Monday, May 20, 2024

ಪ್ರಾಯೋಗಿಕ ಆವೃತ್ತಿ

ಆತ್ಮಹತ್ಯೆಯೇ ಪರಿಹಾರವಲ್ಲ; ಅಂಕಗಳಿಕೆಯ ಶಿಕ್ಷಣಕ್ಕಿಂತ ಬದುಕಿನ ಶಿಕ್ಷಣವೇ ಮುಖ್ಯ

ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂದ ಹಿನ್ನಲೆಯಲ್ಲಿ ಹಾಗೂ ಅನುತ್ತೀರ್ಣವಾದ ಕಾರಣಕ್ಕೆ ಮನ ನೊಂದ ವಿದ್ಯಾರ್ಥಿಗಳಿಬ್ಬರು ಆತ್ಮಹತ್ಯೆ ಶರಣಾಗಿರುವ ದಾರುಣ ಘಟನೆ ಮದ್ದೂರು ತಾಲ್ಲೂಕಿನಲ್ಲಿ ನಡೆದಿರುವುದು ದಿಗ್ಬ್ರಾಂತಿ ಮೂಡಿಸಿದೆ‌.

ಅವರ ಜೀವನದ ದಾರಿ ಸಾಕಷ್ಟು ದೂರವಿತ್ತು. ಆದರೆ ಹದಿನೈದನೇ ವಯಸ್ಸಿನಲ್ಲಿ ಆ ಮಕ್ಕಳಿಬ್ಬರು ಆತ್ಮಹತ್ಯೆಯಂತಹ ಕೃತ್ಯಕ್ಕೆ ಕೈ ಹಾಕುತ್ತಾರೆ ಎಂದರೆ ಇಂದಿನ ಸ್ಪರ್ಧಾತ್ಮಕ ಜಗತ್ತು ಅಂಕಗಳ ಹಿಂದೆ ಹೇಗೆ ಓಡುತ್ತಿದೆ, ಅದು ಯಾವ ಮಟ್ಟ ತಲುಪಿದೆ ಎಂಬುದು ಅರ್ಥವಾಗುತ್ತದೆ.

ಮದ್ದೂರು ತಾಲೂಕಿನ ಹುಲಿಗೆರೆಪುರ ಗ್ರಾಮದ ಹೆಚ್.ಎಂ.ಅಮೃತ(15) ಎಸ್ ಎಸ್ ಎಲ್ ಸಿ ಪರೀಕ್ಷೆ ತಾನು ನಿರೀಕ್ಷೆ ಮಾಡಿದ್ದಕ್ಕಿಂತ ಕಡಿಮೆ ಅಂಕ ಬಂದಿವೆ ಎಂದು ಮನನೊಂದು ಆತ್ಮಹತ್ಯೆಗೆ ಶರಣಾದರೆ,
ಅನುತ್ತೀರ್ಣನಾದ ಕಾರಣಕ್ಕೆ ಮದ್ದೂರು ತಾಲೂಕಿನ ಕೊಪ್ಪ ಹೋಬಳಿಯ ತಗ್ಗಹಳ್ಳಿ ಗ್ರಾಮದ
ಲಿಖಿತ್ (15) ನೇಣಿಗೆ ಶರಣಾಗಿದ್ದಾನೆ.ಈ ಎರಡು ಜೀವಗಳು ಅಂಕ ಗಳಿಸುವುದೇ ಸಾಧನೆ ಎನ್ನುವ ಜಗತ್ತಿನಲ್ಲಿ ಬದುಕಲೇ ಬಾರದು ಎಂಬ ನಿರ್ಧಾರಕ್ಕೆ ಬರಲು ಸಮಾಜವೂ ಕಾರಣ ಎಂದರೆ ತಪ್ಪಾಗಲಾರದು.

ಅಂಕ ಗಳಿಸುವುದೇ ಸಾಧನೆಯಲ್ಲ

ಸ್ಪರ್ಧಾತ್ಮಕ ಜಗತ್ತಿನಲ್ಲಿ ವಿದ್ಯಾರ್ಥಿಗಳು ಪರೀಕ್ಷೆ ಎಂಬ ಭೂತಕ್ಕೆ ಬಲಿಯಾಗುತ್ತಿರುವುದನ್ನು ನೋಡುತ್ತಲೇ ಇದ್ದೇವೆ. ಕೇವಲ ಅಂಕ ಗಳಿಸುವುದನ್ನೇ ಸಾಧನೆ ಎಂಬಂತೆ ಬಿಂಬಿಸಲಾಗುತ್ತಿದೆ.ಒಬ್ಬ ವ್ಯಕ್ತಿ ಸಮಾಜದಲ್ಲಿ ಒಳ್ಳೆಯ ಪ್ರಜೆಯಾಗಲು ಅಂಕಗಳೇ ಮಾನದಂಡ ಅಲ್ಲ ಎಂಬುದನ್ನು ಸಮಾಜ ಅರ್ಥ ಮಾಡಿ ಕೊಂಡು, ಬಾಳಿ ಬದುಕಬೇಕಾದ ಮುಗ್ಧ ಜೀವಗಳ ಪ್ರಾಣ ಹರಣವನ್ನು ತಡೆಯಬೇಕಿದೆ.

