Sunday, May 19, 2024

ಪ್ರಾಯೋಗಿಕ ಆವೃತ್ತಿ

” ಶ್ರದ್ದೆಯ ಅರ್ಥ ಮೂಢನಂಬಿಕೆಯಲ್ಲ” : ಸ್ವಾಮಿ ವಿವೇಕಾನಂದ…..

ವಿವೇಕಾನಂದ ಎಚ್. ಕೆ.

ಅಯೋಧ್ಯೆ ಕಾಂಡದ ಮಂತ್ರಾಕ್ಷತೆಯ ಭಕ್ತಿ ಭಾವದಲ್ಲಿ
ಭಾರತದ ಸಾಂಸ್ಕೃತಿಕ ರಾಯಭಾರಿಯನ್ನು ನೆನೆಯುತ್ತಾ……

ನಾನು ಕಂಡಂತೆ ಸುಮಾರು ವರ್ಷಗಳಿಂದ ಬಹುತೇಕ ಎಲ್ಲಾ ಜನಪ್ರಿಯ ಪಕ್ಷದ ರಾಜಕಾರಣಿಗಳು ಚುನಾವಣಾ ಸಮಯದಲ್ಲಿ, ಫಲಿತಾಂಶಗಳ ದಿನಗಳಲ್ಲಿ, ಮಂತ್ರಿಮಂಡಲ ರಚನೆ, ವಿಸ್ತರಣೆ ಮತ್ತು ಪುನರ್ ರಚನೆಯ ಸಂದರ್ಭದಲ್ಲಿ, ತಮ್ಮ ಹುಟ್ಟು ಹಬ್ಬದ ಸನ್ನಿವೇಶದಲ್ಲಿ ತಿರುಪತಿ, ಧರ್ಮಸ್ಥಳ, ಮಂತ್ರಾಲಯ, ವೈಷ್ಣವೋದೇವಿ, ಕಾಶಿ, ಸುಬ್ರಮಣ್ಯ, ಇನ್ನು ಮುಂದೆ ಅಯೋಧ್ಯೆ ಹೀಗೆ ಮುಂತಾದ ಪ್ರಮುಖ ಧಾರ್ಮಿಕ ಸ್ಥಳಗಳಿಗೆ ಹೋಗಿ ದೇವರಿಗೆ ಕಾಣಿಕೆ ನೀಡಿ ತಮ್ಮ ಬೇಡಿಕೆಯನ್ನು ಸಲ್ಲಿಸುತ್ತಾರೆ. ಹಾಗೆಯೇ ಇತರ ಧರ್ಮದವರು ಸಹ ತಮ್ಮ ಧಾರ್ಮಿಕ ಕ್ಷೇತ್ರಗಳಿಗೆ ಹೋಗುತ್ತಾರೆ.

ರಾಜಕಾರಣಿಗಳು ಮಾತ್ರವಲ್ಲದೆ ವ್ಯಾಪಾರ ವ್ಯವಹಾರ ಮಾಡುವವರು, ರೌಡಿಗಳು, ಅತ್ಯಾಚಾರಿಗಳು, ಕೊಲೆಗಡುಕರು, ಭ್ರಷ್ಟಾಚಾರಿಗಳು, ಮದುವೆ, ಮಕ್ಕಳು, ಮತ್ತು ಉದ್ಯೋಗ ಆಕಾಂಕ್ಷಿಗಳು, ಆರೋಗ್ಯ ಮನೆ ಮುಂತಾದ ಒತ್ತಡ ಇರುವವರು ಸಹ ಈ ಪಟ್ಟಿಯಲ್ಲಿ ಸೇರುತ್ತಾರೆ. ಕೆಲವೊಮ್ಮೆ ಭಕ್ತಿಯಿಂದಲೂ ಹೋಗಬಹುದು.

ಇಲ್ಲಿ ನೆನಪಾಗುವ ಒಂದು ಮಾತು
” ಶ್ರದ್ಧೆಯ ಅರ್ಥ ಮೂಡನಂಬಿಕೆಯಲ್ಲ ” ಎಂಬ ಸ್ವಾಮಿ ವಿವೇಕಾನಂದರ ಅನುಭವದ ನುಡಿಗಳು.

