Tuesday, May 21, 2024

ಪ್ರಾಯೋಗಿಕ ಆವೃತ್ತಿ

ಬೆಂ-ಮೈ ಹೆದ್ದಾರಿಗೆ ಮೂಲಸೌಲಭ್ಯ ಕಲ್ಪಿಸಲು ಶಾಸಕರ ಮನವಿ : ಮುಖ್ಯ ಕಾರ್ಯದರ್ಶಿಗೆ ಸಿಎಂ ಸೂಚನೆ


  • ಸರ್ವಿಸ್ ರಸ್ತೆ ಸೇರಿ ಹತ್ತಾರು ಕಾಮಗಾರಿ ಅಪೂರ್ಣದ ಬಗ್ಗೆ ಗಮನ ಸೆಳೆದ ಶಾಸಕರು

  • ಶಾಸಕರಾದ ದಿನೇಶ್ ಗೂಳಿಗೌಡ, ರವಿಕುಮಾರ್ ಗಣಿಗ, ರಮೇಶ್ ಬಂಡಿಸಿದ್ದೇಗೌಡರಿಂದ ಮನವಿ

ಬೆಂಗಳೂರು-ಮೈಸೂರು ದಶಪಥ ಹೆದ್ದಾರಿಯ ನಡುವೆ ಬರುವ ಸರ್ವಿಸ್ ರಸ್ತೆಗಳು, ಇನ್ನಿತರ ಕಾಮಗಾರಿಗಳು ಪೂರ್ಣಗೊಳ್ಳದಿರುವುದು, ಮೂಲಭೂತ ಸೌಕರ್ಯವನ್ನು ಕಲ್ಪಿಸದಿರುವುದರ ಬಗ್ಗೆ ಮಂಡ್ಯ ಭಾಗದ ಶಾಸಕರಾದ ದಿನೇಶ್ ಗೂಳಿಗೌಡ, ರವಿಕುಮಾರ್ ಗಣಿಗ ಹಾಗೂ ರಮೇಶ್ ಬಂಡಿಸಿದ್ದೇಗೌಡ ಅವರ ಮನವಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸ್ಪಂದಿಸಿದ್ದು, ಕೂಡಲೇ ಅಗತ್ಯ ಕ್ರಮ ಕೈಗೊಳ್ಳುವಂತೆ ಮುಖ್ಯ ಕಾರ್ಯದರ್ಶಿಗೆ ಸೂಚನೆ ನೀಡಿದ್ದಾರೆ.

ಸಿಎಂ ಸೂಚನೆ ಮೇರೆಗೆ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮ ಅವರು ಸಂಬಂಧಪಟ್ಟ ಅಧಿಕಾರಿಗಳ ತುರ್ತು ಸಭೆ ಕರೆದು ಸಮಸ್ಯೆಯನ್ನು ಬಗೆಹರಿಸಬೇಕು ಎಂದು ಸೂಚಿಸಿದ್ದಾರೆ. ಅಲ್ಲದೆ, ಜನಪ್ರತಿನಿಗಳ ಅಭಿಪ್ರಾಯವನ್ನು ಪಡೆಯುವಂತೆಯೂ ಸೂಚಿಸಲಾಗಿದೆ.

ಈಗಾಗಲೇ ಈ ಭಾಗದಲ್ಲಿ ಎರಡೆರಡು ಕಡೆ ಟೋಲ್‌ ಸಂಗ್ರಹ ಮಾಡಲಾಗುತ್ತಿದೆ. ಆದರೆ, ಅಗತ್ಯ ಮೂಲ ಸೌಲಭ್ಯವನ್ನು ಕಲ್ಪಿಸಲಾಗಿಲ್ಲ. ಈ ಬಗ್ಗೆ ಗಮನ ಹರಿಸಬೇಕೆಂದು ಶಾಸಕರು ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದು ಕೋರಿದ್ದರು. ಇದಕ್ಕೆ ಕೂಡಲೇ ಸ್ಪಂದಿಸಿರುವ ಸಿಎಂ ಸಿದ್ದರಾಮಯ್ಯ ಅವರು ಮುಖ್ಯ ಕಾರ್ಯದರ್ಶಿಯವರಿಗೆ ಸೂಚನೆಯನ್ನು ನೀಡಿದ್ದಾರೆ.

ಈ ನಿಟ್ಟಿನಲ್ಲಿ ಸಂಬಂಧಪಟ್ಟವರ ಸಭೆ ಕರೆದು ಸಮಸ್ಯೆಯನ್ನು ಇತ್ಯರ್ಥ ಮಾಡುವಂತೆ ಪಿಡಬ್ಲ್ಯುಡಿ ಮುಖ್ಯ ಕಾರ್ಯದರ್ಶಿ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಮುಖ್ಯ ಕಾರ್ಯದರ್ಶಿಯವರು ಸೂಚನೆಯನ್ನು ನೀಡಿದ್ದಾರೆ.

ಮನವಿ ಪತ್ರದಲ್ಲೇನಿತ್ತು?

