Tuesday, April 30, 2024

ಪ್ರಾಯೋಗಿಕ ಆವೃತ್ತಿ

ಕುಮಾರಸ್ವಾಮಿ ವಿರುದ್ಧ ಚುನಾವಣಾ ಆಯೋಗ ಪ್ರಕರಣ ದಾಖಲಿಸಲಿ: ಡಿ.ಕೆ ಸುರೇಶ್

“ಕುಮಾರಸ್ವಾಮಿ ಅವರ ಹೇಳಿಕೆ ಮಹಿಳಾ ಕುಲಕ್ಕೆ ಮಾಡಿದ ಅಪಮಾನವಾಗಿದ್ದು ಕುಮಾರಸ್ವಾಮಿ ವಿರುದ್ಧ ಸುಮೋಟೋ ಪ್ರಕರಣ ದಾಖಲಿಸಬೇಕು” ಎಂದು ಚುನಾವಣಾ ಆಯೋಗಕ್ಕೆ ಸಂಸದ ಡಿ.ಕೆ. ಸುರೇಶ್ ಆಗ್ರಹಿಸಿದರು.

ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷ ಸೇರ್ಪಡೆ ಕಾರ್ಯಕ್ರಮದ ಬಳಿಕ ಮಾಧ್ಯಮಗಳಿಗೆ ಸುರೇಶ್ ಅವರು ಭಾನುವಾರ ಪ್ರತಿಕ್ರಿಯೆ ನೀಡಿದರು.

ಈ ಸಂದರ್ಭದಲ್ಲೇ ಕುಮಾರಸ್ವಾಮಿ ಅವರ ಗ್ಯಾರಂಟಿ ಯೋಜನೆ ಹಾಗೂ ಮಹಿಳೆಯರ ಕುರಿತ ಹೇಳಿಕೆ ಬಗ್ಗೆ ಸುರೇಶ್ ಅವರು ಪ್ರತಿಕ್ರಿಯೆ ನೀಡಿದ್ದು, “ಕುಮಾರಸ್ವಾಮಿ ಅವರು ಪ್ರತಿ ಹಂತದಲ್ಲೂ ಮಹಿಳೆಯರ ಬಗ್ಗೆ ಕೇವಲವಾಗಿ ಮಾತನಾಡಿದ್ದಾರೆ. ಈ ಹಿಂದೆಯೂ ಅನೇಕ ಬಾರಿ ಇಂತಹ ಹೇಳಿಕೆ ನೀಡಿದ್ದಾರೆ. ಮಹಿಳೆಯರು ಗ್ಯಾರಂಟಿ ಪಡೆಯುತ್ತಿರುವುದರನ್ನು ಬೇರೆ ರೀತಿ ವ್ಯಾಖ್ಯಾನ ಮಾಡಿರುವುದು ಮಹಿಳಾ ಕುಲಕ್ಕೆ ಮಾಡಿದ ಅಪಮಾನ” ಎಂದು ಹೇಳಿದರು.

“ಸ್ವಾಭಿಮಾನದ ಬದುಕು ಬದುಕಲು ನಾವು ಈ ಯೋಜನೆ ಕೊಟ್ಟಿದ್ದೇವೆ. ಮಹಿಳಾ ಸಬಲೀಕರಣದ ಬಗ್ಗೆ ನಾವೆಲ್ಲರೂ ಮಾತನಾಡುತ್ತೇವೆ. ಅದಕ್ಕೆ ಪ್ರೋತ್ಸಾಹ ನೀಡುವ ಕಾರ್ಯಕ್ರಮದ ಬಗ್ಗೆ ಇಷ್ಟು ಕೀಳಾಗಿ ಮಾತನಾಡಿರುವುದು ಎಲ್ಲರೂ ತಲೆತಗ್ಗಿಸುವ ವಿಚಾರ. ಚುನಾವಣಾ ಆಯೋಗ ಸುಮೋಟೋ ಪ್ರಕರಣ ದಾಖಲಿಸಿಕೊಳ್ಳಬೇಕು” ಎಂದು ಆಗ್ರಹಿಸಿದರು.

“ಈ ಗ್ಯಾರಂಟಿ ಯೋಜನೆ ಮಹಿಳೆಯರು ಹಾಗೂ ಅವರ ಕುಟುಂಬದ ಆರ್ಥಿಕ ವ್ಯವಸ್ಥೆಗೆ ಬದಲಾವಣೆ ತಂದಿದೆ. ಇದನ್ನು ಸಹಿಸಲಾಗದೇ ಇಂತಹ ಹೇಳಿಕೆ ನೀಡಲಾಗುತ್ತಿದೆ” ಎಂದು ಆರೋಪಿಸಿದರು.

