Tuesday, May 21, 2024

ಪ್ರಾಯೋಗಿಕ ಆವೃತ್ತಿ

ಕರ್ನಾಟಕದಲ್ಲೇಕೆ ಹಠಾತ್ ಉದ್ವಿಗ್ನತೆ? ನೀವು ಈ ಆಯಾಮದಿಂದ ಯೋಚಿಸಿದ್ದೀರಾ…

✍️ ಮಾಚಯ್ಯ ಎಂ ಹಿಪ್ಪರಗಿ

ಕರ್ನಾಟಕದಲ್ಲೀಗ ಅಶಾಂತಿಯ ಕಾಲ. ಈ ಅಶಾಂತಿ ಜನರ ಬದುಕಿಗೆ ಸಂಬಂಧಿಸಿದ್ದಲ್ಲ, ಮೀಡಿಯಾಗಳ ಪರದೆಗೆ ಸೀಮಿತವಾದದ್ದು. ಜನ ತಮ್ಮ ಪಾಡಿಗೆ ತಾವು ನೆಮ್ಮದಿಯಾಗಿದ್ದಾರೆ, ಆದರೆ ಬಿಡುವಿನ ವೇಳೆಯಲ್ಲೋ, ಸಂಜೆ ವಿಶ್ರಾಂತಿ ಸಮಯದಲ್ಲೋ ಟೀವಿ ಪರದೆಗಳಿಗೆ, ಮೊಬೈಲ್ ಸ್ಕ್ರೀನುಗಳಿಗೆ ಕಣ್ಣು ನೆಟ್ಟಾಗ ಉದ್ವಿಗ್ನಗೊಂಡು ಆತಂಕಕ್ಕೀಡಾಗುತ್ತಿದ್ದಾರೆ. ಈ ಉತ್ಪಾದಿತ ಅಶಾಂತಿಯೆಲ್ಲವೂ, ಕಾಂಗ್ರೆಸ್ ಇಲ್ಲಿ ಗೆದ್ದಿದೆ ಅಂತ ಅಲ್ಲ, ಅಥವಾ ಬಿಜೆಪಿ ಇಲ್ಲಿ ಸೋತಿದೆ ಅಂತಲೂ ಅಲ್ಲ; ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಇಲ್ಲಿ ಹೀನಾಯವಾಗಿ ಸೋಲಬಾರದು ಅಂತ!

ಎಂ ಪಿ ಎಲೆಕ್ಷನ್ ಮುಗಿದಾದ ಬಳಿಕ ಎಲ್ಲವೂ ನಿರಾಳವಾಗಲಿದೆ. ಬಿಜೆಪಿಗೆ ಪೂರಕವಾಗುವಂತೆ ಉಸಿರುಕಟ್ಟಿ ಅರಚಾಡಿದ ತಮ್ಮ ಶ್ರಮ ತಕ್ಕಮಟ್ಟಿಗೆ ಸಾರ್ಥಕವಾದರೆ, ನಮ್ಮ ಹೇತ್ಲಾಂಡಿ ಮೀಡಿಯಾಗಳೂ ನಿಟ್ಟುಸಿರು ಬಿಟ್ಟು ತಣ್ಣಗಾಗಲಿವೆ. ಅಲ್ಲಿಯವರೆಗೂ ಜನರನ್ನು ಭಯ, ಆತಂಕ, ಗೊಂದಲ, ಏನೋ ಆಗಿಹೋಯಿತೇನೊ ಎಂಬ ಭ್ರಮೆಯಲ್ಲಿಡಲು ಮೀಡಿಯಾಗಳು ಸಾಕಷ್ಟು ಬೆವರು ಹರಿಸಲಿವೆ ಅನ್ನೋದು ಮಾತ್ರ ಸತ್ಯ.

