Friday, June 21, 2024

ಪ್ರಾಯೋಗಿಕ ಆವೃತ್ತಿ

ಹೆಚ್.ಡಿ.ಕುಮಾರಸ್ವಾಮಿ ಸೋಲಿಸಲು ಬಿಜೆಪಿ ಸುಪಾರಿ ಕೊಟ್ಟಿದೆಯೇ….

‘ಮೋಶಾ’ಗಳ ಸೋಲಿಸುವ ಸುಪಾರಿಗೆ ವಿಚಲಿತರಾಗಿರುವ ಕುಮಾರಸ್ವಾಮಿಯವರು, ಬಿಜೆಪಿಯ ಹುನ್ನಾರವನ್ನು ಬಯಲು ಮಾಡಲಾಗದೆ ಸಂದಿಗ್ಧಕ್ಕೆ ಸಿಲುಕಿದ್ದಾರೆ. ಆ ಸಿಟ್ಟನ್ನು ಕಾಂಗ್ರೆಸ್ಸಿನ ಡಿ.ಕೆ. ಶಿವಕುಮಾರ್ ಮೇಲೆ ಹಾಕಿ, ಅವರ ‘ಬಂಡವಾಳ’ ಬಯಲು ಮಾಡುತ್ತಿದ್ದಾರೆ. ಡಿ.ಕೆ. ಶಿವಕುಮಾರ್ ಕೂಡ ಕುಮಾರಸ್ವಾಮಿಯವರ ‘ಬಂಡವಾಳ’ ಬಯಲಿಗೆಳೆಯುತ್ತಿದ್ದಾರೆ. ಬಿಜೆಪಿಗೆ ಬೇಕಾಗಿದ್ದು ಇದೇ ಅಲ್ಲವೇ?

ಮಂಡ್ಯ ಲೋಕಸಭಾ ಕ್ಷೇತ್ರದ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ ಎಚ್.ಡಿ. ಕುಮಾರಸ್ವಾಮಿಯವರು ಆತಂಕದಲ್ಲಿದ್ದಾರೆಯೇ? ಈ ಪ್ರಶ್ನೆ ಮಂಡ್ಯದ ಜನರ ನಡುವೆ ಹರಿದಾಡುತ್ತಿದೆ. ಅದಕ್ಕವರು ಕಾರಣಗಳನ್ನೂ ಕೊಡುತ್ತಾರೆ. ಇತ್ತೀಚೆಗೆ ಮಹಿಳೆಯರ ಬಗ್ಗೆ ತೀರಾ ಲಘುವಾಗಿ ಮಾತನಾಡಿದ್ದು, ಕಾಂಗ್ರೆಸ್ಸಿನ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಬಗ್ಗೆ ಆವೇಶಭರಿತರಾಗಿ ಮಾತನಾಡುತ್ತಿರುವುದು ಮತ್ತು ಮಂಡ್ಯಕ್ಕೆ ರಾಹುಲ್ ಗಾಂಧಿ ಬರುತ್ತಿರುವುದನ್ನು ಉಲ್ಲೇಖಿಸುತ್ತಾರೆ.

ಚುನಾವಣಾ ಸಮಯದಲ್ಲಿ ರಾಹುಲ್ ಗಾಂಧಿ ಬರುವುದು, ವಿರೋಧಿಗಳನ್ನು ಹಣಿಯಲು ಆ ರೀತಿ ಆವೇಶಭರಿತ ಮಾತುಗಳನ್ನಾಡುವುದು ಸರ್ವೇ ಸಾಮಾನ್ಯ. ಆದರೆ ಅದೇ ಭರಾಟೆಯಲ್ಲಿ ಮಹಿಳೆಯರ ಬಗ್ಗೆ ಮಾತನಾಡಿದ್ದು, ತೀರಾ ಅಕ್ಷಮ್ಯ. ಅದಕ್ಕವರು ಕ್ಷಮೆ ಕೇಳಿದ್ದಾರೆ, ಇರಲಿ.

