Monday, May 20, 2024

ಪ್ರಾಯೋಗಿಕ ಆವೃತ್ತಿ

ಮಂಡ್ಯ| 85 ಕೆರೆಗಳ ಒತ್ತುವರಿ ತೆರವುಗೊಳಿಸಲು ಜಿಲ್ಲಾಧಿಕಾರಿ ಸೂಚನೆ

ಮಂಡ್ಯ ಜಿಲ್ಲೆಯಲ್ಲಿ ಜೂನ್ 15 ರೊಳಗಾಗಿ ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗ-35, ಸಣ್ಣ ನೀರಾವರಿ- 2 ಕೆರೆ, ಹೇಮಾವತಿ ಎಡದಂಡೆ ನಾಲಾ ವಿಭಾಗ-33, ಕಾವೇರಿ ನೀರಾವರಿ ನಿಗಮ ನಿಯಮಿತ-15 ಕೆರೆಗಳು ಸೇರಿದಂತೆ ಒಟ್ಟು 85 ಕೆರೆಗಳ ಒತ್ತುವರಿ ತೆರವುಗೊಳಿಸಿ ವರದಿ ನೀಡುವಂತೆ ಜಿಲ್ಲಾಧಿಕಾರಿ ಡಾ.ಕುಮಾರ ಅಧಿಕಾರಿಗಳಿಗೆ ಸೂಚಿಸಿದರು.

ಮಂಡ್ಯ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಕೆರೆಗಳ ಒತ್ತುವರಿ ತೆರವುಗೊಳಿಸುವ ಸಂಬಂಧ ಸಭೆ ನಡೆಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ 962 ಕೆರೆಗಳಿದ್ದು, ಭೂ ದಾಖಲೆಗಳ ಇಲಾಖೆಯ ಸಹಯೋಗದೊಂದಿಗೆ ಕೆರೆಗಳನ್ನು ಅಳತೆ ಮಾಡಲಾಗಿದೆ. 448 ಕೆರೆಗಳಲ್ಲಿ ಒತ್ತುವರಿ ಕಂಡುಬಂದಿದ್ದು, ಅದರಲ್ಲಿ 200 ಕೆರೆಗಳ ಒತ್ತುವರಿ ತೆರವುಗೊಳಿಸಲಾಗಿದೆ ಎಂದರು.

248 ಕೆರೆಗಳ ಒತ್ತುವರಿಯನ್ನು ತೆರವುಗೊಳಿಸಬೇಕಿದ್ದು, ಜೂನ್ 15 ರೊಳಗಾಗಿ ನಿಗದಿಪಡಿಸಿರುವ 85 ಕೆರೆಗಳ ಒತ್ತುವರಿಯನ್ನು ತಹಶೀಲ್ದಾರ್, ಪೊಲೀಸ್ ಇಲಾಖೆಯ ಸಹಾಯ ಪಡೆದು ತೆರವುಗೊಳಿಸಿ ವರದಿ ನೀಡಬೇಕು ಇಲ್ಲವಾದಲ್ಲಿ ನಿಯಮಾನುಸಾರ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗ, ಹೆಚ್.ಎಲ್.ಬಿ.ಸಿ, ಕಾವೇರಿ ನೀರಾವರಿ ನಿಗಮ ನಿಯಮಿತ ಹಾಗೂ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ತಮ್ಮ ವ್ಯಾಪ್ತಿಗೆ ಬರುವ ಕೆರೆಯನ್ನು ಸಂರಕ್ಷಿಸಬೇಕು, ನಿಯಮಿತವಾಗಿ ಕೆರೆಗಳ ಪರಿಶೀಲನೆ ನಡೆಸಿ ಒತ್ತುವರಿಯಾಗದಂತೆ ನೋಡಿಕೊಳ್ಳಬೇಕು ಎಂದರು.

ಮೊದಲ ಹಂತದಲ್ಲಿ 85 ಕೆರೆಗಳ ಒತ್ತುವರಿಯನ್ನು ಜೂನ್ 15 ರೊಳಗಾಗಿ ತೆರವುಗೊಳಿಸಿ ವರದಿ ನೀಡುವಂತೆ ತಿಳಿಸಲಾಗಿದೆ. ಒತ್ತುವರಿ ತೆರವುಗೊಳಿಸದಿದ್ದಲ್ಲಿ ಕರ್ನಾಟಕ ಭೂ ದಾಖಲೆಗಳ ಕಾಯ್ದೆಯ ಸೆಕ್ಸನ್ 192 ರ ಪ್ರಕಾರ ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಲಾಗುವುದು ಎಂದರು.

ಅಪರ ಜಿಲ್ಲಾಧಿಕಾರಿ ಡಾ.ಹೆಚ್ ಎಲ್ ನಾಗರಾಜು ಅವರು ಮಾತನಾಡಿ ಜಿಲ್ಲೆಯಲ್ಲಿರುವ ಕೆರೆಗಳನ್ನು ಅಳತೆ ಮಾಡಿಸಿ ಎಲ್ಲಾ ದಾಖಲೆಗಳೊಂದಿಗೆ ಜಿಲ್ಲಾಧಿಕಾರಿಗಳ ಕಚೇರಿಗೆ ಸಲ್ಲಿಸುವಂತೆ ತಿಳಿಸಲಾಗಿತ್ತು. ಮೇ 13 ರ ಸಂಜೆ 5 ಗಂಟೆಯೊಳಗಾಗಿ ಕಡತ ಸಲ್ಲಿಕೆಯಾಗದಿದ್ದರೆ ನೋಟೀಸ್ ಜಾರಿ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.

ಕೆರೆಗಳನ್ನು ಸರಿಯಾಗಿ ಸಂರಕ್ಷಣೆ ಮಾಡದಿದ್ದರೆ ಮಳೆ ನೀರನ್ನು ಸಂಗ್ರಹಿಸಲು ಸಾಧ್ಯವಿಲ್ಲದೆ ಹಲವಾರು ಸಮಸ್ಯೆಗಳು ಉಂಟಾಗುತ್ತದೆ‌. ಕೆರೆಯ ಸುತ್ತದ 30 ಮೀಟರ್ ವ್ಯಾಪ್ತಿಯಲ್ಲಿ ಯಾವುದೇ ಕಟ್ಟಡ ನಿರ್ಮಿಸುವಂತಿಲ್ಲ. ನಿಯಮಗಳನ್ನು ಪಾಲನೆ ಮಾಡದಿದ್ದಲ್ಲಿ ಒತ್ತುವರಿಯಂತಹ ಸಮಸ್ಯೆಗಳು ಬರುತ್ತದೆ ಎಂದರು.

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಕ ಅಧಿಕಾರಿ ಶೇಖ್ ತನ್ವೀರ್ ಆಸಿಫ್, ಡಿ‌.ಡಿ.ಎಲ್ಆರ್ ಉಮೇಶ್ ಸೇರಿದಂತೆ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!