Saturday, May 18, 2024

ಪ್ರಾಯೋಗಿಕ ಆವೃತ್ತಿ

ಶಾಲಾ ಮಕ್ಕಳಿಗೆ ಭವಿಷ್ಯದ ಸವಾಲು, ಹೊಣೆಗಾರಿಕೆ ತಿಳಿಸಿ- ಚಲುವರಾಯಸ್ವಾಮಿ

ದೇಶದ ಭವಿಷ್ಯದ ಪ್ರಜೆಗಳಾಗಲಿರುವ ಶಾಲಾ ಮಕ್ಕಳ ಶೈಕ್ಷಣಿಕ ಅವಧಿಯಲ್ಲಿ ಮಾನಸಿಕ ಧೈರ್ಯ, ಸಂಸ್ಕಾರ, ಉತ್ತಮ ಶಿಕ್ಷಣ, ಇತಿಹಾಸಕಾರರ ಜೀವನ ಚರಿತ್ರೆ ಭವಿಷ್ಯದ ಸವಾಲು ಹಾಗೂ ಸಮಸ್ಯೆಗಳು ಮತ್ತು ಬದುಕಿನ ಹೊಣೆಗಾರಿಕೆಯನ್ನು ರೂಪಿಸುವ ಬದ್ದತೆಯನ್ನು ಶಿಕ್ಷಕರು ಅಳವಡಿಸಿಕೊಳ್ಳಬೇಕೆಂದು ಜಿಲ್ಲಾ ಉಸ್ತುವಾರಿ ಹಾಗೂ ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಮನವಿ ಮಾಡಿದರು.

ನಗರದ ಅಂಬೇಡ್ಕರ್ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಶಿಕ್ಷಣ ಇಲಾಖೆ ಹಾಗೂ ಶಿಕ್ಷಕರ ಸಂಘಗಳು ಆಯೋಜಿಸಿದ್ದ ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

nudikarnataka.com

ಜನ್ಮ ನೀಡಿದ ತಾಯಿಯ ನಂತರ ಪೂಜ್ಯ ಭಾವನೆಯಿಂದ  ಪ್ರತಿಯೊಬ್ಬರು ಕಾಣುವ ಶಿಕ್ಷಕರು ಸಮಾಜದಲ್ಲಿ ಶ್ರೇಷ್ಠ ಗೌರವವನ್ನು ಹೊಂದಿದ್ದಾರೆಂದರು. ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜಯಂತಿಯನ್ನು ಶಿಕ್ಷಕರ ದಿನಾಚರಣೆಯಾಗಿ ಆಚರಿಸುವ ಸುಯೋಗ ಲಭಿಸಿರುವುದು, ಅವರ ಕರ್ತವ್ಯ ನಿಷ್ಠೆ ಹಾಗೂ ಪಾಂಡಿತ್ಯದಿಂದ ಎಂಬುದನ್ನು ನಾವೆಲ್ಲರೂ ಅರಿತುಕೊಳ್ಳಬೇಕೆಂದರು.

ಶಿವೈಕ್ಯ ಡಾ.ಶಿವಕುಮಾರಸ್ವಾಮೀಜಿಗಳು ನನ್ನ ಶಿಕ್ಷಣಾವಧಿಯಲ್ಲಿ ಉತ್ತಮ ಸಂಸ್ಕಾರ ಹಾಗೂ ಹೊಣೆಗಾರಿಕೆಯ ಜೀವನ ನಿರ್ವಹಣೆ ಮಾಡುವ ಬದುಕಿನ ಪಾಠವನ್ನು ಮನನ ಮಾಡಿಸಿದ್ದರು. ಇದು ಪುಣ್ಯವೆಂದು ಸ್ಮರಿಸಿದರು.

ಸಮಾಜದಲ್ಲಿ ಶಿಕ್ಷಕ ವೃಂದಕ್ಕೆ ಅಪಾರ ಗೌರವಿದ್ದು, ಹಿಂದಿನ ಶಿಕ್ಷಕರಂತೆ ಪ್ರಾಮಾಣಿಕತೆ, ಬದ್ದತೆಯಿಂದ ಮಕ್ಕಳ ವ್ಯಕ್ತಿತ್ವ ವಿಕಸನಕ್ಕೆ ಇಂದಿನ ಶಿಕ್ಷಕರು ಕಾಳಜಿ ತೋರಬೇಕು. ಸರ್ಕಾರಿ ಶಾಲಾ ಅವಧಿ ಪೂರೈಸುವ ಧಾವಂತ ಬಿಟ್ಟು ಭವಿಷ್ಯದ ಪ್ರಜೆಗಳಾಗಿ ರೂಪಿಸುವ ಹೊಣೆಗಾರಿಕೆ ಮೆರೆಯಬೇಕೆಂದರು.

