Saturday, May 18, 2024

ಪ್ರಾಯೋಗಿಕ ಆವೃತ್ತಿ

ಶ್ರೀರಂಗಪಟ್ಟಣ | ಹಿರಿಯ ಸಾಹಿತಿ-ಬಹು ಭಾಷಾ ಪಂಡಿತ ಪ್ರೊ.ಎಂ.ಕರಿಮುದ್ದೀನ್ ನಿಧನ

ಹಿರಿಯ ಸಾಹಿತಿ, ಬಹು ಭಾಷಾ ಪಂಡಿತ ಪ್ರೊ.ಎಂ. ಕರಿಮುದ್ದೀನ್ (95) ಸೆ.2ರ ಶನಿವಾರ ಮುಂಜಾನೆ 3.30ರ ಸಮಯದಲ್ಲಿ ಶ್ರೀರಂಗಪಟ್ಟಣ ಸಮೀಪದ ಗಂಜಾಂನ ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ.

ಶ್ರೀರಂಗಪಟ್ಟಣದ ಗಂಜಾಂನಲ್ಲಿರುವ ತಮ್ಮ ಅಣ್ಣನ ಮಕ್ಕಳ ಮನೆಯಲ್ಲಿ ವಾಸವಿದ್ದ ಕರಿಮುದ್ದೀನ್ ಅವರು ವಯೋಸಹಜ ಅನಾರೋಗ್ಯದಿಂದ ನಿಧನರಾಗಿದ್ದಾರೆ.

ಬಹುಭಾಷಾ ಪಂಡಿತರಾಗಿದ್ದ ಕರಿಮುದ್ದೀನ್ ಅವರು ಕನ್ನಡ, ಇಂಗ್ಲಿಷ್, ಉರ್ದು, ಸಂಸ್ಕೃತ, ಪರ್ಶಿಯನ್, ಅರೇಬಿಕ್, ಪಾರ್ಸಿ ಮೊದಲಾದ ಭಾಷೆಗಳಲ್ಲಿ ಪಾಂಡಿತ್ಯ ಹೊಂದಿದ್ದರು.ರಾಷ್ಟ್ರಕವಿ ಕುವೆಂಪು, ತೀ.ನಂ.ಶ್ರೀ, ಡಿ.ಎಲ್. ನರಸಿಂಹಮೂರ್ತಿ, ಕಾವೆಂ ರಾಘವಾಚಾರ್ಯರಂತಹಸಾಹಿತಿಗಳ ಗರಡಿಯಲ್ಲಿ ಬೆಳೆದಿದ್ದ ಕರಿಮುದ್ದೀನ್ ಅವರು ಜಗತ್ತಿನ ಅನೇಕ ಧರ್ಮ ಗ್ರಂಥಗಳನ್ನು ಓದಿ ಅದರಲ್ಲಿರುವ ಸಾರವನ್ನು ಕರಗತ ಮಾಡಿಕೊಂಡಿದ್ದರು.ಅಪಾರ ಜ್ಞಾನ ಭಂಡಾರದ ಮೇರು ಪರ್ವತವಾಗಿದ್ದ ಅವರ ನಿಧನ ಸಾಹಿತ್ಯ ಜಗತ್ತಿಗೆ ತುಂಬಲಾರದ ನಷ್ಟವಾಗಿದೆ.

ಹಿಂದೂ, ಇಸ್ಲಾಂ, ಕ್ರೈಸ್ತ ಎಲ್ಲವೂ ಒಂದು ಮತ! ಒಂದು ನಂಬಿಕೆ! ಮಾನವ ಜನಾಂಗದಲ್ಲಿನ ವೈವಿಧ್ಯ! ಅವುಗಳಲ್ಲಿ ಏಕತೆಯನ್ನು ಕಾಣದೆ ಅಂತಹ ನಂಬಿಕೆಗಳನ್ನು ಇಂದು ನಾವು ಹೊಲಸಾಗಿಸಿ ಬಿಟ್ಟಿದ್ದೇವೆ. ಎಲ್ಲಾ ಧರ್ಮಗಳಲ್ಲಿರುವ ಒಳ್ಳೆಯ ಅಂಶಗಳನ್ನು ಅಳವಡಿಸಿಕೊಂಡು ವಿಶ್ವಮಾನವರಾಗಬೇಕು ಎಂಬುದು ಅವರ ನಿಲುವಾಗಿತ್ತು.

ಪುಸ್ತಕದ ಓದಿನಿಂದ ಬಂದ ಜ್ಞಾನವನ್ನು ಅವರು ಒಪ್ಪುತ್ತಿರಲಿಲ್ಲ. ಅದು ನಮ್ಮ ಪ್ರಜ್ಞೆಯ ಭಾಗವಾಗದಿದ್ದರೆ, ಅನುಭವದ ಮೂಸೆಯಿಂದ ಹೊರ ಬೀಳದಿದ್ದರೆ ಅಂತಹ ಜ್ಞಾನದಿಂದ ಯಾವ ಪ್ರಯೋಜನವೂ ಇಲ್ಲ ಎನ್ನುತ್ತಿದ್ದರು. ಮಕ್ಕಳಿಗೆ ಮಾನವೀಯತೆಯ ಶಿಕ್ಷಣ ಕೊಡಬೇಕೆಂದು ಪ್ರತಿಪಾದಿಸುತ್ತಿದ್ದರು. ಮೂಲಭೂತವಾದವನ್ನು ಖಂಡ ತುಂಡವಾಗಿ ನಿರಾಕರಿಸುತ್ತಿದ್ದ ಕರಿಮುದ್ದೀನ್ ಅವರು ಮುಸಲ್ಮಾನರ ಯಾವ ಧಾರ್ಮಿಕ ಅಂಶಗಳನ್ನು ಪಾಲಿಸುತ್ತಿರಲಿಲ್ಲ. ನಾನು ಮಾನವ ನಿರ್ಮಿತ ದೇವರನ್ನು ನಂಬುವುದಿಲ್ಲ ಎನ್ನುತ್ತಿದ್ದ ಅವರು ತಮ್ಮ ಉಸಿರಿರುವವರೆಗೂ ಹಾಗೆಯೇ ಬದುಕಿದವರು.

