Saturday, May 4, 2024

ಪ್ರಾಯೋಗಿಕ ಆವೃತ್ತಿ

ಸರ್ಕಾರಿ ಭೂಮಿ ಅಕ್ರಮ ಪರಭಾರೆ:ತನಿಖೆಗೆ ಪಿ.ಎಂ.ನರೇಂದ್ರಸ್ವಾಮಿ ಆಗ್ರಹ


  • 2004 ರಲ್ಲಿ ಪ್ರಾರಂಭವಾದ ಭೂ ಅಕ್ರಮಗಳ ದಂಧೆ ನಿರಾತಂಕ

  • ತಹಶೀಲ್ದಾರ್, ಸಬ್ ರಿಜಿಸ್ಟ್ರಾರ್,ಜನಪ್ರತಿನಿಧಿಗಳು ಸೇರಿದಂತೆ ಯಾರೆಲ್ಲ ಶಾಮೀಲಾಗಿದ್ದಾರೆಂಬುದು ಎಂಬುದು ಗೊತ್ತಿದೆ.
  • ನನ್ನ ವಿರುದ್ಧ ಅಕ್ರಮ ದಂಧೆಕೋರರು ಕೋಟ್ಯಾಂತರ ಹಣ ಖರ್ಚು ಮಾಡಲು ಸಿದ್ಧರಾಗಿ ನಿಂತಿದ್ದಾರೆ
  • ಮಳವಳ್ಳಿ ತಾಲ್ಲೂಕು ಇಂದು ಅಕ್ರಮ ದಂಧೆಗಳ ಆಗರ

ಮಳವಳ್ಳಿ ತಾಲ್ಲೂಕಿನಲ್ಲಿ ಜನಪ್ರತಿನಿಧಿಗಳು,ಅಧಿಕಾರಿಗಳು ಶಾಮೀಲಾಗಿ ನೂರಾರು ಕೋಟಿ ಬೆಲೆ ಬಾಳುವ ಪೈಕಿ ಆರ್‌ಟಿಸಿಗಳ ಸರ್ಕಾರಿ ಗೋಮಾಳ ಭೂಮಿಯನ್ನು ಅಕ್ರಮವಾಗಿ ಪರಭಾರೆ ಮಾಡಿದ್ದು, ಸರ್ಕಾರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಕೆಪಿಸಿಸಿ ಉಪಾಧ್ಯಕ್ಷ ಪಿ.ಎಂ. ನರೇಂದ್ರಸ್ವಾಮಿ ಒತ್ತಾಯಿಸಿದರು.

ಮಳವಳ್ಳಿ ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಸರ್ಕಾರಿ ಭೂಮಿ ಅಕ್ರಮ ಪರಭಾರೆ ಬಗ್ಗೆ ಮಾತನಾಡಿದ ಅವರು, 2004 ರಲ್ಲಿ ಪ್ರಾರಂಭವಾದ ಭೂ ಅಕ್ರಮಗಳ ದಂಧೆ ನಿರಾತಂಕವಾಗಿ ಮುಂದುವರಿದಿದೆ.ಅದರಲ್ಲೂ ಪೈಕಿ ಆರ್ ಟಿ ಸಿಯಲ್ಲಿರುವ ಸರ್ಕಾರಿ ಗೋಮಾಳವನ್ನು ಪಟ್ಟಭದ್ರರು ಕಬಳಿಸಿದ್ದಾರೆ.ಇದಕ್ಕೆ ತಹಶೀಲ್ದಾರ್, ಸಬ್ ರಿಜಿಸ್ಟ್ರಾರ್,ಜನಪ್ರತಿನಿಧಿಗಳು ಸೇರಿದಂತೆ ಯಾರೆಲ್ಲ ಶಾಮೀಲಾಗಿದ್ದಾರೆಂಬುದು ಎಂಬುದು ಗೊತ್ತಿದೆ.ಸರ್ಕಾರ ಕೂಡಲೇ ತನಿಖೆಗೆ ಸೂಚನೆ ನೀಡಬೇಕೆಂದರು.