ಎಸ್ಎಸ್ಎಲ್ಸಿ, ಪಿಯುಸಿ ಪರೀಕ್ಷೆ ಫಲಿತಾಂಶ ಬಂದ ಕೂಡಲೇ ಅನುತ್ತೀರ್ಣದ ಕಾರಣಕ್ಕೆ, ಕಡಿಮೆ ಅಂಕ ಬಂದ ಕಾರಣಕ್ಕೆ ವಿದ್ಯಾರ್ಥಿಗಳು ಆತ್ಮಹತ್ಯೆಗೆ ಶರಣಾದ ಸುದ್ದಿಗಳು ಬರುತ್ತಲೇ ಇರುತ್ತವೆ.ಇಂದು ಓದಿ ಒಳ್ಳೆಯ ಅಂಕ ಪಡೆಯದ ವಿದ್ಯಾರ್ಥಿಗಳನ್ನು ಕೀಳು ಭಾವನೆಯಿಂದ, ತಿರಸ್ಕಾರ ಮನೋಭಾವದಿಂದ ಕಾಣುವ ಜಗತ್ತು ನಮ್ಮ ಮುಂದಿದೆ.ಆತ ಅಷ್ಟು ಚೆನ್ನಾಗಿ ಓದ್ತಾನೆ. ಈಕೆ ಇಷ್ಟು ಅಂಕ ಪಡೆದಿದ್ದಾಳೆ ಎಂದು ಮಕ್ಕಳ ಪೋಷಕರು ಒತ್ತಡ ಹಾಕುತ್ತಾರೆ. ಶಾಲೆಗಳಲ್ಲಿ ಶಿಕ್ಷಕರು ಕೂಡ ಒತ್ತಡ ಹಾಕುತ್ತಾರೆ. ಸಮಾಜ ಕೂಡ ಆತ ಪಡೆಯುವ ಅಂಕಗಳ ಆಧಾರದ ಮೇಲೆ ಅವರನ್ನು ನೋಡುವ ಕಾರಣಕ್ಕೆ ಇಂದು ವಿದ್ಯಾರ್ಥಿಗಳು ಮನನೊಂದು ಆತ್ಮಹತ್ಯೆಯಂತಹ ಕೃತ್ಯಕ್ಕೆ ಶರಣಾಗುತ್ತಿದ್ದಾರೆ.

ಕಡಿಮೆ ಅಂಕ ಬಂದರೆ, ಅನುತ್ತೀರ್ಣ ಆದರೆ ಮತ್ತೆ ಎರಡು ಬಾರಿ ಪರೀಕ್ಷೆ ಬರೆಯಲು ಅವಕಾಶವಿತ್ತು. ಆದರೆ ಫೇಲಾದ ಅಂದ ತಕ್ಷಣವೇ ಆ ವಿದ್ಯಾರ್ಥಿಗಳನ್ನು ಸಮಾಜ ನೋಡುವ ದಾಟಿಯೇ ಬದಲಾಗಿ ಬಿಡುತ್ತದೆ. ಪೋಷಕರು ಕೂಡ ಆ ಕ್ಷಣ ಸಂಯಮ ಕಳೆದುಕೊಂಡು ಸಿಟ್ಟಿನಿಂದ ಬೈಯ್ದಿರುತ್ತಾರೆ. ಇದನ್ನು ಮನಸ್ಸಿಗೆ ಹಚ್ಚಿಕೊಂಡ ವಿದ್ಯಾರ್ಥಿಗಳು ಕೋಪ,ಹತಾಶೆಯ ಕೈಗೆ ಬುದ್ಧಿ ಕೊಟ್ಟು ಆತ್ಮಹತ್ಯೆಗೆ ಶರಣಾಗುತ್ತಾರೆ.
ಬದುಕುವ ಶಿಕ್ಷಣ ಬೇಕು