ಕುಮಾರಸ್ವಾಮಿಯವರು ಆತಂಕಕ್ಕೊಳಗಾಗಿರುವುದು ಏತಕ್ಕೆ? ಈ ಬಗ್ಗೆ ಕೆದಕುತ್ತಾ ಹೋದಂತೆಲ್ಲ, ಅದು ಬಿಜೆಪಿಯ ಬಣ್ಣವನ್ನು ಬಯಲು ಮಾಡುತ್ತದೆ.

ಜೆಡಿಎಸ್ ವರಿಷ್ಠ ದೇವೇಗೌಡ ಮತ್ತು ಕುಮಾರಸ್ವಾಮಿಯವರಿಗೆ, ಈಗಲೂ ಜಾತ್ಯತೀತ ಸಿದ್ಧಾಂತ ಹೊಂದಾಣಿಕೆಯಾಗುವ ಕಾಂಗ್ರೆಸ್ ಪಕ್ಷದ ಬಗ್ಗೆ ಒಲವಿದೆ. ಆದರೆ ಸಿದ್ದರಾಮಯ್ಯನವರ ಬಗ್ಗೆ ಸಹಿಸಲಸಾಧ್ಯವಾದ ಸಿಟ್ಟಿದೆ. ಆ ಸಿಟ್ಟಿಗಾಗಿ ಅವರು ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿದ್ದಾರೆ. ಮೈತ್ರಿ ಮಾಡಿಕೊಳ್ಳುವಾಗಲೂ, ಹಲವು ರಾಜಕೀಯ ಲಾಭಗಳ ಲೆಕ್ಕಾಚಾರಕ್ಕೆ ಇಳಿದಿದ್ದಾರೆ.

ರಾಜಕಾರಣದಲ್ಲಿ ಅಧಿಕಾರವಿಲ್ಲದೆ ಐದು ವರ್ಷ ಸುಮ್ಮನೆ ಕೂರುವುದು, ಸತ್ತಂತೆ ಎಂದು ಭಾವಿಸುವ ರಾಜಕಾರಣಿಗಳು, ಅಧಿಕಾರಕ್ಕಾಗಿ ಹಪಹಪಿಸುವುದು, ಅದಕ್ಕಾಗಿ ತತ್ವ-ಸಿದ್ಧಾಂತಗಳಿಗೆ ತಿಲಾಂಜಲಿ ಇಡುವುದು ಸಾಮಾನ್ಯ. ಜೆಡಿಎಸ್ ಕೂಡ ಅದೇ ಹಾದಿಯಲ್ಲಿದೆ. ಐದು ವರ್ಷ ಸುಮ್ಮನೆ ಕೂರುವ ಬದಲು, ಮೈತ್ರಿ ಮಾಡಿಕೊಳ್ಳುವುದು. ಅಕಸ್ಮಾತ್ ಲೋಕಸಭಾ ಚುನಾವಣೆಯಲ್ಲಿ ಗೆದ್ದರೆ, ರಾಜ್ಯ ಕಾಂಗ್ರೆಸ್ ಸರ್ಕಾರವನ್ನು ಉರುಳಿಸಿ, ಮತ್ತೆ ಮೈತ್ರಿ ಸರ್ಕಾರವನ್ನು ಪ್ರತಿಷ್ಠಾಪಿಸಬೇಕೆನ್ನುವ ಆಸೆಯಲ್ಲಿದೆ.

ಬಿಜೆಪಿಯೊಂದಿಗೆ ಜೆಡಿಎಸ್ ಮೈತ್ರಿ ಮಾಡಿಕೊಂಡಾಗ, ದೇವೇಗೌಡರು ಮತ್ತು ಕುಮಾರಸ್ವಾಮಿಯವರು ಐದು ಕ್ಷೇತ್ರಗಳನ್ನು ಬಿಟ್ಟುಕೊಡುತ್ತಾರೆಂದು ಭಾವಿಸಿದ್ದರು. ಅದರಲ್ಲಿ ಮೂರನ್ನು ಕುಟುಂಬದ ಸದಸ್ಯರಿಗಾಗಿ, ಎರಡನ್ನು ವ್ಯಾಪಾರಕ್ಕಾಗಿ ಎಂದು ಯೋಚಿಸಿದ್ದರು. ಆದರೆ, ರಾಜ್ಯ ಬಿಜೆಪಿ ನಾಯಕರು ನಿರ್ಧಾರ ತೆಗೆದುಕೊಳ್ಳುವ ಮಟ್ಟದಲ್ಲಿ ಇಲ್ಲವಾದ್ದರಿಂದ, ಪ್ರತಿಯೊಂದಕ್ಕೂ ಹೈಕಮಾಂಡಿನತ್ತ ನೋಡಬೇಕಾದ್ದರಿಂದ, ‘ಮೋಶಾ'(ಮೋದಿ-ಅಮಿತ್ ಶಾ)ಗಳ ಮುಂದೆ ದೇವೇಗೌಡರ ಆಟ ನಡೆಯಲಿಲ್ಲ. ಹಾಗಾಗಿ ಅವರಿಗೆ ಸಿಕ್ಕಿದ್ದು ಮೂರು ಕ್ಷೇತ್ರಗಳು ಮಾತ್ರ.

