Saturday, May 18, 2024

ಪ್ರಾಯೋಗಿಕ ಆವೃತ್ತಿ

ಮಳವಳ್ಳಿ| ಬಿರುಗಾಳಿ ಮಳೆಗೆ ವೀಳ್ಯೆದೆಲೆ ತೋಟ ನಾಶ; ಕೋಟ್ಯಾಂತರ ರೂ. ನಷ್ಟ

ಶುಕ್ರವಾರ ಸಂಜೆ ಸುರಿದ ಬಿರುಗಾಳಿ ಮಳೆಗೆ ಮಳವಳ್ಳಿ ತಾಲ್ಲೂಕಿನ ಹಲಗೂರು ಹೋಬಳಿ ವ್ಯಾಪ್ತಿಯ ಬಾಳೆಹೊನ್ನಿಗ ಗ್ರಾಮದ ನೂರಾರು ರೈತರಿಗೆ ಆಸರೆಯಾಗಿದ್ದ ವೀಳ್ಯೆದೆಲೆ ತೋಟ ನಾಶವಾಗಿ, ಕೋಟ್ಯಾಂತರ ರೂ. ನಷ್ಟ ಸಂಭವಿಸಿದೆ.

ಮಳೆಯೊಂದಿಗೆ ಬಂದ ಬಿರುಗಾಳಿಗೆ ವೀಳ್ಯೆದೆಲೆ ಬಳ್ಳಿಗಳಿಗೆ ಆಸರೆಯಾಗಿದ್ದ ಮರಗಿಡಗಳು ಮುರಿದು ಬಿದ್ದು ಅಪಾರ ಪ್ರಮಾಣದ ನಷ್ಟವುಂಟಾಗಿದೆ. ಗ್ರಾಮದ ನೂರಾರು ಮಂದಿ ರೈತರು, ವೀಳ್ಯೆದೆಲೆ ಬೇಸಾಯವನ್ನೇ ನಂಬಿ ಜೀವನ ಸಾಗಿಸುತ್ತಿದ್ದರು. ಎಲೆ ಕಟಾವು ಹಂತಕ್ಕೆ ಬರಲು ಸುಮಾರು 2 ವರ್ಷಗಳ ಅವಧಿ ಬೇಕಾಗುತ್ತದೆ. ಫಸಲಿಗೆ ಬಂದಿದ್ದ ತೋಟ ನಾಶವಾಗಿರುವ ಹಿನ್ನೆಲೆಯಲ್ಲಿ ಪ್ರತಿ ರೈತನಿಗೆ ಲಕ್ಷಾಂತರ ರೂ. ನಷ್ಟ ಉಂಟಾಗಿದ್ದು, ತಲೆ ಮೇಲೆ ಕೈ ಹೊತ್ತು ಕೂರುವ ಪರಿಸ್ಥಿತಿ ನಿರ್ಮಾಣವಾಗಿದೆ.

ಕೆಂಪಯ್ಯನ ದೊಡ್ಡಿ ಹಾಗೂ ಲಿಂಗಪಟ್ಟಣದಲ್ಲಿ ಮನೆ ಛಾವಣಿ ಹಾರಿ ಹೋಗಿದ್ದು, ವಿದ್ಯುತ್ ಕಂಬಗಳು ಉರುಳಿ ಬಿದ್ದಿವೆ, ಗುಂಡಾಪುರ ಮತ್ತು ಲಿಂಗಪಟ್ಟಣದಲ್ಲಿ ತೆಂಗಿನ ಮರಗಳು ಸುಳಿ ಮುರಿದುಕೊಂಡು ಮುರಿದು ಬಿದ್ದಿರುವ ಘಟನೆ ರೈತನ ಆರ್ತನಾದಕ್ಕೆ ಸಾಕ್ಷಿಯಾಗಿದೆ.

ತಾಲ್ಲೂಕಿನಾದ್ಯಂತ ಶುಕ್ರವಾರ ಸಾಯಂಕಾಲ ಸುರಿದ ಭಾರಿ ಬಿರುಗಾಳಿ ಸಹಿತ ಆಲಿಕಲ್ಲು ಮಳೆಗೆ ಹಲವಾರು ಮನೆಗಳು ಜಖಂ ಗೊಂಡಿದ್ದು ನೂರಾರು ಮರಗಳು ವಿದ್ಯುತ್ ಕಂಬಗಳು ನೆಲಕ್ಕುರುಳಿರುವುದರ ಜೊತೆಗೆ ನೂರಾರು ಎಕರೆ ಬಾಳೆ ತೋಟ, ಜೋಳ ಸೇರಿದಂತೆ ಹಲವಾರು ಬೆಳೆಗಳು ನೆಲಸಮವಾಗಿದ್ದು ಲಕ್ಷಾಂತರ ರೂ ನಷ್ಟ ಉಂಟಾಗಿದೆ.

ಹಲಗೂರು ಸಮೀಪದ ಲಿಂಗಪಟ್ಟಣ ಗ್ರಾಮದ ಬೋರೇಗೌಡರ ಮಗ ಕೃಷ್ಣ ಎಂಬುವರಿಗೆ ಸೇರಿದ ಬಾಳೆತೋಟ ಭಾರಿ ಮಳೆ ಬಿರುಗಾಳಿಯಿಂದ ಸಂಪೂರ್ಣ ನಾಶವಾಗಿದೆ. ಒಟ್ಟು ಸಾವಿರಾರು ಬಾಳೆಮರ ನಾಶವಾಗಿದ್ದು, ಒಂದೂವರೆ ಲಕ್ಷರೂ ನಷ್ಟ ಉಂಟಾಗಿದೆ ಎಂದು ರೈತ ಕೃಷ್ಣ ತಿಳಿಸಿದ್ದಾರೆ.

ಆಲಿಕಲ್ಲು ಮಳೆಯಿಂದ ಇದೇ ರೈತನ ವಾಸದ ಮನೆಯ ಮೇಲ್ಚಾವಣಿ ಸಂಪೂರ್ಣ ಜಖಂಗೊಂಡಿದ್ದು ಬೆಳೆ ಜೊತೆಗೆ ವಾಸದ ಮನೆಯನ್ನೂ ಕಳೆದುಕೊಂಡು ಈ ಕುಟುಂಬ ನಿರಾಶ್ರಿತರಾಗಿದ್ದು ಸರ್ಕಾರದಿಂದ ಸೂಕ್ತ ಪರಿಹಾರ ಕೊಡಿಸಿಕೊಡುವಂತೆ ಕಂದಾಯ ಅಧಿಕಾರಿಗಳನ್ನು ಕೃಷ್ಣ ಆಗ್ರಹಿಸಿದ್ದಾರೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!