Friday, May 17, 2024

ಪ್ರಾಯೋಗಿಕ ಆವೃತ್ತಿ

ಸಮಾಜದಲ್ಲಿ ಕೆಳವರ್ಗದಲ್ಲಿರವವರನ್ನು ಮೇಲಕ್ಕೆತ್ತಬೇಕು: ಸಿದ್ದಲಿಂಗ ಸ್ವಾಮೀಜಿ

ಆರ್ಥಿಕವಾಗಿ ಬಲಿಷ್ಠವಾಗಿರುವವರು ಸಮಾಜದಲ್ಲಿ ಕೆಳವರ್ಗದಲ್ಲಿರವವರನ್ನು ಮೇಲಕ್ಕೆತ್ತಬೇಕು. ಅದೇ ನಿಜವಾದ ಸಮಾಜ ಸೇವೆ ಎಂದು ಸಿದ್ದಗಂಗಾ ಮಠದ ಪೀಠಾಧ್ಯಕ್ಷ ಶ್ರೀ ಸಿದ್ದಲಿಂಗ ಸ್ವಾಮೀಜಿ ಅವರು ಸಲಹೆ ನೀಡಿದರು.

ಮಂಡ್ಯ ತಾಲ್ಲೂಕಿನ ಬಸರಾಳು ಗ್ರಾಮದಲ್ಲಿ ಗ್ರಾಪಂ ಮಾಜಿ ಅಧ್ಯಕ್ಷ, ಸಮಾಜ ಸೇವಕ ಮಹಾಲಿಂಗೇಗೌಡ ಮುದ್ದನಘಟ್ಟ ಅವರು ನಿರ್ಮಾಣ ಮಾಡಿರುವ ತಾರಾಭವನ ಉದ್ಘಾಟನೆ, ಉಚಿತ ಸಾಮೂಹಿಕ ವಿವಾಹ ಮತ್ತು ಮಹಾಲಿಂಗೇಗೌಡ ಮುದ್ದನಘಟ್ಟ ಅವರ ತಂದೆ ತಾಯಿ ಅವರ ಭೀಮರಥ ಶಾಂತಿ ಕಾರ್ಯಕ್ರಮದಲ್ಲಿ ಸ್ವಾಮೀಜಿ ಆಶೀರ್ವಚನ ನೀಡಿದರು.

ಎಲ್ಲ ಹಣವಂತರು ಸಮಾಜ ಸೇವೆಗೆ ಮುಂದೆ ಬರವುದಿಲ್ಲ. ಆದರೆ, ಮಹಾಲಿಂಗೇಗೌಡ ಮುದ್ದನಘಟ್ಟ ಅವರು ಬಡವರ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡು ಬಡವರಿಗಾಗಿಯೇ ತಾರಾ ಭವನ ನಿರ್ಮಾಣ ಮಾಡಿರುವುದು ಶ್ಲಾಘನೀಯ. ಇವರ ಸೇವೆ ನಿರಂತರವಾಗಿರಲಿ ಎಂದು ಆಶಿಸಿದರು.

