Saturday, May 18, 2024

ಪ್ರಾಯೋಗಿಕ ಆವೃತ್ತಿ

ರೈತರ ಮೇಲೆ ಪೋಲಿಸ್ ದೌರ್ಜನ್ಯ ಖಂಡಿಸಿ ಪ್ರತಿಭಟನೆ

ಟನ್ ಕಬ್ಬಿಗೆ 4.500 ರೂ. ಲೀಟರ್ ಹಾಲಿಗೆ ಕನಿಷ್ಠ 40 ರೂ.ಬೆಲೆ ನಿಗದಿಪಡಿಸಬೇಕೆಂದು ಕಳೆದ 52 ದಿನಗಳಿಂದ ಹಗಲು ರಾತ್ರಿ ಹೋರಾಟ ನಡೆಸುತ್ತಿರುವ ರೈತರನ್ನ ಬಂಧಿಸಿ ಮತ್ತು ಅವರ ಟೆಂಟ್ ಅನ್ನು ಕಿತ್ತೆಸದಿರುವ ಪೊಲೀಸ್ ರ ದೌರ್ಜನ್ಯವನ್ನು ಖಂಡಿಸಿ ಕರ್ನಾಟಕ ಪ್ರಾಂತ ರೈತ ಸಂಘ ಗುರುವಾರ ಪ್ರತಿಭಟನೆ ನಡೆಸಿತು.

ಮಳವಳ್ಳಿ ಪಟ್ಟಣದಲ್ಲಿ ಕರ್ನಾಟಕ ಪ್ರಾಂತ ರೈತ ಸಂಘ ಹಮ್ಮಿಕೊಂಡಿದ್ದ ಪ್ರತಿಭಟನೆಯನ್ನ ಉದ್ದೇಶಿಸಿ ಮಾತನಾಡುತ್ತ ಕರ್ನಾಟಕ ಪ್ರಾಂತ ರೈತ ಸಂಘದ ಅಧ್ಯಕ್ಷ ಎನ್ ಎಲ್ ಭರತ್ ರಾಜ್ ಮಾತನಾಡಿ, ಪೊಲೀಸ್ ಇಲಾಖೆ ಆಳುವ ಸರ್ಕಾರದ ಅಡಿಯಾಳಾಗಿ ಕೆಲಸ ಮಾಡದೆ ಸಂವಿಧಾನದತ್ತವಾಗಿ ಕರ್ತವ್ಯ ನಿರ್ವಹಿಸಬೇಕೆಂದು ಒತ್ತಾಯಿಸಿದರು.

ನೀತಿಗೆಟ್ಟ ರಾಜ್ಯ ಹಾಗೂ ಕೇಂದ್ರ ಸರ್ಕಾರ ಚುನಾವಣೆಗೆ ಮುನ್ನ ದೇಶದ ಜನತೆಗೆ ನೀಡಿದ ಭರವಸೆಯನ್ನು ಈಡೇರಿಸದೆ ವಂಚನೆ ಮಾಡಿದೆ. ರೈತರ ಆದಾಯ ದ್ವಿಗುಣ ಗೊಳಿಸಿ ಡಾ.ಸ್ವಾಮಿನಾಥನ್ ಆಯೋಗದ ವರದಿಯಂತೆ ಕೃಷಿ ಉತ್ಪನ್ನಗಳಿಗೆ ತಗಲುವ ಖರ್ಚಿನ ಜೊತೆಗೆ ಶೇ.50.ರಷ್ಟು ಲಾಭಾಂಶ ಸೇರಿಸಿ ಬೆಂಬಲ ಬೆಲೆ ನಿಗದಿಪಡಿಸುತ್ತೇನೆ ಎಂದು ಭರವಸೆ ನೀಡಿತ್ತು. ಆದರೆ ಈಡೇರಿಸಿಲ್ಲ ಎಂದು ದೂರಿದರು.

ಬಿಜೆಪಿಯು ನಯ ವಂಚಕರನ್ನು ಜೈಲಿಗೆ ಹಾಕುವುದರ ಬದಲು ಬೆವರು ಬಸಿದು ಅನ್ನ ನೀಡುವ ರೈತರ ಮೇಲೆ ದೌರ್ಜನ್ಯ ನಡೆಸಿದ ಘಟನೆಯನ್ನು ಪ್ರತಿಯೊಬ್ಬ ನಾಗರೀಕರು ಖಂಡಿಸಬೇಕೆಂದರು. ಅಲ್ಲದೆ ಚಳವಳಿಯ ಟೆಂಟ್ ನಲ್ಲಿ ಮಹಾತ್ಮರ ಪೋಟೋ ಗಳಿಗೆ ಅಪಮಾನ ಮಾಡಿ, ಅವುಗಳನ್ನ ಬಿಸಾಡಿ ಅಗೌರವ ತೋರಿದ ಅಧಿಕಾರಿಗಳ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ಆಗ್ರಹಿಸಿದರು.

