Saturday, May 18, 2024

ಪ್ರಾಯೋಗಿಕ ಆವೃತ್ತಿ

ಮಂಡ್ಯ| ಮಳೆ ಬಂದು ರೈತರಲ್ಲಿ ಸಂತಸ ತಂದರೂ… ಬಾಳೆಬೆಳೆಗೆ ಮಾರಕವಾಯ್ತು !

ಮಂಡ್ಯ ಜಿಲ್ಲೆಯಲ್ಲಿ ಬರ ಹಾಗೂ ಬಿಸಿಲಿನ ಬೇಗೆಗೆ ನಲುಗಿದ್ದ ಜನ- ಜಾನುವಾರುಗಳಿಗೆ ಕಳೆದ ಶುಕ್ರವಾರ ಸಂಜೆ ಸುರಿದ ಮಳೆ ತಂಪೆರೆದರೂ ಬಿರುಗಾಳಿಯಿಂದ ಕೆಲವು ಕಡೆ ತೋಟಗಾರಿಕೆ ಬೆಳೆಗಳನ್ನು ಬೆಳೆದಿದ್ದ ರೈತರಿಗೆ ಮಾರಕವಾಗಿ ಪರಿಣಮಿಸಿದೆ.

ವರುಣನ ಅವಕೃಪೆಯಿಂದ ಜನ-ಜಾನುವಾರುಗಳಲ್ಲದೇ ಹಕ್ಕಿ ಪಕ್ಷಿಗಳಿಗೂ ಕುಡಿಯುವ ನೀರಿನ ತಾತ್ವಾರ  ಉಂಟಾಗಿತ್ತು, ಮೇ ತಿಂಗಳ ಆರಂಭದ ಮೂರನೇ ದಿನದ ಸಂಜೆ ಜಿಲ್ಲೆಯ ಹಲವೆಡೆ ಸಮಾಧಾನಕರವಾದ ಮಳೆ ಬಿದ್ದ ಹಿನ್ನೆಲೆಯಲ್ಲಿ ಕೃಷಿಕನ ಮೊಗದಲ್ಲಿ ಸಂತಸದ ನಗೆ ಕಂಡು ಬಂತು.

ಮಳೆಯ ಜೊತೆ ಬಿದ್ದ ಆಲಿಕಲ್ಲು ಹಾಗೂ ಬಿರುಗಾಳಿಗೆ ಹಲವು ಬೆಳೆಗಳು ನಾಶವಾಗಿವೆ, ತೀವ್ರ ಪ್ರಮಾಣದ ಗುಡುಗು ಹಾಗೂ ಸಿಡಿಲಿಗೆ ಕಲ್ಲಂಗಡಿ ಬೆಳೆ ನಾಶವಾಗಿದ್ದರೆ, ತೆಂಗು ಹಾಗೂ ಬಾಳೆ ಗಿಡಗಳು ನೆಲ್ಲಕ್ಕುರುಳಿ ಅಪಾರ ಪ್ರಮಾಣದ  ಬೆಳೆ ನಷ್ಟವುಂಟಾಗಿರುವ ಬಗ್ಗೆ ವರದಿಯಾಗಿದೆ.

ಮಂಡ್ಯ ತಾಲೂಕಿನ ಪಣಕನಳ್ಳಿ ಗ್ರಾಮದ ರೈತ ಪುಟ್ಟರಾಮು, ಒಂದು ಎಕರೆ ಜಮೀನಿನಲ್ಲಿ ಸೌತೆಕಾಯಿ ಬೆಳೆಯನ್ನು ಬೆಳೆದಿದ್ದು, ಇನ್ನು 15 ದಿನಗಳಲ್ಲಿ ಫಸಲು ಬರುವುದರಲ್ಲಿತ್ತು, ಆದರೆ ನಿನ್ನೆ ಬಿದ್ದ ಬಿರುಮಳೆಯಿಂದ ಸೌತೆಕಾಯಿಯ ಗಿಡದ ಬಳ್ಳಿಗಳು ಆಲಿಕಲ್ಲು ಮಳೆಯಿಂದಾಗಿ ನಾಶವಾಗಿವೆ. ಇದರಿಂದಾಗಿ ಲಕ್ಷಾಂತರ ರೂಪಾಯಿಗಳು ನಷ್ಟ ಉಂಟಾಗಿದೆ. ಸ್ಥಳಕ್ಕೆ ತೋಟಗಾರಿಕೆ ಇಲಾಖೆಯ ದುದ್ದ ವಲಯದ ಅಧಿಕಾರಿ ಕಿರಣ್ ಭೇಟಿ ನೀಡಿ ಪರಿಶೀಲಿಸಿ, ಸರ್ಕಾರದಿಂದ ಬರುವ ಪರಿಹಾರ ಕೊಡಿಸುವುದಾಗಿ ಭರವಸೆ ನೀಡಿದರು.

