Sunday, May 19, 2024

ಪ್ರಾಯೋಗಿಕ ಆವೃತ್ತಿ

ಈದಿನ.ಕಾಮ್‌ ಸಮೀಕ್ಷೆ 7 : ಬಡವರ ಓಟು ಕಾಂಗ್ರೆಸ್‌ಗೆ, ಮೇಲ್ಜಾತಿಗಳ ಹೆಚ್ಚು ಓಟು ಬಿಜೆಪಿಗೆ

ಜನರ ಆರ್ಥಿಕ ಸ್ಥಿತಿ ಉತ್ತಮಗೊಂಡಂತೆ ಜೆಡಿಎಸ್‌ನ ಮತ ಪ್ರಮಾಣದಲ್ಲಿ ಹೆಚ್ಚೇನೂ ಬದಲಾವಣೆ ಆಗುವುದಿಲ್ಲ. ಆದರೆ, ಕಾಂಗ್ರೆಸ್‌ನ ಮತಗಳಿಕೆ ಕಡಿಮೆಯಾಗುತ್ತದೆ; ಬಿಜೆಪಿಯ ಮತಗಳಿಕೆ ಹೆಚ್ಚಾಗುತ್ತಾ ಹೋಗುತ್ತದೆ. ಅಂದರೆ, ಬಡವರು ಹೆಚ್ಚಾಗಿ ಕಾಂಗ್ರೆಸ್‌ಗೆ ಮತ ನೀಡಿದರೆ, ಶ್ರೀಮಂತರು ಹೆಚ್ಚು ಬಿಜೆಪಿಗೆ ಮತ ನೀಡುತ್ತಾರೆ. ಇಷ್ಟಾದರೂ ಯಾವ ಸಮುದಾಯದ ಓಟೂ ಕೂಡ ಯಾವುದೇ ಒಂದು ಪಕ್ಷಕ್ಕೆ ಪರಿಮಿತಗೊಂಡಿಲ್ಲ.

ಈದಿನ.ಕಾಮ್‌ ನಡೆಸಿದ ಕರ್ನಾಟಕದ ವಿಧಾನಸಭಾ ಚುನಾವಣೆ 2023ರ ಅತಿ ದೊಡ್ಡ ಸಮೀಕ್ಷೆಯ ಕಡೆಯ ಹಂತಕ್ಕೆ ಬರುತ್ತಿರುವ ಹಾಗೆ ಕೆಲವು ಸ್ವಾರಸ್ಯಕರ ಸಂಗತಿಗಳು ಗಮನಕ್ಕೆ ಬರುತ್ತಿವೆ. ಇಡೀ ರಾಜ್ಯದಲ್ಲಿ ಒಟ್ಟಾರೆ ಎಲ್ಲ ಮತದಾರರನ್ನು ಸೇರಿಸಿದರೆ ಯಾವ ಪಕ್ಷಕ್ಕೆ ಎಷ್ಟು ಮತ ಮತ್ತು ಎಷ್ಟು ಸೀಟುಗಳು ಎಂಬುದನ್ನು ನಾಳೆ ಕೊಡಲಾಗುವುದು.

ಆದರೆ ಯಾವ ಜಾತಿ ಸಮುದಾಯಗಳು ಯಾವ ರೀತಿ ಓಟು ಹಾಕಲು (ಸಮೀಕ್ಷೆ ನಡೆದ ಅವಧಿಯಲ್ಲಿ) ಯೋಚಿಸಿದ್ದವು, ಆರ್ಥಿಕ ಸ್ಥಿತಿಗನುಗುಣವಾಗಿ (ಅಂದರೆ ಬಡವರು, ಕೆಳ ಮಧ್ಯಮ ವರ್ಗ, ಮಧ್ಯಮ ವರ್ಗ, ಶ್ರೀಮಂತರು) ಯಾರ ಒಲವು ಯಾರ ಕಡೆಗಿದೆ ಎಂಬುದರ ಕುರಿತು ಇಂದು ಸ್ಪಷ್ಟವಾದ ಅಂಕಿ-ಅಂಶಗಳನ್ನು ಮುಂದಿಡಲಾಗಿದೆ.

