Sunday, May 19, 2024

ಪ್ರಾಯೋಗಿಕ ಆವೃತ್ತಿ

ಮನೆ ಯಜಮಾನಿಗೆ ₹ 2000 : ಗೃಹಲಕ್ಷ್ಮಿ ಯೋಜನೆ ಚಾಲನೆಗೆ ಕ್ಷಣಗಣನೆ…. ನಿಮ್ಮ ಮನೆ ಬಾಗಿಲಿನಲ್ಲೇ ಅರ್ಜಿ ಸಲ್ಲಿಸಿ….


  • ನಾಲ್ಕನೇ ಗ್ಯಾರಂಟಿ ಪೂರೈಸಲು ಸಿದ್ದವಾದ ಕಾಂಗ್ರೆಸ್ ಸರ್ಕಾರ 

  • ನಕಲಿ ಅರ್ಜಿಗಳ ಬಗ್ಗೆ ಎಚ್ಚರ : ನೋಂದಾಯಿಸುವುದು ಹೇಗೆ?

ರಾಜ್ಯ ಕಾಂಗ್ರೆಸ್ ಸರ್ಕಾರದ ಬಹುನೀರೀಕ್ಷಿತ ಗ್ಯಾರಂಟಿ ಎಂದರೆ ಮನೆ ಯಜಮಾನಿಗೆ 2 ಸಾವಿರ ರೂ. ನೀಡುವ ‘ಗೃಹಲಕ್ಷ್ಮಿ’ ಯೋಜನೆಯಾಗಿದೆ. ಇಂದು (ಬುಧವಾರ) ಈ ಯೋಜನೆಗೆ ಚಾಲನೆ ನೀಡಲಾಗುತ್ತಿದೆ. ಅದರೊಂದಿಗೆ ನಾಲ್ಕನೇ ಗ್ಯಾರಂಟಿ ಅನುಷ್ಠಾನವಾದಂತಾಗಲಿದೆ.

ಕಾಂಗ್ರೆಸ್ ಪಕ್ಷ ಚುನಾವಣೆಯ ಸಮಯದಲ್ಲಿ ಐದು ಗ್ಯಾರಂಟಿಗಳ ಆಶ್ವಾಸನೆ ನೀಡಿತ್ತು. ಅದರಲ್ಲಿ ಈಗಾಗಲೇ ಶಕ್ತಿ ಯೋಜನೆ ಜಾರಿಯಾಗಿದೆ. ಅನ್ನಭಾಗ್ಯ ಯೋಜನೆಯಲ್ಲಿ ಹೆಚ್ಚುವರಿ ಅಕ್ಕಿಯ ಬದಲು ಹಣ ಖಾತೆಗಳಿಗೆ ಜಮಾ ಆಗುತ್ತಿದೆ. ಗೃಹಜ್ಯೋತಿಯ ನೋಂದಣಿ ಒಂದು ಕೋಟಿ ದಾಟಿದೆ. ಇದೀಗ ಬುಧವಾರ ಗೃಹಲಕ್ಷ್ಮಿ ಜಾರಿಗೆ ಬರುತ್ತಿದೆ. ‘ಯುವನಿಧಿ’ಯೊಂದು ಮಾತ್ರ ತಡವಾಗಲಿದೆ. ವಿಧಾನಸೌಧದ ಬ್ಯಾಂಕ್ವೆಟ್ ಹಾಲ್​ನಲ್ಲಿ ಸಂಜೆ 5ಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಗೃಹಲಕ್ಷ್ಮೀ ಯೋಜನೆಗೆ ಚಾಲನೆ ನೀಡಲಿದ್ದಾರೆ.

ಈ ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಗೃಹಲಕ್ಷ್ಮಿ ಯೋಜನೆಯ ನೋಂದಣಿ ಪ್ರಕ್ರಿಯೆ ಕಾರ್ಯಕ್ರಮವನ್ನು ಬೆಂಗಳೂರಿನ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಬುಧವಾರ ಸಂಜೆ 5 ಗಂಟೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಲಿದ್ದು, ಕೇಂದ್ರ ಸಚಿವರಾದ ನಿರ್ಮಲಾ ಸೀತಾರಾಮನ್‌, ರಾಜೀವ್ ಚಂದ್ರಶೇಖರ್, ಸ್ಪೀಕರ್ ಯು.ಟಿ.ಖಾದರ್, ಪರಿಷತ್ತಿನ ಸಭಾಪತಿ ಬಸವರಾಜ ಹೊರಟ್ಟಿ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಪಾಲ್ಗೊಳ್ಳಲಿದ್ದಾರೆ.

