Sunday, May 19, 2024

ಪ್ರಾಯೋಗಿಕ ಆವೃತ್ತಿ

ಮಂಡ್ಯ| ‘ಕೈ’ ಅಭ್ಯರ್ಥಿ ಸ್ಟಾರ್ ಚಂದ್ರುಗೆ ವೀರಶೈವ- ಲಿಂಗಾಯತರ ಬೆಂಬಲ: ಸುಂಡಹಳ್ಳಿ ಸೋಮಶೇಖರ್

ಮಂಡ್ಯ ಜಿಲ್ಲೆ ವೀರಶೈವ ಲಿಂಗಾಯಿತ ಸಮುದಾಯವು ಜಿಲ್ಲೆಯಲ್ಲಿ ಸರಿ ಸಮಾರು 3 ಲಕ್ಷಕ್ಕೂ ಅಧಿಕ ಮಂದಿ ಲಿಂಗಾಯಿತ ವೀರಶೈವ ಸಮುದಾಯವಿದ್ದರೂ ರಾಜಕೀಯ ಧಾರ್ಮಿಕ, ಸಾಮಾಜಿಕ ಶೈಕ್ಷಣಿಕ ಆರ್ಥಿಕ ಕ್ಷೇತ್ರದಲ್ಲಿ ನಿರೀಕ್ಷಿತ ಪ್ರಗತಿ ಕಾಣದೆ ಹಿನ್ನೆಡೆ ಅನುಭವಿಸುತ್ತಿರುವ ಹಿನ್ನೆಲೆಯಲ್ಲಿ ಬಿಜೆಪಿ ಪಕ್ಷವನ್ನು ತೊರೆದು ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅವರ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷದ ಸೇರ್ಪಡೆಯಾಗಲಿದ್ದೇನೆಂದು ಬಿಜೆಪಿ ಮುಖಂಡ ಹಾಗೂ ಮಂಡ್ಯ ಜಿಲ್ಲಾ ವೀರಶೈವ ಲಿಂಗಾಯತರ ವೇದಿಕೆ ಜಿಲ್ಲಾಧ್ಯಕ್ಷ ಸುಂಡಹಳ್ಳಿ ಸೋಮಶೇಖರ್ ತಿಳಿಸಿದರು.

ಮಂಡ್ಯದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನನ್ನೊಂದಿಗೆ ವೀರಶೈವ- ಲಿಂಗಾಯತರ ನೂರಾರು ಮುಖಂಡರು ಸ್ನೇಹಿತರು, ಬಿಜೆಪಿ ಪಕ್ಷವನ್ನು ತೊರೆದು ಸ್ನೇಹಜೀವಿ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ನೇತೃತ್ವದಲ್ಲಿ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಗೆ ಸೇರ್ಪಡೆಯಾಗುತ್ತಿದ್ದೇವೆ ಎಂದು ತಿಳಿಸಿದರು.

ವೀರಶೈವ- ಲಿಂಗಾಯತರ ಸಮಾವೇಶ

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ವೆಂಕಟರಮಣಗೌಡ (ಸ್ಟಾರ್ ಚಂದ್ರು) ರವರ ಗೆಲುವಿಗೆ ಶ್ರಮಿಸಲು ಸಮಾಜದ ಮುಖಂಡರು ತೀರ್ಮಾನಿಸಿದ್ದೇವೆ. ಶೀಘ್ರದಲ್ಲೇ ರಾಜ್ಯ ಮತ್ತು ಜಿಲ್ಲೆಯ ವೀರಶೈವ ಮುಖಂಡರ ಬೃಹತ್ ಕಾಂಗ್ರೆಸ್ ಸ್ವಾಭಿಮಾನಿ ವೀರಶೈವ-ಲಿಂಗಾಯಿತರ ಸೇರ್ಪಡೆ ಸಮಾವೇಶವನ್ನು ಮಂಡ್ಯದಲ್ಲಿ ನಡೆಸಲಿದ್ದು, ಈ ಸಮಾರಂಭದಲ್ಲಿ ಜಿಲ್ಲೆಯ 300 ಕ್ಕೂ ಹೆಚ್ಚು ಗ್ರಾಮ ಪಂಚಾಯಿತಿ ಸದಸ್ಯರು, ಸೇವಾ ಸಹಕಾರ ಸಂಘದ ನಿರ್ದೇಶಕರು, ಹಾಲು ಉತ್ಪಾದಕ ಸಹಕಾರ ಸಂಘದ ನಿರ್ದೇಶಕರು, ಜಿಲ್ಲೆಯ ಹಲವು ವೀರಶೈವ-ಲಿಂಗಾಯಿತ ಒಕ್ಕೂಟಗಳ ಸದಸ್ಯರು ಮತ್ತು ಮುಖಂಡರು, ಮಹಿಳಾ ವೀರಶೈವ-ಲಿಂಗಾಯಿತ ಸಂಘಟನೆಗಳ ಸದಸ್ಯರುಗಳು ಈ ಸಮಾವೇಶದಲ್ಲಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿ ಸೇರ್ಪಡೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.

ಸ್ಟಾರ್ ಚಂದ್ರು ಬೆಂಬಲಿಸಲು ನಿರ್ಧಾರ

ಜಿಲ್ಲೆಯ ವೀರಶೈವ-ಲಿಂಗಾಯಿತ ಮತದಾರರು ಈ ಬಾರಿ ನಡೆಯುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ವೆಂಕಟರಮಣೇಗೌಡ (ಸ್ಟಾರ್ ಚಂದ್ರ) ರವರಿಗೆ ಮತ ನೀಡುವ ಮೂಲಕ ಬೆಂಬಲಿಸುವ ನಿರ್ಣಯವನ್ನು ಈ ಸಮಾವೇಶದಲ್ಲಿ ತೆಗೆದುಕೊಳ್ಳಲಾಗುತ್ತದೆ ಎಂದರು.