ಅದರಲ್ಲೂ ಕರ್ನಾಟಕದಲ್ಲಿ ಬಿಜೆಪಿಯು ಲಿಂಗಾಯತರ ಪಕ್ಷವೆಂದೂ, ಜೆಡಿಎಸ್‌ ಅನ್ನು ಒಕ್ಕಲಿಗರ ಪಕ್ಷವೆಂದೂ, ನಿರ್ದಿಷ್ಟ ಜಾತಿಗಳ ಮತಗಳು ಇಂತಹ ಪಕ್ಷಕ್ಕೇ ಹೋಗುತ್ತವೆಂದೂ ಸಾಮಾನ್ಯವಾಗಿ ಭಾವಿಸಲಾಗುತ್ತದೆ. ಅವೆಲ್ಲವೂ ಎಂದೂ ನಿಜವಾಗಿರಲಿಲ್ಲ. ಏಕೆಂದರೆ, ಇಡಿಯಾಗಿ ಅಥವಾ ಶೇ.90ರಷ್ಟು ಯಾವುದೇ ಸಮುದಾಯವೂ ಒಂದು ಪಕ್ಷಕ್ಕೆ ಮತ ಹಾಕುವುದಿಲ್ಲ. ತೀರಾ ಇತ್ತೀಚೆಗೆ ದಲಿತ ಸಮುದಾಯದಲ್ಲಿನ ಒಂದು ವಿಭಾಗ ಕಾಂಗ್ರೆಸ್‌ ಕಡೆಯಿಂದ ಬಿಜೆಪಿ ಕಡೆಗೆ ವಾಲುತ್ತಿದೆ ಎಂಬುದನ್ನು ಹೇಳಲಾಗುತ್ತಿತ್ತು. ಆದರೆ, ನಿರ್ದಿಷ್ಟ ಸರ್ವೆ ಮಾಡಿದಾಗ ಈ ವಿಚಾರದಲ್ಲಿ ಎಲ್ಲರೂ ಕಣ್ತೆರೆದು ನೋಡಬಹುದಾದ ಹಲವಾರು ಸಂಗತಿಗಳು ಗೋಚರವಾಗುತ್ತವೆ. ಅವೆಲ್ಲವನ್ನೂ ಒಂದೊಂದಾಗಿ ಇಲ್ಲಿ ನೀಡಲಾಗಿದೆ.

ಯಾರಿಗೆ ಮತ ಎಂದು ತೀರ್ಮಾನ ಮಾಡಿರದ ಸಮುದಾಯಗಳು

ಸಮೀಕ್ಷೆ ನಡೆದ ಅವಧಿಯಲ್ಲಿ ಶೇ.8ರಷ್ಟು ಮತದಾರರು ಯಾರಿಗೆ ಮತ ಹಾಕಬೇಕೆಂಬುದರ ಕುರಿತು ತೀರ್ಮಾನ ಮಾಡಿರಲಿಲ್ಲ. ಸಮೀಕ್ಷೆಯ ಹೆಚ್ಚಿನ ಭಾಗವು ಸಂಪೂರ್ಣ ಟಿಕೆಟ್‌ ವಿತರಣೆಗಿಂತ ಮುಂಚೆಯೇ ನಡೆದಿತ್ತು ಎಂಬುದನ್ನು ಇಲ್ಲಿ ಗಮನಿಸಬೇಕು. ವಿಶೇಷವೆಂದರೆ ಕೆಲವು ಸಮುದಾಯಗಳು/ಗುಂಪುಗಳಲ್ಲಿ ಈ ಪ್ರಮಾಣ ಮಿಕ್ಕವರಿಗಿಂತ ಹೆಚ್ಚಿದೆ. ಶೇ.8 ಎಂಬುದು ಯಾವುದೇ ಚುನಾವಣೆಯ ಫಲಿತಾಂಶವನ್ನು ಸಂಪೂರ್ಣ ಉಲ್ಟಾ ಮಾಡುವ ಪ್ರಮಾಣದ್ದು. ಹಾಗಾಗಿ ಇಲ್ಲಿ ಎಲ್ಲಾ ರಾಜಕೀಯ ಪಕ್ಷಗಳಿಗೂ ಒಂದು ಸಂದೇಶವಿದೆ.

ರಾಜ್ಯದ ಉಳಿದ ಭಾಗಗಳಲ್ಲಿ ಇನ್ನೂ ತೀರ್ಮಾನ ಮಾಡಿರದ ಮತದಾರರ ಪ್ರಮಾಣ ಎಷ್ಟಿತ್ತೋ, ಬೆಂಗಳೂರು ಮಹಾನಗರದಲ್ಲಿ ಅದರ ಪ್ರಮಾಣ ಎರಡು ಪಟ್ಟು ಹೆಚ್ಚಿತ್ತು. ಮುಂಬಯಿ ಕರ್ನಾಟಕದಲ್ಲೂ ಮತದಾರರು ಸ್ವಲ್ಪ ಹೆಚ್ಚು ಗೊಂದಲದಲ್ಲಿದ್ದಂತೆ ಕಂಡುಬರುತ್ತದೆ. ಸಾಮಾನ್ಯವಾಗಿ ಒಂದಲ್ಲಾ ಒಂದು ಪಕ್ಷದ ಕಡೆಗೆ ವಾಲಿಕೊಂಡಂತೆ ಭಾವಿಸಲಾಗುವ ಸಮುದಾಯಗಳು – ಬ್ರಾಹ್ಮಣರು, ಒಕ್ಕಲಿಗರು, ಮುಸ್ಲಿಮರು – ತಮ್ಮ ಮತ ಯಾರಿಗೆ ಎಂಬುದರ ಕುರಿತು ಸ್ಪಷ್ಟವಾಗಿದ್ದರೆ, ಎಸ್‌ ಟಿ (ಪರಿಶಿಷ್ಟ ಪಂಗಡ) ಮತದಾರರು ಮಿಕ್ಕವರಿಗಿಂತ ಹೆಚ್ಚು ಗೊಂದಲದಲ್ಲಿದ್ದಂತೆ ಕಂಡುಬಂದಿದ್ದಾರೆ.

