Sunday, May 19, 2024

ಪ್ರಾಯೋಗಿಕ ಆವೃತ್ತಿ

ಮಂಡ್ಯ| ಪ್ರಜ್ವಲ್ ರೇವಣ್ಣ ಬಂಧನಕ್ಕೆ ಆಗ್ರಹ; ಸಮಗ್ರ ತನಿಖೆಗೆ ಒತ್ತಾಯಿಸಿ ಪ್ರತಿಭಟನೆ

ನೂರಾರು ಹೆಣ್ಣು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿ ತಲೆ ಮರೆಸಿಕೊಂಡಿರುವ ಪ್ರಜ್ವಲ್ ರೇವಣ್ಣನನ್ನು ಕೂಡಲೇ ವಿದೇಶದಿಂದ ಕರೆತಂದು ತನಿಖೆಗೊಳಪಡಿಸಬೇಕು. ಈ ಪ್ರಕರಣದ ಸಂತ್ರಸ್ತರಿಗೆ ಬಲಾಡ್ಯ ಆರೋಪಿಗಳಿಂದ ಅಪಾಯವಿರುವುದರಿಂದ ಅವರಿಗೆ ರಕ್ಷಣೆ ನೀಡಬೇಕೆಂದು ಆಗ್ರಹಿಸಿ ಮಂಡ್ಯ ಜಿಲ್ಲೆಯ ಮಹಿಳಾ ಮತ್ತು ಪ್ರಗತಿಪರ ಸಂಘಟನೆಗಳು ಮಂಡ್ಯನಗರದಲ್ಲಿ ಭಾನುವಾರ ಸಂಜೆ ಪ್ರತಿಭಟನೆ ನಡೆಸಿದವು.

ಮಂಡ್ಯನಗರದ ಸಂಜಯ ವೃತ್ತದಲ್ಲಿ ಪ್ರತಿಭಟನೆ ನಡೆಸಿದ ಪ್ರತಿಭಟನಕಾರರು, ಹೆಣ್ಣು ಮಕ್ಕಳ ಗೌಪ್ಯತೆಗೆ ಧಕ್ಕಯಾಗದಂತೆ ಅತ್ಯಂತ ಸೂಕ್ಷ್ಮವಾಗಿ ತನಿಖೆ ನಡೆಯಬೇಕು. ಸುಭದ್ರತೆ ಮತ್ತು ಘನತೆಯಿಂದ ಜೀವನ ಮುಂದುವರೆಸಲು ಅವಕಾಶವಾಗಬೇಕು. ಪ್ರಜ್ವಲ್ ರೇವಣ್ಣನಿಗೆ ರಾಜತಾಂತ್ರಿಕ ಪಾಸ್‌ಪೋರ್ಟ್ ಅಡಿಯಲ್ಲಿ ವೀಸಾ ಸಿಗುವಂತೆ ಪ್ರಭಾವ ಬೀರಿದವರು ಯಾರು ? ಎಂಬ ವಿಚಾರವನ್ನೂ ಎಸ್‌ಐಟಿ ತನ್ನ ತನಿಖೆಯ ವ್ಯಾಪ್ತಿಗೆ ತೆಗೆದುಕೊಳ್ಳಬೇಕು ಮತ್ತು ಅಂತಹವರನ್ನೂ ಆರೋಪಿಯೆಂದು ಪರಿಗಣಿಸಿ ತನಿಖೆಗೆ ಒಳಪಡಿಸಬೇಕು ಎಂದು ಆಗ್ರಹಿಸಿದರು.

