Saturday, May 18, 2024

ಪ್ರಾಯೋಗಿಕ ಆವೃತ್ತಿ

ಕಾಂಗ್ರೆಸ್ ಅಭ್ಯರ್ಥಿ ಬಿ.ಎಲ್.ದೇವರಾಜು ಗೆಲ್ಲಿಸುವುದೇ ನನ್ನ ಗುರಿ: ವಿಜಯ್ ರಾಮೇಗೌಡ

ಕಾಂಗ್ರೆಸ್ ಹೈಕಮಾಂಡ್ ನಿರ್ಧಾರಕ್ಕೆ ನಾನು ಬದ್ಧನಾಗಿದ್ದು, ಕಾಂಗ್ರೆಸ್ ಅಭ್ಯರ್ಥಿ ಬಿ.ಎಲ್.ದೇವರಾಜು ಗೆಲುವಿಗೆ ಪ್ರಾಮಾಣಿಕ ಹೋರಾಟ ಮಾಡುತ್ತೇನೆ ಎಂದು ವಿಜಯರಾಮೇಗೌಡ ಘೋಷಿಸಿದರು.

ಕೆ.ಆರ್.ಪೇಟೆ ಪಟ್ಟಣದ ರಾಮದಾಸ್ ಹೋಟೆಲ್ ನಲ್ಲಿ ಅಭಿಮಾನಿಗಳ ಸಭೆ ನಡೆಸಿ,ಕಾಂಗ್ರೆಸ್ ಅಭ್ಯರ್ಥಿ ಬಿ.ಎಲ್.ದೇವರಾಜು ಅವರ ಕೈ ಹಿಡಿದು ಮೇಲೆತ್ತಿ ಒಗ್ಗಟ್ಟಿನ ಶಕ್ತಿ ಪ್ರದರ್ಶನ ಮಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕೆ.ಆರ್.ಪೇಟೆ ತಾಲ್ಲೂಕಿನಲ್ಲಿ ಕಾಂಗ್ರೆಸ್ ಪಕ್ಷದ ಬಲವರ್ಧನೆಗಾಗಿ ನನ್ನ ಸ್ವಂತ ದುಡಿಮೆಯ ಹಣ ವಿನಿಯೋಗಿಸಿ ಕೆಲಸ ಮಾಡಿದ್ದೇನೆ. ಕೆ.ಆರ್.ಪೇಟೆ ತಾಲ್ಲೂಕಿನ ಆಡಳಿತದಲ್ಲಿ ಬದಲಾವಣೆ ತರಲು ಈ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ದೇವರಾಜು ಅವರು ಭಾರೀ ಬಹುಮತದಿಂದ ಗೆಲುವು ಸಾಧಿಸಲೇ ಬೇಕು.ಆದ್ದರಿಂದ ಯಾವುದೇ ತ್ಯಾಗಕ್ಕೂ ನಾನು ಸಿದ್ಧನಿದ್ದೇನೆ. ಕಾಂಗ್ರೆಸ್ ಗೆಲುವೊಂದೇ ನನ್ನ ಗುರಿಯಾಗಿದೆ. ಕಾಂಗ್ರೆಸ್ ಕಾರ್ಯಕರ್ತರು ಈ ಚುನಾವಣೆಯನ್ನು ಸವಾಲಾಗಿ ಸ್ವೀಕರಿಸಿ ಕಾಂಗ್ರೆಸ್ ಅಭ್ಯರ್ಥಿ ದೇವರಾಜು ಅವರ ಗೆಲುವಿಗೆ ಕಂಕಣತೊಟ್ಟು ದುಡಿಯಬೇಕು ಎಂದು ಕೈಮುಗಿದು ಮನವಿ ಮಾಡಿದರು.