ಮದ್ದೂರು ತಾಲ್ಲೂಕಿನ ಕೊಪ್ಪ ಹೋಬಳಿಯ ಗಟ್ಟಹಳ್ಳಿ ಗ್ರಾಮದ ರೈತ ಲಿಂಗರಾಜು ಅವರ ಜಮೀನಿನಲ್ಲಿ ಬೆಳೆಯಲಾಗಿದ್ದ ಸಾವಿರಾರು ಬಾಳೆ ಗಿಡಗಳು ಮುರಿದು ಬಿದ್ದು, ಲಕ್ಷಾಂತರ ರೂಪಾಯಿ ನಷ್ಟ ಉಂಟಾಗಿದೆ. ಕೊಳವೆ ಬಾವಿ ಹಾಗೂ ಕೆರೆಗಳಲ್ಲಿದ್ದ ಅಲ್ಪ ಸ್ವಲ್ಪ ನೀರು ಬಳಸಿ ಬೆಳೆದಿದ್ದ ಭತ್ತದ ಬೆಳೆ ಆಲಿಕಲ್ಲು ಹಾವಳಿಯಿಂದ ಉದುರಿ ಹೋಗಿದ್ದು, ಈ ಬಗ್ಗೆ ರೈತರು ಚಿಂತಕ್ರಾಂತರಾಗಿದ್ದಾರೆ.

ತೀವ್ರ ಬರಗಾಲದ ಬೇಗುದಿಗೆ ನಲುಗಿದ್ದ ರೈತರಿಗೆ  ಕಳೆದ ಸಂಜೆ ಸುರಿದ ಒಂದಷ್ಟು ಮಳೆ ನೆರವಾಗಿದ್ದು, ಬಿರುಗಾಳಿಯಿಂದ ಉಂಟಾಗಿರುವ ಕೃಷಿ, ತೋಟಗಾರಿಕೆ ಹಾಗೂ ಕಂದಾಯ ಇಲಾಖೆ ವ್ಯಾಪ್ತಿಯ ನಷ್ಟವನ್ನು ಕಲೆ ಹಾಕಿ ಮಾಹಿತಿ ಸಲ್ಲಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಲಾಗಿದೆ.

ವರದಿ ಬಂದ ನಂತರ ಅಗತ್ಯ ಮಾಹಿತಿಯನ್ನು ಸರ್ಕಾರಕ್ಕೆ ಕಳುಹಿಸಿ, ಪರಿಹಾರ ದೊರಕಿಸಲು ಪ್ರಯತ್ನಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಕುಮಾರ ತಿಳಿಸಿದ್ದಾರೆ.

ಮದ್ದೂರು ತಾಲ್ಲೂಕಿನ ಕಸಬಾ ಹೋಬಳಿಯ ಬೋರಯ್ಯ ಎಂಬ ರೈತನ ಸುಮಾರು ಒಂದೂವರೆ ಎಕರೆ ಪ್ರದೇಶದಲ್ಲಿ ಫಸಲಿಗೆ ಬಂದಿದ್ದ ಬಾಳೆ ತೋಟ ಬಹುತೇಕ ನಾಶವಾಗಿದ್ದು, ಸ್ಥಳಕ್ಕೆ ತೋಟಗಾರಿಕೆ ಸಹಾಯಕ ನಿರ್ದೇಶಕಿ ರೇಖಾ ಭೇಟಿ ನೀಡಿ ನಷ್ಟದ ಅಂದಾಜು ಕಲೆ ಹಾಕಿ, ರೈತನಿಗೆ ಧೈರ್ಯ ತುಂಬಿದ್ದಾರೆ.

ಒಂದು ವರದಿಯ ಪ್ರಕಾರ ಬಿರುಗಾಳಿಗೆ ನಲುಗಿ ಜಿಲ್ಲಾಧ್ಯಂತ ಹಲವಾರು ಮನೆಗಳು ನಾಶವಾಗಿದ್ದು, ವಿದ್ಯುತ್ ಕಂಬಗಳು ಮುರಿದು ಬಿದ್ದಿರುವ ಪರಿಣಾಮ ಸುಮಾರು 60 ಲಕ್ಷಕ್ಕೂ ಹೆಚ್ಚು ಹಾನಿಯಾಗಿರುವ ಘಟನೆ ವಿದ್ಯುತ್ ಇಲಾಖೆವೊಂದರಲ್ಲೇ ಜರುಗಿದೆ.

ಬಿಸಿಲಿನ ಬೇಗೆಗೆ ನಲುಗಿದ್ದ ಬೆಳೆಗಳಿಗೆ ಸಂಜೀವಿನಿಯಾಗಬೇಕಿದ್ದ ಮಳೆರಾಯ ತನ್ನ ಜೊತೆ ಸಿಡಿಲು, ಗುಡುಗು ಹಾಗೂ ಬಿರುಗಾಳಿಯನ್ನು ಹೊತ್ತು ತಂದ ಹಿನ್ನೆಲೆಯಲ್ಲಿ ನೆರವಿಗಿಂತ ರೈತನಿಗೆ ನಷ್ಟವೇ ಹೆಚ್ಚಾಗಿದೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!