ಬಹುಶಃ ಎಡಪಂಥೀಯ ಮತ್ತು ಬಲಪಂಥೀಯ ಇಬ್ಬರಿಂದಲೂ ಹೆಚ್ಚು ಟೀಕೆಗೆ ಒಳಪಡದೆ ಭಾರತದ ಸಾಂಸ್ಕೃತಿಕ ರಾಯಭಾರಿ ಎಂದು ಗೌರವಿಸಲ್ಪಡುವ ಸ್ವಾಮಿ ವಿವೇಕಾನಂದರ ಈ ಮಾತು ಹೆಚ್ಚು ವೈಚಾರಿಕ ಮತ್ತು ವೈಜ್ಞಾನಿಕ ಪ್ರಜ್ಞೆಯನ್ನು ಹೊಂದಿದೆ.

ಏಕೆಂದರೆ ದೇವರನ್ನು ನ್ಯಾಯಾಧೀಶರ ಸ್ಥಾನದಲ್ಲಿ, ಸರ್ವಶಕ್ತನ ರೀತಿಯಲ್ಲಿ ಭಾವಿಸಿ ತಮ್ಮ ಬೇಡಿಕೆ ಸಲ್ಲಿಸುತ್ತಾರೆ. ಕೆಲವೊಮ್ಮೆ ಅವು ಈಡೇರಬಹುದು ಹಲವೊಮ್ಮೆ ವಿಫಲವಾಗಬಹುದು. ಯಶಸ್ವಿಯಾದಾಗ ದೇವರ ಕೃಪೆಯೆಂದು, ವಿಫಲವಾದಾಗ ಅದು ನಮ್ಮ ಕರ್ಮ ಫಲವೆಂದು ಭಾವಿಸಲಾಗುತ್ತದೆ.

ಇಲ್ಲಿ ಗಮನಿಸಬಹುದಾದ ಮುಖ್ಯ ಅಂಶವೆಂದರೆ ಸಾಮಾನ್ಯವಾಗಿ ಹಣವಂತರು, ಭ್ರಷ್ಟರು, ಬಲಿಷ್ಠರು, ಭಂಡರು, ಅಪರಾಧಿ ಮನೋಭಾವದವರು, ಎಲ್ಲಾ ಬಿಟ್ಟವರ ಬೇಡಿಕೆಗಳು ಈಡೇರುವುದು ಹೆಚ್ಚು. ಒಳ್ಳೆಯವರು, ಸೂಕ್ಷ್ಮ ಮನಸ್ಸಿನವರು, ಶೋಷಿತರು, ದುರ್ಬಲರು, ಬಡವರು ಮುಂತಾದವರ ಬೇಡಿಕೆಗಳು ಸಾಮಾನ್ಯವಾಗಿ ಪೂರೈಕೆ ಆಗುವುದೇ ಇಲ್ಲ ಅಥವಾ ಕಡಿಮೆ.

ಹಾಗಾದರೆ ದೇವರೂ ಸಹ ಪಕ್ಷಪಾತಿಯೇ. ಸಮಾಜದ ಅನೇಕ ಕ್ಷೇತ್ರಗಳಲ್ಲಿ ಯಶಸ್ವಿಯಾಗುವ ದುಷ್ಟ ಭ್ರಷ್ಟ ಜನರನ್ನು ನೋಡಿದಾಗ ದೇವರ ತೀರ್ಮಾನದ ಬಗ್ಗೆಯೇ ಅನುಮಾನ ಮೂಡುವುದಿಲ್ಲವೇ…..

