Saturday, May 4, 2024

ಪ್ರಾಯೋಗಿಕ ಆವೃತ್ತಿ

ಮಂಡ್ಯ | ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿ ಕೆ.ಸಿ.ಜೋಗಿಗೌಡ ಆಯ್ಕೆ

ಮಂಡ್ಯ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ (ಡಿಸಿಸಿ) ಆಡಳಿತ ಮಂಡಳಿ ಅಧಿಕಾರ ಕೈ ವಶವಾಗಿದ್ದು, ನಿರೀಕ್ಷೆಯಂತೆ ಕಾಂಗ್ರೆಸ್ ಬೆಂಬಲಿತ ನಿರ್ದೇಶಕ ಕೆ.ಸಿ.ಜೋಗಿಗೌಡ ಅವರು ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಮಂಡ್ಯ ನಗರದಲ್ಲಿರುವ ಡಿಸಿಸಿ ಬ್ಯಾಂಕ್ ಕಚೇರಿಯಲ್ಲಿ ಇಂದು ನಡೆದ ಚುನಾವಣೆಯಲ್ಲಿ ಜೋಗೀಗೌಡ ಅವರು ಒಮ್ಮತದ ಅಭ್ಯರ್ಥಿಯಾಗಿ ಕಣಕ್ಕಿಳಿದು, ಅವಿರೋಧವಾಗಿ ಆಯ್ಕೆಯಾದರು. ಬಿಜೆಪಿ ಸರ್ಕಾರದ ಅವಧಿಯಲ್ಲಿ ನಾಮ ನಿರ್ದೇಶಿತ ನಿರ್ದೇಶಕರಾಗಿ, ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದ  ಸಿ.ಪಿ. ಉಮೇಶ್ ಅವರ ರಾಜೀನಾಮೆ ಹಿನ್ನೆಲೆಯಲ್ಲಿ ತೆರವಾದ ಅಧ್ಯಕ್ಷ ಸ್ಥಾನಕ್ಕೆ ಇಂದು ಚುನಾವಣೆ ನಡೆಯಿತು. ನೀರಿಕ್ಷೆಯಂತೆ ಹಿರಿಯ ನಿರ್ದೇರ್ಶಕ ಮದ್ದೂರು ತಾಲ್ಲೂಕಿನ ಕೊಪ್ಪ ಗ್ರಾಮದ ಕೆ.ಸಿ.ಜೋಗಿಗೌಡ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಜಾಹೀರಾತು

ಕೈಗಾರಿಕೆ ಮತ್ತು ಇತರೆ ಸಹಕಾರ ಸಂಘಗಳ ಪ್ರತಿನಿಧಿಯಾಗಿ ಡಿಸಿಸಿ ಬ್ಯಾಂಕ್ ನಿರ್ದೇಶಕರಾಗಿದ್ದ ಕೆ.ಸಿ. ಜೋಗಿಗೌಡ ಅವರನ್ನು ಹೊರತುಪಡಿಸಿ ಬೇರ್‍ಯಾರೂ ನಾಮಪತ್ರ ಸಲ್ಲಿಸಿರಲಿಲ್ಲ. ಈ ಹಿನ್ನೆಲೆಯಲ್ಲಿ ಇವರ ಆಯ್ಕೆಯನ್ನು ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ ಅಪರ ಜಿಲ್ಲಾಧಿಕಾರಿ ಡಾ. ಎಚ್.ಎಲ್.ನಾಗರಾಜು ಅವರು ಘೋಷಿಸಿದರು.

ಪ್ರಸ್ತುತ ಕಾಂಗ್ರೆಸ್ ಪಕ್ಷದ 3 ನಾಮನಿರ್ದೇಶಿತ ಸದಸ್ಯರು ಸೇರಿ 9 ಸ್ಥಾನವನ್ನು ಪಡೆದಿದ್ದು, ಜಾ.ದಳ 4 ಮಂದಿ ನಿರ್ದೇಶಕರನ್ನು ಹೊಂದಿದೆ. ಅಪೆಕ್ಸ್ ಬ್ಯಾಂಕ್ ನಿರ್ದೇಶಕ ಅಮರಾವತಿ ಅಶ್ವತ್ ಹಾಗೂ ಮದ್ದೂರು ತಾಲ್ಲೂಕಿನ ಸಂದರ್ಶ ಅವರು ಪ್ರಸ್ತುತ ನಿರ್ದೇಶಕರಾಗಿದ್ದಾರೆ. ಆದರೆ ಅವರು ಯಾವ ಪಕ್ಷದ ಬೆಂಬಲಿತರು ಎಂಬುದು ಸ್ಪಷವಾಗಿಲ್ಲ.

