Saturday, May 18, 2024

ಪ್ರಾಯೋಗಿಕ ಆವೃತ್ತಿ

ಸರ್ಕಾರಿ ಇಲಾಖೆಗಳಲ್ಲಿ ಕಾರ್ಯ ಚಟುವಟಿಕೆ ಚುರುಕುಗೊಳ್ಳಲಿ – ಶಾಸಕ ರವಿಕುಮಾರ್

ಸಂಕಷ್ಟದಲ್ಲಿರುವ ಜನ – ಸಾಮಾನ್ಯರಿಗೆ ನೆರವಾಗಲು ಸರ್ಕಾರಿ ಇಲಾಖೆಗಳ ಕಾರ್ಯ ವೈಖರಿ ಚುರುಕಾಗಬೇಕೆಂದು ಕ್ಷೇತ್ರದ ನೂತನ ಶಾಸಕ ಪಿ.ರವಿಕುಮಾರ್ ಗೌಡ ತಿಳಿಸಿದರು.

ಮಂಡ್ಯ ನಗರದ ತಾಲ್ಲೂಕು ಪಂಚಾಯಿತಿ ಆವರಣದ ಸಾಮರ್ಥ್ಯ ಸೌಧದಲ್ಲಿ ಆಯೋಜನೆಗೊಂಡಿದ್ದ ಪ್ರಥಮ ಕೆಡಿಪಿ ಸಭೆಯ ಅಧ್ಯಕ್ಷ ವಹಿಸಿ ಅವರು ಮಾತನಾಡಿದರು.

ಸರ್ಕಾರಿ ಕಚೇರಿಗಳಿಗೆ ಜನ – ಸಾಮಾನ್ಯರ ಅಲೆದಾಟ ಕಡಿಮೆ ಆಗಬೇಕು. ನಿಗಧಿತ ಕಾಲಮಿತಿಯಲ್ಲಿ ಸರ್ಕಾರಿ ಸೌಲಭ್ಯಗಳು ಅರ್ಹ ಫಲಾನುಭವಿಗಳಿಗೆ ತಲುಪಬೇಕು. ಸಾಲ ಸೌಲಭ್ಯಗಳ ಯೋಜನೆ ಕೆಲವೇ ವರ್ಗಕ್ಕೆ ಮೀಸಲಾಗಿ ಮಾಫಿಯಾವಾಗಿ ರೂಪುಗೊಂಡಿದ್ದು, ಇದರ ಬದಲಾವಣೆಗೆ ಅಧಿಕಾರಿಗಳು ಪ್ರಯತ್ನಿಸಿ ಯೋಜನೆಗಳ ಅರಿವು ಮೂಡಿಸಬೇಕು ಎಂದು ಕರೆ ನೀಡಿದರು.

ಪ್ರಮುಖವಾಗಿ ಕೃಷಿ, ತೋಟಗಾರಿಕೆ, ವಿದ್ಯುತ್, ನೀರಾವರಿ, ಶಿಕ್ಷಣ ಮತ್ತು ವಿದ್ಯುತ್ ಇಲಾಖೆಯ ವಿಚಾರಗಳ ಬಗ್ಗೆ ಗಹನವಾಗಿ ಚರ್ಚಿಸಲಾಯಿತು. ಸಾವಯವ ಕೃಷಿಗೆ ಆದ್ಯತೆ ನೀಡಲು ಮುಂದಾಗಬೇಕು. ಎರೆಹುಳು ಗೊಬ್ಬರ ವಿತರಿಸಲು ಕ್ರಮ ವಹಿಸಬೇಕೆಂದು ಮಾಹಿತಿ ನೀಡಿದರು.