ಬೆಂಗಳೂರು-ಮೈಸೂರು ನಡುವಿನ ದಶಪಥ ಹೆದ್ದಾರಿಯು ಮಾರ್ಚ್ ತಿಂಗಳಲ್ಲಿ ಲೋಕಾರ್ಪಣೆಗೊಂಡಿದೆ. ಇದರಿಂದ ಬೆಂಗಳೂರು ಹಾಗೂ ಸಾಂಸ್ಕೃತಿಕ ನಗರಿ ಮೈಸೂರಿಗೆ ಶೀಘ್ರ ಸಂಚಾರಕ್ಕೆ ಅನುಕೂಲವಾಗಿದೆ ಎಂಬ ಅಂಶ ಬಿಟ್ಟರೆ ಇದು ಜನರಿಗೆ ನಿಜಕ್ಕೂ ಜೇಬು ಸುಡುವ ರಹದಾರಿಯಾಗಿದೆ. ಈ ಮಾರ್ಗದಲ್ಲಿ ಜನರು ಟೋಲ್ ಕಟ್ಟಿ ಕಟ್ಟಿ ಬಸವಳಿಯುವ ಸ್ಥಿತಿ ನಿರ್ಮಾಣವಾಗುತ್ತಿದೆ. ಈಗ ಇದ್ದದ್ದು ಸಾಲದೆಂಬಂತೆ ಶ್ರೀರಂಗಪಟ್ಟಣದಲ್ಲಿ ಸಹ ಇದೇ ಜುಲೈ 1ರಿಂದ ಟೋಲ್ ಸಂಗ್ರಹಕ್ಕೆ ಮುಂದಾಗಲಿರುವುದು ಜನರಿಗೆ ನುಂಗಲಾರದ ತುತ್ತಾಗಿದೆ. ಇದಕ್ಕೆ ತಕ್ಕಂತೆ ಅಗತ್ಯ ಸೌಲಭ್ಯವನ್ನು ಕಲ್ಪಿಸಬೇಕು.

ಇಲ್ಲಿ ಎಲ್ಲ ಕಾಮಗಾರಿಗಳೂ ಪೂರ್ಣಗೊಂಡಿವೆಯೆ? ಎಂಬುದನ್ನು ನೋಡುವುದಾದರೆ ಖಂಡಿತವಾಗಿಯೂ ಆಗಿಲ್ಲ. ಆಗಬೇಕಿರುವ ಕಾಮಗಾರಿಗಳು ಹತ್ತಾರು ಇವೆ. ಅವುಗಳು ಇನ್ನೂ ಕುಂಟುತ್ತಾ ಸಾಗಿವೆ. ಕೇಳಿದರೆ ಕುಂಟು ನೆಪಗಳನ್ನು ಹೇಳಲಾಗುತ್ತದೆ. ಆದರೆ, ಜನರಿಂದ ದುಡ್ಡು ಪಡೆಯಲು ಮಾತ್ರ ಇದಾವುದೂ ಲೆಕ್ಕಕ್ಕೇ ಬಾರದು ಎಂದರೆ ಹೇಗೆ? ಉದಾಹರಣೆಯಾಗಿ ಹೇಳುವುದಾದರೆ, ಮಂಡ್ಯ ತಾಲೂಕಿನ ಹನಕೆರೆ ಅಂಡರ್ ಪಾಸ್, ಹಳೇ ಬೂದನೂರು ಹಾಗೂ ಹೊಸ ಬೂದನೂರು ನಡುವಿನ ಸರ್ವಿಸ್ ರಸ್ತೆಗೆ ನಿರ್ಮಾಣ ಮಾಡುತ್ತಿರುವ ಸೇತುವೆ ಸೇರಿದಂತೆ ಹಲವು ಕಾಮಗಾರಿಗಳು ಅಪೂರ್ಣವಾಗಿವೆ. ಇನ್ನು ಹಲವು ಕಡೆ ಸರ್ವಿಸ್ ರಸ್ತೆ ಕಾಮಗಾರಿ ಸಹ ಪೂರ್ಣಗೊಂಡಿಲ್ಲ. ಈ ಹಂತದಲ್ಲಿ ಟೋಲ್ ಸಂಗ್ರಹ ಮಾಡುವುದು ಸರಿ ಅಲ್ಲ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಈ ನಡೆ ಖಂಡನಾರ್ಹವಾಗಿದೆ.

ಮಧ್ಯ ಪ್ರವೇಶಿಸಿ ಜನರ ಹೊರೆ ತಗ್ಗಿಸಲು ಮನವಿ
ಮಾನ್ಯ ಮುಖ್ಯಮಂತ್ರಿಯವರಾದ ತಾವು ಈಗ ಈ ಬಗ್ಗೆ ಮಧ್ಯಪ್ರವೇಶ ಮಾಡಬೇಕು. ಸರ್ವಿಸ್ ರಸ್ತೆಗಳು ಸೇರಿದಂತೆ ಇನ್ನಿತರ ಕಾಮಗಾರಿ ಪೂರ್ಣವಾಗುವ ಸಂಬಂಧ ಕ್ರಮ ವಹಿಸಬೇಕು ಎಂದು ಶಾಸಕರಾದ ದಿನೇಶ್ ಗೂಳಿಗೌಡ, ರವಿಕುಮಾರ್ ಗಣಿಗ ಹಾಗೂ ರಮೇಶ್ ಬಂಡಿಸಿದ್ದೇಗೌಡ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!