Monday, May 20, 2024

ಪ್ರಾಯೋಗಿಕ ಆವೃತ್ತಿ

ಎಚ್.ಎಲ್. ಕೇಶವಮೂರ್ತಿ ಎಂದರೆ ಒಂದು ಬಳಗದ ನೆನಪಾಗುತ್ತದೆ – ಕೋಟಗಾನಹಳ್ಳಿ ರಾಮಯ್ಯ


  • ಹೆಚ್ಚೆಲ್ಕೆ 5 ನೇ ವರ್ಷದ ವೈಚಾರಿಕ ಪ್ರಶಸ್ತಿ ಪ್ರದಾನ ಸಮಾರಂಭ

  • ಕೇಶವಮೂರ್ತಿಯವರು ಸೌಮ್ಯ ಸ್ವಭಾವದ ವ್ಯಕ್ತಿ. ಪ್ರಚಾರ  ಪ್ರಿಯರಲ್ಲ

ಸಾಹಿತಿ, ಪತ್ರಕರ್ತ, ಚಿಂತಕ ಕೇಶವಮೂರ್ತಿ ಎಂದರೆ ಒಬ್ಬ ವ್ಯಕ್ತಿಯ ನೆನಪಲ್ಲ. ಅದು ಒಂದು ಬಳಗದ ನೆನಪನ್ನು ಉಂಟುಮಾಡುತ್ತದೆ ಎಂದು ಕೋಲಾರದ ಸಂಸ್ಕೃತಿ ಚಿಂತಕ, ಹೋರಾಟಗಾರ ಕೋಟಗಾನಹಳ್ಳಿ ರಾಮಯ್ಯ ಅಭಿಪ್ರಾಯಪಟ್ಟರು.

ಅವರು ಕರ್ನಾಟಕ ಸಂಘದ ಕೆವಿಎಸ್ ಶತಮಾನೋತ್ಸವ ಭವನದಲ್ಲಿ ಪ್ರೊ||ಹೆಚ್.ಎಲ್.ಕೇಶವಮೂರ್ತಿ ಪ್ರತಿಷ್ಠಾನದ ವತಿಯಿಂದ ಹಮ್ಮಿಕೊಂಡಿದ್ದ ಐದನೇ ವರ್ಷದ ವೈಚಾರಿಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು.

ಹೆಚ್ಚೆಲ್ಕೆ ಅವರು ಅಕ್ಷರ, ನುಡಿ, ನೆನಪುಗಳ ಮೂಲಕ ನಮ್ಮೊಂದಿಗೆ ಸದಾ ಜೀವಂತವಾಗಿದ್ದಾರೆ. ಮಂಡ್ಯ ಎಂದರೆ ಹೆಚ್ಚೆಲ್ಕೆ.ಅವರ ನೆನಪಿನೊಂದಿಗೆ ಲಂಕೇಶ್, ಬೆಸಗರಹಳ್ಳಿ ರಾಮಣ್ಣ, ಸಚ್ಚಿದಾನಂದ, ಸುನಂದಾ ಜಯರಾಂ, ಕೆ.ಬೋರಯ್ಯ, ಜಯಪ್ರಕಾಶಗೌಡ ಸೇರಿದಂತೆ ಹಲವರ ನೆನಪು ಅವರೊಟ್ಟಿಗೆ ಬರುತ್ತದೆ. ವೈಚಾರಿಕತೆಯ ಸಂಪದವನ್ನು ಕಟ್ಟಿದ ಕೈಗಳು ಅವರದಾಗಿತ್ತು ಎಂದು ತಿಳಿಸಿದರು.

nudikarnataka.com

ಲಂಕೇಶ್ ಪತ್ರಿಕೆಯ ಮೂಲಕ ಆದ ಪರಿಚಯ ಇಂದಿನವರೆಗೂ ಉಳಿದಿದೆ. ಲಂಕೇಶ್ ಮುಂದೆ ಅವರು ಸಲಹೆ ಮಂಡಿಸಿದರೆ ಲಂಕೇಶ್ ಅದರ ವಿರುದ್ಧ ಉಸಿರೆತ್ತುತ್ತಿರಲಿಲ್ಲ ಎಂದರೆ ಅದು ಕೇಶವಮೂರ್ತಿ ಆಗಿರುತ್ತಿದ್ದರು. ಅಂತಹ ವ್ಯಕ್ತಿತ್ವ ಅವರಲ್ಲಿತ್ತು. ಇಂತಹವರ ಹೆಸರಿನಲ್ಲಿ ನನ್ನ ಚಿಕ್ಕ ಕೆಲಸವನ್ನು ಗುರುತಿಸಿ ಪ್ರಶಸ್ತಿ ನೀಡುತ್ತಿರುವುದು ನನಗೆ ಭಾರವಾಗಿ ಪರಿಣಮಿಸಿದೆ ಎಂದು ಕೃತಜ್ಞತೆ ಸಲ್ಲಿಸಿದರು.