ಜಿಲ್ಲೆಯವರೇ ಕೃಷಿ ಖಾತೆ ಸಚಿವರಾಗಿರುವ ಹಿನ್ನೆಲೆಯಲ್ಲಿ ವಿಶೇಷ ಯೋಜನೆಗಳನ್ನು ಜಾರಿಗೊಳಿಸಲು ಕ್ರಿಯಾಯೋಜನೆ ರೂಪಿಸುವಂತೆ ಸಭೆಯಲ್ಲಿದ್ದ ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕಿ ಸೌಮ್ಯಶ್ರೀ ಅವರಿಗೆ ನಿರ್ದೇಶನ ನೀಡಿದರು.ಕಳಪೆ ಬಿತ್ತನೆ ಬೀಜ ಹಾಗೂ ಗೊಬ್ಬರ ಮಾರಾಟ ತಡೆಗಟ್ಟಲು ವಿಶೇಷ ತಂಡ ರಚಿಸಲು ಸೂಚಿಸಿದರು.

ತೋಟಗಾರಿಕೆ ಇಲಾಖೆ ಅಧಿಕಾರಿ ಪುಷ್ಪಲತಾ ಅವರಿಂದ ಮಾಹಿತಿ ಪಡೆದ ಶಾಸಕರು ಹೊಸ ಬೆಳೆಗಳ ಬಗ್ಗೆ ರೈತರಲ್ಲಿ ಆಸಕ್ತಿ ಮೂಡಿಸಬೇಕು ಹಾಗೂ ಅಗತ್ಯ ನೆರವು ನೀಡಲು ಮುಂದಾಗಬೇಕೆಂದರು.

ವಿದ್ಯಾರ್ಥಿನಿಲಯಗಳಲ್ಲಿ ಶುಚಿತ್ವ ಕಾಪಾಡಿಕೊಂಡು ಪೌಷ್ಠಿಕಾಂಶದ ಆಹಾರ ವಿತರಿಸಲು ಕ್ರಮ ವಹಿಸಬೇಕು. ಬಾಡಿಗೆ ಕಟ್ಟಡದಲ್ಲಿರುವ ವಿದ್ಯಾರ್ಥಿನಿಲಯಗಳನ್ನು ಸರ್ಕಾರಿ ಕಟ್ಟಡಗಳಿಗೆ ಹಸ್ತಾಂತರಿಸಲು ಅಗತ್ಯ ಕ್ರಮ ವಹಿಸುವಂತೆ ಸೂಚಿಸಿದರು.

ಪಶುಪಾಲನ ಇಲಾಖೆಯ ಅಧಿಕಾರಿ ಡಾ.ರಮೇಶ್ ರಾಜು ಅವರು, ಸಿಬ್ಬಂದಿ ಕೊರತೆ, ಜಾನುವಾರು ವಿಮೆ ಹಾಗೂ ಇಲಾಖಾ ಯೋಜನೆಗಳ ಬಗ್ಗೆ ವಿಸ್ತೃತವಾಗಿ ಮಾಹಿತಿ ನೀಡಿದರು. ಮಧ್ಯೆ ಪ್ರವೇಶಿಸಿದ ಶಾಸಕರು ನಿಗೂಢ ಕಾಯಿಲೆಗಳಿಂದ ಜಾನುವಾರುಗಳ ಸಾವು ಹೆಚ್ಚಳವಾಗುತ್ತಿದೆ, ಈ ಹಿನ್ನೆಲೆಯಲ್ಲಿ ಹೈನುಗಾರರಲ್ಲಿ ಜಾಗೃತಿ ಮೂಡಿಸಿ ಸರ್ಕಾರಿ ನೆರವಿನೊಂದಿಗೆ ವಿಮೆ ಮಾಡಿಸಲು ಮುಂದಾಗಬೇಕೆಂದು ತಾಕೀತು ಮಾಡಿದರು.

ವೇದಿಕೆಯಲ್ಲಿ ತಾ.ಪಂ.ಆಡಳಿತಾಧಿಕಾರಿ ಬಾಬು, ಇಓ ವೇಣು, ತಾಲ್ಲೂಕು ಯೋಜನಾಧಿಕಾರಿ ಶ್ರೀನಿವಾಸ್, ಉಪ ತಹಶೀಲ್ದಾರ್ ವಸಂತ್ ಇತರರು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!