ಗೃಹಲಕ್ಷ್ಮಿ ಯೋಜನೆಗೆ ಬುಧವಾರ ನೋಂದಣಿ ಆರಂಭವಾಗುತ್ತದೆ. ಆ.15ಕ್ಕೆ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಹಣ ಸಂದಾಯ ಆಗಲಿದೆ. ರೇಷನ್ ಕಾರ್ಡ್​ನಲ್ಲಿ ಮನೆಯ ಯಜಮಾನಿಯಾಗಿರುವವರು ಯೋಜನೆಯ ಫಲಾನುಭವಿಯಾಗಲಿದ್ದಾರೆ. ಅವರ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಆಗಿರಬೇಕು. ಅವರ ಪತಿಯ ಆಧಾರ್ ಕಾರ್ಡ್ ನೀಡಬೇಕು. ಜಿಎಸ್​ಟಿ ಹಾಗೂ ಆದಾಯ ತೆರಿಗೆ ಪಾವತಿದಾರರ ಪತ್ನಿಯರಿಗೆ ಈ ಯೋಜನೆ ಅನ್ವಯವಾಗುವುದಿಲ್ಲ. ಬೆಂಗಳೂರು ಒನ್, ಕರ್ನಾಟಕ ಒನ್, ಗ್ರಾಮ ಒನ್, ಗ್ರಾಪಂಗಳಲ್ಲಿರುವ ಬಾಪೂಜಿ ಸೇವಾ ಕೇಂದ್ರಗಳಲ್ಲಿ ನೋಂದಣಿಗೆ ಅವಕಾಶ ಇದೆ. ಸರ್ಕಾರ ನೇಮಕ ಮಾಡಿರುವ ಪ್ರಜಾಪ್ರತಿನಿಧಿಗಳು ಮನೆ ಬಾಗಿಲಿಗೆ ಬಂದು ನೋಂದಣಿ ಮಾಡಲಿದ್ದಾರೆ. ಯೋಜನೆ ಜಾರಿಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳ ಜತೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿಡಿಯೋ ಸಂವಾದ ನಡೆಸಿ ಕೆಲ ಸೂಚನೆ ನೀಡಿದ್ದಾರೆ.

ನಕಲಿ ಅರ್ಜಿಗಳ ಬಗ್ಗೆ ಎಚ್ಚರ

ಗೃಹಲಕ್ಷ್ಮಿ ಯೋಜನೆಗೆ ಸಂಬಂಧಪಟ್ಟಂತೆ ಸಾಮಾಜಿಕ ಜಾಲತಾಣಗಳಲ್ಲಿ ನಕಲಿ ಅರ್ಜಿ ಹರಿದಾಡುತ್ತಿದ್ದು, ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕು. ಯೋಜನೆಗೆ ಸಂಬಂಧಪಟ್ಟಂತೆ ಈವರೆಗೆ ಯಾವುದೇ ಅರ್ಜಿ ನಮೂನೆಗಳನ್ನು ಬಿಡುಗಡೆ ಮಾಡಿಲ್ಲ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಸ್ಪಷ್ಟಪಡಿಸಿದ್ದಾರೆ. ಬೆಂಗಳೂರು ಓನ್, ಕರ್ನಾಟಕ ಒನ್, ಗ್ರಾಮ ಓನ್, ಬಾಪೂಜಿ ಸೇವಾ ಕೇಂದ್ರಗಳಲ್ಲಿ, ಪ್ರಜಾಪ್ರತಿನಿಧಿಗಳ ಬಳಿ ಮಾತ್ರ ನೋಂದಾಯಿಸಿಕೊಳ್ಳಬೇಕು ಎಂದು ಸಚಿವರು ತಿಳಿಸಿದ್ದಾರೆ.

ನೋಂದಾಯಿಸುವುದು ಹೇಗೆ?

ರೇಷನ್ ಕಾರ್ಡ್​ನಲ್ಲಿ ಗುರುತಿಸಿರುವ ಮಹಿಳೆ ಮೊಬೈಲ್ ಸಂಖ್ಯೆಗೆ ನೋಂದಣಿ ದಿನಾಂಕ, ಸಮಯ, ಸ್ಥಳದ ವಿವರ ಎಸ್​ಎಂಎಸ್ ಮೂಲಕ ಕಳುಹಿಸಲಾಗುತ್ತದೆ.