ಮಹಿಳೆಯರು ಪುರುಷರಿಗಿಂತ ಶೇ.2ರಷ್ಟು ʼತೀರ್ಮಾನ ಮಾಡಿರದʼ ಗುಂಪಿನಲ್ಲಿದ್ದಾರೆ. ಮಹಿಳೆಯರ ಪ್ರಮಾಣ ಒಟ್ಟೂ ಜನಸಂಖ್ಯೆಯ ಅರ್ಧದಷ್ಟಿರುವುದರಿಂದ ಈ ಶೇ.2 ಸಹ ದೊಡ್ಡ ಬದಲಾವಣೆಯನ್ನು ತರಬಲ್ಲದು; ಹಾಗಾಗಿ ಮುಂದಿನ ದಿನಗಳ ಪ್ರಚಾರವು ಮಹಿಳೆಯರ ದೃಷ್ಟಿಯಿಂದ ಹೆಚ್ಚು ಮಹತ್ವದ್ದು. ವಯೋಮಾನವಾರು ನೋಡುವುದಾದರೆ ಅತ್ಯಂತ ಯುವ ಮತದಾರರು (18-25 ವರ್ಷ) ಉಳಿದವರಿಗಿಂತ ಹೆಚ್ಚು ʼಇನ್ನೂ ತೀರ್ಮಾನ ಮಾಡಿರದʼ ಗುಂಪಿನಲ್ಲಿದ್ದಾರೆ; ಹಾಗೆಯೇ ಬಡವರು ಮತ್ತು ಅನಕ್ಷರಸ್ಥರೂ ಸಹ.

ಕೋಷ್ಟಕ 1: ಯಾರಿಗೆ ಮತ ಎಂದು ತೀರ್ಮಾನ ಮಾಡಿರದ ಸಮುದಾಯಗಳು

ಜಾತಿವಾರು ನೋಡುವುದಾದರೆ, ಯಾವುದೇ ಜಾತಿ ನೂರಕ್ಕೆ 80ರಷ್ಟು ಒಂದು ಪಕ್ಷದ ಪರವಾಗಿ ಇಲ್ಲ ಎಂಬುದು ಈ ಚುನಾವಣೆಯಲ್ಲೂ ಸಾಬೀತಾಗುತ್ತದೆ. ಹಾಗಾಗಿ ಹೆಚ್ಚಿನ ಒಲವು ಯಾವ ಪಕ್ಷದ ಕಡೆಗಿದೆ ಎಂಬುದಷ್ಟೇ ಮುಖ್ಯವಾಗುತ್ತದೆ. ದಲಿತ ಸಮುದಾಯದ ಮತಗಳು ಇಂದಿಗೂ ಬಹುತೇಕ ಕಾಂಗ್ರೆಸ್ಸಿನ ಪರವಾಗಿಯೇ ಇವೆ ಮತ್ತು ಎಡಗೈ ಹಾಗೂ ಬಲಗೈ ಮತಗಳಲ್ಲಿ ಈ ವಿಚಾರದಲ್ಲಿ ಇರುವ ವ್ಯತ್ಯಾಸ ಬಹಳ ಕಡಿಮೆ. ಮೇಲ್ಜಾತಿ ಸಮುದಾಯಗಳು, ಲಿಂಗಾಯತರು, ಮರಾಠರು ಮತ್ತು ಈಡಿಗರು ಹೆಚ್ಚಾಗಿ ಬಿಜೆಪಿಯನ್ನು ಬೆಂಬಲಿಸುವುದು ಕಂಡುಬರುತ್ತದೆ. ಆದರೆ ಉಳಿದ ಸಮುದಾಯಗಳು ಹೇಗೆ ಕಾಂಗ್ರೆಸ್ಸಿನ ಜೊತೆಗಿವೆಯೋ ಆ ರೀತಿ ಲಿಂಗಾಯತರ ಪೂರ್ಣ ಪ್ರಮಾಣದ ಬೆಂಬಲ ಬಿಜೆಪಿಗಿಲ್ಲ.