ನನ್ನ ಅಧಿಕಾರದ ಅವಧಿಯಲ್ಲಿ ಖಾತೆ ಮಾಡಿಸಿಕೊಳ್ಳಲಾಗದೇ ಸುಮ್ಮನಿದ್ದ ಕೆಲವರು ಅಧಿಕಾರ ಬದಲಾವಣೆಯಾಗುತ್ತಿದಂತೆ ಅಕ್ರಮವಾಗಿ ಖಾತೆ ಮಾಡಿಸಿಕೊಳ್ಳಲು ಆರಂಭಿಸಿದ್ದಾರೆ‌‌.ಮಳವಳ್ಳಿಯ ಬಡ ವರ್ಗದ ಜನರಿಗೆ ಸಿಗದ ಭೂಮಿ ಒಂದು ವರ್ಗಕ್ಕೆ ಇನ್ನೊಂದು ರೂಪದಲ್ಲಿ ಮಂಜೂರಾಗಿ ರಿಜಿಸ್ಟರ್ ಆಗುತ್ತಿದೆ, ಹೆಬ್ಬಣಿಯ ಸರ್ವೆ ನಂ 56, ನೆಟ್ಕಲ್ ಸರ್ವೆ ನಂ. 76,ಬೆಳಕವಾಡಿ ಸರ್ವೆ ನಂ.350, ಮಂಚನಹಳ್ಳಿ ಸರ್ವೆ ನಂ. 26, ಬಾಣಸಮುದ್ರ 104, ದಾಸನದೊಡ್ಡಿ ಸರ್ವೆ ನಂ. 27 ಸೇರಿದಂತೆ ಇನ್ನೂ ಹೆಚ್ಚಿನ ಸರ್ವೆ ನಂಬರ್‌ಗಳಲ್ಲಿ ಇರುವ ಪೈಕಿ ಆರ್‌ಟಿಸಿ ಜಮೀನುಗಳನ್ನು ನಿಯಮಬಾಹಿರವಾಗಿ ಪರಭಾರೆ ಮಾಡಲಾಗಿದೆ.ಇದರಲ್ಲಿ ತಹಶೀಲ್ದಾರ್ ಮತ್ತು ಸಬ್‌ರಿಜಿಸ್ಟರ್ ಅಧಿಕಾರಿಗಳು ಬಾಗಿಯಾಗಿದ್ದಾರೆಂದು ಆರೋಪಿಸಿದರು.

ಮೊದಲು ತಹಶೀಲ್ದಾರ್ ಅಕ್ರಮ ಮಾಡಿದ ನಂತರವೇ ಸಬ್ ರಿಜಿಸ್ಟರ್ ಅಕ್ರಮ ಮಾಡಲು ಸಾಧ್ಯ. ಮೊದಲನೇ ಖಾತೆದಾರನಿಗೆ ಎಷ್ಟು ಭೂಮಿ ಇದೆ, ಖಾತೆದಾರ ಯಾರಿಗೆ ಮಾರಾಟ ಮಾಡಿದ್ದಾರೆ ಎಂಬ ಬಗ್ಗೆ ಪೂರ್ಣ ಪ್ರಮಾಣದಲ್ಲಿ ತನಿಖೆ ನಡೆಯಬೇಕು.ಇವರೆಲ್ಲ ಯಾರ ಕೃಪಾಪೋಷಿತ ನಾಟಕ ಮಂಡಳಿಯ ಸದಸ್ಯರು ಎಂಬುದನ್ನು ಸಿಬಿಐ ತನಿಖೆಯಿಂದ ಬೆಳಕಿಗೆ ಬರಬೇಕಿದೆ ಎಂದರು.

ಇದನ್ನೆಲ್ಲಾ ಪ್ರಶ್ನೆ ಮಾಡುತ್ತಿರುವ ನನ್ನ ಮೇಲೆ ಗೂಂಡಾಗಳು,ಅಕ್ರಮ ದಂಧೆಕೋರರು ನನ್ನ ಮೇಲೆ ಕಣ್ಣಿಟ್ಟಿದ್ದಾರೆ. ಮುಂದಿನ ಚುನಾವಣೆಯಲ್ಲಿ ನನ್ನ ವಿರುದ್ಧ ಅಕ್ರಮ ದಂಧೆಕೋರರು ಕೋಟ್ಯಾಂತರ ಹಣ ಖರ್ಚು ಮಾಡಲು ಸಿದ್ಧರಾಗಿ ನಿಂತಿದ್ದಾರೆ. ಜನರ ಪ್ರೀತಿ, ವಿಶ್ವಾಸ ಇರುವವರಿಗೆ ಯಾರೂ ಏನೂ ಮಾಡಲು ಸಾಧ್ಯವಿಲ್ಲ ಎಂದರು.