ನೋಂದಣಿ ಮಾಡಿಸಲು ಯಾವುದೇ ರೀತಿಯ ಶುಲ್ಕ ಇರುವುದಿಲ್ಲ. ಪ್ರಜಾಪ್ರತಿನಿಧಿಗಳು ಮನೆ ಬಾಗಿಲಿಗೆ ತೆರಳಿ ನೋಂದಣಿ ಮಾಡಲಿದ್ದಾರೆ. ಸಮಸ್ಯೆಗಳಿದ್ದಲ್ಲಿ 1902ಗೆ ಕರೆ ಮಾಡಿ ಅಥವಾ 8147500500 ಸಂಖ್ಯೆಗೆ ಎಸ್​ಎಂಎಸ್ ಮಾಡಿ ಮಾಹಿತಿ ಪಡೆಯಬಹುದು.

ನಿಗದಿತ ಸಮಯಕ್ಕೆ ಹೋಗಲು ಸಾಧ್ಯವಾಗದಿದ್ದರೆ ಮುಂದಿನ ಯಾವುದೇ ದಿನಾಂಕದಂದು ಸಂಜೆ 5 -7 ಗಂಟೆಯೊಳಗೆ ಭೇಟಿ ನೀಡಿ.

ಆಧಾರ್ ಜೋಡಣೆಯಾಗಿರುವ ಬ್ಯಾಂಕ್ ಬಿಟ್ಟು ಬೇರೆ ಬ್ಯಾಂಕ್​ಗೆ ನೋಂದಣಿ ಮಾಡಿಸಬಹುದು.
ನೋಂದಣಿ ಆದಾಗ ಮಂಜೂರಾತಿ ಪತ್ರ ನೀಡಲಾಗುತ್ತದೆ.

ಪ್ರಜಾಪ್ರತಿನಿಧಿಗಳಲ್ಲಿ ನೋಂದಣಿ ಯಾದರೆ ಮಂಜೂರಾತಿ ಪತ್ರ ತಡವಾಗಿ ತಲುಪಲಿದೆ.

ಡಿಸಿಗಳಿಗೆ ಸೂಚನೆ

ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸುವ ವೇಳೆ ಆಗುವ ಜನದಟ್ಟಣೆ ನಿಯಂತ್ರಣಕ್ಕೆ ಅಗತ್ಯ ಕ್ರಮ ಕೈಗೊಳ್ಳುವಂತೆ ಆಯಾಯ ಜಿಲ್ಲೆಯ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.

  •  ಗೃಹಲಕ್ಷ್ಮಿ ನೋಂದಣಿ ಮಾಡುವ ಕೇಂದ್ರಗಳ ಮೇಲ್ವಿಚಾರಣೆಗೆ ಸರ್ಕಾರಿ ಅಧಿಕಾರಿ/ಸಿಬ್ಬಂದಿ ನಿಯೋಜನೆ
  • ಕೇಂದ್ರಗಳಲ್ಲಿ ಜನದಟ್ಟಣೆ ನಿಯಂತ್ರಣಕ್ಕೆ ಪೊಲೀಸರ ನೇಮಕ
  • ವಿದ್ಯುತ್ ಕೈಕೊಟ್ಟರೆ ನೋಂದಣಿಗೆ ತೊಂದರೆಯಾಗದಂತೆ ಬ್ಯಾಟರಿ ಬ್ಯಾಕ್​ಅಪ್ ಹಾಗೂ ಸುಸ್ಥಿತಿಯಲ್ಲಿರುವ ಪ್ರಿಂಟರ್ ನೀಡುವುದು
  • ಪ್ರತಿ ತಾಲೂಕಿನಲ್ಲಿ ಹೆಲ್ಪ್​ಡೆಸ್ಕ್ ಸ್ಥಾಪನೆ 
  • ಜಿಲ್ಲಾ ಉಸ್ತುವಾರಿ ಸಚಿವರಿಂದ ಪ್ರಜಾಪ್ರತಿನಿಧಿಗಳ ಪಟ್ಟಿ ಪಡೆದು ನೋಂದಣಿ ಮಾಡಿಸಿ ತರಬೇತಿ ನೀಡಬೇಕು
  • ನೋಂದಣಿ ಕೇಂದ್ರದಲ್ಲಿ ಮಳೆಯಿಂದ ರಕ್ಷಿಸಲು ಸೂಕ್ತ ರಕ್ಷಣೆ
  • ನೋಡಲ್ ಅಧಿಕಾರಿಗಳ ವಿವರಗಳನ್ನು ಇ-ಆಡಳಿತ ಇಲಾಖೆಯ ಲಿಂಕ್​ನಲ್ಲಿ ಅಪ್​ಲೋಡ್ ಮಾಡುವುದು

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!