Sunday, May 19, 2024

ಪ್ರಾಯೋಗಿಕ ಆವೃತ್ತಿ

ಮಂಡ್ಯದಲ್ಲೂ ಶೇ.60 ಕನ್ನಡ ಕಡ್ಡಾಯ, ಇಲ್ಲವಾದಲ್ಲಿ ಪರವಾನಿಗೆ ರದ್ದು: ಜಿಲ್ಲಾಧಿಕಾರಿ ಎಚ್ಚರಿಕೆ

ಸರ್ಕಾರದ ಆದೇಶದ ಪ್ರಕಾರ ಸ್ಥಳೀಯ ಪ್ರಾಧಿಕಾರ, ನಗರ ಸಭೆ, ಪುರಸಭೆ, ಗ್ರಾಮ ಪಂಚಾಯಿತಿಗಳಿಂದ ಅನುಮತಿ ಪಡೆದು ಕಾರ್ಯನಿರ್ವಹಿಸುತ್ತಿರುವ ವಾಣಿಜ್ಯ ಕಟ್ಟಡ, ಕೈಗಾರಿಕೆ ಕಟ್ಟಡ, ಆಸ್ಪತ್ರೆ, ಪ್ರಯೋಗಾಲಯ, ಅಂಗಡಿಗಳು, ಹೋಟೆಲ್ ಗಳು ಅನಾವರಣಗೊಳಿಸುವ ನಾಮಪಲಕಗಳಲ್ಲಿ ಶೇ60 ರಷ್ಟು ಕನ್ನಡ ಭಾಷೆ ಬಳಕೆ ಕಡ್ಡಾಯ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ತಿಳಿಸಿದರು.

ಮಂಡ್ಯ ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ವಿಧೇಯಕ – 2022 ನ್ನು ಸಮರ್ಪಕವಾಗಿ ಜಾರಿಗೊಳಿಸುವ ಸಂಬಂಧ ಹಾಗೂ ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ (ತಿದ್ದುಪಡಿ) ವಿಧೇಯಕ- 2024 ರನ್ವಯ ಜಿಲ್ಲಾ ಮಟ್ಟದ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಪರವಾನಗಿ ರದ್ದು

ಪರವಾನಗಿ ರದ್ದು ನಾಮಪಲಕದಲ್ಲಿ ಕನ್ನಡ ಭಾಷೆ ಶೇ 60 ರಷ್ಟು ಇರಬೇಕು ಎಂದು ಈಗಾಗಲೇ ಆದೇಶ ಹೊರಡಿಸಲಾಗಿದೆ. ಇದನ್ನು ಅನುಸರಿಸದಿದ್ದಲ್ಲಿ ಸ್ಥಳೀಯ ಸಂಸ್ಥೆಗಳು ಅಥವಾ ಅನುಷ್ಠಾನ ಪ್ರಾಧಿಕಾರ ಪರವಾನಗಿ ರದ್ದು ಪಡಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಕಾರ್ಖಾನೆಗಳಿಗೆ ಸಂಬಂಧಿಸಿದಂತೆ ಕೈಗಾರಿಕೆ ಇಲಾಖೆ, ಅಂಗಡಿ ಮುಂಗಟ್ಟಿಗೆ -ಸ್ಥಳೀಯ ಸಂಸ್ಥೆಗಳು, ಖಾಸಗಿ ಶಾಲಾ ಕಾಲೇಜು- ಶಿಕ್ಷಣ ಇಲಾಖೆ ಈಗೆ‌ ವಿವಿಧ ಇಲಾಖೆಗಳು 7 ದಿನದೊಳಗಾಗಿ ಪರಿಶೀಲನೆ ನಡೆಸಿ ನಾಮಪಲಕಗಳಲ್ಲಿ ಶೇ 60 ಕನ್ನಡ ಭಾಷೆ ಬಳಸಿರುವ ಬಗ್ಗೆ ವರದಿ ನೀಡಬೇಕು. ಶೇ 60 ಇಲ್ಲದಿದ್ದಲ್ಲಿ ವಿಧಿಸಿರುವ ದಂಡ ಅಥವಾ ಕೈಗೊಂಡಿರುವ ಕ್ರಮಗಳ ಬಗ್ಗೆ ವರದಿ ನೀಡಬೇಕು ಎಂದರು.