2020ರಲ್ಲಿ ನಡೆದ ಪ್ರಥಮ ಅವಧಿಯ ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಬಿಜೆಪಿ ಸರ್ಕಾರದಿಂದ ನಾಮ ನಿರ್ದೇಶನಗೊಂಡಿದ್ದ ಸಿ.ಪಿ.ಉಮೇಶ್ ಜಾ.ದಳ ನಿರ್ದೇಶಕರು ಹಾಗೂ ನಾಮ ನಿರ್ದೇಶಿತ ಅಧಿಕಾರಿಗಳ ಬೆಂಬಲ ಪಡೆದು ಅಧ್ಯಕ್ಷ ಸ್ಥಾನಕ್ಕೇರಿದ್ದರು. ಅಧ್ಯಕ್ಷರಾಗಿ ಎರಡೂವರೆ ವರ್ಷ ಅಧಿಕಾರ ನಡೆಸಿದ ಸಿ.ಪಿ.ಉಮೇಶ್ ಕಾಂಗ್ರೆಸ್ ಪಕ್ಷಕ್ಕೆ ಚುನಾವಣೆಯಲ್ಲಿ ಬಹುಮತ ದೊರಕಿದ ಹಿನ್ನೆಲೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

ಹಿಂದಿನ ಚುನಾವಣೆ ವೇಳೆ ಜೋಗಿಗೌಡ ಅವರು ಅಧ್ಯಕ್ಷರಾಗಲಿದ್ದಾರೆ ಎಂಬ ಮಾತುಗಳು ಕೇಳಿಬಂದಿದ್ದವು. ಅನಿರೀಕ್ಷಿತ ರಾಜಕೀಯ ಬೆಳವಣಿಗೆಯಲ್ಲಿ ಜಾ.ದಳ-ಬಿಜೆಪಿ ಮೈತ್ರಿ ಹಿನ್ನೆಲೆಯಲ್ಲಿ ಜೋಗಿಗೌಡ ಅವರು ಅಧ್ಯಕ್ಷ ಸ್ಥಾನ ಅಲಂಕರಿಸುವುದು ಸಾಧ್ಯವಾಗಿರಲಿಲ್ಲ. ಪ್ರಸ್ತುತ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ನಿಶ್ಚಿತ ಬಹುಮತದಿಂದ ಅಧಿಕಾರದಲ್ಲಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಪ್ರಥಮವಾಗಿ ಪಕ್ಷದ ತೆಕ್ಕೆಗೆ ಡಿಸಿಸಿ ಬ್ಯಾಂಕ್ ಅಧಿಕಾರ ಒಲಿದು ಬಂದಿದೆ.

ರಮೇಶ್ ಬಾಬುಗೆ ಒಲಿದ ನಾಮ ನಿರ್ದೇಶನ 

ಡಿಸಿಸಿ ಬ್ಯಾಂಕ್ ಆಡಳಿತ ಮಂಡಳಿಗೆ ಸರ್ಕಾರದ ನಾಮ ನಿರ್ದೇಶಕರೊಬ್ಬರನ್ನು ನಾಮಕರಣ ಮಾಡುವ ಅವಕಾಶವಿದ್ದು, ಅದರ ಲಾಭ ಶ್ರೀರಂಗಪಟ್ಟಣ ಕ್ಷೇತ್ರದ ಶಾಸಕ ಎ.ಬಿ.ರಮೇಶ್ ಬಾಬು ಅವರಿಗೆ ಒಲಿದು ಬಂದಿದೆ.

ನಿರ್ದೇಶಕ ಸ್ಥಾನಕ್ಕಾಗಿ ಹಲವು ಪ್ರಭಾವಿಗಳು ಒತ್ತಡ ತಂದ ಹಿನ್ನೆಲೆಯಲ್ಲಿ ಚುನಾವಣೆಯಲ್ಲಿ ಯಾವುದೇ ಅಪಸ್ವರ ಉಂಟಾಗದಂತೆ ಎನ್.ಚಲುವರಾಯಸ್ವಾಮಿ ಮತ್ತು ಪಿ.ಎಂ.ನರೇಂದ್ರಸ್ವಾಮಿ ಅವರು ಶಾಸಕ ರಮೇಶ್ ಬಾಬು ಅವರನ್ನು ತಾತ್ಕಾಲಿಕವಾಗಿ ನಾಮ ನಿರ್ದೇಶನ ಸ್ಥಾನಕ್ಕೆ ಆಯ್ಕೆಗೊಳಿಸಿ ಚುನಾವಣೆ ಪ್ರಕ್ರಿಯೆ ಸುಸೂತ್ರವಾಗಿ ನಡೆಯುವಂತೆ ತಂತ್ರಗಾರಿಕೆ ಹೆಣಿಯುವಲ್ಲಿ ಯಶಸ್ವಿಯಾದರು.

ನೂತನ ಅಧ್ಯಕ್ಷ ಕೆ.ಸಿ ಜೋಗೀಗೌಡ ಮಾತನಾಡಿ, ಸಚಿವ ಚಲುವರಾಯಸ್ವಾಮಿ ಹಾಗೂ ಮಾರ್ಗದರ್ಶಕರಾದ ಶಾಸಕ ನರೇಂದ್ರಸ್ವಾಮಿ ಮತ್ತು ಜಿಲ್ಲೆಯ ಶಾಸಕರು ಹಾಗೂ ನಿರ್ದೇಶಕರ ಬೆಂಬಲದಿಂದ ಬ್ಯಾಂಕ್ ಅಭಿವೃದ್ಧಿಗೆ ಶ್ರಮಿಸಲಾಗುವುದೆಂದು ತಿಳಿಸಿದರು.

ನೂತನ ಅಧ್ಯಕ್ಷರನ್ನು ಚುನಾವಣಾಧಿಕಾರಿ, ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕರು ಹಾಗೂ ಆಡಳಿತ ಮಂಡಳಿ ಸದಸ್ಯರು ಅಭಿನಂದಿಸಿದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!