ಅತ್ಯಂತ ಭಯಂಕರವಾದ ಲೈಂಗಿಕ ದೌರ್ಜನ್ಯವೆಸಗಿದ ವ್ಯಕ್ತಿಯನ್ನು ತಮ್ಮ ಅಭ್ಯರ್ಥಿಯನ್ನಾಗಿಸಿ ಕರ್ನಾಟಕದ ಹೆಣ್ಣುಮಕ್ಕಳನ್ನು ಮತ್ತು ಜನತೆಯನ್ನು ಮೂರ್ಖರನ್ನಾಗಿಸಲು ಪ್ರಯತ್ನಿಸಿದ ಬಿಜೆಪಿ- ಜೆಡಿಎಸ್‌ ಪಕ್ಷಗಳು ಬಹಿರಂಗ ಕ್ಷಮಾಪಣೆ ಕೇಳಬೇಕು. ಇತ್ತೀಚೆಗೆ ಕರ್ನಾಟಕದಲ್ಲಿ ನಡೆದಿರುವ ಮಹಿಳೆಯರ ಮೇಲಿನ ಎಲ್ಲಾ ದೌರ್ಜನ್ಯದ ಪ್ರಕರಣಗಳ ನಿಷ್ಪಕ್ಷಪಾತ ತನಿಖೆ ಮತ್ತು ಶಿಕ್ಷೆಯನ್ನು ಖಾತ್ರಿಪಡಿಸಲು, ಹಾಗೆಯೇ ಮುಂದಿನ ದಿನಗಳಲ್ಲಿ ಇಂತಹ ಘಟನೆಗಳನ್ನು ನಿಯಂತ್ರಿಸುವ ಮಾರ್ಗಸೂಚಿ ಕ್ರಮಗಳಿಗಾಗಿ ಉನ್ನತ ಮಟ್ಟದ ಸಮಿತಿಯೊಂದನ್ನು ಸರ್ಕಾರ ಕೂಡಲೇ ರಚಿಸಬೇಕೆಂದು ಆಗ್ರಹಿಸಿದರು.

ಕರ್ನಾಟಕದ ಪ್ರಜ್ಞಾವಂತರಲ್ಲಿ ಆತಂಕ ಮೂಡುವಂತೆ ಸಾಲಾಗಿ ಹೆಣ್ಣುಮಕ್ಕಳ ಮೇಲಿನ ಭೀಭತ್ಸವಾದ ದೌರ್ಜನ್ಯದ ಘಟನೆಗಳು ನಡೆದು ನಮ್ಮನ್ನು ಸಂಕಟದ ಕೂಪಕ್ಕೆ ತಳ್ಳಿವೆ. ಹುಬ್ಬಳ್ಳಿಯಲ್ಲಿ ನಡೆದ ನೇಹಾ ಪ್ರಕರಣದಲ್ಲಿ, ಆಕೆಯ ಆಯ್ಕೆಯನ್ನು ಗೌರವಿಸುವುದನ್ನು ತಿಳಿಯದ ಯುವಕನೊಬ್ಬ ಅತ್ಯಂತ ಭೀಕರವಾಗಿ ಹಾಡುಹಗಲಿನಲ್ಲಿ ಆಕೆಯನ್ನು ತಿವಿದು ಕೊಂದ. ಅದರ ಬೆನ್ನಲ್ಲೇ ಪ್ರಜ್ವಲ್ ರೇವಣ್ಣ ಎಂಬ ಕರ್ನಾಟಕದ ಅತ್ಯಂತ ಬಲಾಡ್ಯ ರಾಜಕಾರಣದ ಕುಟುಂಬದ ಮೂರನೇ ತಲೆಮಾರಿನ ಕುಡಿಯೊಂದು ಹತ್ತಿರ ಹತ್ತಿರ ಮೂರು ಸಾವಿರದಷ್ಟು ಹೆಣ್ಣುಮಕ್ಕಳ ಮೇಲೆ ಲೈಂಗಿಕ ಹಿಂಸಾಕಾಂಡವೊಂದನ್ನು ನಡೆಸಿದ ಸಂಗತಿ ಬೆಳಕಿಗೆ ಬಂದಿದೆ. ಪ್ರಕರಣದಲ್ಲಿ ಆತನ ತಂದೆ. ಹಿರಿಯ ರಾಜಕಾರಣಿ ಎಚ್.ಡಿ ರೇವಣ್ಣ ಅವರ ಹೆಸರೂ ಕೇಳಿಬಂದಿದ್ದು, ಸಾಕ್ಷಿಯೊಬ್ಬರನ್ನು ಅಪಹರಿಸಲು ಪ್ರಯತ್ನಿಸಿದ ಆರೋಪದ ಮೇಲೆ ನಿನ್ನೆ ಅವರ ಬಂಧನವಾಗಿರುವುದು, ಈ ಪ್ರಕರಣದ ಬೇರುಗಳು ಬಹಳ ಅಗಲಕ್ಕೆ ಹರಡಿವೆಯೆಂಬುದನ್ನು ತೋರಿಸುತ್ತಿದೆ, ಆದ್ದರಿಂದ ಈ ಬಗ್ಗೆ ಸಮಗ್ರ ತನಿಖೆ ನಡೆಸಬೇಕೆಂದು ಆಗ್ರಹಿಸಿದರು.