ಕಾರ್ಪೊರೇಟ್ ಕಂಪನಿ ಕುಳಗಳಾದ ಆದಾನಿ, ಅಂಬಾನಿ ಮನೆಯ ಅಡಿಯಾಳದ ಅಮಿತ್ ಶಾ ಮಂಡ್ಯಕ್ಕೆ ಭೇಟಿ ನೀಡುತ್ತಿರುವುದರಿಂದ ಅವರ ಅಣತಿಯಂತೆ ರೈತ ಚಳವಳಿಯನ್ನ ಹತ್ತಿಕ್ಕಲು ಹೊರಟಿದ್ದಾರೆ, ದೆಹಲಿಯ ರೈತ ಚಳುವಳಿಯ ಮುಂದೆ ಮಂಡಿಯೂರಿದ ನರೇಂದ್ರ ಮೋದಿ, ಅಮಿತ್ ಶಾ ಬುದ್ದಿ ಕಲಿತಂತಿಲ್ಲ, ಇವರಿಗೆ ದೇಶದ ಜನತೆ ಮುಂದಿನ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಬೇಕೆಂದು ಮನವಿ ಮಾಡಿದರು.

ಅಧಿವೇಶನದಲ್ಲಿ ರೈತರ ಸಂಕಷ್ಟಗಳ ಬಗ್ಗೆ ಚರ್ಚೆ ನಡೆಸಿಲ್ಲ

ಕಾಂಗ್ರೆಸ್ ಜನತಾದಳದವರು ಅಧಿವೇಶನದಲ್ಲಿ ರೈತರ ಸಂಕಷ್ಟಗಳ ಬಗ್ಗೆ ಚರ್ಚೆ ನಡೆಸದೆ, ಅನಗತ್ಯ ವಿಚಾರಕ್ಕೆ ಒತ್ತು ನೀಡುತ್ತಿದ್ದಾರೆ. ಜಿಲ್ಲೆಯಲ್ಲಿ ಮತ್ತೊಂದು ಕೆಟ್ಟ ಪರಂಪರೆ ಮುಂದುವರೆದಿದೆ. ಜನರ ಸಂಕಷ್ಟಗಳಿಗೆ ಆಳುವ ಸರ್ಕಾರಗಳ ನೀತಿಗಳು ಕಾರಣ ಎಂಬುವುದನ್ನ ಜನತೆ ಮುಂದೆ ತಿಳಿಸಿ, ಅವುಗಳು ಇತ್ಯರ್ಥಕ್ಕೆ ಹೋರಾಟವೆ ದಾರಿ ಎಂಬುದನ್ನ ಮರೆಮಾಚಿಸಿ, ಅಮಾಯಕ ಜನರನ್ನ ದೇವಸ್ಥಾನಗಳ ಯಾತ್ರೆಗೆ ಎಲ್ಲಾ ಪಕ್ಷದವರು ಉಚಿತ ಬಸ್ ವ್ಯವಸ್ಥೆ ಕಲ್ಪಿಸಿ ಜನರನ್ನ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ಧಾರೆಂದು ದೂರಿದರು.

ಪ್ರತಿಭಟನೆಯಲ್ಲಿ ಕಾರ್ಯದರ್ಶಿ ಎನ್ ಲಿಂಗರಾಜಮೂರ್ತಿ, ಜಿ ರಾಮಕೃಷ್ಣ, ಎ ಎಲ್ ಶಿವಕುಮಾರ್, ಗುರುಸ್ವಾಮಿ, ಆನಂದ್, ಎಸ್ಕೆ ಶಿವಕುಮಾರ್, ತಿಮ್ಮೇಗೌಡ, ಮರಿಲಿಂಗೇಗೌಡ, ಸಾಗ್ಯ ರಾಜು, ಪ್ರಕಾಶ್ ಮೂರ್ತಿ.  ಚಿಕ್ಕಸ್ವಾಮಿ, ಗಣೇಶ್, ಸಿದ್ದರಾಜ್, ರಾಜೇಶ್, ಮಹಾದೇವು. ಪ್ರದೀಪ್ ಮುಂತಾದವರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!