Saturday, May 18, 2024

ಪ್ರಾಯೋಗಿಕ ಆವೃತ್ತಿ

ರಾಹುಲ್ ಗಾಂಧಿ ಲೋಕಸಭಾ ಸದಸ್ಯತ್ವ ಅನರ್ಹಗೊಳಿಸಿದ ಸಚಿವಾಲಯ


  • ”ಪ್ರಜಾಪ್ರಭುತ್ವ ಅಪಾಯದಲ್ಲಿದೆ” ಎಂದು ಪ್ರತಿಭಟಿಸಿದ ಪ್ರತಿಪಕ್ಷಗಳು

  •  ದೇಶಾದ್ಯಂತ ಪ್ರತಿಭಟನೆ ನಡೆಸಲು ಕಾಂಗ್ರೆಸ್ ನಿರ್ಧಾರ

‘ಮೋದಿ ಸರ್‌ನೇಮ್‌‌’ ಬಳಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸೂರತ್ ಕೋರ್ಟ್‌ 2 ವರ್ಷಗಳ ಜೈಲು ಶಿಕ್ಷೆ ವಿಧಿಸಿದ ನಂತರ ಕಾಂಗ್ರೆಸ್ ನಾಯಕ, ವಯನಾಡ್ ಸಂಸದ ರಾಹುಲ್ ಗಾಂಧಿಯವರ ಲೋಕಸಭಾ ಸದಸ್ಯತ್ವ ಸ್ಥಾನ ಅನರ್ಹಗೊಳಿಸಲಾಗಿದೆ.

ಲೋಕಸಭಾ ಸೆಕ್ರೆಟರಿಯೇಟ್‌ರವರು ಈ ಕುರಿತು ಪ್ರಕಟಣೆ ಹೊರಡಿಸಿದ್ದು, “ಕೇರಳದ ವಯನಾಡ್ ಸಂಸದೀಯ ಕ್ಷೇತ್ರವನ್ನು ಪ್ರತಿನಿಧಿಸುವ ಲೋಕಸಭಾ ಸದಸ್ಯರಾದ ಶ್ರೀ ರಾಹುಲ್ ಗಾಂಧಿಯವರನ್ನು ಸೂರತ್‌ನ ಮುಖ್ಯ ಜುಡಿಷಿಯಲ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಅಪರಾಧಿ ಎಂದು ಘೋಷಿಸಿದ ನಂತರ, 1951ರ ಪ್ರಜಾಪ್ರತಿನಿಧಿ ಕಾಯ್ದೆಯ 8ನೇ ಪರಿಚ್ಛೇದದೊಂದಿಗೆ, ಭಾರತದ ಸಂವಿಧಾನದ 102(1)(ಇ) ವಿಧಿಯ ನಿಬಂಧನೆಗಳ ಪ್ರಕಾರ, ಮಾರ್ಚ್ 23, 2023 ರಿಂದ (ಶಿಕ್ಷೆಯಾದ ದಿನಾಂಕದಿಂದ) ಅವರು ಲೋಕಸಭೆಯ ಸದಸ್ಯತ್ವದಿಂದ ಅನರ್ಹಗೊಂಡಿದ್ದಾರೆ” ಎಂದು ಆದೇಶಿಸಲಾಗಿದೆ.

ರಾಹುಲ್ ಗಾಂಧಿ ಅವರನ್ನು ಲೋಕಸಭಾ ಸದಸ್ಯತ್ವದಿಂದ ಅನರ್ಹಗೊಳಿಸಿ ಪ್ರಕಟಣೆ ಹೊರಡಿಸಿದ ಲೋಕಸಭಾ ಸೆಕ್ರೆಟರಿಯೇಟ್.

ಇದಕ್ಕೂ ಮುನ್ನ ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ಕಚೇರಿಯಲ್ಲಿ ಪ್ರತಿಪಕ್ಷಗಳ ಸಂಸದರು ಸಂಕ್ಷಿಪ್ತ ಸಭೆ ನಡೆಸಿದ್ದರು. ಆನಂತರ ರಾಷ್ಟ್ರಪತಿ ಭವನದತ್ತ “ಪ್ರಜಾಪ್ರಭುತ್ವ ಅಪಾಯದಲ್ಲಿದೆ” ಎಂದು ಭಿತ್ತಿಪತ್ರಗಳನ್ನು ಹಿಡಿದು ಮೆರವಣಿಗೆ ನಡೆಸಿದರು. ಪ್ರತಿಭಟನೆಯ ಹಿನ್ನೆಲೆಯಲ್ಲಿ ವಿಜಯ್ ಚೌಕ್ ಪ್ರದೇಶದಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿತ್ತು. ಕೆಲವು ಸಂಸದರನ್ನು ವಿಜಯ್ ಚೌಕ್‌ನಿಂದ ವಶಕ್ಕೆ ಪಡೆಯಲಾಯಿತು.

ಇಂದು ಬೆಳಿಗ್ಗೆ ಲೋಕಸಭೆಗೆ ಆಗಮಿಸಿದ ರಾಹುಲ್ ಗಾಂಧಿಯವರು ಮಾತನಾಡಲು ಅವಕಾಶ ಕೋರಿದರು. ಕಾಂಗ್ರೆಸ್ ಸದಸ್ಯರು ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದ್ದರಿಂದ ಕಲಾಪವನ್ನು ಮುಂದೂಡಲಾಗಿತ್ತು.

ಕೋರ್ಟ್ ತೀರ್ಪಿನ ಕುರಿತು ಕಾಂಗ್ರೆಸ್ ಸಂಸದರು ರಾಷ್ಟ್ರಪತಿ ದ್ರೌಪದಿ ಮುರ್ಮುರವರನ್ನು ಭೇಟಿ ಮಾಡಿ ಚರ್ಚಿಸಲು ಸಿದ್ಧತೆ ನಡೆಸಿದ್ದಾರೆ. ಕಾಂಗ್ರೆಸ್ ಪಕ್ಷವು ದೇಶಾದ್ಯಂತ ಪ್ರತಿಭಟನೆ ನಡೆಸಲು ಉದ್ದೇಶಿಸಿದೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!