ಜೆಡಿಎಸ್ ಅಸ್ತಿತ್ವವನ್ನು ಉಳಿಸಿಕೊಳ್ಳಲಿಕ್ಕಾಗಿ ಈಗ ಈ ಮೂರು ಕ್ಷೇತ್ರಗಳನ್ನು ಗೆಲ್ಲಲೇಬೇಕಾಗಿದೆ. ಅದರಲ್ಲೂ ಮಂಡ್ಯ ಲೋಕಸಭಾ ಕ್ಷೇತ್ರದ ಕುಮಾರಸ್ವಾಮಿಯವರ ಗೆಲುವು- ಅಳಿವು ಉಳಿವಿನ ಪ್ರಶ್ನೆಯಾಗಿದೆ.

ಏಕೆಂದರೆ, ದೇವೇಗೌಡರು ಮಾಜಿಗಳಾಗಿ ಮನೆ ಸೇರಿದ ನಂತರ, ಪಕ್ಷವನ್ನು ಮುನ್ನಡೆಸಿದವರು, ಶಾಸಕರನ್ನು ಸಾಕಿದವರು ಕುಮಾರಸ್ವಾಮಿಯವರು. ಅದರ ಖರ್ಚು-ವೆಚ್ಚಗಳನ್ನು ಭರಿಸಿದವರೂ ಅವರೇ. ದೇವೇಗೌಡರ ಇಡೀ ಕುಟುಂಬ, ಖರ್ಚಿನಿಂದ ದೂರವಿದ್ದು, ಅಧಿಕಾರ ಬಂದಾಗ ಹತ್ತಿರವಾಗುವುದು ಎಲ್ಲರಿಗೂ ಗೊತ್ತಿರುವ ಬಹಿರಂಗ ಸತ್ಯ.

ಹಾಗೆಯೇ ಜೆಡಿಎಸ್ ಪ್ರಾಬಲ್ಯವಿರುವುದು ಕೂಡ ಹಳೇ ಮೈಸೂರು ಭಾಗದಲ್ಲಿ. ಹಾಸನ, ತುಮಕೂರು, ಮಂಡ್ಯ, ಕೋಲಾರ, ಚಿಕ್ಕಬಳ್ಳಾಪುರ, ಮೈಸೂರು, ಸ್ವಲ್ಪ ಭಾಗ ಚಾಮರಾಜನಗರ ಮತ್ತು ಕೊಡಗಿನಲ್ಲಿ ಮಾತ್ರ. ಕಳೆದ ವಿಧಾನಸಭಾ ಚುನಾವಣೆಯಲ್ಲಿ, ಈ ಭಾಗದಲ್ಲಿ ಮತಗಳಿಕೆಯಲ್ಲಿ ಜೆಡಿಎಸ್ ಮೂರನೇ ಸ್ಥಾನ್ಕಕೆ ತಳ್ಳಲ್ಪಟ್ಟಿದ್ದು ಗಮನಾರ್ಹ ಅಂಶ.

