Saturday, May 18, 2024

ಪ್ರಾಯೋಗಿಕ ಆವೃತ್ತಿ

ಕಾವೇರಿ ಹೋರಾಟ| ರೈತರಿಂದ ಸರದಿ ಉಪವಾಸ ಸತ್ಯಾಗ್ರಹ ಮುಂದುವರಿಕೆ

ಕಾವೇರಿ ಅನ್ಯಾಯ ಖಂಡಿಸಿ ಜಿಲ್ಲಾ ರೈತ ಹಿತರಕ್ಷಣಾ ಸಮಿತಿಯು ಮಂಡ್ಯದಲ್ಲಿ ನಡೆಸುತ್ತಿರುವ ಸರದಿ ಉಪವಾಸ 17ನೇ ದಿನಕ್ಕೆ ಕಾಲಿಟ್ಟಿದ್ದು, ಸೋಮವಾರ ಇಂಡುವಾಳು ಗ್ರಾಮದ ಚಿಕ್ಕನಂಜಯ್ಯ, ಸಿದ್ದರಾಜು, ಹಂಪಾಪುರದ ಜವರಯ್ಯ, ಸಿ ಹಳ್ಳಿ ಗ್ರಾಮದ ರವಿ, ಹುಲಿಗೆರೆಪುರದ ಎಚ್ ಡಿ ದೇವೇಗೌಡ, ಎಂ.ಪಿ ರಂಜಿತ ಭಾಗಿಯಾಗಿ ಉಪವಾಸ ಮುಂದುವರಿಸಿದರು.

ವಿಧಾನಮಂಡಲದ ಅಧಿವೇಶನದಲ್ಲಿ ಸಮಗ್ರವಾಗಿ ಚರ್ಚಿಸಿ ಸರ್ಕಾರ ತನ್ನ ನಿಲುವು ಪ್ರಕಟಿಸಬೇಕು. ಜಲವಿವಾದ ಇತ್ಯರ್ಥಕ್ಕೆ ರಾಷ್ಟ್ರೀಯ ಜಲ ನೀತಿ ರೂಪಿಸಬೇಕು ಎಂದು ಒತ್ತಾಯಿಸಿದರು. ರೈತರ ಸಮಸ್ಯೆಯನ್ನು ಕೇಳೋರು ಯಾರು ಇಲ್ಲವಾಗಿದ್ದಾರೆ. ಸಂಕಷ್ಟದಲ್ಲಿರುವ ರೈತರ ಸಮಸ್ಯೆಗೆ ಸ್ಪಂದಿಸದೇ ರಾಜಕಾರಣ ಮಾಡುವುದನ್ನೆ ಜನಪ್ರತಿನಿಧಿಗಳು ಕೆಲಸ ಮಾಡಿಕೊಂಡಿದ್ದಾರೆಂದು ಕಿಡಿಕಾರಿದರು.

ರೈತ ಸಂಘದ ಇಂಡುವಾಳು ಚಂದ್ರಶೇಖರ್ ಮಾತನಾಡಿ ಕಾವೇರಿ ಚಳವಳಿ ಶತದಿನದತ್ತ ಕಾಲಿಡುತ್ತಿದೆ, ಆದರೆ ಆಳುವ ಸರ್ಕಾರಗಳು ನಿರ್ಲಕ್ಷ್ಯ ವಹಿಸಿವೆ, ಅಧಿವೇಶನ ಆರಂಭಗೊಂಡು ಇಷ್ಟು ದಿನವಾದರೂ ಕಾವೇರಿ ಬಗ್ಗೆ ಚರ್ಚೆ ಮಾಡಿಲ್ಲ,ಆಡಳಿತ ಪಕ್ಷ ನಿರ್ಲಕ್ಷ್ಯ ಧೋರಣೆ ಮುಂದುವರೆಸಿದೆ, ಪ್ರತಿಪಕ್ಷಗಳು ಸಹ ಸುಮ್ಮನಿವೆ, ಜಿಲ್ಲೆಯ ಶಾಸಕರು ಏನು ಮಾಡುತ್ತಿದ್ದಾರೆ ರೈತರ ಹಿತ ಕಾಪಾಡದಿದ್ದ ಮೇಲೆ ರಾಜೀನಾಮೆ ಕೊಟ್ಟು ಹೋಗಲಿ ಎಂದು ಕಿಡಿಕಾರಿದರು.

ಕೆ.ಆರ್.ಎಸ್ ನಿಂದ ತಮಿಳುನಾಡಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿಸಲಾಗುತ್ತಿದೆ, ಆದರೆ ಉಸ್ತುವಾರಿ ಸಚಿವರು ಸೋರಿಕೆ ನೀರು ಹರಿದು ಹೋಗುತ್ತಿದೆ ಎಂದಿದ್ದಾರೆ, ಇವರೇನು ಇಂಜಿನಿಯರ್‍ರಾ ?  ನೀರಾವರಿ ಇಲಾಖೆ ಅಧಿಕಾರಿಗಳೂ ನಾಲೆಗಳಿಗೆ ನೀರು ಬಿಡುವ ನೆಪದಲ್ಲಿ ನೆರೆ ರಾಜ್ಯಕ್ಕೆ ನೀರು ಬಿಡುತ್ತಿದ್ದಾರೆ, ಈಗ ನಾಲೆಗಳಿಗೆ ನೀರು ಬಿಡುವ ಅವಶ್ಯಕತೆ ಇರಲಿಲ್ಲ, ಆದರೂ ಸಹ ಬಿಡಲಾಗಿದೆ, ಈಗ ನಿಲ್ಲಿಸಿ ಮತ್ತೊಂದು ಕಟ್ಟು ನೀರು ಬಿಡಲು ಮುಂದಾಗಬೇಕು ಎಂದರು.

ಹೋರಾಟದಲ್ಲಿ ಜಿಲ್ಲಾ ರೈತ ಹಿತರಕ್ಷಣಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಕೆ ಬೋರಯ್ಯ, ಸಂಘಟನಾ ಕಾರ್ಯದರ್ಶಿ ಸುನಂದ ಜಯರಾಂ, ಮುದ್ದೇಗೌಡ, ಕೃಷ್ಣಪ್ರಕಾಶ್, ಎಸ್ ನಾರಾಯಣ್ ಮತ್ತಿತರರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!