Saturday, May 18, 2024

ಪ್ರಾಯೋಗಿಕ ಆವೃತ್ತಿ

ಬಸವಕಲ್ಯಾಣದಲ್ಲಿ ಸ್ವಾಭಿಮಾನಿ ಕಲ್ಯಾಣಪರ್ವ: ಡಾ.ಚನ್ನಬಸವಾನಂದ ಸ್ವಾಮೀಜಿ

ವಿಶ್ವಗುರು ಬಸವಣ್ಣನವರ ಕ್ರಾಂತಿಯ ಶರಣಭೂಮಿ ಬೀದರ್ ಜಿಲ್ಲೆಯ ಬಸವಕಲ್ಯಾಣದಲ್ಲಿ ಅಕ್ಟೋಬರ್ 21 ಹಾಗೂ 22ರಂದು ಎರಡು ದಿನಗಳ ಕಾಲ ಬಸವಭಕ್ತರ ಸ್ವಾಭಿಮಾನಿ ಕಲ್ಯಾಣಪರ್ವ-2023 ಅರ್ಥಪೂರ್ಣವಾಗಿ ನಡೆಯಲಿದೆ ಎಂದು ಸ್ವಾಭಿಮಾನಿ ಕಲ್ಯಾಣಪರ್ವ ಉತ್ಸವ ಸಮಿತಿ ಅಧ್ಯಕ್ಷ ಡಾ.ಚನ್ನಬಸವಾನಂದ ಸ್ವಾಮೀಜಿ ತಿಳಿಸಿದರು.

ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಂಡ್ಯ ಜಿಲ್ಲೆಯ ಶರಣರು ಪ್ರತಿವರ್ಷದಂತೆ ಈ ಬಾರಿಯೂ ಹೆಚ್ಚಿನ ಸಂಖ್ಯೆಯಲ್ಲಿ ಸ್ವಾಭಿಮಾನಿ ಕಲ್ಯಾಣಪರ್ವದಲ್ಲಿ ಪಾಲ್ಗೊಳ್ಳುವ ಮೂಲಕ ಶರಣರ ತತ್ವವನ್ನು ಅರಿತು ಗುರು ಬಸವಣ್ಣನವರ ವಿಚಾರಧಾರೆಗಳನ್ನು ಪಸರಿಸುವ ಕಾಯಕದಲ್ಲಿ ನಿರತರಾಗಬೇಕು ಎಂದು ಸಲಹೆ ನೀಡಿದರು.

ಮಹಾಮಾನವತಾವಾದಿ, ಲಿಂಗಾಯತ ಧರ್ಮದ ಸಂಸ್ಥಾಪಕರಾದ ಧರ್ಮಗುರು ಬಸವಣ್ಣನವರ ಭಕ್ತರೆಲ್ಲರೂ ವರ್ಷಕ್ಕೊಮ್ಮೆ ಸಂಗಮವಾಗುವ ಕಲ್ಯಾಣ ಪರ್ವ ಕಾರ್ಯಕ್ರಮಕ್ಕೆ ತೆಲಂಗಾಣ, ಕೇರಳ, ಮಹರಾಷ್ಟ್ರ, ತಮಿಳುನಾಡು, ಒರಿಸ್ಸಾ ಸೇರಿದಂತೆ ದೇಶದ ವಿವಿಧ ಜಿಲ್ಲೆಗಳಿಂದ ಶರಣ ಬಂಧುಗಳು ಆಗಮಿಸಲಿದ್ದಾರೆ. ರಾಜ್ಯದ ವಿವಿಧ ಜಿಲ್ಲೆಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಶರಣ ಬಂಧುಗಳು ಪಾಲ್ಗೊಳ್ಳುವ ಕಲ್ಯಾಣಪರ್ವದಲ್ಲಿ ಲಿಂಗಾಯತ ಸ್ವತಂತ್ರ ಧರ್ಮದ ಮಾನ್ಯತೆ ಸೇರಿದಂತೆ ಹಲವಾರು ವಿಷಯಗಳನ್ನು ಚರ್ಚಿಸಲಾಗುವುದು ಎಂದರು.