ನಾನು ಹುಟ್ಟೂರಿನ ಋಣ ತೀರಿಸುವ ಉದ್ದೇಶದಿಂದ 2017 ರಲ್ಲಿಯೇ ಮಿತ್ರ ಫೌಂಡೇಶನ್ ಎಂಬ ಸಂಸ್ಥೆ ಸ್ಥಾಪಿಸಿ ತಾಲ್ಲೂಕಿನಲ್ಲಿ ಆರ್ಥಿಕವಾಗಿ ಹಿಂದುಳಿದ ಮಕ್ಕಳ ವಿದ್ಯಾಭ್ಯಾಸಕ್ಕೆ ಸಹಾಯ ಮಾಡಲಾಗಿದೆ. ದೇವಸ್ಥಾನ,ರಂಗಮಂದಿರ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಆರ್ಥಿಕ ಸಹಾಯ ಮಾಡಲಾಗಿದೆ‌.ನಾನು ಪ್ರತಿವರ್ಷ 2.50 ಕೋಟಿಗೂ ಹೆಚ್ಚು ತೆರಿಗೆ ಕಟ್ಟುತ್ತೇನೆ.ನನ್ನ ವಿರುದ್ಧ ಕೆಲವರು ಅಪಪ್ರಚಾರ ಮಾಡಿದರು. ನಾನು ತಾಲ್ಲೂಕಿನ ಮಗನಾಗಿದ್ದು, ನಿಮ್ಮ ಸೇವೆಯನ್ನು ಇನ್ನು ಮುಂದೆಯೂ ಮಾಡುತ್ತೇನೆ ಎಂದರು.

ಕಾಂಗ್ರೆಸ್ ಅಭ್ಯರ್ಥಿ ಬಿ.ಎಲ್.ದೇವರಾಜು ಮಾತನಾಡಿ, ಈ ಚುನಾವಣೆಯು ನನ್ನ ಜೀವನದ ಕೊನೆಯ ಚುನಾವಣೆಯಾಗಿದೆ. ಕಾಂಗ್ರೆಸ್ ಪಕ್ಷವು ನನ್ನ ಸುದೀರ್ಘ ರಾಜಕೀಯ ಸೇವೆ ಹಾಗೂ ನನಗಾಗಿರುವ ಅನ್ಯಾಯವನ್ನು ಪರಿಗಣಿಸಿ ನನ್ನ ಸ್ಪರ್ಧೆಗೆ ಅವಕಾಶ ಮಾಡಿಕೊಟ್ಟಿದೆ. ದಕ್ಷ ಪ್ರಾಮಾಣಿಕ ಆಡಳಿತ ನೀಡಲು, ತಾಲ್ಲೂಕಿನ ಆಡಳಿತದಲ್ಲಿ ಬದಲಾವಣೆ ತರಲು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಕಣದಲ್ಲಿರುವ ನನ್ನ ಗೆಲುವಿಗೆ ಸಹಾಯ ಮಾಡಬೇಕು. ಕಾಂಗ್ರೆಸ್ ಪಕ್ಷ ನನ್ನ ಮನೆ, ಕಾಂಗ್ರೆಸ್ ಕಾರ್ಯಕರ್ತರ ಹಿತ ಕಾಪಾಡುವುದೇ ನನ್ನ ಗುರಿಯಾಗಿದೆ. ಆದ್ದರಿಂದ ಕಾಂಗ್ರೆಸ್ ಕಾರ್ಯಕರ್ತರು ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಲು ಪ್ರಾಮಾಣಿಕವಾಗಿ ದುಡಿಯಬೇಕು. ಪಕ್ಷದ ಕಾರ್ಯಕರ್ತರ ಸಂಘಟಿತ ಹೋರಾಟ ಹಾಗೂ ನಾಯಕರ ಒಗ್ಗಟ್ಟು ನನಗೆ ರಕ್ಷಾ ಕವಚವಾಗಿದೆ ಎಂದು ದೇವರಾಜು ಹೇಳಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಬಿ.ನಾಗೇಂದ್ರಕುಮಾರ್, ಕಿಕ್ಕೇರಿ ಸುರೇಶ್, ಜಿ.ಪಂ ಮಾಜಿ ಸದಸ್ಯ ಕೋಡಿಮಾರನಹಳ್ಳಿ ದೇವರಾಜು, ಮುಖಂಡರಾದ ಮತ್ತಿಘಟ್ಟ ಕೃಷ್ಣಮೂರ್ತಿ, ರಾಚಪ್ಪ, ಶಿವಣ್ಣ, ಪ್ರೇಮಕುಮಾರ್, ಚೇತನಾ ಮಹೇಶ್, ವೆಂಕಟಪ್ಪ, ಬಿ.ಟಿ.ವೆಂಕಟೇಶ್, ಡಿ.ಪ್ರೇಮಕುಮಾರ್, ಮಾಧವಪ್ರಸಾದ್ ಸೇರಿದಂತೆ ನೂರಾರು ಕಾರ್ಯಕರ್ತರು ಸಭೆಯಲ್ಲಿ ಭಾಗವಹಿಸಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!