Sunday, May 19, 2024

ಪ್ರಾಯೋಗಿಕ ಆವೃತ್ತಿ

ಮಂಡ್ಯ| ಸಕ್ಕರೆನಗರದಲ್ಲಿ 5 ದಿನಗಳ ಕಾಲ ಫಲಪುಷ್ಪ ಪ್ರದರ್ಶನ

ಮಂಡ್ಯ ಜಿಲ್ಲಾ ಮಟ್ಟದ ಫಲಪುಷ್ಪ ಪ್ರದರ್ಶನವು ಜ.26ರಿಂದ 30ರವರೆಗೆ ಮಂಡ್ಯ ಜಿಲ್ಲಾ ತೋಟಗಾರಿಕೆ ಇಲಾಖೆ ಕಚೇರಿ ಆವರಣದಲ್ಲಿ ನಡೆಯಲಿದೆ ಎಂದು ಜಿಲ್ಲಾ ತೋಟಗಾರಿಕೆ ಸಂಘದ ಅಧ್ಯಕ್ಷ ಹಾಗೂ ಜಿ. ಪಂ. ಮುಖ್ಯ ಕಾರ‍್ಯನಿರ್ವಾಹಕ ಅಧಿಕಾರಿ ಶೇಖ್ ತನ್ವೀರ್ ಆಸಿಫ್ ತಿಳಿಸಿದರು.

ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗಣ ರಾಜ್ಯೋತ್ಸವ ದಿನವಾದ ಜ.26ರಂದು ಫಲಪುಷ್ಪ ಪ್ರದರ್ಶನಕ್ಕೆ ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಚಾಲನೆ ನೀಡುವರು. ಶಾಸಕ ಪಿ. ರವಿಕುಮಾರ್ ಅಧ್ಯಕ್ಷತೆ ವಹಿಸುವರು.

ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಸಂಸದೆ ಸುಮಲತಾ ಅಂಬರೀಶ್, ಶಾಸಕ ಮರಿತಿಬ್ಬೇಗೌಡ, ಮಧು.ಜಿ. ಮಾದೇಗೌಡ, ದಿನೇಶ್ ಗೂಳಿಗೌಡ, ಪಿ.ಎಂ. ನರೇಂದ್ರಸ್ವಾಮಿ, ರಮೇಶ್ ಬಂಡಿ ಸಿದ್ದೇಗೌಡ, ದರ್ಶನ್ ಪುಟ್ಟಣ್ಣಯ್ಯ, ಎಚ್.ಟಿ. ಮಂಜು, ಕೆ.ಎಂ. ಉದಯ್ ಸೇರಿದಂತೆ ಇನ್ನಿತರು ಆಗಮಿಸುವರು ಎಂದರು.

ಈ ಬಾರಿಯ ವಿಶೇಷತೆ

ಹೆಣ್ಣುಭ್ರೂಣ ಹತ್ಯೆ ಬಗ್ಗೆ ಮರಳಿನ ಕಲಾಕೃತಿ(ಸ್ಯಾಂಡ್‌ಆರ್ಟ್) ರಚಿಸಲಾಗುತ್ತಿದೆ. ದಾನದ ಗೋಡೆ ಅಥವಾ ವಾಲ್ ಆಫ್ ಡೊನೇಷನ್ ಹೆಸರಿನ ಪುಟ್ಟ ಗೋಡೆ ಮಳಿಗೆ ತೆರೆಯಲಾಗುತ್ತಿದೆ. ಇದರಲ್ಲಿ ಜನರಿಗೆ ತಮಗೆ ಉಪಯೋಗಕ್ಕೆ ಬಾರದ ವಸ್ತುಗಳನ್ನು ತಂದು ಇಡಬಹುದು. ಅದರ ಉಪಯೋಗ ಬರುವವರು ಉಚಿತವಾಗಿ ಕೊಂಡೊಯ್ಯಬಹುದಾಗಿದೆ.

