ರಾಷ್ಟ್ರಕವಿ ಕುವೆಂಪು ಅವರ ಗೌರವಕ್ಕೆ ಧಕ್ಕೆ ತಂದು ನಾಡಗೀತೆಗೆ ಅವಮಾನಿಸಿದ ರೋಹಿತ್ ಚಕ್ರತೀರ್ಥ ಅವರ ಮೇಲೆ ಕ್ರಮಕೈಗೊಳ್ಳಲು ಆಗ್ರಹಿಸಿ ಪ್ರತಿಭಟನೆ ನಡೆಸಲಾಯಿತು.
ಶ್ರೀರಂಗಪಟ್ಟಣದ ಕುವೆಂಪು ಪ್ರತಿಮೆ ಬಳಿ ಒಕ್ಕಲಿಗ ಸಂಘದ ಸಿ.ಸ್ವಾಮಿಗೌಡರ ನೇತೃತ್ವದಲ್ಲಿ ವಿವಿಧ ಕನ್ನಡ ಸಂಘಟನೆಗಳ ಮುಖಂಡರು ಸೇರಿ ಪಠ್ಯ ಪುಸ್ತಕ ಪರಿಷ್ಕರಣೆ ಸಮಿತಿ ಅಧ್ಯಕ್ಷ ರೋಹಿತ್ ಚಕ್ರ ತೀರ್ಥ ವಿರುದ್ದ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಸ್ವಾಮಿಗೌಡ ಮಾತನಾಡಿ ರಾಷ್ಟ್ರಕವಿ ಕುವೆಂಪು ಬಗ್ಗೆ ಹಾಗೂ ಅವರು ರಚಿಸಿದ ನಾಡಗೀತೆ ಬಗ್ಗೆ ರೋಹಿತ್ ಚಕ್ರತೀರ್ಥನಿಗೆ ಮಾತನಾಡುವ ನೈತಿಕತೆ ಇಲ್ಲ. ಕುವೆಂಪು ಅವರನ್ನು ನಾಡಿನ ಜನ ದೇವರಂತೆ ಪ್ರೀತಿಸುತ್ತಿದ್ದಾರೆ. ಅವರು ಸಾಹಿತ್ಯ ಕ್ಷೇತ್ರಕ್ಕೆ ಅಪಾರವಾದ ಕೊಡುಗೆ ನೀಡಿದ್ದರಿಂದಲೇ ರಾಷ್ಟ್ರಕವಿ ಪಟ್ಟ ನೀಡಿರುವುದು.
ಅವರೊಬ್ಬ ಒಕ್ಕಲಿಗ ಎಂದು ಇಲ್ಲದ ಮಾತನಾಡುವುದು ಅವರ ಸಾಹಿತ್ಯಕ್ಕೆ ಅಗೌರವ ಸಲ್ಲಿಸುವುದು ಸರಿಯಲ್ಲ ಎಂದು ಕಿಡಿಕಾರಿದರು. ಚಕ್ರ ತೀರ್ಥ ಸೇರಿದಂತೆ ಪರಿಷ್ಕರಣೆ ಸಮಿತಿ ಸದಸ್ಯರ ವಿರುದ್ದ ಉಗ್ರ ಪ್ರತಿಭಟನೆಗೆ ಮುಂದಾಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಸರ್ಕಾರ ಈ ಬಗ್ಗೆ ಎಚ್ಚರ ವಹಿಸಬೇಕು. ನಾಡಗೀತೆಗೆ ಅಪಮಾನವಾದರೆ ರಾಜ್ಯದ ಕನ್ನಡಿಗರಿಗೆ ಅಪಮಾನ ಮಾಡಿದಂತೆ.ಕೂಡಲೇ ರೋಹಿತ್ ಚಕ್ರ ತೀರ್ಥ ಅವರನ್ನು ಪಠ್ಯ ಪುಸ್ತಕ ಪರಿಷ್ಕರಣ ಸಮಿತಿಯಿಂದ ಕೈ ಬಿಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯ ಮಾಡಿದರು.
ಒಕ್ಕಲಿಗ ಸಂಘದ ದೇವರಾಜು, ಶಾಮಿಯಾನ ಪುಟ್ಟರಾಜು, ಪುರಸಭಾ ಸದಸ್ಯ ಎಸ್. ನಂದೀಶ್, ಮಹೇಶ್, ಡಾ. ನರಸಿಂಹ, ಮಂಡ್ಯ ರಕ್ಷಣಾ ವೇದಿಕೆ ಅಧ್ಯಕ್ಷ ಶಂಕರ್ ಬಾಬು, ಕಾರ್ಯಪಡೆ ಮಹಿಳಾಧ್ಯಕ್ಷೆ ಪ್ರಿಯಾರಮೇಶ್, ಜಗದೀಶ್, ಶಂಕರೇಗೌಡ, ರೈತ ಮುಖಂಡ ಕಿರಂಗೂರು ಪಾಪು, ಕೃಷ್ಣ ಕುಮಾರ್ ರಮೇಶ್ ಸೇರಿದಂತೆ ಇತರ ಮುಖಂಡರು ಪ್ರತಿಭಟನೆಯಲ್ಲಿದ್ದರು.