Friday, June 21, 2024

ಪ್ರಾಯೋಗಿಕ ಆವೃತ್ತಿ

ಸಂವಿಧಾನ ಮತ್ತು ದಲಿತರ ರಕ್ಷಣೆಗಾಗಿ ಕಾಂಗ್ರೆಸ್‌ಗೆ ಮತ ನೀಡಿ: ಜಿ.ಸಿ ಚಂದ್ರಶೇಖರ್

ದೇಶದಲ್ಲಿ ಅಂಬೇಡ್ಕರ್ ಶಕ್ತಿ ದೊಡ್ಡ ಮಟ್ಟದಲ್ಲಿದೆ. ಆ ಶಕ್ತಿಯನ್ನು ಅಲುಗಾಡಿಸಲು ಸಾಧ್ಯವಿಲ್ಲ. ಶೋಷಿತರಿಗೆ ಸಮಾನತೆ ಸ್ವಾತಂತ್ರ‍್ಯ ದೊರಕಿಸಿಕೊಟ್ಟ ಅವರ ಮಾರ್ಗದರ್ಶನದಲ್ಲಿ ಮುನ್ನಡೆಯಬೇಕು. ಪ್ರಜಾಪ್ರಭುತ್ವ, ಸಂವಿಧಾನ ರಕ್ಷಣೆಗಾಗಿ ಕಾಂಗ್ರೆಸ್ ಗೆ  ಮತ ನೀಡಬೇಕೆಂದು ರಾಜ್ಯಸಭೆ ಸದಸ್ಯ ಜಿ.ಸಿ.ಚಂದ್ರಶೇಖರ್ ಮನವಿ ಮಾಡಿದರು.

ಮಂಡ್ಯ ನಗರದ ಕನಕಭವನದಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿಯು ಮಂಡ್ಯ ಲೋಕಸಭೆ ಚುನಾವಣೆ ಸಂಬಂಧ ಮಂಗಳವಾರ ಏರ್ಪಡಿಸಿದ್ದ ನಾನಾ ದಲಿತ ಸಂಘಟನೆಗಳ ಒಕ್ಕೂಟದ ಸಭೆಯಲ್ಲಿ ಮಾತನಾಡಿದ ಅವರು, ಪ್ರಸ್ತುತ ನಡೆಯುತ್ತಿರುವ ಲೋಕಸಭೆ ಚುನಾವಣೆಯು ಧರ್ಮಯುದ್ಧವಾಗಿದೆ. ಪ್ರಧಾನಿ ಮೋದಿ, ಉದ್ಯಮಿ ಅಂಬಾನಿ ಮತ್ತು ಸಾಮಾನ್ಯ ಒಬ್ಬರಿಗೂ ಒಂದೇ ಮತ. ಈ ಮತ ಮೌಲ್ಯವನ್ನು ಅರಿತು ಜನರು ಮತ ಚಲಾಯಿಸಬೇಕು. ಸಂವಿಧಾನ ಮತ್ತು ದಲಿತರ ರಕ್ಷಣೆಗಾಗಿ ಕಾಂಗ್ರೆಸ್‌ಗೆ ಮತ ನೀಡಬೇಕೆಂದರು.

ನೆಮ್ಮದಿಯಿಂದ ಬದುಕುವಂತಾಗಿದೆ

ಅಂಬೇಡ್ಕರ್ ಅವರು ಭಾರತದಲ್ಲಿ ಹುಟ್ಟದಿದ್ದರೆ ದೀನದಲಿತರು ಈ ದೇಶದಲ್ಲಿ ಬದುಕಲು ಬಿಡದೆ, ಹೊಸಕಿ ಹಾಕಿ ಬಿಡುತ್ತಿದ್ದರು. ಆದರೆ, ಅಂಬೇಡ್ಕರ್ ಮತ್ತವರು ರಚಿಸಿದ ಸಂವಿಧಾನದ ಕಾರಣದಿಂದಾಗಿ ಶೋಷಿತರು ನೆಮ್ಮದಿಯಿಂದ ಬದುಕುವಂತಾಗಿದೆ. ಶಿಕ್ಷಣ, ಉದ್ಯೋಗ, ರಾಜಕೀಯದಲ್ಲಿ ಮೀಸಲು ಅವಕಾಶ ದೊರೆತಿದೆ ಎಂದರು.