nudikarnataka.com

ಪ್ರತಿದಿನ ಬೆಳಿಗ್ಗೆ 10 ಗಂಟೆಯಿಂದ ರಾತ್ರಿ 8.30 ಗಂಟೆಯವರೆಗೆ ಪ್ರದರ್ಶನ ವೀಕ್ಷಿಸಲು ಅವಕಾಶವಿರುತ್ತದೆ. ಸಂಜೆ 6 ಗಂಟೆಯಿಂದ ರಾತ್ರಿ 8.30 ಗಂಟೆಯವರೆಗೆ ಸಾಂಸ್ಕೃತಿಕ, ಮನೋರಂಜನ ಕಾರ್ಯಕ್ರಮವು ನಡೆಯಲಿವೆ, ಇದಕ್ಕಾಗಿ ಡಿಸಿ ಕಚೇರಿ ಎದುರಿನ ಕಾವೇರಿ ವನ ಮತ್ತು ಭವ್ಯವನಗಳನ್ನು ಬಳಸಿಕೊಳ್ಳುತ್ತಿದೆ.  ಪ್ರದರ್ಶನ ವೀಕ್ಷಣೆ ಮಾಡಲು ಬರುವವರ ಮನಸ್ಸಿಗೆ ಮುದ ನೀಡುವಂತೆ ಪಾರಂಪರಿಕ ಶೈಲಿಯ ಆಕರ್ಷಕ ಸ್ವಾಗತ ಕಮಾನುಗಳು, ಮಂಟಪಗಳನ್ನು ನಿರ್ಮಿಸಲಾಗಿದೆ.

“ರೈತರಿಂದ ಗ್ರಾಹಕರಿಗೆ ನೇರ ಮಾರಾಟ” ಶೀರ್ಷಿಕೆಯಡಿ ಜಿಲ್ಲೆಯ ರೈತ ಉತ್ಪಾದಕ ಕಂಪನಿಗಳ ನಾನಾ ಉತ್ಪನ್ನಗಳ ರೀಟೇಲ್ ಬ್ರಾಂಡ್‌ಗಳ ಪ್ರದರ್ಶನ ಮತ್ತು ಮಾರಾಟ, ವೈವಿಧ್ಯಮಯ ಅಲಂಕಾರಿಕ ಹೂ ಕುಂಡಗಳ ಜೊಡಣೆ, ಆಕರ್ಷಕ ಬಗೆಯ ಬೋನ್ಸಾಯ್ ಜೋಡಣೆ ಮತ್ತು ಪ್ರದರ್ಶನ, ಅಲಂಕಾರಿಕ ತರಕಾರಿ ಕೆತ್ತನೆ ಪ್ರದರ್ಶನ, ಪೌಷ್ಟಿಕ ಕೈತೋಟದ ಮಾದರಿ ಪ್ರದರ್ಶನ, ಪ್ರಗತಿಪರ ರೈತರ ತೋಟಗಾರಿಕೆ ಬೆಳೆಗಳ ವೈವಿಧ್ಯ ಮಾದರಿಗಳ ಪ್ರದರ್ಶನ, ಅಕ್ವೇರಿಯಂ ಮತ್ತು ನಾನಾ ತಳಿಯ ಮೀನುಗಳ ಪ್ರದರ್ಶನವಿರುತ್ತದೆ ಎಂದರು.

ಗೋಷ್ಠಿಯಲ್ಲಿ ತೋಟಗಾರಿಕೆ ಉಪ ನಿರ್ದೇಶಕಿ ಕೆ.ಎನ್.ರೂಪಶ್ರೀ, ಹಿರಿಯ ಸಹಕಾರ ತೋಟಗಾರಿಕೆ ನಿರ್ದೇಶಕ ಎನ್.ಸಿ.ಶಶಿಧರ, ಜಿಲ್ಲಾ ತೋಟಗಾರಿಕೆ ಸಂಘದ ಖಜಾಂಚಿ ಸಿ.ಎಸ್.ಅರುಣ್‌ಕುಮಾರ್, ಜಂಟಿ ಕಾರ‍್ಯದರ್ಶಿ ಎಸ್.ಪಿ.ಶ್ರೀಧರ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿರ್ದೇಶಕಿ ಎಚ್.ಎಸ್.ನಿರ್ಮಲಾ ಹಾಜರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!