಸೇರಿದಂತೆ ಇತರರು ಭಾಗವಹಿಸಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!