ಕೆಂಗೇರಿ ವಿಶ್ವ ಒಕ್ಕಲಿಗರ ಮಠದ ಪೀಠಾಧ್ಯಕ್ಷ ಶ್ರೀಚಂದ್ರಶೇಖರ ಸ್ವಾಮೀಜಿ ಮಾತನಾಡಿ, ಜನರ ಕಲ್ಯಾಣಕ್ಕಾಗಿ ಕಲ್ಯಾಣ ಮಂಟಪವನ್ನು ಕಟ್ಟಿ ಉಚಿತ ಸಾಮೂಹಿಕ ವಿವಾಹ ನಡೆಸುತ್ತಿರುವುದು ತುಂಬಾ ಶ್ಲಾಘನೀಯ. ಚಂಚಲ ಮನಸ್ಸಿನಿಂದ ಉತ್ತಮ ಆರೋಗ್ಯ ಸಿಗುವುದಿಲ್ಲ, ಕಾಯಕವೇ ಕೈಲಾಸ ಎಂಬ ಮನೋಭಾವ ಬೆಳೆಸಿಕೊಳ್ಳಬೇಕು. ಏಕಾಗ್ರತೆ ಇದ್ದಾಗ ಮಾತ್ರ ನಮ್ಮ ಗುರಿ ತಲುಪಲು ಸಾಧ್ಯವಾಗುತ್ತದೆ. ಸಮಾಜದಲ್ಲಿ ಸೇವೆ ಮಾಡುವುದು ಮುಖ್ಯವಾಗಬೇಕು. ಗುರು-ಹಿರಿಯರನ್ನು ಗೌರವಿಸುವ ಕಾರ್ಯಕ್ರಮವೂ ಸಹ ಇದಾಗಿದ್ದು, ಮಹಾಲಿಂಗೇಗೌಡ ಮುದ್ದನಘಟ್ಟ ಅವರು ಉತ್ತಮ ಸಮಾಜ ಸೇವಕರೂ ಆಗಿದ್ದಾರೆ ಎಂದು ಅಭಿಪ್ರಾಯಿಸಿದರು.
ಕಾಗಿನೆಲೆ ಪೀಠಾಧ್ಯಕ್ಷ ಶ್ರೀ ಶಿವಾನಂದಪುರಿ ಸ್ವಾಮೀಜಿ ಮಾತನಾಡಿ, ಜೀವನ ಒಂದು ಸಾಗರವಿದ್ದಂತೆ. ಕಷ್ಟ-ಸುಖಗಳನ್ನು ಸಮಾನವಾಗಿ ಸ್ವೀಕರಿಸಿ ನವಜೋಡಿಗಳು ಉತ್ತಮ ಜೀವನ ಕಟ್ಟಿಕೊಳ್ಳಿ. ಬದುಕಿನಲ್ಲಿ ಏರಿಳಿತ ಸರ್ವೇ ಸಾಮಾನ್ಯ. ಕಷ್ಟ ಬಂದಾಗ ಕುಗ್ಗದೇ ಸಂತೋಷ ಬಂದಾಗ ಹಿಗ್ಗದೇ ಸಮತೋಲನ ಜೀವನ ಸಾಗಿಸಬೇಕು. ದುಬಾರಿ ವೆಚ್ಚ ಮಾಡಿ ಮದುವೆ ಮಾಡುವುದಕ್ಕಿಂತ ಇಂತಹ ಸರಳ ಮದುವೆಗಳು ಎಲ್ಲರನ್ನೂ ಉಳಿಸುವ ಮಹಾತ್ಕಾರ್ಯ ಎಂದು ತಿಳಿಸಿದರು.

ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಅವರು ಐದು ನವ ಜೋಡಿಗಳಿಗೆ ಮಾಂಗಲ್ಯ ವಿತರಣೆ ಮಾಡಿ, ಶುಭ ಕೋರಿದರು.

ಈ ಸಂದರ್ಭದಲ್ಲಿ ಆದಿಚುಂಚನಗಿರಿ ಕೊಮ್ಮೇರಹಳ್ಳಿ ಶಾಖಾ ಮಠದ ಶ್ರೀ ಪುರುಷೋತ್ತಮಾನಂದನಾಥ ಸ್ವಾಮೀಜಿ, ಶ್ರೀ ತ್ರಿನೇಂತ್ರ ಮಹಾಂತ ಶಿವಯೋಗಿ ಸ್ವಾಮೀಜಿ, ಗ್ರಾಪಂ ಮಾಜಿ ಅಧ್ಯಕ್ಷ, ಸಮಾಜ ಸೇವಕ ಮಹಾಲಿಂಗೇಗೌಡ ಮುದ್ದನಘಟ್ಟ ಮತ್ತು ಪೋಷಕರಾದ ತಾಯಮ್ಮ, ರಾಮೇಗೌಡ ಹಾಜರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!