ಸ್ವಾಮೀಜಿಯೊಬ್ಬ ಅಪ್ರಾಪ್ತ ಮಕ್ಕಳನ್ನು ಲೈಂಗಿಕವಾಗಿ ಹಿಂಸಿಸುವಾಗ ದೇವರು ಸಹಾಯ ಮಾಡಬಹುದಿತ್ತಲ್ಲವೇ,
ಚುನಾವಣೆಯಲ್ಲಿ ದುಷ್ಟ – ಭ್ರಷ್ಟನ ವಿರುದ್ಧ ಒಳ್ಳೆಯವರನ್ನು ಗೆಲ್ಲಿಸಬಹುದಿತ್ತಲ್ಲವೇ,
ಮತಾಂಧನೊಬ್ಬ ಬಾಂಬ್ ಉಡಾಯಿಸಿ ಅಮಾಯಕರನ್ನು ಕೊಲ್ಲುವಾಗ ಅವನನ್ನು ಶಿಕ್ಷಿಸಬಹುದಿತ್ತಲ್ಲವೇ…..

ದೇವರೆಂಬ ಸರ್ವಶಕ್ತ ತೀರ್ಪುಗಾರ ಸಂಪೂರ್ಣ ವಿಫಲ ಎಂದು ಅನಿಸುವುದಿಲ್ಲವೇ….
ಅಥವಾ
ದೇವರು ವಿಫಲನೂ ಅಲ್ಲ – ಸಫಲನೂ ಅಲ್ಲ. ವಾಸ್ತವವಾಗಿ ದೇವರೆಂಬುದು ಒಂದು ಪರಿಕಲ್ಪನೆ ಮಾತ್ರ ಎಂಬ ತೀರ್ಮಾನಕ್ಕೆ ಬರಬಹುದೇ……

ಇದರ ಒಟ್ಟು ಸಾರಾಂಶ ದೇವರು ಇರಬಾರದು ಎಂದಲ್ಲ. ದೇವರ ಅವಶ್ಯಕತೆ ತುಂಬಾ ಇದೆ. ಆದರೆ ದೇವರು ವಾಸ್ತವದಲ್ಲಿ ಇಲ್ಲ….

ಸ್ವಾಮಿ ವಿವೇಕಾನಂದರು ಶ್ರದ್ಧೆ ಎಂದರೆ ನಾವು ಮಾಡುವ ಕೆಲಸದಲ್ಲಿ ತೊಡಗಿಸಿಕೊಳ್ಳುವ ಶುದ್ದ ಪ್ರಕ್ರಿಯೆ ಎಂಬ ಅರ್ಥದಲ್ಲಿ ಹೇಳಿರಬಹುದು. ಬಸವಣ್ಣನವರ ಕಾಯಕವೇ ಕೈಲಾಸ ಎಂಬ ಮಾತಿನ ವಿಸ್ತಾರ ರೂಪ ಶ್ರದ್ಧೆ ಎಂದೂ ಭಾವಿಸಬಹುದು. ಅಂದರೆ ಕಾಲ್ಪನಿಕ ಶಕ್ತಿಗಿಂತ ವಾಸ್ತವ ಪ್ರಜ್ಞೆ ಅತ್ಯಂತ ಮಹತ್ವದ ಪಾತ್ರ ವಹಿಸುತ್ತದೆ.

ರಷ್ಯಾ ಉಕ್ರೇನ್ ಯುದ್ಧದ ಭೀಕರ ಸುದ್ದಿಗಳು, ಇಸ್ರೇಲ್ ಹಮಾಸ್ ಹತ್ಯಾಕಾಂಡಗಳು, ಸಿರಿಯಾ ಅಫ್ಘಾನಿಸ್ತಾನದ ಆಂತರಿಕ ಯುದ್ಧಗಳು, ಉತ್ತರ ಕೊರಿಯಾದ ಅಣ್ವಸ್ತ್ರ ಪರೀಕ್ಷೆಗಳು, ಚೀನಾದ ವೈರಸ್ ಅವಾಂತರಗಳು, ಭಾರತದ ಜಾತಿ ವ್ಯವಸ್ಥೆಯ ಅಮಾನವೀಯ ಘಟನೆಗಳು…..
ಇತಿಹಾಸದ ಮಹಾ ಯುದ್ಧಗಳು, ಹಿರೋಷಿಮಾ ನಾಗಸಾಕಿಯ ಅಣುಬಾಂಬಿನ ದುರಂತಗಳು, ಹಿಟ್ಲರ್ ಮುಸಲೋನಿ ಇದಿ ಅಮೀನ್ ಮುಂತಾದ ಸರ್ವಾಧಿಕಾರಿಗಳ ಮಾರಣ ಹೋಮಗಳು, ಭಾರತದ ಸತಿ ಸಹಗಮನ ಪದ್ದತಿಯ ಕರಾಳ ಮುಖಗಳು…. ಹೀಗೆ ಎಲ್ಲಿಯೂ ದೇವರು ನ್ಯಾಯ ಒದಗಿಸಿದ ಕಣ್ಣಿಗೆ ಕಾಣುವ ಸಾಕ್ಷ್ಯಗಳು ದೊರೆಯುವುದಿಲ್ಲ.