12ನೇ ಶತಮಾನದಲ್ಲಿ ವಿಶ್ವಗುರು ಬಸವಣ್ಣವರ ಕಾರ್ಯಕ್ಷೇತ್ರವಾಗಿದ್ದ ಬಸವಕಲ್ಯಾಣದ ದರ್ಶನದಿಂದ ಪ್ರತಿಯೊಬ್ಬರಲ್ಲೂ ಧಾರ್ಮಿಕ, ಸಾಮಾಜಿಕ ಸಿದ್ಧಿಯಾಗುತ್ತದೆ. ಈ ನಿಟ್ಟಿನಲ್ಲಿ ಬದಲಾವಣೆಯ ಜೊತೆಗೆ ಸಮಾನತಾ ಸಮಾಜವನ್ನು ಕಟ್ಟುವ ಸಂಕಲ್ಪ ಲಿಂಗೈಕ್ಯ ಪೂಜ್ಯ ಶ್ರೀಲಿಂಗಾನಂದಮಹಾಸ್ವಾಮೀಜಿ ಹಾಗೂ ಪೂಜ್ಯ ಮಹಾಜಗದ್ಗುರು ಮಾತೆ ಮಹಾದೇವಿಯವರು ಹಾಕಿಕೊಟ್ಟ ಆದರ್ಶಗಳನ್ನು ನಾಡಿನಾದ್ಯಂತ ಪಸರಿಸುವ ಕಾಯಕ ಕಲ್ಯಾಣಪರ್ವದಲ್ಲಿ ನಡೆಯಲಿದೆ. ನಾಡಿನ ವಿವಿಧ ಜಿಲ್ಲೆಗಳಿಂದ ಲಕ್ಷಾಂತರ ಮಂದಿ ಕಲ್ಯಾಣಪರ್ವದಲ್ಲಿ ಪಾಲ್ಗೊಳ್ಳಲಿದ್ದು ಆಗಮಿಸುವ ಎಲ್ಲಾ ಶರಣರಿಗೂ ಪ್ರಸಾದ, ವಸತಿ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ ಎಂದು ತಿಳಿಸಿದರು.

ಜೀವ ಬೆದರಿಕೆ ಹಾಕಿದವರನ್ನು ಬಂಧಿಸಿ

ಬಸವತತ್ವ ಪ್ರಚಾರಕ ನಿಜಗುಣಾನಂದ ಶರಣರಿಗೆ ಮೇಲಿಂದ ಮೇಲೆ ಜೀವ ಬೆದರಿಕೆ ಹಾಕುತ್ತಿರುವ ಕಿಡಿಗೇಡಿಗಳನ್ನು ಕೂಡಲೇ ಬಂಧಿಸಬೇಕು ಹಾಗೂ ಶರಣರಿಗೆ ರಕ್ಷಣೆ ಒದಗಿಸಬೇಕೆಂದು ಸ್ವಾಮೀಜಿ ಅವರು  ಆಗ್ರಹಿಸಿದರು.

ಗೋಷ್ಠಿಯಲ್ಲಿ ಲಿಂಗಾಯತ ಮಹಾಸಭಾ ಟ್ರಸ್ಟ್ ಅಧ್ಯಕ್ಷ ಎಂ.ಎಸ್.ಮಂಜುನಾಥ್, ವೀರಶೈವ ಲಿಂಗಾಯತ ವಿದ್ಯಾರ್ಥಿ ವೇದಿಕೆಯ ರಾಜ್ಯಾಧ್ಯಕ್ಷ ಜೀವನ್, ಮುಖಂಡರಾದ ತ್ರಿಭುವನ್, ಮಲ್ಲಿಕಾರ್ಜುನ ಹಾಗೂ ಸತ್ಯಾದೇವಿ ಮತ್ತಿತರರು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!