ಗಂಜಾಂನಲ್ಲಿ ದಾರ್ ಉಲ್ ಉಮೂರ್ ಎಂಬ ಅರೇಬಿಕ್ ಶಾಲೆಯನ್ನು ತೆರೆದು ಅದರ ಪ್ರಾಂಶುಪಾಲರಾಗಿ (ಕೋವಿಡ್ ಬರುವವರೆಗೂ) ಹಲವಾರು ವರ್ಷಗಳ ಕಾಲ ಕರ್ತವ್ಯ ನಿರ್ವಹಿಸಿದ್ದರು. ಅಲ್ಲಿ ಜಗತ್ತಿನ ವಿವಿಧ ಧಾರ್ಮಿಕ ಗ್ರಂಥಗಳ ಅಧ್ಯಯನವೇ ಪಠ್ಯವಾಗಿತ್ತು. ವಿವಿಧ ಧರ್ಮದವರನ್ನು ಕರೆಸಿ ವಿಶೇಷ ಉಪನ್ಯಾಸಗಳನ್ನು ಮಾಡಲಾಗುತ್ತಿತ್ತು. ರಾಮಕೃಷ್ಣಾಶ್ರಮದವರನ್ನು ಕರೆಸಿ ಭಾಷಣ ಮಾಡಿಸಿದ್ದರು.ಎಲ್ಲಾ ಧರ್ಮಗಳ ಮಹಾತ್ಮರು ಒಳ್ಳೆಯದನ್ನೇ ಹೇಳಿದ್ದಾರೆ. ಯಾರೂ ಕೂಡ ಕೊಲೆ ಮಾಡಿ, ಅನ್ಯಧರ್ಮಿಯರನ್ನು ಮತಾಂತರ ಮಾಡಿ ಎಂದು ಹೇಳಿಲ್ಲ. ಸಾರ್ವಜನಿಕವಾಗಿ ಇನ್ನೊಬ್ಬರಿಗೆ ತೊಂದರೆಯಾಗದಂತೆ ಬದುಕುವುದೇ ನಿಜವಾದ ಧರ್ಮ ಎನ್ನುತ್ತಿದ್ದರು.ಎಲ್ಲಾ ಧರ್ಮಗಳ ಸಾರ ಒಂದೇ,ಅದು ವಿಶ್ವ ಮಾನವ ತತ್ವ ಎಂದು ಭಾವಿಸಿದ್ದ ಅವರು,ಕರ್ನಾಟಕದಲ್ಲಿ ಕೋಮು ಸೌಹಾರ್ದಕ್ಕೆ ಧಕ್ಕೆ ಆದ ಸಂದರ್ಭದಲ್ಲಿ ಕೋಮು ಸೌಹಾರ್ದ ವೇದಿಕೆಯ ಹಲವಾರು ಹೋರಾಟಗಳಲ್ಲಿ ಸಕ್ರಿಯ ರಾಗಿದ್ದರು.ಕೋಮು ಸೌಹಾರ್ದತೆ ಕುರಿತು ಅನೇಕ ಪುಸ್ತಕಗಳನ್ನು ಬರೆದಿದ್ದ ಅವರು, ನಮ್ಮ ಶಿಕ್ಷಣ ಪದ್ಧತಿ ಬದಲಾಗಬೇಕು. ಎಲ್ಲಾ ಧರ್ಮಗಳು ಮನುಷ್ಯರನ್ನು ವಿಶ್ವಮಾನವವಾಗಿ ಕಾಣುತ್ತವೆ ಎನ್ನುತ್ತಿದ್ದರು.

ಬುದ್ಧ,ಬಸವಣ್ಣ, ಕನಕದಾಸ ಸೇರಿದಂತೆ ಹಲವು ದಾರ್ಶನಿಕರ ಬಗ್ಗೆ ಅಪಾರವಾಗಿ ತಿಳಿದುಕೊಂಡಿದ್ದ ಕರಿಮುದ್ದೀನ್ ರವರು ವಿವಿಧ ಧರ್ಮಗಳ ಸಾರವನ್ನು ತಮ್ಮ 95 ವರ್ಷಗಳ ಜೀವಿತಾವಧಿಯಲ್ಲಿ ಜನರ ಮನಸ್ಸುಗಳಿಗೆ ಮುಟ್ಟಿಸಲು ಹಾತೊರೆದವರು. ಇಂತಹ ಮಹಾನ್ ವ್ಯಕ್ತಿ ಕರಿಮುದ್ದೀನ್ ಅವರು ಇನ್ನು ನೆನಪು ಮಾತ್ರ. ಅವರು ನಮ್ಮೊಡನೆ ಇಲ್ಲದಿದ್ದರೂ ಅವರು ವಿಚಾರಧಾರೆಗಳು ಮುಂದಿನ ಪೀಳಿಗೆಗೂ ಸಲ್ಲುತ್ತವೆ ಎನ್ನುವುದರಲ್ಲಿ ಎರಡು ಮಾತಿಲ್ಲ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!