Saturday, May 18, 2024

ಪ್ರಾಯೋಗಿಕ ಆವೃತ್ತಿ

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ : ಅರೋಪಿಗೆ 22 ವರ್ಷ ಕಠಿಣ ಶಿಕ್ಷೆ

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಆರೋಪಿಗೆ 22 ವರ್ಷಗಳ ಕಠಿಣ ಸಜೆ ಹಾಗೂ ಲೈಂಗಿಕ ಕಿರುಕುಳ ನೀಡಿದ ಮತ್ತೊಬ್ಬನಿಗೆ 3 ವರ್ಷಗಳ ಕಠಿಣ ಸಜೆ ವಿಧಿಸಿ, ಮಂಡ್ಯ ಜಿಲ್ಲಾ ಸತ್ರ ಮತ್ತು ಪ್ರಧಾನ ನ್ಯಾಯಾಧೀಶ ರಾದ ನಾಗಜ್ಯೋತಿ ತೀರ್ಪು ನೀಡಿದ್ದಾರೆ.

ಮೊದಲನೇ ಆರೋಪಿ ರವಿಗೆ 22 ವರ್ಷಗಳ ಕಠಿಣ ಸಜೆ ಹಾಗೂ 50,000 ರೂ. ದಂಡ ವಿಧಿಸಿದ್ದರೆ, ಎರಡನೇ ಆರೋಪಿ ಮಹೇಶನಿಗೆ 3 ವರ್ಷಗಳ ಕಠಿಣ ಸಜೆ ಮತ್ತು 19,000 ದಂಡ ವಿಧಿಸಿ ಮಹತ್ವದ ತೀರ್ಪು ನೀಡಿದ್ದಾರೆ.

ಪ್ರಕರಣದ ವಿವರ

ಮಳವಳ್ಳಿ ತಾಲೂಕಿನ ಹಲಗೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳೆದ ಲಾಕ್ಡೌನ್ ಸಂದರ್ಭದಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ರವಿ ಎಂಬಾತ ಅತ್ಯಾಚಾರವೆಸಗಿದ್ದ. ಹಾಗೆಯೇ ಮತ್ತೋರ್ವ ಆರೋಪಿ ಮಹೇಶ ಕೂಡ ಬಾಲಕಿಗೆ ಲೈಂಗಿಕವಾಗಿ ಸಹಕರಿಸುವಂತೆ ಕಿರುಕುಳ ನೀಡುತ್ತಿದ್ದ ಹಿನ್ನೆಲೆಯಲ್ಲಿ ಬಾಲಕಿಯ ಪೋಷಕರು ರವಿ ಮತ್ತು ಮಹೇಶ್ ವಿರುದ್ಧ ಹಲಗೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.

ಬಡ ಕುಟುಂಬಕ್ಕೆ ಸೇರಿದ ಅಪ್ರಾಪ್ತ ಬಾಲಕಿ 7ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಳು. ಇವರ ತಂದೆ-ತಾಯಿ ಕೂಲಿ ಕೆಲಸ ಮಾಡುತ್ತಿದ್ದರು. ಪಕ್ಕದ ಮನೆಯಲ್ಲಿ ವಾಸವಾಗಿದ್ದ ರವಿ ಬಾಲಕಿಯ ತಂದೆ- ತಾಯಿ ಕೂಲಿ ಕೆಲಸಕ್ಕೆ ಹೋದ ನಂತರ ಅವರ ಮನೆಗೆ ಹೋಗಿ ಅಪ್ರಾಪ್ತ ಬಾಲಕಿಯನ್ನು ಪುಸಲಾಯಿಸಿ ಅತ್ಯಾಚಾರ ನಡೆಸಿದ್ದ.

ಹಲವು ಬಾರಿ ಅತ್ಯಾಚಾರ ನಡೆಸಿದ ಕಾರಣದಿಂದ ಯುವತಿ ಗರ್ಭವತಿಯಾಗಿದ್ದಳು. ಅಲ್ಲದೆ ಎರಡನೆಯ ಆರೋಪಿ ಮಹೇಶ್ ಎಂಬಾತ ರವಿಗೆ ಸಹಕರಿಸಿದಂತೆ ನನಗೂ ಕೂಡ ಲೈಂಗಿಕವಾಗಿ ಸಹಕರಿಸಬೇಕೆಂದು ಆಕೆಗೆ ಕಿರುಕುಳ ನೀಡುತ್ತಿದ್ದ. ಈ ಹಿನ್ನೆಲೆಯಲ್ಲಿ ಇವರಿಬ್ಬರ ಮೇಲೆ ಹಲಗೂರು ಪೊಲೀಸ್ ಠಾಣೆಯಲ್ಲಿ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು.

ಮಂಡ್ಯ ಜಿಲ್ಲಾ ಸತ್ರ ಮತ್ತು ಪ್ರಧಾನ ನ್ಯಾಯಾಲಯದಲ್ಲಿ ಈ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ನಾಗಜ್ಯೋತಿ ಅವರು ಆರೋಪಿಗಳಿಬ್ಬರೂ ತಪ್ಪಿತಸ್ಥರೆಂದು, ಕಠಿಣ ಸಜೆ ವಿಧಿಸಿ ತೀರ್ಪು ನೀಡಿದ್ದಾರೆ. ಸರ್ಕಾರಿ ಅಭಿಯೋಜಕರಾಗಿ ಪಿ.ಕೆ. ಶಕೀಲಾ ಅಬೂಬಕರ್ ಕಾರ್ಯ ನಿರ್ವಹಿಸಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!