Sunday, May 19, 2024

ಪ್ರಾಯೋಗಿಕ ಆವೃತ್ತಿ

ವಿದ್ಯಾದಾನದಲ್ಲಿ ಮಠಗಳ ಪಾತ್ರ ಅಪಾರ : ಡಾ. ಶಿವಾನಂದ ಶಿವಾಚಾರ್ಯ ಸ್ವಾಮೀಜಿ

ದೇಶಾದ್ಯಂತ ಶಿಕ್ಷಣ ಕ್ಷೇತ್ರದಲ್ಲಿ ವಿದ್ಯಾದಾನ ಮಾಡಲು ಕಾವಿತೊಟ್ಟ ಮಠಗಳಿಂದಲೇ‌ ಹೊರೆತು ಬೇರೆಯವರಿಂದ ಅಸಾಧ್ಯವಾದ ಕೆಲಸವೆಂದು ತಪೋವನ ಹಿರೇಮಠ ಸುಕ್ಷೇತ್ರದ ಡಾ.ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಅಭಿಪ್ರಾಯಪಟ್ಟರು.

ನಾಗಮಂಗಲ ತಾಲ್ಲೂಕಿನ ಆದಿಚುಂಚನಗಿರಿ ಸಂಸ್ಥಾನ ಮಠದ ಸಭಾಂಗಣದಲ್ಲಿ ಶ್ರೀಗಳ 10ನೇ ವರ್ಷದ ಪಟ್ಟಾಭಿಷೇಕದ ಪ್ರಯುಕ್ತ ಆಯೋಜಿಸಲಾದ ಜ್ಞಾನ ವಿಜ್ಞಾನ ತಂತ್ರಜ್ಞಾನದ ಮೇಳದ ವಸ್ತುಪ್ರದರ್ಶನದ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಬಾಲಗಂಗಾಧರನಾಥ ಸ್ವಾಮೀಜಿಗಳವರ ಸಾಧನೆಗಳನ್ನು ಪದಗಳಲ್ಲಿ ವರ್ಣಿಸಲು ಸಾಧ್ಯವಿಲ್ಲ. 500ಕ್ಕೂ ಹೆಚ್ಚಿನ ವಿದ್ಯಾಸಂಸ್ಥೆ ನಡೆಯುತ್ತಿದ್ದು ಅನೇಕ ಮುಖಗಳಲ್ಲಿ ವಿದ್ಯಾರ್ಥಿಗಳು ಅನುಕೂಲ ಪಡೆದುಕೊಳ್ಳುತ್ತಿದ್ದಾರೆ ಎಂದರು.

ಶ್ರೀಮಠ ಕೆಲವರಿಗೆ ಕೇವಲ ಒಕ್ಕಲಿಗರ ಮಠವಾಗಿ ಕಾಣಿಸುತ್ತಿದೆ, ಆದರೆ ದೇಶಾದ್ಯಂತ ಹಲವು ಜಾತಿಮತಗಳಿಗೆ ನೆರಳಾಗಿರುವುದು ಜಗತ್ ಜಾಹಿರವಾಗಿದೆ. ಆದಿಚುಂಚನಗಿರಿ ವಿಶ್ವವಿದ್ಯಾನಿಲಯವಾಗಿ ಹೊರಹೊಮ್ಮಿರುವುದು ಶಿಕ್ಷಣ ಕ್ಷೇತ್ರಕ್ಕೆ ಹೆಮ್ಮೆಯ ವಿಷಯವಾಗಿದೆ. ಭೈರವೈಕ್ಯ ಬಾಲಗಂಗಾಧರನಾಥಸ್ವಾಮಿಗಳು, ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅವರನ್ನು 72ನೇ ಪೀಠಾಧಿಪತಿಗಳಾಗಿ ಮಾಡಿರುವುದು ಅದ್ಬುತ ನಿರ್ಧಾರವೆಂದು ಬಣ್ಣಿಸಿದರು.

ಅಖಿಲ ಭಾರತ ತಾಂತ್ರಿಕ ಶಿಕ್ಷಣ ಪರಿಷತ್ ಅಧ್ಯಕ್ಷ ಪ್ರೊ.ಟಿ.ಜಿ.ಸೀತಾರಾಮ ಮಾತನಾಡಿ, ಶಿಕ್ಷಣ ವಿಚಾರದಲ್ಲಿ ಶ್ರೀಕ್ಷೇತ್ರ ಬೃಹದಾಕಾರವಾಗಿ ಬೆಳೆಯುತ್ತಿದೆ. ರಾಜ್ಯ ಹಾಗೂ ಅಂತರರಾಜ್ಯದ ವಿದ್ಯಾರ್ಥಿಗಳು ಶ್ರೀಕ್ಷೇತ್ರದ ಕಡೆ ಮುಖ ಮಾಡುತ್ತಿದ್ದಾರೆ. ಶಿಕ್ಷಣ ಕ್ಷೇತ್ರದಲ್ಲಿ ಹೊಸ ಹೊಸ ಆವಿಷ್ಕಾರಕ್ಕೆ ಮುನ್ನಡೆಯಾಗಲಿದೆ ಎಂದು ತಿಳಿಸಿದರು.

ಡಾ.ನಿರ್ಮಲಾನಂದನಾಥಸ್ವಾಮಿಜೀ ಆಶೀರ್ವಚನ ನೀಡಿದರು. ಜ್ಞಾನ ವಿಜ್ಞಾನ ತಂತ್ರಜ್ಞಾನದ ಮೇಳದಲ್ಲಿ ನೂರಕ್ಕೂ ಹೆಚ್ಚು ವಸ್ತು ಪ್ರದರ್ಶನ ಮಳಿಗೆಗಳಲ್ಲಿ ವಿದ್ಯಾರ್ಥಿಗಳು ವಿಜ್ಞಾನ ತಂತ್ರಜ್ಞಾನ ಸಾರುವ ಆವಿಷ್ಕಾರಗಳನ್ನು ಪ್ರದರ್ಶಿಸಿದರು. ಈ ಸಂದರ್ಭದಲ್ಲಿ ಬೆಂಗಳೂರು ವೈದ್ಯಕೀಯ ಕಾಲೇಜು ಹಾಗೂ ಸಂಶೋಧನಾ ಸಂಸ್ಥೆಯ ಸಂಸ್ಥೆಯ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಮಾಜಿ ಪ್ರೊಫೆಸರ್ ಡಾ.ವಿಜಯಲಕ್ಷ್ಮಿ ಐ.ಬಾಳೆಕುಂದ್ರಿಯವರನ್ನು ಶ್ರೀಗಳು ಸನ್ಮಾನಿಸಿದರು.

ಕಾರ್ಯಕ್ರಮದಲ್ಲಿ ಮಾಜಿ ಸಚಿವ ಎನ್.ಚಲುವರಾಯಸ್ವಾಮಿ, ಮಾಜಿ ಶಾಸಕ ಎಲ್.ಆರ್.ಶಿವರಾಮೇಗೌಡ ಸೇರಿದಂತೆ ಶಿಕ್ಷಣ ಸಂಸ್ಥೆಗಳ ಪ್ರಾಧ್ಯಾಪಕರು, ಪ್ರಾಂಶುಪಾಲರು ಅನೇಕ ಗಣ್ಯರು ಭಾಗವಹಿಸಿದ್ದರು

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!