ದೇವರ ಅಸ್ತಿತ್ವದ ಬಗ್ಗೆ ತಿಳಿಯಲು ಅತ್ಯಂತ ಸೂಕ್ಷ್ಮ ಜ್ಞಾನದ, ಶ್ರಮದ, ಶುಧ್ದತೆಯ ಅವಶ್ಯಕತೆ ಇದೆ ಎಂದು ಅಭಿಪ್ರಾಯ ವ್ಯಕ್ತಪಡಿಸುವವರಿಗೆ ದೇವರು ಸೂಕ್ಷ್ಮವೂ ಆಗಬಾರದು, ಜ್ಞಾನವೂ ಆಗಬಾರದು, ಶ್ರಮವೂ ಆಗಬಾರದು, ಸರಳವೂ ಆಗಬಾರದು. ಪ್ರಕೃತಿಯಂತೆ ಸಹಜ ಸ್ವಾಭಾವಿಕ ಆಗಿರಬೇಕು. ನೀರು ಗಾಳಿ ಬೆಳಕು ಕಾಡು ಬೆಟ್ಟ ಗುಡ್ಡಗಳಂತೆ ಸಹಜ ಮತ್ತು ಸ್ವಾಭಾವಿಕ ಆಗಬೇಕು. ಕಾರಣ ಪರಿಣಾಮ ಫಲಿತಾಂಶಗಳು ಸ್ಪಷ್ಟವಾಗಿ ಗೋಚರಿಸಬೇಕು. ಅದು ಇಡೀ ವಿಶ್ವಕ್ಕೆ ಸಾರ್ವತ್ರಿಕ ಸತ್ಯವಾಗಬೇಕು. ಆಗ ಮಾತ್ರ ಅದರ ಅಸ್ತಿತ್ವ ಒಪ್ಪಬಹುದು.

ಎಲ್ಲಾ ಕಾಲ ಸಂದರ್ಭ ಸನ್ನಿವೇಶ ಪ್ರದೇಶಗಳಿಗೂ ಏಕ ರೂಪವಾಗಿ ವ್ಯಾಪಿಸಿರಬೇಕು. ಅದು ಬಿಟ್ಟು ಜಾತಿಗೆ, ಧರ್ಮಕ್ಕೆ, ಭಾಷೆಗೆ, ಪ್ರದೇಶಕ್ಕೆ, ಮನೆ ಮನೆಗೆ ದೇವರು ಎಂದಾದರೆ ಅದನ್ನು ಹೇಗೆ ಅರ್ಥಮಾಡಿಕೊಂಡು ಪ್ರೋತ್ಸಾಹಿಸುವುದು…….

ವಿಶ್ವದ ಪ್ರತಿ ನಾಗರಿಕತೆಯು ಒಂದೊಂದು ದೇವರನ್ನು ‌ಸೃಷ್ಟಿಸಿರುವುದು ಮನುಷ್ಯನೇ ದೇವರ ಸೃಷ್ಟಿಕರ್ತ ಎಂಬುದನ್ನು ಸೂಚಿಸುತ್ತದೆಯಲ್ಲವೇ……

ಜ್ಞಾನವೆಂಬುದು ನಿಂತ ನೀರಲ್ಲ ಅದು ಹರಿಯುವ ಪ್ರವಾಹ ಎಂಬ ತಿಳಿವಳಿಕೆ ಅವರಿಗೆ ಇರುವುದಿಲ್ಲ. ಇದ್ದರೂ ಅದನ್ನು ಒಪ್ಪಿಕೊಂಡರೆ ಅವರ ಅಸ್ತಿತ್ವವೇ ಕುಸಿಯುತ್ತದೆ.