ರಾಜ್ಯ ಸರ್ಕಾರ ಮಕ್ಕಳಲ್ಲಿನ ಅಪೌಷ್ಠಿಕತೆ ನಿವಾರಿಸಲು ಮೊಟ್ಟೆ ಹಾಗೂ ಬಾಳೆಹಣ್ಣು ವಿತರಿಸುವ ಯೋಜನೆ ಜಾರಿಗೊಳಿಸಿದ್ದು, ಪ್ರಸಕ್ತ ವರ್ಷ 10 ಸಾವಿರ ಅತಿಥಿ ಶಿಕ್ಷಕರನ್ನು ನೇಮಿಸಿಕೊಳ್ಳಲು ಮುಂದಾಗಿದ್ದು, ಖಾಲಿ ಇರುವ ಶಿಕ್ಷಕ ಹುದ್ದೆಗಳಿಗೂ ನೇಮಕಾತಿಗೂ ಆದ್ಯತೆ ನೀಡಲಿದ್ದು, ನೌಕರರ ಎನ್.ಪಿ.ಎಸ್ ಬೇಡಿಕೆ ಈಡೇರಿಸಲು ಬದ್ದವಾಗಿದೆ ಎಂದು ತಿಳಿಸಿದರು.

ಮಂಡ್ಯ ಜಿಲ್ಲೆಯ ಶಿಕ್ಷಕರಾದ ಪ್ರಶಾಂತ್ ಹಾಗೂ ರಜಿನಿಯವರು ರಾಜ್ಯ ಮಟ್ಟದ ಶಿಕ್ಷಕ ಪ್ರಶಸ್ತಿಗೆ ಭಾಜನರಾಗಿರುವುದು ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಸರ್ಕಾರ ಶಿಕ್ಷಣ ಕ್ಷೇತ್ರದ ಬಲವರ್ಧನೆಗೆ ಶ್ರಮಿಸಲಿದ್ದು, ಶಿಕ್ಷಕರು ಜವಾಬ್ದಾರಿಯಿಂದ ಮಕ್ಕಳಿಗೆ ಉತ್ತಮ ಶಿಕ್ಷಣ, ಸಂಸ್ಕಾರ ಹಾಗೂ ಹೊಣೆಗಾರಿಕೆ ರೂಪಿಸಲು ಆಸಕ್ತಿ ತೋರಬೇಕೆಂದು ಮನವಿ ಮಾಡಿದರು.

ವೇದಿಕೆಯಲ್ಲಿ ಶಾಸಕ ಪಿ.ರವಿಕುಮಾರ್ ಗಣಿಗ, ಜಿಲ್ಲಾಧಿಕಾರಿ ಡಾ.ಕುಮಾರ್, ಜಿ.ಪಂ. ಸಿಇಓ ತನ್ವೀರ್ ಶೇಖ್ ಆಸಿಫ್, ಪೊಲೀಸ್ ವರಿಷ್ಟಾಧಿಕಾರಿ ಎನ್.ಯತೀಶ್, ಶಿಕ್ಷಣ ತಜ್ಞರಾದ ಪ್ರೊ.ಬಿ.ಜಯಪ್ರಕಾಶ್ ಗೌಡ, ಮೀರಾ ಶಿವಲಿಂಗಯ್ಯ, ರಾಜ್ಯ ಶಿಕ್ಷಕರ ಸಂಘದ ಅಧ್ಯಕ್ಷ ಎನ್.ನಾಗೇಶ್, ಜಿಲ್ಲಾ ಸಂಘದ ಅಧ್ಯಕ್ಷ ಜೆ.ವೈ.ಮಂಜುನಾಥ್ ಕಾರ್ಯದರ್ಶಿ ರವಿ ಶಂಕರ್, ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಹೆಚ್.ಎಸ್.ರವೀಶ್, ಕಾರ್ಯದರ್ಶಿ ಜಯರಾಮು, ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಶಂಭೂಗೌಡ, ಉಪ ನಿರ್ದೇಶಕ ಶಿವರಾಮೇಗೌಡ ಇತರರು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!