ಅಕ್ರಮ ದಂಧೆಗಳ ಆಗರ
ಮಳವಳ್ಳಿ ತಾಲ್ಲೂಕು ಇಂದು ಅಕ್ರಮ ದಂಧೆಗಳ ಆಗರವಾಗಿದೆ.ಮಳವಳ್ಳಿ ಯಲ್ಲಿ ಏನೆಲ್ಲಾ ಅಕ್ರಮಗಳು ನಡೆಯುತ್ತಿವೆ ಎಂಬ ಬಗ್ಗೆ ನೀವೇ ಹಾಕಿಸಿಕೊಂಡಿರುವ ಪೋಲಿಸ್ ಅಧಿಕಾರಿಗಳಿಗೆ ಚೆನ್ನಾಗಿ ಗೊತ್ತಿದೆ. ಗಾಂಜಾ,ಅಕ್ರಮ ಮದ್ಯ ಮಾರಾಟ,ವೇಶ್ಯಾವಾಟಿಕೆ ಮೊದಲಾದ ಅಕ್ರಮ ದಂಧೆಗಳು ನಡೆಯುತ್ತಿದ್ದು ತಾಲ್ಲೂಕಿನಲ್ಲಿ ಅರಾಜಕತೆ,ದುರಾಡಳಿತ ನಡೆಯುತ್ತಿದೆ. ಕರೋನಾ ಸಂದರ್ಭದಲ್ಲಿ ಮಳವಳ್ಳಿ ಲಾಡ್ಜ್ ಗಳಲ್ಲಿ ನಡೆದ ದಂಧೆಗಳ ಬಗ್ಗೆ ಎಷ್ಟು ಕೇಸು ದಾಖಲಾಗಿದೆ,ಕಳೆದ ಐದು ವರ್ಷಗಳಲ್ಲಿ ಅಟ್ರಾಸಿಟಿ ಕೇಸು ಎಷ್ಟು ದಾಖಲಾಗಿದೆ ಎಂಬ ಬಗ್ಗೆ ಮಾಹಿತಿ ತಿಳಿದರೆ ಗೊತ್ತಾಗುತ್ತದೆ,ಮಳವಳ್ಳಿಯಲ್ಲಿ ಅರಾಜಕತೆ ಎಷ್ಟಿದೆ ಎಂದು.ಜನರ ಹಿತದೃಷ್ಟಿಯಿಂದ ಪ್ರಶ್ನೆ ಮಾಡುತ್ತಿದ್ದೇನೆ ಎಂದರು.

ಸದನದಲ್ಲಿ ತನಿಖೆಗೆ ಒತ್ತಾಯಿಸಲಿ 24*7 ಕುಡಿಯುವ ನೀರಿನ ಯೋಜನೆಗೆ 2018ರಲ್ಲಿ ಗುದ್ದಲಿ ಪೂಜೆ ಮಾಡಲಾಗಿತ್ತು, ಈಗಿನ ಶಾಸಕರು ಅಧಿಕಾರ ಪಡೆದ ನಂತರ ಕಾಮಗಾರಿ ಆರಂಭಗೊಂಡಿದೆ, ಕುಡಿಯುವ ನೀರಿನ ಯೋಜನೆ ಬೋಗಸ್ ಎಂದು ಹೇಳುವ ಶಾಸಕರು ಸದನದಲ್ಲಿ ತನಿಖೆಗೆ ಒತ್ತಾಯಿಸಬೇಕೆಂದು ಆಗ್ರಹಿಸಿದರು.

ಪಿಎಂಜಿವೈಎಸ್ ಯೋಜನೆಯಡಿ ಯಾರೇ ಶಾಸಕರು ಇದ್ದರೂ ಇಂತಿಷ್ಟು ಅನುದಾನ ಪ್ರತಿವರ್ಷವೂ ಬಿಡುಗಡೆಯಾಗುತ್ತದೆ, ಇದನ್ನು ಹೊರತುಪಡಿಸಿ ಐದು ಬಜೆಟ್‌ನಲ್ಲಿ ಮಳವಳ್ಳಿ ತಾಲ್ಲೂಕಿಗೆ
ಯಾವ ಯೋಜನೆಗಳನ್ನು ತಂದಿದ್ದಾರೆ ಎಂಬುದನ್ನು ಜನರ ಮುಂದಿಡಲಿ. ಮೊದಲೆರಡು ಬಜೆಟ್‌ನಲ್ಲಿ ಅವರ ಪಕ್ಷದವರೇ ಮುಖ್ಯಮಂತ್ರಿಯಾದರೂ ಒಂದು ಯೋಜನೆಯನ್ನು ಅನುಷ್ಠಾನಗೊಳಿಸಲಿಲ್ಲ, ಹಲಗೂರಿಗೆ ಹನಿ ನೀರಾವರಿ ಯೋಜನೆಯನ್ನು ತರುತ್ತಾರೆಂದು ಹೇಳಿ ಹಲಗೂರು ರೈತರು ಪಟಾಕಿ ಸಿಡಿಸಿ ಸಹಿ ವಿತರಿಸಿದರು.ಆ ಯೋಜನೆ ಏನಾಯಿತು, ಮಾತೇ ಸಾಧನೆಯಾಗಬಾರದು, ಸಾಧನೆ ಮಾತಾಗಬೇಕು, ಎಂದು ಶಾಸಕ ಡಾ.ಅನ್ನದಾನಿ ಅವರನ್ನು ಪ್ರಶ್ನಿಸಿದರು.