ಬಸವಣ್ಣನವರ ಅಶ್ವರೂಢ ಪುತ್ತಳಿ ಸ್ಥಾಪನೆ ಆಗ್ರಹ 

ಮಂಡ್ಯ ಜಿಲ್ಲೆಯ ಜಿಲ್ಲಾಧಿಕಾರಿ ಕಚೇರಿ ಮುಂದೆ ಇರುವ ಉದ್ಯಾನವನದಲ್ಲಿ ವಿಶ್ವಗುರು ಬಸವಣ್ಣನವರ ಅಶ್ವರೂಢ ಪುತ್ತಳಿ ಸ್ಥಾಪನೆ, ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿ ಬಸವ ಭವನ ನಿರ್ಮಾಣ ಮತ್ತು ಕಡ್ಡಾಯವಾಗಿ ಸರ್ಕಾರಿ ಆದೇಶದಂತೆ ಬಸವಣ್ಣನ ಭಾವಚಿತ್ರ ಅಳವಡಿಸಲು ಕ್ರಮವಹಿಸಬೇಕು. ನಗರ ಪಟ್ಟಣ, ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪ್ರಮುಖ ರಸ್ತೆ, ಉದ್ಯಾನವನ ಹಾಗು ವೃತ್ತಗಳಿಗೆ ಬಸವೇಶ್ವರರ ಹೆಸರನ್ನು ನಾಮಕರಣ ಮಾಡಬೇಕು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಬಸವೇಶ್ವರರ ನಾಟಕ ಆಯೋಜಿಸಲು ಕ್ರಮ ಕೈಗೊಳ್ಳಬೇಕು. 12 ನೇ ಶತಮಾನದ ಶರಣರ ವಚನಗಳ ಪುಸ್ತಕಗಳನ್ನು ಮುದ್ರಿಸಿ ಉಚಿತ ಪ್ರಸಾರ ಮಾಡಬೆಕು, ಸ್ವಯಂ ಉದ್ಯೋಗ ಸೃಷ್ಟಿಸಲು ಕಾಯಕ ಯೋಗಿ ಯೋಜನೆ ಮೂಲಕ ವೃತ್ತಿ ತರಬೇತಿ ಕೇಂದ್ರ ತೆರೆಯಬೇಕೆಂದು ಸರ್ಕಾರಕ್ಕೆ ಒತ್ತಾಯ ಮಾಡುತ್ತೇವೆ ಎಂದರು.

ನಿರ್ಣಾಯಕ ಶಕ್ತಿ

2024 ರ ಲೋಕಸಭಾ ಚುನಾವಣೆಯಲ್ಲಿಯೂ ಕೂಡ ರಾಜ್ಯ ಮತ್ತು ಜಿಲ್ಲೆ ರಾಜಕಾರಣದಲ್ಲಿ ಲಿಂಗಾಯತ ಸಮಾಜ ನಿರ್ಣಾಯಕ ಶಕ್ತಿ ಆಗಿದೆ. ಮಂಡ್ಯ ಜಿಲ್ಲೆಯಲ್ಲಿ ಬಹುಸಂಖ್ಯೆಯಲ್ಲಿ ಲಿಂಗಾಯತರು ಇದ್ದರೂ ರಾಜಕೀಯವಾಗಿ ತೀವ್ರ ಹಿನ್ನಡೆ ಅನುಭವಿಸುತ್ತಿರುವುದು ದುರಂತವಾಗಿದೆ. ಸ್ವಾತಂತ್ರ್ಯ ಬಂದು 75 ವರ್ಷ ಕಳೆದರೂ ಮಂಡ್ಯ ಜಿಲ್ಲೆಯಲ್ಲಿ ಎಲ್ಲಾ ರಾಜಕೀಯ ಪಕ್ಷಗಳು ವೀರಶೈವ-ಲಿಂಗಾಯಿತ ಮತದಾರರನ್ನು ಓಟ್
ಬ್ಯಾಂಕ್ ಮಾಡಿಕೊಂಡು ತಮ್ಮ ಅಧಿಕಾರ ಗದ್ದುಗೆಯನ್ನು ಭದ್ರಪಡಿಸಿಕೊಳ್ಳುವುದನ್ನು ಬಿಟ್ಟರೆ ಸಮುದಾಯದ ಪರವಾಗಿ ಯಾವ ಪಕ್ಷದ ನಾಯಕರು ಧ್ವನಿಯಾಗಲಿಲ್ಲ. ಈ ಬಾರಿ ಅಂತಹ ರಾಜಕೀಯ ತಂತ್ರ-ಕುತಂತ್ರಗಳಿಗೆ ಬಲಿಯಾಗದೆ ಮಂಡ್ಯ ಜಿಲ್ಲೆಯ ವೀರಶೈವ-ಲಿಂಗಾಯಿತ ಮತದಾರರು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಬೇಕೆಂದು ಮನವಿ ಮಾಡಿದರು.

ಗೋಷ್ಠಿಯಲ್ಲಿ ಸಮಾಜದ ಮುಖಂಡ ಜಯಶಂಕರಪ್ಪ ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!