ಯುವ ಪೀಳಿಗೆಗೆ ವರ್ಗಾಯಿಸಬೇಕೆಂದರೂ ವರ್ಗಾವಣೆಗೊಳಿಸಲು ಸಾಧ್ಯವಾಗದ ಪರಿಸ್ಥಿತಿ ಇಂದಿನ ಶಿಕ್ಷಣ ಪದ್ಧತಿಯಿಂದ ಉಂಟಾಗಿದೆ.100-150 ವರ್ಷಗಳ ಹಿಂದಿನ ದೋಷಪೂರ್ಣ ತಳಹದಿಯ ಮೇಲೆ ಕಟ್ಟಿರುವ ಶಿಕ್ಷಣದ ಕಟ್ಟಡವನ್ನು ಏನು ಮಾಡಲಾಗದ ಸ್ಥಿತಿ ನಿರ್ಮಾಣವಾಗಿದೆ. ಮಕ್ಕಳಿಗೆ ಏನು ಕಲಿಸಬೇಕು ಎಂದು ಯೋಚಿಸುತ್ತಿಲ್ಲ. ಈಗಿರುವ ಪಠ್ಯಗಳು ಬೇಕಾ ಎಂಬುದು ತಂದೆತಾಯಿಗಳಿಗೆ ಗೊತ್ತಾಗುತ್ತಿಲ್ಲ.ಶಿಕ್ಷಣಕ್ಕೂ ಬದುಕಿಗೂ ಸಂಬಂಧವಿಲ್ಲ. ಕುವೆಂಪು, ರಾಜರತ್ನಂ,ಕೈಲಾಸಂ ಮುಂತಾದ ಹಿರಿಯ ಸಾಹಿತಿಗಳು ಮಕ್ಕಳ ಕುರಿತಾಗಿ ಕಟ್ಟಿರುವ ಒಂದು ಪರಂಪರೆಯನ್ನು ಗಮನಿಸುತ್ತಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.

ಸಮಾರಂಭದಲ್ಲಿ ಮಾತನಾಡಿದ ನಿವೃತ್ತ ಪ್ರಾಧ್ಯಾಪಕ ಶಿವಣ್ಣಗೌಡ ಕೇಶವಮೂರ್ತಿಯವರು ಸೌಮ್ಯ ಸ್ವಭಾವದ ವ್ಯಕ್ತಿ. ಪ್ರಚಾರ  ಪ್ರಿಯರಲ್ಲ. ವ್ಯವಸ್ಥೆಯ ವಿರುದ್ಧದ ಅವರ ಪ್ರತಿರೋಧ ಕಹಿಗುಳಿಗೆಯಂತೆ ಇತ್ತು. ಅವರದು ಹೆಂಗರುಳಿನ ಗುಣವಾಗಿತ್ತು ನಿಜಾರ್ಥದಲ್ಲಿ ಅವರೊಬ್ಬ ಜಾತ್ಯತೀತವಾದಿಗಳಾಗಿದ್ದರು ಎಂದು ಬಣ್ಣಿಸಿದರು.

ಕರ್ನಾಟಕ ದಲಿತ ಚಳುವಳಿಯಲ್ಲಿ ಒಬ್ಬರಾದ ಪರಶಸ್ತಿ ಪುರಸ್ಕೃತ ರಾಮಯ್ಯ ಅವರು ತಮ್ಮ ಜೀವನದುದ್ದಕ್ಕೂ ನೆಲಮೂಲ ಸಂಸ್ಕೃತಿಯ ಕುರಿತು ಚಿಂತಿಸಿದವರು. ಅವರ ಸಾಹಿತ್ಯದಲ್ಲಿ ದೇಸಿ ಚಿಂತನೆಯ ಸೊಗಡನ್ನು ಕಾಣಬಹುದು ಎಂದರು.

ಸಮಾರಂಭದಲ್ಲಿ ಸಂಸ್ಕೃತಿ ಚಿಂತಕ ಕೋಲಾರದ ಕೋಟಗಾನಹಳ್ಳಿ ರಾಮಯ್ಯ ಅವರಿಗೆ ಐದನೇ ವರ್ಷದ ಪ್ರೊ|| ಹೆಚ್ಚೆಲ್ಕೆ ವೈಚಾರಿಕ ಪ್ರಶಸ್ತಿಯನ್ನು ನೆನಪಿನ ಕಾಣಿಕೆ, ಹತ್ತು ಸಾವಿರ ರೂ. ನಗದು ನೀಡಿ ಗೌರವಿಸಲಾಯಿತು.

ಸಮಾರಂಭದಲ್ಲಿ ಅಧ್ಯಕ್ಷತೆಯನ್ನು ಹೆಚ್ಚೆಲ್ಕೆ ಪ್ರತಿಷ್ಠಾನದ ಅಧ್ಯಕ್ಷ ಗುರುಪ್ರಸಾದ್ ಕೆರಗೋಡು ವಹಿಸಿದ್ದರು. ವೇದಿಕೆಯಲ್ಲಿ ರೈತ ಮುಖಂಡ ಕೆ.ಬೋರಯ್ಯ,ಎಸ್.ಪೂರ್ಣಚಂದ್ರ ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!