ಇಂದು ಮನುಷ್ಯನಿಗೆ ಶಿಕ್ಷಣ ಮುಖ್ಯ ಎನ್ನುವುದು ಸರಿ. ಆದರೆ ಕೇವಲ ಅಂಕಗಳನ್ನು ಗಳಿಸುವ ಶಿಕ್ಷಣದ ಬದಲು ಸಮಾಜದಲ್ಲಿ ಬದುಕುವ ಶಿಕ್ಷಣ ಬೇಕಾಗಿದೆ‌.ಮಾನವನ ಇತಿಹಾಸವನ್ನು ನೋಡಿದಾಗ ಅಷ್ಟೇನೂ ಓದದವರು ಕೂಡ ಹಲವಾರು ಕ್ಷೇತ್ರಗಳಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ. ಓದು ತಲೆಗೆ ಹತ್ತದಿದ್ದರೇನಂತೆ, ಹತ್ತಾರು ಬೇರೆ ಕ್ಷೇತ್ರಗಳಿವೆ. ಅಲ್ಲಿ ಸಾಧನೆ ಮಾಡು ಎಂದು ಪೋಷಕರು ಹಾಗೂ ಶಿಕ್ಷಕರು ಶಾಲಾ ಹಂತದಲ್ಲಿಯೇ ಮನದಟ್ಟು ಮಾಡಿಸಬೇಕಿದೆ‌.ಕಡಿಮೆ ಅಂಕ ತೆಗೆದುಕೊಳ್ಳುವ ವಿದ್ಯಾರ್ಥಿಗಳನ್ನು ಗುರುತಿಸಿ ಅವರನ್ನು ಇನ್ನೂ ಹೆಚ್ಚಿನ ಅಂಕ ಗಳಿಸುವತ್ತ ಶಿಕ್ಷಕರು ಪ್ರಯತ್ನ ಮಾಡಬೇಕು.

ಮುದ್ದಿನ ಮಕ್ಕಳೇ ಜೀವ ಒಂದೇ. ಮುಂದೆ ಪುನರ್ಜನ್ಮ ಇದೆ ಎಂಬುದಲ್ಲ ಸುಳ್ಳು. ನಮಗೆ ದೊರೆತಿರುವ ಜೀವನವನ್ನು ಸದ್ಬಳಕೆ ಮಾಡಿಕೊಳ್ಳಬೇಕಾದದ್ದು ನಮ್ಮ ಆದ್ಯ ಕರ್ತವ್ಯ. ಒಂದು ಪರೀಕ್ಷೆಯಲ್ಲಿ ಫೇಲಾದರೆ ಏನೂ ನಷ್ಟವಾಗುವುದಿಲ್ಲ.ಮತ್ತೆ ಪರೀಕ್ಷೆ ಬರೆಯಬಹುದು. ಯಾರೂ ಏನೇ ಅಂದರೂ ತಲೆಕಡಿಸಿಕೊಳ್ಳದೆ ಮುಂದಿನ ಜೀವನವನ್ನು ಧೈರ್ಯದಿಂದ ಎದುರಿಸಿ ಗೆಲ್ಲಬಹುದು. ಪೋಷಕರೇ ನೀವೂ ಕೂಡ ತಮ್ಮ ಮಕ್ಕಳ ಅಂಕಗಳ ಬಗ್ಗೆ ಅತಿಯಾಗಿ ತಲೆ ಕೆಡಿಸಿಕೊಳ್ಳದೆ,ಮಕ್ಕಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮುಂದೆ ಉತ್ತಮ ಅವಕಾಶವಿದೆ ಎಂದು ಹೇಳಿ ಅವರನ್ನು ಪ್ರೋತ್ಸಾಹಿಸಿ ಕಾಪಾಡಿಕೊಳ್ಳಬೇಕಾದದ್ದು ನಿಮ್ಮ ಕರ್ತವ್ಯ‌.ಮುದ್ದಿನ ಮಕ್ಕಳೇ ಯಾರೂ ಕೂಡ ಆತ್ಮಹತ್ಯೆಯಂತಹ ಹೇಡಿ ಕೆಲಸ ಮಾಡಲು ಹೋಗಬೇಡಿ. ಮಾನವ ಜೀವನ ದೊಡ್ಡದು. ಅದನ್ನು ಸಾರ್ಥಕ ಪಡಿಸಿಕೊಳ್ಳೋಣ.

ಕೇವಲ ಅಂಕಗಳಿಂದಷ್ಟೇ ಒಬ್ಬನ ವ್ಯಕ್ತಿತ್ವ ಅಳೆಯುವುದಲ್ಲ.ಬದಲಿಗೆ ಒಳ್ಳೆಯ ಸುಸಂಸ್ಕೃತ ವ್ಯಕ್ತಿ ಈ ಸಮಾಜಕ್ಕೆ ಮುಖ್ಯ ಎನ್ನುವ ಬದುಕಿನ ಪಾಠವನ್ನು ಶಿಕ್ಷಕರು ಹಾಗೂ ಪೋಷಕರು ಹೇಳಿ ಕೊಟ್ಟಾಗ ಮಾತ್ರ ವಿದ್ಯಾರ್ಥಿಗಳ ಆತ್ಮಹತ್ಯೆ ತಡೆಯಬಹುದು.ಇನ್ನಾದರೂ ಅಂತಹ ಬದುಕುವ ಶಿಕ್ಷಣ ನೀಡಲು ಎಲ್ಲರೂ ಕೈ ಜೋಡಿಸೋಣ ಎಂಬುದು ನುಡಿ ಕರ್ನಾಟಕ.ಕಾಂ ಆಶಯ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!