ಈ ಮೀಡಿಯಾಗಳ ಬಗ್ಗೆ ಹೇಳಿದಷ್ಟೂ ಬಾಯಿ ಹೊಲಸಾಗುತ್ತದೆ, ಮನಸು ಕಲ್ಮಶಗೊಳ್ಳುತ್ತದೆ. ಹಿರಿಯ ಪತ್ರಕರ್ತ ಎನ್ ಎಸ್ ಶಂಕರ್ ಅವರು ಒಂದುಕಡೆ ಹೇಳುವಂತೆ, “ನಾವು ಈ ಮೀಡಿಯಾಗಳನ್ನು ಬಾಯಿಗೆ ಬಂದಂತೆ ಬೈದು, ರಾತ್ರಿ ರಿಮೋಟ್ ಹಿಡಿದು ಅವುಗಳನ್ನೇ ನೋಡುತ್ತಾ ಟಿ ಆರ್ ಪಿ ತಂದುಕೊಡುತ್ತಿದ್ದೇವೆ. ಅದರ ಬದಲು ನಾನು ಇನ್ಮುಂದೆ ನನ್ನ ಮನೆಯ ಕೇಬಲ್ಲಿನಲ್ಲಿ ಈ ಹೊಲಸು ಚಾನೆಲ್ ಗಳ ಸಬ್ ಸ್ಕ್ರಿಪ್ಷನ್ ತೆಗೆದುಹಾಕುತ್ತೇನೆ; ಇನ್ನ್ಯಾವತ್ತೂ ನೋಡುವುದಿಲ್ಲ ಎಂಬ ಪ್ರತಿಜ್ಞೆ ಮತ್ತು ಅಭಿಯಾನವನ್ನು ಹಮ್ಮಿಕೊಳ್ಳಬೇಕಿದೆ”.

ಆದರೆ ಒಂದು ವಿಚಾರವನ್ನು ನೀವೇನಾದರೂ ಗಮನಿಸಿದ್ದೀರಾ? ಲೋಕಸಭಾ ಚುನಾವಣೆ ಇಡೀ ದೇಶದಲ್ಲಿ ನಡೆಯುತ್ತಿದ್ದರೂ, ಕರ್ನಾಟಕದಲ್ಲಿ ಮಾತ್ರ ಇಂತಹ ಕ್ಷೋಭೆಯನ್ನು ಯಾಕೆ ಸೃಷ್ಟಿಸಲಾಗುತ್ತಿದೆ ಅಂತ? ಬಿಜೆಪಿ ಪಾಲಿಗೆ ಕರ್ನಾಟಕವೇ ದಕ್ಷಿಣ ಭಾರತದ ಹೆಬ್ಬಾಗಿಲು ಅನ್ನೋ ಸವಕಲು ಉತ್ತರಕ್ಕೆ ಈಗ ವ್ಯಾಲ್ಯೂ ಇಲ್ಲ. ಕರ್ನಾಟಕವನ್ನು ಆ ಮಟ್ಟಿಗೆ ಅವಲಂಬಿಸುವ ಪರಿಸ್ಥಿತಿಯಲ್ಲಿ ಈಗ ಬಿಜೆಪಿ ಇಲ್ಲ. ತೆಲಂಗಾಣ, ಆಂದ್ರ, ತಮಿಳುನಾಡುಗಳಲ್ಲಿ ಅಧಿಕಾರದ ಸನಿಹಕ್ಕೆ ಬಂದಿಲ್ಲವಾದೂ ನಿರಂತರವಾಗಿ ತನ್ನ ವೋಟ್ ಬ್ಯಾಂಕ್ ಹೆಚ್ಚಿಸಿಕೊಳ್ಳುವಷ್ಟು ಸ್ಪೇಸ್ ಸೃಷ್ಟಿಸಿಕೊಂಡಿದೆ.