ಈ ಭಾಗದಲ್ಲಿ ಜೆಡಿಎಸ್ ಮತ್ತೆ ಗೆದ್ದು ಗಟ್ಟಿಗೊಳಿಸಿಕೊಳ್ಳಬೇಕಾದ, ಪಕ್ಷವನ್ನು ರಾಜ್ಯವ್ಯಾಪಿ ವಿಸ್ತರಿಸಬೇಕಾದ ಅನಿವಾರ್ಯತೆ ಇದೆ. ಆ ನಿಟ್ಟಿನಲ್ಲಿ, ಅದು ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳನ್ನು ಎದುರಿಸಿ ನಿಲ್ಲಬೇಕಾಗಿದೆ. ಗೆಲುವು ಅದೆಲ್ಲದಕ್ಕೂ ಉತ್ತರವಾಗಿದೆ.

ಆದರೆ, ಬಿಜೆಪಿಯ ಲೆಕ್ಕಾಚಾರವೇ ಬೇರೆ. ಬಿಜೆಪಿಗೆ ಈಗ ಬೇಕಿರುವುದು ಹಳೇ ಮೈಸೂರು ಭಾಗದಲ್ಲಿ ನೆಲೆಗೊಳ್ಳುವುದು. ಅದಕ್ಕವರು ಉರಿಗೌಡ-ನಂಜೇಗೌಡನನ್ನು ಎಳೆದು ತಂದರು. ಕೆಂಪೇಗೌಡರ ಪ್ರತಿಮೆ ಪ್ರತಿಷ್ಠಾಪಿಸಿದರು. ಒಕ್ಕಲಿಗರ ಸ್ವಾಮಿಗೆ ಅಡ್ಡಬಿದ್ದರು. ಆದರೂ ಒಕ್ಕಲಿಗರನ್ನು ಒಡೆಯಲಾಗಲಿಲ್ಲ, ಗೆಲ್ಲಲೂ ಆಗಲಿಲ್ಲ.

ಈಗ ಜೆಡಿಎಸ್ ಮೈತ್ರಿಯಿಂದಾಗಿ, ದೇವೇಗೌಡ ಮತ್ತು ಕುಮಾರಸ್ವಾಮಿಯವರಿಂದ ಹಳೇ ಮೈಸೂರು ಭಾಗದಲ್ಲಿ ಬಿಜೆಪಿ ಸ್ವಲ್ಪಮಟ್ಟಿಗೆ ನೆಲೆ ಕಂಡುಕೊಳ್ಳಲಾರಂಭಿಸಿದೆ. ಅಕಸ್ಮಾತ್ ಕುಮಾರಸ್ವಾಮಿಯವರು ಗೆದ್ದರೆ, ಜೆಡಿಎಸ್ ಉಳಿಯುತ್ತದೆ. ಇಲ್ಲದಿದ್ದರೆ ನಿರ್ನಾಮವಾಗುತ್ತದೆ. ಅದು ನಿರ್ನಾಮವಾದರೆ, ಅಲ್ಲಿ ಬಿಜೆಪಿ ನೆಲೆಗೊಂಡು ಕಾಂಗ್ರೆಸ್‌ನೊಂದಿಗೆ ನೇರ ಹಣಾಹಣಿಗಿಳಿಯುತ್ತದೆ.

ಅದಕ್ಕಾಗಿ ‘ಮೋಶಾ’ಗಳು ಮಾಡಿರುವ ಪ್ಲಾನ್ ಏನೆಂದರೆ, ಕುಮಾರಸ್ವಾಮಿಯವರನ್ನು ಸೋಲಿಸುವುದು. ಅದಕ್ಕವರು ಬಿಜೆಪಿಯ ಒಕ್ಕಲಿಗ ನಾಯಕರಿಗೆ ಸುಪಾರಿ ಕೊಟ್ಟಿದ್ದಾರೆ. ಎಲ್ಲಿಯವರೆಗೆ ಮೈತ್ರಿ ಮುಂದುವರೆಯುತ್ತದೆಯೋ, ಅಲ್ಲಿಯವರೆಗೆ ಮೈತ್ರಿಯಲ್ಲಿ ಒಕ್ಕಲಿಗರು ಎಂದಾಕ್ಷಣ ದೇವೇಗೌಡ ಮತ್ತು ಕುಮಾರಸ್ವಾಮಿಯವರು ಮುಂದೆ ಬರುತ್ತಾರೆ. ಆರ್. ಅಶೋಕ್, ಅಶ್ವತ್ಥನಾರಾಯಣ, ಸಿಟಿ ರವಿ, ಪ್ರತಾಪ್ ಸಿಂಹ, ಯೋಗೇಶ್ವರ್ ನಗಣ್ಯರಾಗುತ್ತಾರೆ. ಹಾಗಾಗಿ ಇವರಿಗೂ ಕುಮಾರಸ್ವಾಮಿಯವರು ಗೆಲ್ಲುವುದು ಬೇಡವಾಗಿದೆ.

