Sunday, May 5, 2024

ಪ್ರಾಯೋಗಿಕ ಆವೃತ್ತಿ

ವೈಜ್ಞಾನಿಕ ಚಿಂತನೆಯ ಪಠ್ಯಗಳನ್ನು ಕೈ ಬಿಟ್ಟ NCERT ಕಮಕ್ಕೆ AIDSO ಖಂಡನೆ

ನ್ಯಾಷನಲ್ ಕೌನ್ಸಿಲ್ ಆಫ್ ಎಜುಕೇಶನಲ್ ರಿಸರ್ಚ್ ಅಂಡ್ ಟ್ರೈನಿಂಗ್ (NCERT) ಪಠ್ಯಕ್ರಮದಲ್ಲಿ ಪ್ರಜಾತಾಂತ್ರಿಕ ಆಶಯವುಳ್ಳ, ವೈಜ್ಞಾನಿಕ ಚಿಂತನೆಗೆ ಪೂರಕವಾದ ಪಾಠಗಳನ್ನು ತೆಗೆದುಹಾಕಿರುವ ಆತಂಕಕಾರಿ ಬೆಳವಣಿಗೆ ಎಂದು ಆಲ್ ಇಂಡಿಯಾ ಡೆಮಾಕ್ರಟಿಕ್ ಸ್ಟೂಡೆಂಟ್ಸ್ ಆರ್ಗನೈಸೇಶನ್ (AIDSO) ಜಿಲ್ಲಾ ಕಾರ್ಯದರ್ಶಿ ಚಂದ್ರಕಲಾ ಖಂಡಿಸಿದ್ದಾರೆ.

NCERTಯು 11 ಮತ್ತು 12 ನೇ ತರಗತಿಯ ಪಠ್ಯಕ್ರಮದಿಂದ ಆವರ್ತಕ ಕೋಷ್ಟಕವನ್ನು ತೆಗೆದು ಹಾಕಲಾಗಿದ್ದು, ಇದರಡಿ ಬರುವ ಪರಿಸರ ಸುಸ್ಥಿರತೆ, ಇಂಧನ ಮೂಲಗಳು ಹಾಗೂ ರಾಜ್ಯ ಶಾಸ್ತ್ರ ಪಠ್ಯ ಪುಸ್ತಕದಿಂದ ಪ್ರಜಾಪ್ರಭುತ್ವ ರಾಜಕೀಯ-1ರಡಿ ಮಹತ್ವದ ಸಂಘರ್ಷಗಳು ಮತ್ತು ಚಳವಳಿಗಳು, ಪ್ರಜಾಪ್ರಭುತ್ವದ ಸವಾಲುಗಳು, ರಾಜಕೀಯ ಪಕ್ಷಗಳು ಅಧ್ಯಾಯಗಳನ್ನೂ ಕೈಬಿಡಲಾಗಿದೆ. ಇದು ವೈಜ್ಞಾನಿಕ ಮತ್ತು ಪ್ರಜಾಸತ್ತಾತ್ಮಕ ಶಿಕ್ಷಣದ ಮೇಲಿನ ದಾಳಿಯಾಗಿದೆ ಎಂದು ಅವರು ಮಾಧ್ಯಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಸರ್ಕಾರವು ತನ್ನ ಸಿದ್ಧಾಂತಕ್ಕೆ ಅನುಗುಣವಾಗಿ ಪಾಠಗಳನ್ನು ಕೈಬಿಡುತ್ತಿರುವುದನ್ನು ದೇಶದ ಜನರು ಈಗಾಗಲೇ ಖಂಡಿಸಿದ್ದಾರೆ. ಈ ಹಿಂದೆ ವಿಕಾಸವಾದ ಸಿದ್ಧಾಂತದ ಪಾಠವನ್ನು ಸಹ ಕೈಬಿಡಲಾಗಿತ್ತು. ವಿದ್ಯಾರ್ಥಿಗಳ ಶೈಕ್ಷಣಿಕ ಹೊರೆ ಕಡಿಮೆಗೊಳಿಸುವ ಹೆಸರಿನಲ್ಲಿ, ಕೇಂದ್ರ ಸರ್ಕಾರದ ಬೆಂಬಲಿತ ಎನ್‌ಸಿಇಆರ್‌ಟಿ ಯು ವಿದ್ಯಾರ್ಥಿ ಸಮೂಹದ ಜ್ಞಾನಾರ್ಜನೆಯ ಮೇಲೆ ಎಲ್ಲಾ ರೀತಿಯ ದಾಳಿ ಮಾಡುತ್ತಿದೆ ಹಾಗೂ ತನ್ನ ಸಿದ್ಧಾಂತವನ್ನು ವಿದ್ಯಾರ್ಥಿಗಳ ಮೇಲೆ ಹೇರುತ್ತಿದೆ. ಪ್ರಜಾಸತ್ತಾತ್ಮಕ ಮೌಲ್ಯಗಳು ಮತ್ತು ಆವರ್ತಕ ಕೋಷ್ಟಕ ಸೇರಿದಂತೆ ಈಗ ಕೈಬಿಡಲಾದ ಪಾಠಗಳು ವಿದ್ಯಾರ್ಥಿಗಳ ಒಟ್ಟಾರೆ ಅಭಿವೃದ್ಧಿಗೆ ಅನುಕೂಲಕರವಾಗಿದ್ದವು ಮತ್ತು ಅವರು ಓದುವ ಸಂಪೂರ್ಣ ಪಠ್ಯಕ್ರಮಕ್ಕೆ ಸಂಬಂಧಿಸಿದಂತೆ ಅಧ್ಯಯನ ಮಾಡುವಂತಿತ್ತು. ಆದರೆ ಈ ಪ್ರಕ್ರಿಯೆಯನ್ನು ನಾಶಗೊಳಿಸಲಾಗುತ್ತಿದೆ ಎಂದು ದೂರಿದ್ದಾರೆ.

ನವೋದಯ ಚಿಂತಕರು ಮತ್ತು ಸ್ವಾತಂತ್ರ್ಯ ಹೋರಾಟಗಾರರ ಕನಸಾಗಿದ್ದ ವೈಜ್ಞಾನಿಕ – ಧರ್ಮ ನಿರಪೇಕ್ಷ ಮತ್ತು ಪ್ರಜಾಸತ್ತಾತ್ಮಕ ಶಿಕ್ಷಣವನ್ನು ರಕ್ಷಿಸಲು ಎಲ್ಲಾ ಶಿಕ್ಷಣ ಪ್ರೇಮಿಗಳು ಮುಂದಾಗಬೇಕೆಂದು AIDSO ಕರೆ ನೀಡಿದ್ದು, ವಿದ್ಯಾರ್ಥಿಯ ಸರ್ವಾಂಗೀಣ ಅಭಿವೃದ್ಧಿಗೆ ಪೂರಕವಾಗುವ ಎಲ್ಲಾ ಪಾಠಗಳನ್ನು ಮರು ಪ್ರಾರಂಭಿಸಲು NCERT ಕ್ರಮಕೈಗೊಳ್ಳಬೇಕೆಂದು ಅವರು ಒತ್ತಾಯಿಸಿದ್ದಾರೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!