ಸಾವಿನ ಭಯ, ಹಣ ಅಧಿಕಾರ ಸಿಗುವ ದುರಾಸೆ, ದಾರಿದ್ರ್ಯ ಸ್ಥಿತಿಗೆ ತಲುಪುವ ಆತಂಕ, ಸಂಕೀರ್ಣ ಜೀವನ ಶೈಲಿ, ಯಶಸ್ಸನ್ನು ತಪ್ಪಾಗಿ ಅರ್ಥೈಸಿರುವುದು, ಪ್ರಬುದ್ದತೆಯ ಮಟ್ಟ ಕುಸಿದು ಸ್ವತಂತ್ರ ಕ್ರಿಯಾತ್ಮಕ ಚಿಂತನೆಯ ಕೊರತೆ ದೇವರ ಬಗ್ಗೆ ನಾವು ನಿಷ್ಪಕ್ಷಪಾತ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗತ್ತಿಲ್ಲ.

ಇದನ್ನೆಲ್ಲಾ ಮೀರಿ ಯೋಚಿಸಿದರೆ ದೇವರ ಇರುವಿಕೆ ಮತ್ತು ಇಲ್ಲದಿರುವಿಕೆಯ ಸ್ಪಷ್ಟ ಚಿತ್ರಣ ಸಿಗುತ್ತದೆ.

ನಿಮ್ಮ ನಂಬಿಕೆ ಮತ್ತು ಅಭಿಪ್ರಾಯ ಗೌರವಿಸುತ್ತಾ…….

ದೇವರಲ್ಲಿಯೇ ಒಂದು ಕೋರಿಕೆ…..

ನನ್ನ ಪ್ರೀತಿಯ ದೇವರೆ ನೀನೆಲ್ಲಿರುವೆ,
ನಿನ್ನನ್ನು ಒಮ್ಮೆ ನೋಡಬೇಕೆನಿಸಿದೆ ,
ನಿನ್ನ ಬಳಿ ತುಂಬಾ ಮಾತನಾಡಬೇಕಿದೆ,
ನನ್ನ ಅನೇಕ ಪ್ರಶ್ನೆಗಳಿಗೆ ಉತ್ತರ ಬೇಕಿದೆ, ನಿನ್ನಲ್ಲಿ ನಾನು ಲೀನವಾಗಬೇಕಿದೆ,……..

ಯಾಕೆ ಸಾಧ್ಯವಿಲ್ಲವೆ?, ನಾನು ಕೆಟ್ಟವನೆ, ಹೋಗಲಿ ಬಿಡು ನಿನ್ನಿಷ್ಟ, ನಾವು ಭೂಮಿಯಲ್ಲಿ 750 ಕೋಟಿ ಜನರಿದ್ದೇವೆ,
ಅವರಲ್ಲಿ ನಿನಗಿಷ್ಟದ ಯಾರಿಗಾದರೂ ದರ್ಶನ ನೀಡು,
ಅವರಿಗೆ ಹೇಳು, ನೀನು ಎಲ್ಲಿರುವೆ ? , ಏನು ಮಾಡುತ್ತಿರುವೆ ? ಹೇಗಿರುವೆ ,? ನಿನ್ನ ಬೇಟಿ ಮಾಡುವುದು ಹೇಗೆ ? ನಿನ್ನ ಶಕ್ತಿ ಏನು ? ನಿನ್ನ ವ್ಯಾಪ್ತಿ ಏನು? ನಿನ್ನ ರೂಪವೇನು? ನಿನ್ನ ಗುಣವೇನು?

