Saturday, May 18, 2024

ಪ್ರಾಯೋಗಿಕ ಆವೃತ್ತಿ

ಸಹಕಾರ ಕ್ಷೇತ್ರದ ಅಭಿವೃದ್ಧಿಗೆ ಕೈ ಜೋಡಿಸಿ

ರೈತಬಾಂಧವರು ಸಹಕಾರ ಸಂಸ್ಥೆಗಳು ಹಾಗೂ ಸಹಕಾರ ಬ್ಯಾಂಕುಗಳಲ್ಲಿಯೇ ವ್ಯವಹರಿಸುವ ಮೂಲಕ ಸಹಕಾರ ಕ್ಷೇತ್ರದ ಅಭಿವೃದ್ಧಿಗೆ ಕೈಜೋಡಿಸಬೇಕು ಎಂದು ಮಂಡ್ಯ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಉಪಾಧ್ಯಕ್ಷ ಹೆಚ್.ಕೆ.ಅಶೋಕ್ ಮನವಿ ಮಾಡಿದರು.

ಕೆ.ಆರ್.ಪೇಟೆ ತಾಲ್ಲೂಕಿನ ಶೀಳನೆರೆ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಗೋದಾಮು ಕಟ್ಟಡದ ಉದ್ಘಾಟನೆ ಹಾಗೂ ಸಂಘದ 2022ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ಉದ್ಘಾಟಿಸಿ ಮಾತನಾಡಿದರು.

ಮಂಡ್ಯ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ 5 ಲಕ್ಷ ರೂ.ಗಳವರೆಗೆ ಶೇ.2ರ ಬಡ್ಡಿದರದಲ್ಲಿ ರೈತರಿಗೆ ಸಾಲ ಸೌಲಭ್ಯ ನೀಡುತ್ತಿದ್ದರೆ, ಸ್ತ್ರೀ ಶಕ್ತಿ ಸ್ವಸಹಾಯ ಸಂಘಗಳಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡುವ ಮೂಲಕ ಗುಡಿ ಕೈಗಾರಿಕೆಗಳ ಸ್ಥಾಪನೆಗೆ, ಮಹಿಳಾ ಸಬಲೀಕರಣಕ್ಕೆ ಒತ್ತು ನೀಡಿ ಕೆಲಸ ಮಾಡುತ್ತಿದೆ. ಆದ್ದರಿಂದ ರೈತ ಬಾಂಧವರು ಶೆಡ್ಯೂಲ್ ಬ್ಯಾಂಕುಗಳಲ್ಲಿ ವ್ಯವಹರಿಸದೇ ರೈತರ ಅಭ್ಯುದಯಕ್ಕೆ ಮುಂದಾಗಿರುವ ಸಹಕಾರ ಬ್ಯಾಂಕುಗಳಲ್ಲಿಯೇ ತಮ್ಮ ಹಣಕಾಸಿನ ವ್ಯವಹಾರ ಮಾಡಬೇಕು.

ಸಹಕಾರ ಸಂಘಗಳಲ್ಲಿ ಪಡೆದ ಸಾಲದ ಹಣವನ್ನು ಸಕಾಲದಲ್ಲಿ ಮರುಪಾವತಿ ಮಾಡುವ ಮೂಲಕ ಸಹಕಾರ ಕ್ಷೇತ್ರದ ಪ್ರಗತಿಗೆ ಕೈಜೋಡಿಸಿ ಸರ್ಕಾರದ ವತಿಯಿಂದ ದೊರೆಯುವ ವಿಶೇಷ ಸೌಲಭ್ಯಗಳನ್ನು ಪಡೆದುಕೊಂಡು ಅಭಿವೃದ್ಧಿಯ ಪಥದತ್ತ ಸಾಗಬೇಕು ಎಂದು ಕರೆ ನೀಡಿದರು.

ಶೀಳನೆರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ತೆಂಡೇಕೆರೆ ಗ್ರಾಮದಲ್ಲಿ ನಿರ್ಮಿಸಿರುವ ಗೋದಾಮು ಕಟ್ಟಡದಲ್ಲಿ ಎಂಡಿಸಿಸಿ ಬ್ಯಾಂಕಿನ ಶಾಖೆಯನ್ನು ತೆರೆಯಲು ಎಲ್ಲಾ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ. ಇನ್ನೊಂದು ತಿಂಗಳಲ್ಲಿ ತೆಂಡೇಕೆರೆ ಗ್ರಾಮದಲ್ಲಿ ಬ್ಯಾಂಕ್ ಕಾರ್ಯಾರಂಭ ಮಾಡಲಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶೀಳನೆರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಸ್.ಅಂಬರೀಶ್ ಮಾತನಾಡಿ, ಸಂಘವು ಶೇರುದಾರರು ಹಾಗೂ ರೈತ ಬಾಂಧವರ ಸಹಕಾರದಿಂದ ಅಭಿವೃದ್ಧಿಯ ಪಥದತ್ತ ಸಾಗುತ್ತಿದೆ. ರೈತರು ಸಂಘದಲ್ಲಿ ಪಡೆದ ಸಾಲದ ಹಣವನ್ನು ಸಕಾಲದಲ್ಲಿ ಮರುಪಾವತಿ ಮಾಡುವ ಮೂಲಕ ಸಂಘದ ಮುನ್ನಡೆಗೆ ಸಹಕರಿಸಬೇಕು. ಸಂಘದ ವತಿಯಿಂದ ಸುಸಜ್ಜಿತವಾದ ಸಮುದಾಯ ಭವನದ ನಿರ್ಮಾಣಕ್ಕೆ‌ ಸಂಘದ ಆಡಳಿತ ಮಂಡಳಿಯು ಮುಂದಾಗಿದೆ. ಸಚಿವ ನಾರಾಯಣಗೌಡ ಅವರು ಸಂಘದ ಅಭಿವೃದ್ಧಿಗೆ ವಿಶೇಷ ಅನುದಾನ ನೀಡುವ ಮೂಲಕ ಸಹಕರಿಸಿದ್ದಾರೆ. ಅವರಿಗೆ ಕೃತಜ್ಞತೆ ಸಲ್ಲಿಸುವೆ ಎಂದರು.

ಎಂಡಿಸಿಸಿ ಬ್ಯಾಂಕ್ ನ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಶಶಿಕುಮಾರ್, ಮಂಡ್ಯ ಜಿಲ್ಲಾ ಸಹಕಾರ ಸಂಘಗಳ ಉಪನಿಬಂಧಕ ವಿಕ್ರಮರಾಜೇ ಅರಸ್, ಪಾಂಡವಪುರ ಉಪವಿಭಾಗದ ಸಹಕಾರ ಸಂಘಗಳ ಸಹಾಯಕ ನಿಬಂಧಕ ನಾಗಭೂಷಣ್, ಶೀಳನೆರೆ ಗ್ರಾಮ ಪಂಚಾಯತಿ ಅಧ್ಯಕ್ಷೆ ಗಾಯತ್ರಿ ಸಿದ್ಧೇಶ್, ಉಪಾಧ್ಯಕ್ಷ ಅವಿನಾಶ್, ತೆಂಡೇಕೆರೆ ಗ್ರಾಮ ಪಂಚಾಯತಿ ಅಧ್ಯಕ್ಷೆ ಗಂಗಮ್ಮಕುಮಾರ್, ಉಪಾಧ್ಯಕ್ಷ ಶಿವಲಿಂಗು, ಗ್ರಾಮ ಪಂಚಾಯತಿ ಸದಸ್ಯರಾದ ಎಸ್.ಕೆ.ಪ್ರಕಾಶ್, ಎಸ್.ಪಿ.ಸಿದ್ಧೇಶ್, ಸವಿತಾಬಲರಾಂ ಮತ್ತಿತರರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!