ಹಾಗಾದ್ರೆ, ಕರ್ನಾಟಕವನ್ನು ಬಿಜೆಪಿ ಇಷ್ಟು ತೀಕ್ಷ್ಣ ಟಾರ್ಗೆಟ್ ಮಾಡಿಕೊಳ್ಳಲು ಬೇರೇನು ಕಾರಣವಿರಬಹುದು? ಎರಡು ಕಾರಣಗಳಿವೆ…

ಮೊದಲನೆಯದ್ದು ಗ್ಯಾರಂಟಿ ಯೋಜನೆಗಳು; ಎರಡನೆಯದ್ದು, ಇಲ್ಲಿನ ಕಾಂಗ್ರೆಸ್ ಸರ್ಕಾರ ಮುಂದೊಡ್ಡಿದ ತೆರಿಗೆ ಪ್ರತಿರೋಧ!

ಗ್ಯಾರಂಟಿ ಯೋಜನೆಗಳು ಬಿಜೆಪಿಗೆ ತಂದೊಡ್ಡಿರುವ ಥ್ರೆಟ್ ಅಂತಿಂತದ್ದಲ್ಲ. ಹಳೇ ಯೋಜನೆಗಳಿಗೆ ಮರುನಾಮಕರಣ ಮಾಡುವುದರಲ್ಲಿ ಚಾಂಪಿಯನ್ ಎನಿಸಿರುವ ಸ್ವತಃ ಮೋದಿ ಕೂಡಾ, ಗ್ಯಾರಂಟಿ ಪದಕ್ಕೆ ಹೈರಾಣಾಗಿ `ಮೋದಿ ಕಿ ಗ್ಯಾರಂಟಿ’ ಅಂತ ನಕಲು ಮಾಡುವಷ್ಟು ಗ್ಯಾರಂಟಿ ಯೋಜನೆಗಳು ಬಿಜೆಪಿಯನ್ನು ಹೆದರಿಸಿವೆ. ಯಾಕೆ ಈ ಭಯ? ಗ್ಯಾರಂಟಿ ಯೋಜನೆಗಳು ಜನಪ್ರಿಯತೆ ಗಳಿಸಿರುವುದು ಒಂದುಕಡೆಗಾದರೆ, ಧಾರ್ಮಿಕ ಕೋಮುವಾದದ ಮೂಲಕ ಜನರನ್ನು ನೈಜ ಸಮಸ್ಯೆಗಳಿಂದ ವಿಮುಖವಾಗಿಸಿದ್ದ ಬಿಜೆಪಿಯ ಭಾವನಾತ್ಮಕ ರಾಜಕಾರಣಕ್ಕೆ ಈ ಯೋಜನೆಗಳು ಹೊಸ ಅಡ್ಡಿಯಾಗುವ ಸೂಚನೆ ನೀಡಿದ್ದವು. ಕರ್ನಾಟಕದ ಮತದಾರರು ಭಾವನೆಗಿಂತ ಬದುಕು ಮುಖ್ಯ ಎಂಬ ತೀರ್ಪು ನೀಡಲು ಈ ಗ್ಯಾರಂಟಿಗಳು ಪ್ರೇರಣೆಯಾಗಿದ್ದವು.

