Tuesday, April 30, 2024

ಪ್ರಾಯೋಗಿಕ ಆವೃತ್ತಿ

ಜಾಗತಿಕ ಮಟ್ಟದಲ್ಲಿ ವಾಲಿಬಾಲ್ ಕ್ರೀಡಾ ಸಾಧನೆ ಅಗತ್ಯ: ಡಾ.ಬಲ್ಜೀತ್ ಸಿಂಗ್ ಸೆಖೊನ್

ಜಾಗತಿಕ ಮಟ್ಟದ ವಿಶ್ವವಿದ್ಯಾಲಯ ವಾಲಿಬಾಲ್ ಕ್ರೀಡಾಕೂಟಗಳಲ್ಲಿ ಭಾರತ ಸ್ಪರ್ಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪ್ರತಿನಿಧಿಸಿ ಸಾಧನೆಗೈಯ್ಯಲು ವಿಶ್ವವಿದ್ಯಾಲಯಗಳು ಮುಂದಾಗಬೇಕಾದ ಅಗತ್ಯತೆ ಇದೆ ಎಂದು ಭಾರತೀಯ ವಿಶ್ವವಿದ್ಯಾಲಯಗಳ ಸಂಘದ ಜಂಟಿ ಕಾರ್ಯದರ್ಶಿ ಡಾ.ಬಲ್ಜೀತ್ ಸಿಂಗ್ ಸೆಖೊನ್ ಪ್ರತಿಪಾದಿಸಿದರು.

ಮಂಡ್ಯ ನಗರದ ಪಿಇಟಿ ಕ್ರೀಡಾಂಗಣದಲ್ಲಿ ಇಂದಿನಿಂದ ಆರಂಭವಾದ 2023-24ನೇ ಸಾಲಿನ ಪುರುಷರ ದಕ್ಷಿಣ ವಲಯ ಅಂತರ ವಿಶ್ವವಿದ್ಯಾಲಯ ಹಗಲು ಮತ್ತು ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳಿಗಾಗಿ ಆಯೋಜಿಸುತ್ತಿರುವ ವಾಲಿಬಾಲ್ ಕ್ರೀಡಾಕೂಟಗಳಲ್ಲಿ ಭಾರತದ, ಅದರಲ್ಲಿಯೂ ರಾಜ್ಯದ ಕ್ರೀಡಾಪಟುಗಳು ಈಚಿನ ವರ್ಷಗಳಲ್ಲಿ ಅತ್ಯುತ್ತಮ ಸಾಧನೆಗಳನ್ನು ತೋರುತ್ತಿದ್ದು, ಮತ್ತಷ್ಟು ಕಠಿಣ ಶ್ರಮ ಮತ್ತು ಸಾಧನೆ ಮೂಲಕ ತಮ್ಮ ಭವಿಷ್ಯವನ್ನು ಉಜ್ವಲಗೊಳಿಸಿಕೊಳ್ಳಬೇಕು ಎಂದರು.

nudikarnataka.com

ಅಂತಾರಾಷ್ಟ್ರೀಯ ಮಟ್ಟದ ವಿಶ್ವವಿದ್ಯಾಲಯ ವಾಲಿಬಾಲ್ ಕ್ರೀಡಾಕೂಟಗಳಲ್ಲಿ ಪಾಲ್ಗೊಳ್ಳಲು ಹಾಗೂ ಪದಕಗಳನ್ನು ಗೆಲ್ಲಲು ವಿಫುಲ ಅವಕಾಶಗಳಿವೆ. ತರಬೇತಿ ಮತ್ತಿತರ ಕ್ರೀಡಾ ಸೌಲಭ್ಯ, ಉತ್ತಮ ಕ್ರೀಡಾಪಟುಗಳ ಆಯ್ಕೆ ಹಾಗೂ ಸೂಕ್ತ ಪ್ರೋತ್ಸಾಹದ ಮೂಲಕ ಇಂತಹ ಅಂತಾರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಪ್ರಜ್ವಲಿಸಲು ವಿಶ್ವವಿದ್ಯಾಲಯಗಳು ಕ್ರಮಕೈಗೊಳ್ಳಬೇಕಾದ ಅಗತ್ಯತೆಗಳನ್ನು ಅವರು ಪ್ರತಿಪಾದಿಸಿದರು.

ಈ ಹಿಂದಿನ 18 ವರ್ಷಗಳಲ್ಲಿ ಜಾಗತಿಕ ವಿಶ್ವವಿದ್ಯಾಲಯ ಮಟ್ಟದ ವಾಲಿಬಾಲ್ ಕ್ರೀಡಾಕೂಟದಲ್ಲಿ ಭಾರತದ ಸ್ಪರ್ಧಿಗಳು ಕೇವಲ 18 ಪದಕಗಳನ್ನು ಗೆದ್ದಿದ್ದರು. ಆದರೆ, ಈ ಒಂದೇ ವರ್ಷಗದಲ್ಲಿ 26 ಪದಕಗಳಿಗೆ ಕೊರಳೊಡ್ಡಿದ್ದಾರೆ. ಇದು ವಿಶ್ವವಿದ್ಯಾಲಯ ಮಟ್ಟದ ಅಂತಾರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಭಾರತದ ಸ್ಪರ್ಧಿಗಳು ಪಾರಮ್ಯ ಮೆರೆದಿರುವ ಧ್ಯೋತಕ ಹಾಗೂ ಮುಂಬರುವ ಕ್ರೀಡಾಕೂಟಗಳಲ್ಲಿ ಇಂತಹ ಇನ್ನಷ್ಟು ಸಾಧನೆ ಮರುಕಳಿಸುವ ಸೂಚನೆ ಎಂದರು.

