Sunday, May 19, 2024

ಪ್ರಾಯೋಗಿಕ ಆವೃತ್ತಿ

ಮೈಷುಗರ್ ನೌಕರರ ಪುನರ್ ನೇಮಕಕ್ಕೆ ಆಗ್ರಹಿಸಿ ಪ್ರತಿಭಟನೆ

ಮೈಸೂರು ಸಕ್ಕರೆ ಕಂಪನಿಯನ್ನು ಸರ್ಕಾರಿ ಸ್ವಾಮ್ಯದಲ್ಲೇ ಉಳಿಸಿಕೊಳ್ಳಲು ನಿರ್ಧರಿಸಿರುವುದರಿಂದ ಆಡಳಿತ ಮಂಡಳಿಯು ಬಲವಂತದ ಸ್ವಯಂ ನಿವೃತ್ತಿಗೆ ಒಳಪಡಿಸಿ ನಿವೃತ್ತಿಗೊಳಿಸಿರುವ ಕಾರ್ಮಿಕರನ್ನು ಪುನರ್ ನೇಮಕಾತಿ ಮಾಡಿಕೊಳ್ಳುವಂತೆ ಒತ್ತಾಯಿಸಿ ಮೈಸೂರು ಷುಗರ್ ಕಂಪನಿ ಎಂಪ್ಲಾಯೀಸ್ ಅಸೋಸಿಯೇಷನ್ ಬುಧವಾರ ಕಾರ್ಖಾನೆ ಎದುರು ಪ್ರತಿಭಟನೆ ನಡೆಸಿತು.

ಬಲವಂತವಾಗಿ ವಿ.ಆರ್.ಎಸ್.ಗೆ ಒಳಪಡಿಸಿದ ನೌಕರರನ್ನು ಪುನಃ ಸೇವೆಗೆ ತೆಗೆದುಕೊಳ್ಳಬೇಕು. ಮೈಸೂರು ಸಕ್ಕರೆ ಕಂಪನಿಯ ಆಡಳಿತ ವರ್ಗದವರಿಂದ ನಡೆದಿರುವ ದುರಾಡಳಿತದಿಂದ ಅಮಾಯಕ ಖಾಯಂ ನೌಕರರಿಗೆ ಅನ್ಯಾಯವಾಗಿದೆ. ಅಮಾಯಕ ಸ್ಥಳೀಯ ಕನ್ನಡಿಗ ನೌಕರರ ಮೇಲೆ ಒತ್ತಡ ತಂದು ಕಾರ್ಮಿಕ ಕಾಯಿದೆಗಳನ್ನು ಉಲ್ಲಂಘನೆ ಮಾಡಿ ಪ್ರತಿಯೊಬ್ಬರೂ ಸ್ವಯಂ ನಿವೃತ್ತಿ ಬರೆದುಕೊಡುವಂತೆ ಹೆದರಿಕೆ ಹುಟ್ಟಿಸಿ, ಕಾರ್ಮಿಕ-ಕಾರ್ಮಿಕರಲ್ಲಿ ಒಡಕು ಉಂಟು ಮಾಡಿ, ಒತ್ತಡ ತಂತ್ರಗಳನ್ನು ಉಪಯೋಗಿಸಿ, ವಾಮಮಾರ್ಗದಿಂದ ಕಂಪನಿಯ ಸೇವೆಯಿಂದ ಬಿಡುಗಡೆಗೊಳಿಸಲಾಗಿದೆ ಎಂದು ದೂರಿದರು.

ಹಿಂದಿನ ಮೈಷುಗರ್ ಅಧ್ಯಕ್ಷ ಜೆ. ಶಿವಲಿಂಗೇಗೌಡ ಅಧಿಕಾರ ವಹಿಸಿಕೊಂಡ ದಿನದಂದು ಕಂಪನಿಯ ಅಧ್ಯಕ್ಷರ ಕಚೇರಿಯಲ್ಲಿ ಮಾಧ್ಯಮ ಮತ್ತು ಕಾರ್ಮಿಕರ ಸಮ್ಮುಖದಲ್ಲಿ ಈ ಕಾರ್ಖಾನೆಯನ್ನು ಸರ್ಕಾರಿ ಸ್ವಾಮ್ಯದಲ್ಲಿ ನಡೆಸಲು ಸಾಧ್ಯವಿಲ್ಲವೆಂದು ಹೇಳಿ ಕಾರ್ಮಿಕರಿಗೆ ಸುಳ್ಳು ಮಾಹಿತಿ ನೀಡಿ ಅನ್ಯಾಯ ಮಾಡಲಾಗಿದೆ. ಸ್ವಯಂ ನಿವೃತ್ತಿ ಬೇಡವೆಂದರೂ ಸಹ ಬಲವಂತವಾಗಿ ಕಂಪನಿಯ ಸೇವೆಯಿಂದ ಅಮಾಯಕ ನುರಿತ ಕಾರ್ಮಿಕರನ್ನು ಕಂಪನಿಯ ಸೇವೆಯಿಂದ ಬಿಡುಗಡೆ ಮಾಡಲಾಗಿದೆ. ಕಂಪನಿಯ ಕೆಲವು ಕಾರ್ಮಿಕರನ್ನು ಬೆಂಗಳೂರು ಕೇಂದ್ರ ಕಚೇರಿಗೆ ಬಲವಂತವಾಗಿ ವರ್ಗಾವಣೆ ಮಾಡಿ ಅವರಿಗೆ ನಿಗದಿತ ಸಮಯಕ್ಕೆ ವೇತನವನ್ನು ನೀಡದೇ, ಸಾರಿಗೆ ಭತ್ಯೆಯನ್ನು ನೀಡದೇ ಮಾನಸಿಕವಾಗಿ ಹಿಂಸೆ ನೀಡಿ ಸ್ವಯಂ ನಿವೃತ್ತಿ ಅರ್ಜಿಯನ್ನು ಪಡೆದಿದ್ದಾರೆಂದು ದೂರಿದರು.

ಕಾಂಗ್ರೆಸ್ – ರೈತಸಂಘ ಬೆಂಬಲ

ಮೈಷುಗರ್ ವಿ.ಆರ್.ಎಸ್ ನೌಕರರ ಹೋರಾಟಕ್ಕೆ ಕಾಂಗ್ರೆಸ್ ಮುಖಂಡ ಕೆ.ಕೆ.ರಾಧಾಕೃಷ್ಣ ಹಾಗೂ ರೈತಸಂಘದ ಮುಖಂಡ ಪ್ರಸನ್ನ ಎನ್.ಗೌಡ ಬೆಂಬಲ ವ್ಯಕ್ತಪಡಿಸಿದರು. ಸರ್ಕಾರ ನೌಕರರನ್ನು ಪುನರ್ ನೇಮಕ ಮಾಡಿಕೊಳ್ಳಬೇಕೆಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ವೆಂಕಟೇಶ್,  ಬಸವರಾಜು, ಬೋರೇಗೌಡ, ಮಧು, ವೀರೇಗೌಡ ಮತ್ತಿತರರು ಭಾಗವಹಿಸಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!