ಎಷ್ಟು ಕೋಟಿಯ ಬಂಗಲೆ
ನಮ್ಮ ಕುಟುಂಬದ ಬಹುತೇಕ ಸದಸ್ಯರು ಉನ್ನತ ಉದ್ಯೋಗದಲ್ಲಿರುವುದರ ಜೊತೆಗೆ ಜಮೀನನ್ನು ಹೊಂದಿದ್ದೇವೆ.ನಮ್ಮ ತಾತನ ಆಸ್ತಿ ಇನ್ನೂ ಭಾಗ ಆಗಿಲ್ಲ.ತಾನು ಬಡವ ಸೋತರೆ ಸತ್ತೇ ಹೋಗುತ್ತೇನೆ
ಎಂದು ಹೇಳಿಕೊಂಡಿದ್ದ ಈತ ಶಾಸಕರಾದ ನಂತರ ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿ ಎಷ್ಟು ಕೋಟಿ ಕೊಟ್ಟು ಬಂಗಲೆ ಖರೀದಿ ಮಾಡಿರುವುದು ಮಳವಳ್ಳಿ ಜನರಿಗೆ ಗೊತ್ತಿದೆ. ರಾಜಕೀಯವಾಗಿ ಟೀಕೆ, ಚರ್ಚೆ ಮಾಡಬೇಕೇ ಹೊರತು, ವೈಯಕ್ತಿಕ ಜೀವನದ ಬಗ್ಗೆ ಮಾತನಾಡುವುದು ಶೋಭೆಯಲ್ಲ ಎಂದು ತಿಳಿಸಿದರು.

ಹಾರ ಹಾಕುವೆ
ಪೈಕಿ ಆರ್ ಟಿಸಿ ಎಷ್ಟು ಮಂದಿ ಹೊರಗಿನವರಿಗೆ ರಿಜಿಸ್ಟರ್ ಮಾಡಲಾಗಿದೆ ಎಂಬ ಬಗ್ಗೆ ಮಾಹಿತಿ ಪಡೆಯಲಿ.ಮಳವಳ್ಳಿಯಲ್ಲಿ ಇಷ್ಟೆಲ್ಲಾ ಅಕ್ರಮ ನಡೆದಿದೆ ಎಂದು ಶಾಸಕರು ಸದನದಲ್ಲಿ ಸಿಬಿಐ ತನಿಖೆಗೆ ಆದೇಶಿಸಿ ಎಂದು ಸರ್ಕಾರವನ್ನು ಒತ್ತಾಯಿಸಿದರೆ,ನಾನೇ ಅವರು ಮಳವಳ್ಳಿಗೆ ಬಂದ ಸಂದರ್ಭದಲ್ಲಿ ಹಾರ ಹಾಕಿ ಸ್ವಾಗತ ಮಾಡುತ್ತೇನೆ ಎಂದರು.

ಸುದ್ದಿಗೋಷ್ಟಿಯಲ್ಲಿ ಮಳವಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ದೇವರಾಜು, ಕೆಪಿಸಿಸಿ ಸದಸ್ಯ ಪುಟ್ಟಸ್ವಾಮಿ, ತಾ.ಪಂ ಉಪಾಧ್ಯಕ್ಷ ಸಿ ಮಾಧು, ತಾ.ಪಂ ಅಧ್ಯಕ್ಷ ನಾಗೇಶ್, ಕೃಷ್ಣಮೂರ್ತಿ ಸೇರಿದಂತೆ ಇತರರು ಇದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!