ಕಳೆದ ಚುನಾವಣೆಯಲ್ಲಿ ಅಂಬರೀಶ್ ಪತ್ನಿ ಎಂಬ ಕಾರಣಕ್ಕೆ ಮಂಡ್ಯ ಜನರು ಸ್ವಾಭಿಮಾನದ ಹೋರಾಟ ನಡೆಸಿ ಸುಮಲತಾ ಅಂಬರೀಶ್ ಅವರನ್ನು ಬೆಂಬಲಿಸಿದರು. ಈ ಸಮಾರಂಭದಲ್ಲಿರುವ ಹಲವು ಸುಮಲತಾ ಅವರ ಗೆಲುವಿಗೆ ಕೊಡುಗೆ ನೀಡಿದರು. ಆದರೆ, ಗೆದ್ದ ಬಳಿಕ ಅವರು ಕಾಂಗ್ರೆಸ್ ಪರ ನಿಲ್ಲಲಿಲ್ಲ. ತಟಸ್ಥವಾಗಿಯಾದರೂ ಉಳಿಯಬಹುದಿತ್ತು. ಆದರವರು ಬಿಜೆಪಿ ಬೆಂಬಲಿಸಿದರು ಎಂದು ಟೀಕಿಸಿದರು.

ಬಾಂಧವ್ಯಕ್ಕೆ ದೊಡ್ಡ ಇತಿಹಾಸವಿದೆ

ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ತನ್ವೀರ್ ಸೇಠ್ ಮಾತನಾಡಿ, ದೇಶದಲ್ಲಿ ದಲಿತರು ಮತ್ತು ಮುಸ್ಲಿಮರ ನಡುವಿನ ಸುಮಧುರ ಬಾಂಧವ್ಯಕ್ಕೆ ದೊಡ್ಡ ಇತಿಹಾಸವಿದೆ. ಆದರೆ, ಇವರು ಒಗ್ಗೂಡಲು ಕೋಮುವಾದ ಮತ್ತು ಜಾತಿವಾದ ಬಿಡುತ್ತಿಲ್ಲ. ಇದರಿಂದ ಕೋಮುವಾದಿ, ಜಾತಿವಾದಿಗಳಿಗೆ ತಕ್ಕ ಉತ್ತರ ನೀಡಲು ಈ ಚುನಾವಣೆ ಅಸ್ತçವಾಗಿದೆ ಎಂದು ಅಭಿಪ್ರಾಯಪಟ್ಟರು.

ದಲಿತರೆಲ್ಲ ಸಂಘಟಿತ ದನಿಯಾದರೆ ಮತ್ತು ಒಳಪಂಗಡದ ವಿಚಾರ ಬದಿಗೊತ್ತಿ ಮುನ್ನಡೆದರೆ ಉತ್ತಮ ಫಲಿತಾಂಶ ಕೊಡಲು ಸಾಧ್ಯ. ಗೆದ್ದ ಅಭ್ಯರ್ಥಿಗೆ ನಿಮ್ಮ ಸಂಘಟನಾ ಶಕ್ತಿ ತಿಳಿಯಲಿದೆ ಸಮುದಾಯ ನಾಯಕತ್ವದ ಗಟ್ಟಿ ದನಿ ಹೊರ ಹೊಮ್ಮಲಿದೆ ಎಂದರು.

ಸಂದೇಶ ತಲುಪಿಸಬೇಕು

ಶಾಸಕ ಪಿ.ಎಂ.ನರೇದ್ರಸ್ವಾಮಿ ಮಾತನಾಡಿ, ದಲಿತ ಸಮುದಾಯದ ಜನರೆಲ್ಲರೂ ಇಂದಿನ ಸಭೆಯ ಗುರಿ ಮತ್ತು ಉದ್ದೇಶವನ್ನು ಅರ್ಥ ಮಾಡಿಕೊಳ್ಳಬೇಕು. ಇಲ್ಲಿ ಕೇಳಿದ ಮಾತುಗಳನ್ನು ಇಲ್ಲಿಯೇ ಬಿಡದೆ, ಪ್ರತಿ ಮನೆಗೂ ಸಂದೇಶ ತಲುಪಿಸಬೇಕು. ಈ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲುವಿಗೆ ಶ್ರಮಿಸಬೇಕೆಂದರು.

ವಿಧಾನ ಪರಿಷತ್ ಸದಸ್ಯ ಸುಧಾಮದಾಸ್, ಪ್ರಜಾಪರಿವರ್ತನೆ ಸಂಘಟನೆ ರಾಜ್ಯಾಧ್ಯಕ್ಷ ಬಿ.ಗೋಪಾಲ್ ಮಾತನಾಡಿದರು. ಜಿ.ಪಂ. ಮಾಜಿ ಅಧ್ಯಕ್ಷ ಸುರೇಶ್‌ಕಂಠಿ, ಜಿಲ್ಲಾ ಕಾಂಗ್ರೆಸ್ ಎಸ್ಸಿ ಘಟಕದ ಅಧ್ಯಕ್ಷ ಎಂ.ಎನ್.ಶ್ರೀಧರ್, ದಲಿತ ಸಂಘಟನೆಗಳ ಮುಖಂಡರಾದ ಹೆಣ್ಣೂರು ಶ್ರೀನಿವಾಸ್, ಅಂಬಣ್ಣ, ಶಿವಣ್ಣ ಇತರರು ಭಾಗವಹಿಸಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!