ಪ್ರಧಾನಿ ಹೇಳಿಕೆಗೆ ಸುರೇಶ್ ಕಿಡಿ

ಡಿ.ಕೆ ಸಹೋದರರು ಬೇರೆ ರಾಜ್ಯಗಳಿಗೆ ಹಣ ರವಾನಿಸುತ್ತಿದ್ದಾರೆ ಎಂಬ ಪ್ರಧಾನಿ ಮೋದಿ ಅವರ ಆರೋಪದ ಬಗ್ಗೆ ಉತ್ತರಿಸಿದ ಡಿಕೆ ಸುರೇಶ್ ಅವರು, “ಪ್ರಧಾನಮಂತ್ರಿಗಳು ಮೊದಲು ನಮ್ಮ ತೆರಿಗೆ ಹಣವನ್ನು ಬೇರೆ ರಾಜ್ಯಗಳಿಗೆ ನೀಡುತ್ತಿರುವ ಬಗ್ಗೆ ಮಾತನಾಡಲಿ. ಬೇರೆ ರಾಜ್ಯಗಳಿಗೆ ಯಾಕೆ ಹೆಚ್ಚು ಹಣ ನೀಡಿ ನಮಗೆ ಅನ್ಯಾಯ ಮಾಡುತ್ತಿದ್ದಾರೆ? ಕರ್ನಾಟಕಕ್ಕೆ ಅವರ ಕೊಡುಗೆ ಏನು? ನೀರಾವರಿ ವಿಚಾರದಲ್ಲಿ ಯಾವ ಸಮಸ್ಯೆ ಬಗೆಹರಿಸಿದ್ದಾರೆ? ಹತ್ತು ವರ್ಷಗಳಲ್ಲಿ ಬೆಂಗಳೂರಿಗೆ ಕೊಟ್ಟಿರುವ ಕೊಡುಗೆ ಏನು? ಬೆಂಗಳೂರು ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ಏನು ಎಂದು ಪ್ರಧಾನಮಂತ್ರಿಗಳು ಹೇಳಬೇಕು” ಎಂದು ಹೇಳಿದರು.

“ಕೇವಲ ರಾಜಕೀಯ ಭಾಷಣ ಮಾಡಿ ಜನರ ದಾರಿ ತಪ್ಪಿಸುವುದು ಅಪ್ರಸ್ತುತ. ಅವರು ಮಾಧ್ಯಮಗಳ ಮೂಲಕ ಎಷ್ಟು ಸುಳ್ಳು ಹೇಳಿದ್ದಾರೆ? ಅವರ ಯಾವ ಕೆಲಸ ಮಾಡಿದ್ದಾರೆ ಎಂದು ಹೇಳಬೇಕು. ಈ ದೇಶದ ಯುವಕರನ್ನು ಹೇಗೆ ದಾರಿ ತಪ್ಪಿಸಿದ್ದೀರಿ ಎಂದು ಸಾರ್ವಜನಿಕವಾಗಿ ಮಾತನಾಡಬೇಕು. ಅದನ್ನು ಬಿಟ್ಟು ಬೇರೆಯವರ ಮೇಲೆ ಸುಮ್ಮನೆ ಆರೋಪ ಮಾಡಿ ಹೋದರೆ ಪ್ರಯೋಜನವಿಲ್ಲ. ಇದನ್ನು ಜನ ನೋಡಿದ್ದಾರೆ. ಇದಕ್ಕೆ ಜನ ತಕ್ಕ ಉತ್ತರ ನೀಡುತ್ತಾರೆ” ಎಂದು ತಿಳಿಸಿದರು.

” ಜನ ನನಗೆ ಬೆಂಬಲ ನೀಡುತ್ತಿದ್ದಾರೆ”

ಪಕ್ಷ ಸೇರ್ಪಡೆ ವಿಚಾರವಾಗಿ ಮಾಧ್ಯಮದ ಪ್ರಶ್ನೆಗೆ, “ಇಂದು ರಾಜರಾಜೇಶ್ವರಿ ನಗರ ಕ್ಷೇತ್ರದಲ್ಲಿ ಕಳೆದ ಮೂರು ಚುನಾವಣೆಗಳಿಗಿಂತ ಹೆಚ್ಚಿನ ಉತ್ಸಾಹ ಹಾಗೂ ಪ್ರೋತ್ಸಾಹ ಕಾಣಿಸುತ್ತಿದೆ. ಇಂದು ನಮ್ಮ ವಿರುದ್ಧ ನಡೆಯುತ್ತಿರುವ ಬೇರೆ ರೀತಿಯ ಪ್ರಚಾರಕ್ಕೆ ವಿರುದ್ಧವಾಗಿ ಜನ ನನಗೆ ಬೆಂಬಲ ನೀಡುತ್ತಿದ್ದಾರೆ” ಎಂದರು.

ರಾಜ್ಯ ಮಹಿಳಾ ಆಯೋಗದಿಂದ ಕೇಸ್

ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರುವ ಐದು ಗ್ಯಾರಂಟಿ ಯೋಜನೆಗಳಿಂದಾಗಿ ಹಳ್ಳಿ ಹೆಣ್ಣು ಮಕ್ಕಳು ದಾರಿ ತಪ್ಪಿದ್ದಾರೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದ ಜೆಡಿಎಸ್ ರಾಜ್ಯಾಧ್ಯಕ್ಷ ಹಾಗೂ ಮಾಜಿ ಸಿಎಂ ಹೆಚ್‌ಡಿ ಕುಮಾರಸ್ವಾಮಿ ವಿರುದ್ಧ ರಾಜ್ಯ ಮಹಿಳಾ ಆಯೋಗ ಸ್ವಯಂಪ್ರೇರಿತ ಕೇಸ್ ದಾಖಲಿಸಿಕೊಂಡಿದೆ. ಸುಮೋಟೋ‌ ಪ್ರಕರಣ ದಾಖಲಿಸಿಕೊಂಡಿದ್ದು, ನೋಟಿಸ್‌ ಜಾರಿ ಮಾಡಲಿದೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!