ರಾಜ್ಯ ಸರ್ಕಾರ ಇತ್ತೀಚೆಗೆ ಇಂತಹ ವಿಷಯಗಳನ್ನು ಉನ್ನತ ಮಟ್ಟದ ತನಿಖೆಗೆ ಒಳಪಡಿಸುತ್ತಿರುವುದು ಸ್ವಾಗತಾರ್ಹವಾದುದು. ಅದೇ ಸಮಯದಲ್ಲಿ, ಸಮಾಜವನ್ನು ಇಂತಹ ವಿಷಯಗಳಲ್ಲಿ ಎಚ್ಚರಿಸಿ, ಮಹಿಳೆಯರ ಆಯ್ಕೆಗಳನ್ನು ಮತ್ತು ಹಕ್ಕುಗಳನ್ನು ಗೌರವಿಸುವ ಅರಿವನ್ನು ಮೂಡಿಸುವ ಕೆಲಸದಲ್ಲಿ ಘಟನೆಗಳು ನಡೆಯುವ ಮೊದಲೇ ತಡೆಯಲು ಸಾಧ್ಯವಾಗುವಂತಹ ಸರ್ಕಾರದ ಸಂಸ್ಥೆಗಳನ್ನು ರೂಪಿಸುವಲ್ಲಿ, ಘಟನೆ ನಡೆದ ನಂತರದ ಮತ್ತು ನಡೆಯುವುದನ್ನೇ ತಡೆಯಲು ಬೇಕಿರುವ ನಿಯಂತ್ರಣದ-ಎರಡೂ ಹಂತಗಳಲ್ಲಿ ಕೆಲಸಗಳು ವೇಗವಾಗಿ ಸಾಗುವಂತಹ ನಿಟ್ಟಿನಲ್ಲಿ ಈ ಕೂಡಲೇ ಕಾರ್ಯಪ್ರವೃತ್ತವಾಗಬೇಕೆಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಪ್ರೊ.ಜಿ.ಟಿ.ವೀರಪ್ಪ, ರೈತಸಂಘದ ಲಿಂಗಾಪ್ಪಾಜಿ, ವಿಜಯ ಕುಮಾರ್, ಕರ್ನಾಟಕ ಜನಶಕ್ತಿ ರಾಜ್ಯ ಕಾರ್ಯದರ್ಶಿ ಪೂರ್ಣಿಮ, ಜಿಲ್ಲಾ ಕಾರ್ಯದರ್ಶಿ ಸಿದ್ದರಾಜು, ಜಾಗೃತ ಕರ್ನಾಟಕದ ಎನ್. ನಾಗೇಶ್, ಸುಬ್ರಮಣ್ಯ, ಮುಖಂಡರಾದ ನಗರಕೆರೆ ಜಗದೀಶ್, ಮಹಿಳಾ ಮುನ್ನಡೆಯ ಶಿಲ್ಪ, ಸೌಮ್ಯ, ಮುಖಂಡರಾದ ರಾಧಾಮಣಿ ಹಾಗೂ ಹನುಮಂತಯ್ಯ ಭಾಗವಹಿಸಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!