ಈ ಅಧಿನಿಯಮದಲ್ಲಿ ಮೊದಲನೇಯ ಬಾರಿ ಅಪರಾಧಕ್ಕೆ ರೂ 5000/- , ಎರಡನೇಯ ಬಾರಿಗೆ ರೂ 10,000/-, ಮೂರನೇಯ ಬಾರಿಗೆ ರೂ 20,000/-, ದಂಡ ಮತ್ತು ನಾಲ್ಕನೇ ಬಾರಿಗೆ ದಂಡದೊಂದಿಗೆ ಪರವಾನಗಿ ರದ್ದು ಪಡಿಸಲು ಅವಕಾಶವಿದೆ. ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಕನ್ನಡ ಭಾಷಾ ನಾಮಪಲಕ ಶೇ 60 ರಷ್ಟು ಅಳವಡಿಕೆ ಯಾಗಿಲ್ಲ ಎಂದು ದೂರುಗಳು ಬಂದಲ್ಲಿ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮಕ್ಕೆ ಶಿಫಾರಸ್ಸು ಮಾಡಲಾಗುವುದು ಎಂದರು.

ಕನ್ನಡ ಭಾಷೆಯು ರಾಜ್ಯದ ಹಾಗೂ ಸ್ಥಳೀಯ ಪ್ರಾಧಿಕಾರದ ಅಧಿಕೃತ ಭಾಷೆಯಾಗಬೇಕೆಂದು ಸರ್ಕಾರ ಆದೇಶವನ್ನು ಹೊರಡಿಸಿದೆ. ಕನ್ನಡ ಭಾಷೆಯನ್ನು ಸಮಗ್ರವಾಗಿ ಅಭಿವೃದ್ಧಿ ಮಾಡುವ ನಿಟ್ಟಿನಲ್ಲಿ ಎಲ್ಲಾ ನಾಮಫಲಕಗಳು ಕಡ್ಡಾಯವಾಗಿ ಶೇ. 60% ಕನ್ನಡ ಭಾಷೆಯಲ್ಲಿ ಹಾಗೂ ಶೇ. 40% ಇತರೆ ಭಾಷೆಗಳಲ್ಲಿ ಇರಬೇಕು ಎಂದು ತಿಳಿಸಿದರು.

ಅಪರ ಜಿಲ್ಲಾಧಿಕಾರಿ ಡಾ. ಎಚ್. ಎಲ್. ನಾಗರಾಜು ಅವರು ಪ್ರತಿ ಮೂರು ತಿಂಗಳಿಗೊಮ್ಮೆ ಅನುಷ್ಠಾನದ ಬಗ್ಗೆ ವರದಿ ಮಾಡಿ ನೋಟಿಸ್ ಜಾರಿ ಮಾಡಿರುವ ಹಾಗೂ ದಂಡ ವಿಧಿಸಿರುವ ಬಗ್ಗೆ ವರದಿಯನ್ನು ಸಲ್ಲಿಸಬೇಕು ಎಂದರು.

ಕನ್ನಡಾಭಿಮಾನ ಮೆರೆಯಬೇಕು

ಕನ್ನಡ ಭಾಷೆಗೆ ಆದ್ಯತೆ ನಾಮಪಲಕ ಬರೆಯುವಾಗ ಮೊದಲು ಅಥವಾ ಮೇಲಿನ ಸಾಲನ್ನು ಕನ್ನಡ ಭಾಷೆಯಲ್ಲಿ ಬರೆಯಬೇಕು ಶೇ 60 ರಷ್ಟು ಕನ್ನಡ ಭಾಷೆಯಲ್ಲಿರಬೇಕು. ನಾಮಫಲಕ ನೋಡಿದ ಸಂದರ್ಭದಲ್ಲಿ ಕನ್ನಡ ಭಾಷೆಗೆ ಆದ್ಯತೆ ನೀಡಿ ಕನ್ನಡಾಭಿಮಾನ ಮೆರೆಯಬೇಕು ಎಂದು ಅಪರ ಜಿಲ್ಲಾಧಿಕಾರಿ ಡಾ.ಹೆಚ್.ಎಲ್ ನಾಗರಾಜು ತಿಳಿಸಿದರು.

ನಾಮಪಲಕದಲ್ಲಿ ಶೇ 60 ರಷ್ಟು ಸ್ಥಳಾವಕಾಶ ಕನ್ನಡ ಭಾಷೆಗೆ ನೀಡಿದ ನಂತರ ಕೆಳಭಾಗದಲ್ಲಿ ಆಂಗ್ಲ, ಹಿಂದಿ ಬೇರೆ ಭಾಷೆಗಳನ್ನು ಬಳಸಿಕೊಳ್ಳಿ ಎಂದರು.

ಸಭೆಯಲ್ಲಿ ಉಪವಿಭಾಗಾಧಿಕಾರಿ ಮಹೇಶ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಮೋಹನ್, ಡಿ.ಡಿ.ಎಲ್.ಆರ್. ಉಮೇಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!