ಜನ ಹೀಗೆ ವಾಸ್ತವ ಬದುಕಿನತ್ತ ಆಸಕ್ತರಾದರೆ, ಧರ್ಮ-ರಾಷ್ಟ್ರೀಯತೆಯಂತಹ ವಿಚಾರಗಳ ತಳಹದಿ ಮೇಲೆ ಕಟ್ಟಿದ ಬಿಜೆಪಿಯ ಕೋಮುವಾದಿ ರಾಜಕಾರಣವು ಸಡಿಲಗೊಳ್ಳುವುದರಲ್ಲಿ ಸಂಶಯವಿಲ್ಲ. ಅಲ್ಲದೇ, ಅಧಿಕಾರಕ್ಕೇರಿದ ನಂತರ ಇಲ್ಲಿನ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ಯಶಸ್ವಿಯಾಗಿ ಅನುಷ್ಠಾನಕ್ಕೆ ತಂದದ್ದು, ಬೇರೆ ರಾಜ್ಯಗಳ ಮತದಾರರ ಮೇಲೂ ಪರಿಣಾಮ ಬೀರಲು ಶುರು ಮಾಡಿತ್ತು. ತೆಲಂಗಾಣದ ಗೆಲುವು ಇದಕ್ಕೆ ಸಾಕ್ಷಿ. ಉತ್ತರದ ರಾಜ್ಯಗಳವರೆಗೆ ಗ್ಯಾರಂಟಿಗಳ ಹವಾ ಇನ್ನೂ ವ್ಯಾಪಿಸಿರಲಿಲ್ಲ. ಆದರೆ ತಾನು ಕೈಕಟ್ಟಿ ಕೂತರೆ ಆದಷ್ಟು ಬೇಗ ದಕ್ಷಿಣದ ಗ್ಯಾರಂಟಿ ಪ್ರಭಾವ ಉತ್ತರವನ್ನೂ ಆವರಿಸಲಿದೆ ಎಂಬುದು ಬಿಜೆಪಿಗೆ ಖಾತ್ರಿಯಾಗಿತ್ತು. ಹೇಗಾದರೂ ಮಾಡಿ, ಕರ್ನಾಟಕದ ಗ್ಯಾರಂಟಿಗಳ ಪ್ರಭಾವಕ್ಕೆ ತಡೆ ಹಾಕಬೇಕು ಅಂತಲೇ, ನಮ್ಮ ರಾಜ್ಯವನ್ನು ಬಿಜೆಪಿ ತನ್ನ ತೀಕ್ಷ್ಣ ಟಾರ್ಗೆಟ್ ಮಾಡಿಕೊಂಡಿದೆ. ಅನಿವಾರ್ಯವಿಲ್ಲದಿದ್ದರೂ ಜೆಡಿಎಸ್ ಜೊತೆ ಬಿಜೆಪಿ ಮೈತ್ರಿ ಮಾಡಿಕೊಂಡಿರುವುದರ ಹಿಂದೆ ಇದೂ ಒಂದು ಕಾರಣವೆನ್ನಬಹುದು.

ಕಾಂಗ್ರೆಸ್ ಸರ್ಕಾರ ಬಂದ ಮೊದಲ ದಿನದಿಂದಲೂ ರಾಜ್ಯ ಸರ್ಕಾರದ ಯೋಜನೆಗಳಿಗೆ ಕೇಂದ್ರದ ಬಿಜೆಪಿ ಸರ್ಕಾರ ಅಡ್ಡಗಾಲು ಹಾಕುತ್ತಲೇ ಬಂದಿತ್ತು. ಅನ್ನಭಾಗ್ಯಕ್ಕೆ ಅಕ್ಕಿ ಕೊಡದೇ ಇದ್ದುದು, ಬರ ಪರಿಹಾರ ಬಿಡುಗಡೆ ಮಾಡದೇ ಇದ್ದುದು, ಕಾವೇರಿ ನೀರು ಹಂಚಿಕೆಯಲ್ಲಿ ರಾಜ್ಯಕ್ಕೆ ಅನ್ಯಾಯ ಮಾಡಿದ್ದು, ರಾಜ್ಯಕ್ಕೆ ಅನುಮೋದನೆಯಾಗಿದ್ದ ಯೋಜನೆಗಳ ರದ್ದು ಮಾಡಿದ್ದು, ಇವೆಲ್ಲವೂ ಉದಾಹರಣೆಯಾಗಿ ಕಾಣುತ್ತವೆ. ಆದರೆ, ಕಳೆದ ಕೆಲ ದಿನಗಳಿಂದೀಚೆಗೆ ರಾಜ್ಯದಲ್ಲಿ ಏಕಾಏಕಿ ಉದ್ವಿಗ್ನತೆಯನ್ನು ತೀವ್ರವಾಗಿ ಹೆಚ್ಚಾಗಿಸುತ್ತಿರೋದನ್ನು ನೀವು ಗಮನಿಸಿರಬಹುದು. ಇದಕ್ಕೆಲ್ಲ ಮುಖ್ಯ ಕಾರಣ, `ನನ್ನ ತೆರಿಗೆ ನನ್ನ ಹಕ್ಕು’ ಎಂಬ ಅಭಿಯಾನದ ಮೂಲಕ ಕಾಂಗ್ರೆಸ್ ಸರ್ಕಾರ ಒಡ್ಡಿದ ಪ್ರತಿರೋಧ ಎನ್ನಬಹುದು.

