Saturday, May 18, 2024

ಪ್ರಾಯೋಗಿಕ ಆವೃತ್ತಿ

ಮಂಡ್ಯ ಬಂದ್ ಗಿಂತ ವ್ಯಾಪಾರವೇ ಮುಖ್ಯ ಎಂದ ವರ್ತಕರು !

ಮಂಡ್ಯ ತಾಲೂಕು ಕೆರಗೋಡು ಗ್ರಾಮದಲ್ಲಿ ಹನುಮ ಧ್ವಜ ಹಾರಿಸಬೇಕೆಂದು ಒತ್ತಾಯಿಸಿ ಹಿಂದೂಪರ ಸಂಘಟನೆಗಳು ಕರೆ ನೀಡಿದ್ದ ಮಂಡ್ಯ ಬಂದ್ ಸಂಪೂರ್ಣವಾಗಿ ವಿಫಲವಾಗಿದೆ. ಮಂಡ್ಯ ನಗರ ಬಂದ್ ವಿಫಲವಾಗಲು ವರ್ತಕರು ಕೈ ಕೊಟ್ಟಿದ್ದೇ ಕಾರಣ ಎಂದು ಹೆಸರೇಳಲು ಇಚ್ಚಿಸದ ಸಂಘ ಪರಿವಾರದ ಮುಖಂಡರೊಬ್ಬರ ಆಕ್ರೋಶದ ಮಾತು.

ಮಂಡ್ಯ ನಗರ ಬಂದ್ ಗೆ ಸಹಕರಿಸುವಂತೆ ಗುರುವಾರ ಹಿಂದೂ ಸಂಘಟನೆಗಳ ಮುಖಂಡರ ಸೇರಿ ವರ್ತಕರಿಗೆ ಗುಲಾಬಿ ಹೂ ನೀಡಿ ಮನವಿ ಮಾಡಿದ್ದೆವು.ಆದರೆ ಬಂದ್ ಮಾಡಲು ಸಾಧ್ಯವಿಲ್ಲ ಎಂದು ವರ್ತಕರ ಸಂಘದ ಅಧ್ಯಕ್ಷರು ಗುರುವಾರವೇ ತಿಳಿಸಿದ್ದರು. ಆದರೂ ಪೇಟೆ ಬೀದಿ, ಜೈನರ ಬೀದಿ , ವಿ.ವಿ ರಸ್ತೆಯ ವರ್ತಕರು ಬಂದ್ ಗೆ ಬೆಂಬಲ ನೀಡುತ್ತಾರೆ ಎಂದು ಕೊಂಡಿದ್ದೆವು, ಆದರೆ ಅವರಿಗೆ ಹನುಮ ಧ್ವಜಕ್ಕಿಂತ ವ್ಯಾಪಾರ, ಹಣವೇ ಮುಖ್ಯ ಎಂಬುದು ಸಾಬೀತಾಯಿತು ಎಂದು ಸಿಟ್ಟಿನಿಂದ ಹೇಳಿದರು.

ಲಾಭಕ್ಕೆ ಹೆಚ್ಚು‌ ಒತ್ತು‌‌

ರಾಮ, ಭಗವಾ ಧ್ವಜ, ಹನುಮ ಧ್ವಜ, ಬಿಜೆಪಿ, ಆರ್ ಎಸ್ ಎಸ್, ಸಂಘ ಪರಿವಾರ ಇವುಗಳ ಕಟ್ಟಾ ಬೆಂಬಲಿಗರು ಸೇಠು, ಮಾರ್ವಾಡಿ‌ ಮತ್ತು ಪೇಟೆಬೀದಿಯ ವ್ಯಾಪಾರಿಗಳು. ಇವರುಗಳು ಎಷ್ಟೇ ಬಿಜೆಪಿ-ಸಂಘ ಪರಿವಾರದ ಬೆಂಬಲಿಗರಾದರೂ ಸಹ ಅಂತಿಮವಾಗಿ ವ್ಯಾಪಾರ, ವ್ಯವಹಾರ ಹಾಗೂ ಲಾಭದ ವಿಚಾರ ಬಂದಾಗ ಲಾಭಕ್ಕೆ ಹೆಚ್ಚು‌ ಒತ್ತು‌‌ ಕೊಡುತ್ತಾರೆ ಎಂಬುದಕ್ಕೆ ಇವತ್ತಿನ ಬಂದ್ ವಿಫಲವಾಗಿದ್ದೇ ಸ್ಪಷ್ಟ ಉದಾಹರಣೆಯಾಗಿದೆ.

