Sunday, May 19, 2024

ಪ್ರಾಯೋಗಿಕ ಆವೃತ್ತಿ

ಮಧ್ಯ ಪ್ರದೇಶ | ಅಂಬೇಡ್ಕರ್ – ಪಟೇಲ್ ಪ್ರತಿಮೆ ವಿವಾದ: ಎರಡು ಸಮುದಾಯಗಳ ನಡುವೆ ಘರ್ಷಣೆ

ವಿವಾದಿತ ಸ್ಥಳವೊಂದರಲ್ಲಿ ಅಂಬೇಡ್ಕರ್ ಹಾಗೂ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಪ್ರತಿಮೆ ನಿರ್ಮಿಸುವ ವಿಚಾರದಲ್ಲಿ ದಲಿತರು ಹಾಗೂ ಪಾಟಿದಾರ್ ಸಮುದಾಯದ ನಡುವೆ ಘರ್ಷಣೆ ಉಂಟಾಗಿರುವ ಘಟನೆ ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ ನಡೆದಿರುವುದಾಗಿ ವರದಿಯಾಗಿದೆ.

ವಿವಾದಿತ ಸ್ಥಳದಲ್ಲಿ ಪಾಟಿದಾರ್ ಸಮುದಾಯದ ಗುಂಪು ಬುಧವಾರ ರಾತ್ರಿ ಸರ್ದಾರ್ ಪಟೇಲ್ ಅವರ ವಿಗ್ರಹವನ್ನು ಪ್ರತಿಷ್ಠಾಪಿಸಿದ್ದರು. ಗುರುವಾರ ಬೆಳಗ್ಗೆ ಇದು ಗಮನಕ್ಕೆ ಬರುತ್ತಿದ್ದಂತೆಯೇ ಒಂದುಗೂಡಿದ ದಲಿತ ಸಮುದಾಯದವರು ಟ್ರ್ಯಾಕ್ಟರ್‌ ಬಳಸಿ ಪ್ರತಿಮೆ ಉರುಳಿಸಿದ್ದಾರೆ.

ಇದೇ ಸ್ಥಳದಲ್ಲಿ ಸಂವಿಧಾನ ಶಿಲ್ಪಿ ಡಾ. ಅಂಬೇಡ್ಕರ್ ಅವರ ಪ್ರತಿಮೆಯನ್ನು ಸ್ಥಾಪಿಸಬೇಕು ಎಂದು ದಲಿತರು ಒತ್ತಾಯಿಸಿದ್ದರು. ಬಿಜೆಪಿ ಆಡಳಿತವಿರುವ ಮಧ್ಯಪ್ರದೇಶದಲ್ಲಿ ಆಡಳಿತ ಪಕ್ಷದೊಂದಿಗೆ ಸಂಬಂಧ ಹೊಂದಿರುವ ಪಾಟಿದಾರರು ಸರ್ದಾರ್ ಪಟೇಲ್ ಪ್ರತಿಮೆಯನ್ನು ನಿರ್ಮಿಸಲು ಬಯಸಿದ್ದರು. ಈ ವಿವಾದದ ನಡುವೆಯೇ ಪಟೇಲ್ ಪ್ರತಿಮೆಯನ್ನು ಕೆಲವುರ ರಾತ್ರೋರಾತ್ರಿ ತಂದು ನಿಲ್ಲಿಸಿದ್ದರಿಂದ ದಲಿತ ಸಮುದಾಯದ ಮಂದಿ ಆಕ್ರೋಶಗೊಂಡು, ಈ ಕೃತ್ಯ ಎಸಗಿರುವುದಾಗಿ ವರದಿಯಾಗಿದೆ.

ಟ್ರ್ಯಾಕ್ಟರ್‌ಗಳನ್ನು ಬಳಸಿ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಪ್ರತಿಮೆಯನ್ನು ಉರುಳಿಸಿ, ಆ ಬಳಿಕ ಕಲ್ಲೆಸೆಯುತ್ತಿರುವ ದೃಶ್ಯಗಳು ಸೋಷಿಯಲ್ ಮೀಡಿಯಾಗಳಲ್ಲಿ ಹರಿದಾಡಿದೆ.

ಘಟನೆಯ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಆಗಮಿಸಿದ ಪೊಲೀಸರು, ಗುಂಪನ್ನು ಚದುರಿಸಿದ್ದಾರೆ. ಪ್ರತಿಮೆ ಪ್ರತಿಪ್ಠಾಪನೆಯ ವಿಚಾರವಾಗಿ ಸ್ಥಳೀಯ ಪಂಚಾಯತ್ ಜೊತೆಗೆ ಚರ್ಚಿಸಲಾಗುತ್ತಿದೆ. ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಘಟನೆಯ ಬಗ್ಗೆ ಮಾಹಿತಿ ನೀಡಿರುವ ಉಜ್ಜಯಿನಿ ಪೊಲೀಸ್ ಅಧೀಕ್ಷಕ ಸಚಿನ್ ಶರ್ಮಾ, ಈ ಘಟನೆಯು ಜಿಲ್ಲಾ ಕೇಂದ್ರದಿಂದ ಸುಮಾರು 50 ಕಿಮೀ ದೂರದಲ್ಲಿರುವ ಮಕ್ಡೋನ್ ಪ್ರದೇಶದಲ್ಲಿ ನಡೆದಿದೆ. ಪ್ರತಿಮೆ ಸ್ಥಾಪನೆಗೆ ಸಂಬಂಧಿಸಿ ವಿವಾದ ಉಂಟಾಗಿದೆ. ಪೊಲೀಸ್ ಪಡೆಗಳು ಸ್ಥಳದಲ್ಲಿದ್ದು, ಸದ್ಯ ಶಾಂತಿ ನೆಲೆಸಿದೆ. ವೀಡಿಯೋದಲ್ಲಿ ಟ್ರ್ಯಾಕ್ಟರ್ ಮೂಲಕ ಪ್ರತಿಮೆ ಉರುಳಿಸಿದ್ದ ಓರ್ವ ಸೇರಿದಂತೆ ಆರು ಮಂದಿಯನ್ನು ವಶಕ್ಕೆ ಪಡೆಯಲಾಗಿದೆ. ವೀಡಿಯೊದಲ್ಲಿ ಕಂಡುಬಂದಿರುವ ಮಹಿಳೆಯರನ್ನು ಬಂಧಿಸಲಾಗಿಲ್ಲ. ಕಾನೂನನ್ನು ಕೈಗೆ ತೆಗೆದುಕೊಳ್ಳುವವರ ವಿರುದ್ಧ ಕ್ರಮ ತೆಗೆದುಕೊಳ್ಳುತ್ತೇವೆ. ತನಿಖೆ ನಡೆಯುತ್ತಿದೆ” ಎಂದು ಹೇಳಿದ್ದಾರೆ.

ಕೃಪೆ: ಈದಿನ.ಕಾಂ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!