ಹೌದು, ಈ ಅಭಿಯಾನ ಕೇವಲ ತೆರಿಗೆ ಹಂಚಿಕೆಗೆ ಮಾತ್ರ ಸೀಮಿತವಾಗಿರದೆ, ಉತ್ತರ ಭಾರತ ಮತ್ತು ದಕ್ಷಿಣ ಭಾರತದ ರಾಜ್ಯಗಳ ನಡುವಿನ ಅಭಿವೃದ್ಧಿಯ ಅಂತರವನ್ನೂ ಚರ್ಚೆಯ ಮುನ್ನೆಲೆಗೆ ತಂದಿತು. ಹುಸಿ ರಾಷ್ಟ್ರೀಯತೆಯ ನೆಪದಲ್ಲಿ ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ವ್ಯಾಪಿಸಿಬಿಡುವ ಉತ್ಸಾಹದಲ್ಲಿದ್ದ ಬಿಜೆಪಿಗೆ ಈ ವಿಂಗಡಣೆ ದೊಡ್ಡ ಅಪಾಯಕಾರಿಯಾಗಿದ್ದು ಸುಳ್ಳಲ್ಲ. ರಾಷ್ಟ್ರೀಯತೆಗೆ ಎದುರಾಗಿ ಪ್ರಾದೇಶಿಕತೆಯನ್ನು ಕಟೆದು ನಿಲ್ಲಿಸುವ ಎಲ್ಲಾ ಶಕ್ತಿಯೂ ಈ ಅಭಿಯಾನಕ್ಕಿತ್ತು. ಅದಕ್ಕೆ ತಕ್ಕಂತೆ ಕೇರಳ ಮತ್ತು ತಮಿಳುನಾಡು ರಾಜ್ಯಗಳೂ ಇದಕ್ಕೆ ಕೈಜೋಡಿಸಿದವು. ಪಶ್ಚಿಮ ಬಂಗಾಳ ಕೂಡಾ ಆಸಕ್ತಿ ತೋರಲು ಮುಂದಾಗಿತ್ತು.