‘ಮಾಲ್ ಗಾಡಿ ಜಹಾ ತಕ್ ಜಾಯೇಗಾ ವಾಹ ತಕ್ ಮಾರ್ವಾಡಿ ಮಿಲೇಗಾ’ ( ರೈಲುಗಾಡಿ ಎಲ್ಲೆಲ್ಲಿ ಹೋಗುತ್ತೊ ಅಲ್ಲೆಲ್ಲಾ ಮಾರ್ವಾಡಿ ಇರುತ್ತಾನೆ ) ಇದು ಹಿಂದಿಯಲ್ಲಿರುವ ಪ್ರಸಿದ್ಧ ಗಾದೆ ಮಾತಿದೆ. ಮಂಡ್ಯದ ಹಳ್ಳಿ ನಗರ ಎಲ್ಲ‌ಕಡೆ ವ್ಯಾಪಾರ ವ್ಯವಹಾರವನ್ನು ಕನ್ನಡಿಗರಾದ ಶೆಟ್ಟರು,‌ ಲಿಂಗಾಯತರು, ಜೈನರು,‌ ಬಣಜಿಗರು, ಗಾಣಿಗರಂತಹ ಜಾತಿಗಳಿಂದ ಕಿತ್ತುಕೊಳ್ಳುವಲ್ಲಿ ಯಶಸ್ವಿಯಾಗಿರುವ ಮಾರ್ವಾಡಿಗಳು, ಇವತ್ತು ನಡೆದ ಬಂದ್ ಸಂದರ್ಭದಲ್ಲಿ ಭಾಗವಹಿಸಿಲ್ಲ ಎಂಬುದು ಗಮನಾರ್ಹ. ಮಂಡ್ಯ ನಗರದಿಂದ ಜೈಪುರ, ಆಜ್ಮೀರದಂತಹ ರೈಲುಗಳು ಹೋಗುತ್ತಿದ್ದು ಅವುಗಳಲ್ಲಿ ಮಾರ್ವಾಡಿ ಜನ ಪ್ರಯಾಣಿಸುತ್ತಿದ್ದು ಕನ್ನಡಿಗರ ಮಕ್ಕಳು ಕೂಲಿ ಕೆಲಸಕ್ಕೆ ಬೆಂಗಳೂರಿನ ರೈಲುಗಳಲ್ಲಿ ಓಡಾಡುವ ಪರಿಸ್ಥಿತಿ ಎದುರಾಗಿದೆ.

nudikarnataka.com

ದೇವರು, ಧರ್ಮದ ವಿಚಾರ ಬಂದಾಗ ಹಿಂದೂ ಸಂಘಟನೆಯಲ್ಲಿರುವ ಶೂದ್ರರಿಗೆ ಒಂದಷ್ಟು ಹಣ ನೀಡಿ ಅವರನ್ನು ಇನ್ನೊಂದು ಧರ್ಮದ ವಿರುದ್ಧ ಎತ್ತಿ ಕಟ್ಟುವ ಕೆಲಸವನ್ನು ಉತ್ತರ ಭಾರತದಿಂದ ಬಂದು ಮಂಡ್ಯದಲ್ಲಿ ನೆಲೆಸಿರುವ ಮಾರ್ವಾಡಿಗಳು ಮಾಡಿ ಕೊಂಡು ಬರುತ್ತಿದ್ದಾರೆ. ನಮ್ಮ ಹಿಂದುಳಿದ ವರ್ಗದ ಯುವಕರು ಭಗವಾ ಧ್ವಜ,ಹನುಮ ಧ್ವಜ,ಕೇಸರಿ ಧ್ವಜ ಎಂದೆಲ್ಲಾ ತಮ್ಮ ಬದುಕು ನಾಶ ಮಾಡಿ ಕೊಳ್ಳುತ್ತಿದ್ದಾರೆ. ಇಂದು ನಡೆದ ಪ್ರತಿಭಟನೆಯಲ್ಲಿ ಯಾವ ರಾಜಕಾರಣಿಗಳ, ಮಾರ್ವಾಡಿಗಳ ಮಕ್ಕಳು ಪಾದಯಾತ್ರೆಯಲ್ಲಿ ಭಾಗವಹಿಸಿದ್ದಾರೆ ಹೇಳಲಿ ನೋಡೋಣ ಎಂದು ಪಾದಯಾತ್ರೆಯಲ್ಲಿ ಕೇಸು ಹಾಕಿಸಿಕೊಂಡಿರುವ ಯುವಕನೊಬ್ಬನ ಪೋಷಕರು ಕಿಡಿಕಾರಿದರು.