ಕೋಷ್ಟಕ 1A: ಯಾವ ಸಮುದಾಯ ಯಾವ ಪಕ್ಷದ ಪರ ಎಷ್ಟು ಒಲವು ಹೊಂದಿದೆ?

ಕುರುಬರು, ಇತರ ಹಿಂದುಳಿದ ವರ್ಗಗಳು, ಎಸ್‌ ಸಿ ಬಲಗೈ, ಎಸ್‌ ಸಿ ಎಡಗೈ, ಇತರ ಎಸ್‌ ಸಿ, ಎಸ್‌ ಟಿ, ಮುಸ್ಲಿಂ, ಕ್ರಿಶ್ಚಿಯನ್ನರ ಹೆಚ್ಚು ಬೆಂಬಲ ಕಾಂಗ್ರೆಸ್ಸಿಗಿದೆ. ಇಲ್ಲಿಯೂ ಸಹ ಮುಸ್ಲಿಮರನ್ನೂ ಒಳಗೊಂಡಂತೆ ಯಾರೂ ಒಂದು ಪಕ್ಷಕ್ಕೆ ನೂರಕ್ಕೆ ನೂರರಷ್ಟು ಬೆಂಬಲ ಕೊಡಲು ತೀರ್ಮಾನಿಸಿಲ್ಲ.

ಕೋಷ್ಟಕ 1B: ಬಡವರು, ಶ್ರೀಮಂತರ ಪೈಕಿ ಪಕ್ಷಗಳ ಆಯ್ಕೆ

ಬಡವರ ಓಟು ಕಾಂಗ್ರೆಸ್ಸಿಗೆ; ಶ್ರೀಮಂತರ ಓಟು ಬಿಜೆಪಿಗೆ!!

ಆರ್ಥಿಕ ಸ್ಥಿತಿಗತಿಗನುಗುಣವಾಗಿ ಮತದಾರರ ಒಲವು-ನಿಲುವುಗಳನ್ನು ನೋಡಿದರೆ ಒಂದು ವಿಷಯ ಸ್ಪಷ್ಟವಾಗಿ ಗೊತ್ತಾಗುತ್ತದೆ. ಆರ್ಥಿಕ ಸ್ಥಿತಿ ಹೆಚ್ಚಾಗುತ್ತಾ ಹೋದಂತೆ ಜೆಡಿಎಸ್‌ನ ಮತ ಪ್ರಮಾಣದಲ್ಲಿ ಹೆಚ್ಚೇನೂ ಬದಲಾವಣೆಯಾಗುವುದಿಲ್ಲ. ಆದರೆ, ಕಾಂಗ್ರೆಸ್‌ನ ಮತಗಳಿಕೆ ಕಡಿಮೆಯಾಗುತ್ತದೆ; ಬಿಜೆಪಿಯ ಮತಗಳಿಕೆ ಹೆಚ್ಚಾಗುತ್ತಾ ಹೋಗುತ್ತದೆ. ಅಂದರೆ, ಬಡವರು ಮತ್ತು ಕೆಳಮಧ್ಯಮ ವರ್ಗಗಳು ಹೆಚ್ಚಾಗಿ ಕಾಂಗ್ರೆಸ್ಸಿಗೆ ಮತ ನೀಡಿದರೆ, ಶ್ರೀಮಂತರು ಹೆಚ್ಚು ಬಿಜೆಪಿಗೆ ಮತ ನೀಡುತ್ತಾರೆ. ಇದಂತೂ ಸಂದೇಹಕ್ಕೇ ಎಡೆಯಿಲ್ಲದ ಹಾಗೆ ಕೆಳಗಿನ ಕೋಷ್ಟಕ ನೋಡಿದರೆ ತಿಳಿಯುತ್ತದೆ.

(ವಿ.ಸೂ:ಪ್ರತಿಕ್ರಿಯೆ ನೀಡಿದವರ ಆರ್ಥಿಕ ಸ್ಥಿತಿಗತಿಯನ್ನು ಆ ಕುಟುಂಬದಲ್ಲಿ ಸಂಪಾದನೆ ಮಾಡುವ ಮುಖ್ಯ ವ್ಯಕ್ತಿಯ ಉದ್ಯೋಗ, ಸಂಪಾದನೆ ಮತ್ತು ಆಸ್ತಿಯ ಆಧಾರದ ಮೇಲೆ ತೀರ್ಮಾನಿಸಲಾಗಿದೆ)

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!