Friday, May 17, 2024

ಪ್ರಾಯೋಗಿಕ ಆವೃತ್ತಿ

ಮಧ್ಯಪ್ರದೇಶ| ಧ್ವನಿವರ್ಧಕ ಬಳಕೆ, ಮಾಂಸ ಮಾರಾಟ ನಿಯಂತ್ರಣಕ್ಕೆ ಆದೇಶಿಸಿದ ನೂತನ ಸಿಎಂ

ಮಧ್ಯಪ್ರದೇಶದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಮೋಹನ್ ಯಾದವ್ ಅವರು ರಾಜ್ಯದ ಸಾರ್ವಜನಿಕ, ಧಾರ್ಮಿಕ ಸ್ಥಳಗಳಲ್ಲಿ ಧ್ವನಿವರ್ಧಕಗಳ ಬಳಕೆ ಮತ್ತು ರಾಜ್ಯಾದ್ಯಂತ ಮಾಂಸ,ಮೀನು ಮಾರಾಟ ನಿಯಂತ್ರಣ ಕುರಿತು ಆದೇಶ ಹೊರಡಿಸಿದ್ದಾರೆ.

ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಬೆನ್ನಲ್ಲೇ ಮೊದಲ ಸಚಿವ ಸಂಪುಟ ಸಭೆ ನಡೆಸಿದ ಯಾದವ್, ಧಾರ್ಮಿಕ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಧ್ವನಿವರ್ಧಕ, ಡಿಜೆಗಳನ್ನು ನಿಗದಿತ ನಿಯಮಗಳ ಪ್ರಕಾರ ಮಾತ್ರ ಬಳಸಬಹುದೆಂದು ನಿರ್ದೇಶನ ನೀಡಿದ್ದಾರೆ.

ಕೋಮುವಾದಿ ಭಾಷಣ ಮತ್ತು ಹಿಂದುತ್ವಕ್ಕೆ ಹೆಸರುವಾಸಿಯಾದ ಯಾದವ್, ರಾಜ್ಯದಲ್ಲಿ ಪರವಾನಗಿಯಿಲ್ಲದೆ ಮಾಂಸ, ಮೀನು ಇತ್ಯಾದಿಗಳನ್ನು ಅಕ್ರಮವಾಗಿ ಖರೀದಿಸುವುದು ಮತ್ತು ಮಾರಾಟ ಮಾಡುವುದನ್ನು ನಿಷೇಧಿಸಲು ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ ಎಂದು ತಿಳಿದು ಬಂದಿದೆ.

ಶಬ್ದ ಮಾಲಿನ್ಯ ಮತ್ತು ಧ್ವನಿವರ್ಧಕಗಳ ಅಕ್ರಮ ಬಳಕೆಯನ್ನು ಪರಿಶೀಲಿಸಲು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಫ್ಲೈಯಿಂಗ್ ಸ್ಕ್ವಾಡ್‌ಗಳನ್ನು ರಚಿಸಲು ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ.

ಈ ತಂಡಗಳು ಧಾರ್ಮಿಕ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಧ್ವನಿವರ್ಧಕಗಳ ಬಳಕೆಯನ್ನು ಪರಿಶೀಲಿಸಲಿದೆ. ಸರ್ಕಾರ ರೂಪಿಸಿದ ನಿಯಮಗಳನ್ನು ಉಲ್ಲಂಘಿಸಿದರೆ ಗರಿಷ್ಠ ಮೂರು ದಿನಗಳಲ್ಲಿ ತನಿಖೆ ನಡೆಸಿ ಸರ್ಕಾರಕ್ಕೆ ವರದಿ ನೀಡಲಿದೆ.

ಮುಂಬರುವ ಅಯೋಧ್ಯೆಯ ರಾಮ ಮಂದಿರದ ಉದ್ಘಾಟನಾ ಸಮಾರಂಭವನ್ನು ನಮ್ಮ ಅದೃಷ್ಟ ಎಂದಿರುವ ಮೋಹನ್ ಯಾದವ್, ರಾಮ ಮಂದಿರಕ್ಕೆ ತೆರಳುವ ಎಲ್ಲಾ ರಾಮ ಭಕ್ತರನ್ನು ಪ್ರತಿ ಜಿಲ್ಲೆಗಳಲ್ಲೂ ಸರ್ಕಾರದ ವತಿಯಿಂದ ಸ್ವಾಗತಿಸಲಾಗುವುದು ಎಂದು ಹೇಳಿದ್ದಾರೆ.

ಮಾಂಸದಂಗಡಿಗಳು ಮತ್ತು ಮೊಟ್ಟೆ ಮಾರಾಟ ಮಾಡುವ ಅಂಗಡಿಗಳು ಸರ್ಕಾರದ ಮಾರ್ಗಸೂಚಿಗಳಿಗೆ ಬದ್ಧವಾಗಿರುವುವಂತೆ ನೋಡಿಕೊಳ್ಳಲು ಅವರಿಗೆ ಜಾಗೃತಿ ಮೂಡಿಸುವ ಸಲುವಾಗಿ “ಆಹಾರ ಸುರಕ್ಷತಾ ನಿಯಮ” ರೂಪಿಸಲು ಸಚಿವ ಸಂಪುಟ ನಿರ್ಧರಿಸಿದೆ.

ಡಿಸೆಂಬರ್ 13ರಂದು ಭೋಪಾಲ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಸೇರಿದಂತೆ ಭಾರತೀಯ ಜನತಾ ಪಕ್ಷದ (ಬಿಜೆಪಿ) ನಾಯಕರ ಸಮ್ಮುಖದಲ್ಲಿ ಮೋಹನ್ ಯಾದವ್ ಅವರಿಗೆ ಮುಖ್ಯಮಂತ್ರಿಯಾಗಿ ರಾಜ್ಯಪಾಲ ಮಂಗುಭಾಯ್ ಸಿ. ಪಟೇಲ್ ಪ್ರಮಾಣ ವಚನ ಬೋಧಿಸಿದ್ದಾರೆ.

ಯಾದವ್ ರಾಜ್ಯ ಸರ್ಕಾರದ ಆಡಳಿತವನ್ನು ವಹಿಸಿಕೊಳ್ಳುವುದರೊಂದಿಗೆ, ಶಿವರಾಜ್ ಸಿಂಗ್ ಚೌಹಾಣ್ ಅವರ 18 ವರ್ಷಗಳ ಆಡಳಿತ ಕೊನೆಗೊಂಡಿದೆ.

ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಕಟ್ಟಾಳುವಾಗಿರುವ ಮೋಹನ್ ಯಾದವ್, ಮುಸ್ಲಿಮರ ವಿರುದ್ಧ ಕೋಮುವಾದಿ ಭಾಷಣ ಮಾಡುವ ಮೂಲಕವೇ ಮುನ್ನಲೆಗೆ ಬಂದವರು. ಇದರಿಂದಲೇ ರಾಜಕೀಯ ಮತ್ತು ಆರ್ಥಿಕವಾಗಿ ಬಲಿಷ್ಠರಾದವರು. ಅವರ ಹಿಂದುತ್ವವಾದ ಚುನಾವಣೆ ಗೆಲುವು ಮತ್ತು ಸಿಎಂ ಸ್ಥಾನಕ್ಕೇರುವಲ್ಲಿ ಮುಖ್ಯ ಪಾತ್ರ ವಹಿಸಿತ್ತು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!