ನನ್ನ ಸಹೋದರ ಎಸ್.ಎಂ.ಶಂಕರ್ ಉತ್ತಮ ರಾಜಕಾರಣಿ,ಸಮಾಜ ಸೇವಕರಾಗಿದ್ದು, ಈ ಭಾಗದ ಜನರಿಗೆ ಅವರ ಸೇವೆ ಅನನ್ಯವಾದದ್ದು ಎಂದು ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಬಣ್ಣಿಸಿದರು.
ಮದ್ದೂರು ತಾಲೂಕಿನ ತಮ್ಮ ಸ್ವಗ್ರಾಮ ಸೋಮನಹಳ್ಳಿಯ ಶಾಲಾ ಆವರಣದಲ್ಲಿ ನಡೆದ ಮಾಜಿ ವಿಧಾನ ಪರಿಷತ್ ಸದಸ್ಯ ಎಸ್.ಎಂ.ಶಂಕರ್ ಅವರ ಮೂರನೇ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ನನ್ನ ಸಹೋದರ ಶಂಕರ್ ಸಾಮಾಜಿಕ ಕಳಕಳಿ ಉಳ್ಳವನಾಗಿದ್ದ.ಈ ಭಾಗದ ಜನರ ಸೇವೆಗೆ ಸದಾ ದುಡಿಯುತ್ತಿದ್ದ ಆತನ ಸೇವೆ ಅಪಾರ ಎಂದು ಗುಣಗಾನ ಮಾಡಿದರು. ಈ ಸಂದರ್ಭದಲ್ಲಿ ಎಸ್.ಎಂ.ಶಂಕರ್ ಸ್ಮರಣಾರ್ಥ ಸೋಮನಹಳ್ಳಿ ಗ್ರಾಮ ಪಂಚಾಯತಿಗೆ ಕುಟುಂಬದ ಹೆಸರಿನಲ್ಲಿ ಶವ ಸಾಗಿಸುವ ವಾಹನ ಕೊಡುಗೆ ನೀಡಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸತೀಶ್ ಕೈಗೆ ಹಸ್ತಾಂತರಿಸಿದರು.
ತಂದೆ ಹೆಸರಿನಲ್ಲಿರುವ ಟ್ರಸ್ಟ್ ಕಚೇರಿ ಹಾಗೂ ಸುಸಜ್ಜಿತವಾದ ಗ್ರಂಥಾಲಯ ಉದ್ಘಾಟನೆ ಮಾಡಲಾಯಿತು. ರಾಜಕೀಯದ ಬಗ್ಗೆ ಮಾತಾಡಲ್ಲ
ನಾನು ಯಾವುದೇ ರಾಜಕೀಯ ಕಾರ್ಯಕ್ರಮಕ್ಕೆ ಬಂದಿಲ್ಲ, ಸಹೋದರನ ಶ್ರದ್ಧಾಂಜಲಿ ಕಾರ್ಯಕ್ರಮಕ್ಕೆ ಬಂದಿದ್ದೇನೆ. ಜೆಡಿಎಸ್, ಕಾಂಗ್ರೆಸ್, ಬಿಜೆಪಿ ಪಕ್ಷಗಳ ಬಗ್ಗೆ ನಾನು ಮಾತನಾಡುವುದಿಲ್ಲ ಎಂದರು.
ಏಕೆಂದರೆ ಮದ್ದೂರು ಕ್ಷೇತ್ರದ ಶಾಸಕ ಜೆಡಿಎಸ್ ಪಕ್ಷದ ಡಿ.ಸಿ. ತಮ್ಮಣ್ಣ, ಬಿಜೆಪಿ ಅಧ್ಯಕ್ಷ ಸಿಪಿ.ಉಮೇಶ್ ಸಹ ಭಾಗವಹಿಸಿದ್ದಾರೆ.ಈಗ ರಾಜಕೀಯ ಮಾತು ಬೇಡ, ಅದರ ಬಗ್ಗೆ ನಾನು ಮಾತನಾಡುವುದಿಲ್ಲ ಎಂದರು.
ಈ ಬಾರಿ ಚುನಾವಣೆಗೆ ನಿಮ್ಮ ಸಹೋದರನ ಪುತ್ರ ಗುರುಚರಣ್ ಅವರು ಸ್ಪರ್ಧೆ ಮಾಡುತ್ತಿದ್ದು, ಅವರಿಗೆ ಯಾವ ರೀತಿ ನಿಮ್ಮ ಸಹಕಾರ ದೊರೆಯುತ್ತದೆ ಎಂಬ ವಿಚಾರಕ್ಕೆ, ಇನ್ನೂ ಸಮಯವಿದೆ.ಸಮಯ ಬಂದಾಗ ನಿಮ್ಮೊಡನೆ ಮಾತನಾಡಿ ತಿಳಿಸುತ್ತೇನೆ ಎಂದರು.
ಚುನಾವಣೆಯಲ್ಲಿ ನಿಮ್ಮ ಕುಟುಂಬದಿಂದಲೇ ಅಭ್ಯರ್ಥಿಗಳಾಗುತ್ತಾರೆ ಎಂಬ ವದಂತಿಯ ಬಗ್ಗೆ ಪ್ರತಿಕ್ರಿಯೆ ನೀಡಿದ ಕೃಷ್ಣರವರು, ಅದು ವದಂತಿಯಾಗಿಯೇ ಉಳಿಯುತ್ತದೆ. ಅವುಗಳಿಗೆ ಯಾರೂ ಕಿವಿ ಕೊಡುವುದು ಬೇಡ ಎಂದರು.
ಈ ಸಂದರ್ಭದಲ್ಲಿ ಕೆಪಿಸಿಸಿ ಸದಸ್ಯ ಗುರುಚರಣ್, ಜಿಲ್ಲಾ ಬಿಜೆಪಿ ಅಧ್ಯಕ್ಷ ಸಿ.ಪಿ.ಉಮೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕದಲೂರು ರಾಮಕೃಷ್ಣ, ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಜೋಗಿಗೌಡ,ಸಂದರ್ಶ, ರಾಘವ್,ಪ್ರಕಾಶ್, ಸೇರಿದಂತೆ ಹಲವರು ಉಪಸ್ಥಿತರಿದ್ದರು.