ಅಕಸ್ಮಾತ್ ಕುಮಾರಸ್ವಾಮಿಯವರು ಗೆದ್ದರೆ, ಸಚಿವ ಸ್ಥಾನಕ್ಕೆ ಬೇಡಿಕೆ ಇಡುತ್ತಾರೆ. ಸಚಿವರಾದರೆ, ಪಕ್ಷ ಬಲಪಡಿಸುತ್ತಾರೆ. ಸೋತರೆ ಜೆಡಿಎಸ್ ಕತೆ ಮುಗಿದಂತೆಯೇ. ಇದೇ ತಂತ್ರವನ್ನು ಅವರು ಮಹಾರಾಷ್ಟ್ರದ ಶಿವಸೇನೆ ಮತ್ತು ಎನ್‌ಸಿಪಿಗಳ ಮೇಲೆ ಪ್ರಯೋಗಿಸಿ, ಪಕ್ಷವನ್ನು ತುಂಡರಿಸಿ, ಆಮೇಲೆ ತುಕ್ಡೆ ತುಕ್ಡೆ ಗ್ಯಾಂಗ್ ಎಂದು ಗೇಲಿ ಮಾಡಿ ನಗಾಡಿದ್ದನ್ನು ಈಗಾಗಲೇ ದೇಶದ ಜನ ಕಂಡಿದ್ದಾರೆ. ಆ ಮೂಲಕ ಪ್ರಾದೇಶಿಕ ಅಸ್ಮಿತೆಯನ್ನು ಅಳಿಸಿಹಾಕಿದ್ದಾರೆ.

‘ಮೋಶಾ’ಗಳ ಸೋಲಿಸುವ ಸುಪಾರಿಗೆ ವಿಚಲಿತರಾಗಿರುವ ಕುಮಾರಸ್ವಾಮಿಯವರು, ಬಿಜೆಪಿಯ ಹುನ್ನಾರವನ್ನು ಬಯಲು ಮಾಡಲಾಗದೆ ಸಂದಿಗ್ಧಕ್ಕೆ ಸಿಲುಕಿದ್ದಾರೆ. ಆ ಸಿಟ್ಟನ್ನು ಕಾಂಗ್ರೆಸ್ಸಿನ ಡಿ.ಕೆ. ಶಿವಕುಮಾರ್ ಮೇಲೆ ಹಾಕಿ, ಅವರ ‘ಬಂಡವಾಳ’ ಬಯಲು ಮಾಡುತ್ತಿದ್ದಾರೆ. ಡಿ.ಕೆ. ಶಿವಕುಮಾರ್ ಕೂಡ ಕುಮಾರಸ್ವಾಮಿಯವರ ‘ಬಂಡವಾಳ’ ಬಯಲಿಗೆಳೆಯುತ್ತಿದ್ದಾರೆ. ಬಿಜೆಪಿಗೆ ಬೇಕಾಗಿದ್ದು ಇದೇ ಅಲ್ಲವೇ?

ಆದರೆ, ಡಿಕೆ ಮತ್ತು ಎಚ್‌ಡಿಕೆಯ ‘ಬಂಡವಾಳ’ಕ್ಕಿಂತ ಬಿಜೆಪಿಯ ‘ಬಾಂಡ್ ಬಂಡವಾಳ’ ಬಹಳ ದೊಡ್ಡದು. ಬಿಜೆಪಿಯ ಸುಳ್ಳು ಮತ್ತು ಮೋಸ ಅದಕ್ಕಿಂತ ದೊಡ್ಡದು. ಅದು ದೇಶದ ಜನಕ್ಕೆ ತಿಳಿಯಬೇಕಾದ್ದು.

ಸಂಪಾದಕೀಯ
ಕೃಪೆ: ಈದಿನ.ಕಾಂ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!