ಇಲ್ಲಿ ಕಟ್ಟಿಸಿರುವ ಗುಡಿ ಗೋಪುರ ಚರ್ಚು ಮಸೀದಿಗಳು ನಿನ್ನವೇನು?

ಈ ಪೂಜಾರಿ, ಸ್ವಾಮಿ, ಪಾದ್ರಿ, ಮೌಲ್ವಿಗಳು ನಿನ್ನವರೇನು?

ಜಾತಿ, ಧರ್ಮ, ಭಾಷೆಗಳನ್ನು ನೀನೇ ಸೃಷ್ಟಿಸಿದ್ದೇ?
ಗಾಳಿ, ನೀರು, ಬೆಳಕು ನಿನ್ನಿಂದಲೇ ಆಗಿದ್ದೇ?

ನನಗೆ ಬುದ್ದಿ ತಿಳಿದಾಗಿನಿಂದ ಹುಡುಕುತ್ತಿದ್ದೇನೆ,
ಎಲ್ಲಾ ಪುಣ್ಯ ಸ್ಥಳಗಳನ್ನು ಸುತ್ತಿದ್ದೇನೆ,
ಎಲ್ಲರೂ ಆಕಾಶ ತೋರುವರು,

ಅಲ್ಲಿಗೂ,
ಚಂದ್ರನಲ್ಲಿಗೂ, ಮಂಗಳನಲ್ಲಿಗೂ ಬಂದಿದ್ದೆ,
ನೀನು ಕಾಣಲಿಲ್ಲ,

ಈ ಜನರ ಮಾತುಗಳನ್ನು ಕೇಳಿ ಕೇಳಿ ಸಾಕಾಗಿದೆ,
ನನ್ನೊಡೆಯ ಒಮ್ಮೆ,- ಒಮ್ಮೆ ಕಾಣಿಸಿಕೋ,
ನಂಬಿಕೆ, ಭಕ್ತಿ, ಶ್ರದ್ಧೆ, ಶುದ್ಧತೆ ಎಂದೆಲ್ಲಾ ಕೇಳಿ ಕೇಳಿ ತಲೆ ಕೆಟ್ಟಿದೆ,

ಅದೆಲ್ಲವನ್ನೂ ಕೊಡುವುದು ನೀನೇ ಆಗಿರುವಾಗ ಇವರ ಒತ್ತಡ ಏಕೆ?

ನೀನೇ ಸರ್ವಶಕ್ತ ಎನ್ನುವರು. ಆದರೆ,
ನಿನ್ನ ಗುಣಾವಗುಣಗಳನ್ನು ಇವರೇ ನಿರ್ಧರಿಸುವರು,
ರಾಶಿ ಭವಿಷ್ಯ ರಾಹು ಕೇತು ಸ್ವರ್ಗ ನರಕ ಶ್ರೇಷ್ಠ ಕನಿಷ್ಠ,
ಎಂದೆಲ್ಲಾ ಹೇಳಿ ನಿನ್ನ ಹೆಸರಲ್ಲೇ ಎಲ್ಲಾ ಮಾಡುವರು,
ನೀನು ಮಾತ್ರ ಪತ್ತೆಯೇ ಇಲ್ಲ.

ಆದರೂ ಕಾಯುತ್ತಿದ್ದೇನೆ ನಿನ್ನ ಬರುವಿಕೆಗಾಗಿ ಶತಶತಮಾನಗಳಿಂದ,

ಯಾರು ಏನೇ ಅಂದರೂ, ಯಾರು ಏನೇ ಭಯಪಡಿಸಿದರೂ ನೀನು ಕಾಣುವವರೆಗೂ ನಿನ್ನನ್ನು ಪ್ರಶ್ನಿಸುತ್ತಲೇ ಇರುತ್ತೇನೆ ಮತ್ತು
ಹೇಳುತ್ತಲೇ ಇರುತ್ತೇನೆ ನಿನ್ನನ್ನು ಸೃಷ್ಡಿಸಿದ್ದು ನಾನೇ ಎಂದು………

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!