ಒಂದು ಕಡೆ ಗ್ಯಾರಂಟಿ ಯೋಜನೆಗಳ ಮೂಲಕ ತನ್ನ ಕೋಮುವಾದಿ ರಾಜಕಾರಣಕ್ಕೆ ಪೆಟ್ಟು ಕೊಟ್ಟಿದ್ದ ಕರ್ನಾಟಕ, ಈಗ ತೆರಿಗೆ ಅಭಿಯಾನದ ಮೂಲಕ ತನ್ನ ಹುಸಿ ರಾಷ್ಟ್ರೀಯತೆಯ ಮೇಲೂ ಪ್ರಾದೇಶಿಕತೆಯ ಅಸ್ತ್ರ ಪ್ರಯೋಗಿಸಲು ಮುಂದಾದದ್ದು ಬಿಜೆಪಿಗೆ ದೊಡ್ಡ ತಲೆನೋವು ತಂದಿತ್ತು. ಹೀಗೇ ಬಿಟ್ಟರೆ, ಮತ್ತೇನೆಲ್ಲ ಅಸ್ತ್ರಗಳು ಕರ್ನಾಟಕದಿಂದ ಪ್ರಯೋಗವಾಗಬಹುದೋ ಎಂಬ ಆತಂಕಕ್ಕೀಡಾದ ಬಿಜೆಪಿ ಬಹಳ ಲೆಕ್ಕಾಚಾರದ ನಂತರ ಶತಾಯಗತಾಯ ಕರ್ನಾಟಕದ ಕಾಂಗ್ರೆಸ್ ಸರ್ಕಾರವನ್ನು ನೆಮ್ಮದಿಯಾಗಿ ಇರಲು ಬಿಡಬಾರದು ಎಂಬ ನಿರ್ಧಾರಕ್ಕೆ ಬಂದಂತಿದೆ. ತನ್ನ ಅಸ್ತಿತ್ವವೇ ಅಲ್ಲಾಡುವಂತಹ ತಲ್ಲಣಗಳು ಎದುರಾದರೆ ಕಾಂಗ್ರೆಸ್ ಸರ್ಕಾರವು ಅದನ್ನು ನಿಭಾಯಿಸುವತ್ತಲೇ ತನ್ನ ಗಮನ, ಸಮಯ, ಶ್ರಮವನ್ನು ಕೇಂದ್ರೀಕರಿಸುತ್ತೆ ಎಂಬ ಉದ್ದೇಶದಿಂದಲೇ ಇಲ್ಲಿ ಟಾರ್ಗೆಟ್ ಕೊಟ್ಟು ಉದ್ವಿಗ್ನತೆಯನ್ನು ಹುಟ್ಟುಹಾಕಲಾಗುತ್ತಿದೆ. ಆ ಟಾರ್ಗೆಟ್ ನ ಸೂಚನೆಗಳು ರವಾನೆಯಾಗಿರುವುದು ರಾಜ್ಯ ಬಿಜೆಪಿ ಘಟಕಕ್ಕೆ ಮಾತ್ರವಲ್ಲ, ಕನ್ನಡದ ನಾನ್ ಸೆನ್ಸ್ ಮೀಡಿಯಾಗಳಿಗೂ ಕೂಡಾ… ಅದಕ್ಕೇ ಬ್ರೇಕಿಂಗ್ ನ್ಯೂಸ್ ಗಳು ಜನರ ಬಿಪಿ ಹೆಚ್ಚಿಸುತ್ತಿವೆ.

ಎನ್ ಎಸ್ ಶಂಕರ್ ಅವರು ಹೇಳಿದಂತೆ, ಸಮಾಜದ ಆರೋಗ್ಯಕ್ಕಾಗಿ ಮಾತ್ರ ಅಲ್ಲ, ನಮ್ಮ ದೈಹಿಕ ಆರೋಗ್ಯವೂ ಕ್ಷೇಮವಾಗಿರಬೇಕೆಂದರೆ, ಮೊದಲು ನಮ್ಮನಮ್ಮ ಮನೆಗಳ ಕೇಬಲ್ ಗಳಿಂದ ನ್ಯೂಸ್ ಚಾನೆಲ್ ಗಳನ್ನು ಈ ಕೂಡಲೇ ಕಿತ್ತೊಗೆಯುವ ಅಭಿಯಾನಕ್ಕೆ ಮುಂದಾಗಬೇಕಿದೆ. ಮನರಂಜನೆಗೆ ಒಂದೆರಡು ಸಿನಿಮಾ, ಸೀರಿಯಲ್, ಚಿತ್ರಗೀತೆಗಳ ಚಾನೆಲ್ ಇದ್ದರೆ ಸಾಕು. ರಾತ್ರಿ ದುಡಿದು ಮನೆಗೆ ಮರಳಿದಾಗ, ನೆಮ್ಮದಿಯಾಗಿ ಕುಟುಂಬದೊಟ್ಟಿಗೆ ಕೂತು ಊಟ ಮಾಡಬಹುದು.

“ಬೈಕಾಟ್ ನ್ಯೂಸ್ ಚಾನೆಲ್ಸ್‌; ಸೇವ್ ಯುವರ್ ಹಾರ್ಟ್!”

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!