ಬಿಜೆಪಿ-ಜೆಡಿಎಸ್ ನಾಯಕರಿಗೆ ರಾಜಕೀಯ ಅಧಿಕಾರ ಕೊಡಿಸಲು ಶೂದ್ರರ ಮಕ್ಕಳು ಕೇಸು, ಜೈಲು ಎಂದು ಅಲೆಯುವಂತಾಗಿದೆ.ಕಳೆದ ಜನವರಿ 29 ರಂದು ನಡೆದ ಪ್ರತಿಭಟನೆಯಲ್ಲಿ ಬಿಜೆಪಿ-ಜೆಡಿಎಸ್ ನಾಯಕರು ಪ್ರಚೋದನೆ ನೀಡಿದ್ದರಿಂದಲೇ ಉದ್ರಿಕ್ತರಾದ ಯುವಕರು ಫ್ಲೆಕ್ಸ್ ಹರಿದು ಕುರುಬರ ಸಂಘದ ಹಾಸ್ಟೆಲ್ ಮೇಲೆ ಕಲ್ಲು ತೂರಿ ಕಿಟಕಿ ಗಾಜು ಪುಡಿ ಮಾಡಿದರು.

ಈ ಪ್ರಕರಣದಲ್ಲಿ ಹಲವು ಯುವಕರ ಮೇಲೆ ಕೇಸು ಹಾಕಲಾಗಿದೆ. ಮುಗ್ಧ, ಅಮಾಯಕರ ಮಕ್ಕಳನ್ನು ತಮ್ಮ ರಾಜಕೀಯ ಅಧಿಕಾರಕ್ಕಾಗಿ ದುರ್ಬಳಕೆ ಮಾಡಿಕೊಂಡ ಬಿಜೆಪಿ-ಜೆಡಿಎಸ್ ಮುಖಂಡರು ಅವರನ್ನು ಕೋರ್ಟ್,ಸ್ಟೇಷನ್ ಮೆಟ್ಟಿಲು ಹತ್ತಿಸಿದ್ದಾರೆ.ಇವರಿಗೆ ನಾಚಿಕೆಯಾಗಬೇಕು.ಕಂಡೋರ ಮನೆಯ ಮಕ್ಕಳಿಗೆ ಧರ್ಮ ಎಂಬ ಅಫೀಮು ತಿನ್ನಿಸಿ ಅವರನ್ನು ಬಾವಿಗೆ ತಳ್ಳಿ ತಮ್ಮ ರಾಜಕೀಯ ಅಧಿಕಾರ ಪಡೆಯಲು ಮುಂದಾಗಿರುವ ಎಚ್.ಡಿ.ಕುಮಾರಸ್ವಾಮಿ, ಸಿ.ಟಿ.ರವಿ ಅಂತವರು ತಮ್ಮ ಮಕ್ಕಳನ್ನು ಬೀದಿಗೆ ಕರೆದುಕೊಂಡು ಬಂದಿದ್ರಾ ಎಂದು ಆಕ್ರೋಶ ವ್ಯಕ್ತಪಡಿಸಿದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!