ನಾವು ಅಂತಾರಾಷ್ಟ್ರೀಯ ಮಟ್ಟದ ವಿಶ್ವವಿದ್ಯಾಲಯ ವಿದ್ಯಾರ್ಥಿಗಳಿಗಾಗಿ ವಾಲಿಬಾಲ್ ಕ್ರೀಡಾಕೂಟವನ್ನು ಭಾರತದಲ್ಲಿ ಆಯೋಜಿಸುವುದಾಗಿ ಪ್ರಕಟಿಸಿದ ಅವರು, ಜರ್ಮನಿಯಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಮಟ್ಟದ ವಿಶ್ವವಿದ್ಯಾಲಯ ವಾಲಿಬಾಲ್ ಕ್ರೀಡಾಕೂಟಕ್ಕೆ ತಂಡಗಳನ್ನು ಕಳುಹಿಸಲಾಗುವುದು. ಅದಕ್ಕಾಗಿ ಅತ್ಯುತ್ತಮ ಕ್ರೀಡಾಳುಗಳನ್ನು ವಿಶ್ವವಿದ್ಯಾಲಯಗಳು ಆಯ್ಕೆ ಮಾಡಿ, ಅವರಿಗೆ ತರಬೇತಿ ನೀಡಬೇಕು ಎಂದು ಹೇಳಿದರು.

ವಿಶ್ವವಿದ್ಯಾಲಯ ಮಟ್ಟದ ಕ್ರೀಡಾಕೂಟಗಳಲ್ಲಿ ಕರ್ನಾಟಕದ ಕ್ರೀಡಾಪಟುಗಳ ಸಾಧನೆ ಗಮನಾರ್ಹ. ಈಚೆಗೆ ನಡೆದ ಕ್ರೀಡಾಕೂಟದಲ್ಲಿ 270 ವಿವಿಧ ವಿಶ್ವವಿದ್ಯಾಲಯಗಳು ಪಾಲ್ಗೊಂಡಿದ್ದವು. ಅದರಲ್ಲಿ ಪಿಇಎಸ್ ಬೆಳಗಾವಿ ತಂಡಗಳು ಪಾಲ್ಗೊಂಡಿದ್ದು ವಿಶೇಷ. ಜತೆಗೆ ಮುಂದಿನ ವಿಶ್ವವಿದ್ಯಾಲಯ ಮಟ್ಟದ ಏಷ್ಯನ್ ಗೇಮ್ಸ್ನಲ್ಲಿ ಪಾಲ್ಗೊಳ್ಳಲು ಕರ್ನಾಟಕ ವಿದ್ಯಾರ್ಥಿಗಳು ಅರ್ಹತೆ ಪಡೆದಿದ್ದಾರೆ ಎಂದು ತಿಳಿಸಿದರು.

ಕರ್ನಾಟಕದಲ್ಲಿ ವಾಲಿಬಾಲ್ ಕ್ರೀಡೆಗೆ ಅತ್ಯುತ್ತಮ ಅವಕಾಶಗಳಿವೆ. ರಾಜ್ಯದಲ್ಲಿ ಸರ್ಕಾರಿ ಕ್ರೀಡಾ ವಿಶ್ವವಿದ್ಯಾಲಯವಿದೆ. ಜತೆಗೆ ಕ್ರೀಡಾ ಇಲಾಖೆಯಿಂದ ಸೂಕ್ತ ಉತ್ತೇಜನವೂ ದೊರೆಯುತ್ತಿದೆ.ಲಭ್ಯ ಅವಕಾಶಗಳನ್ನು ಬಳಸಿಕೊಂಡು ವಿದ್ಯಾರ್ಥಿಗಳು ತಮ್ಮ ಕ್ರೀಡಾ ಪ್ರತಿಭೆಯನ್ನು ಹೊರಹಾಕಬೇಕು. ಸ್ವಲ್ಪ ಪರಿಶ್ರಮದ ಮೂಲಕ ಸಾಧನೆಗಳನ್ನು ಮಾಡಬೇಕೆಂದು ಕರೆ ನೀಡಿದರು.

ಪಿಇಟಿ ಅಧ್ಯಕ್ಷ ಕೆ.ಎಸ್. ವಿಜಯ್ ಆನಂದ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಪಿಇಟಿ ಟ್ರಸ್ಟಿಗಳಾದ ಡಾ. ರಾಮಲಿಂಗಯ್ಯ, ಶ್ರೀನಿವಾಸ ಪ್ರಸಾದ್ ಇತರರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!